ಹಾಲುಂಡ ತವರ ತೊರೆದು ಬಂದಿಹೆ ನೀ
ಹೊಸ ಬಾಳ ಕಟ್ಟಿಕೊಳ್ಳಲು.
ಚಿಂತಿಸದಿರು ಕೊರಗದಿರು ಇಗೋ
ನಿನಗೆ ಸ್ವಾಗತವು ನಗೆ ನೀ//
ಹೆತ್ತವರು ದೂರಾದರೆಂದು ಮರುಗದಿರು
ಅತ್ತೆ ಮಾವರೇ ನಮಗೆಲ್ಲ ಮರೆಯದಿರು.
ಸಹೋದರಿಯರ ಸಲುಗೆ ಇಲ್ಲವೆನ್ನದಿರು
ನಾನಿರುವೆ ಜೊತೆಗೆ ನಗೆ ನೀ//
ಭಾವ ಮೈದುನರೇ ಸಹೋದರರು
ಇವರ ಸಂಬ0ಧವ ಬೆಸೆಯುತ್ತಲೇ ಇರು.
ನಾದಿನಿಯೇ ತಿಳಿಸುವಳು ಮನೆಯರೀತಿ ರಿವಾಜು
ಜರಿಯದಿರು ಅವಳನೆಂದು ನಗೆ ನೀ//
ನಾ ಕೂಡಾ ಬಂದಿಲ್ಲವೇ ನಿನಗಿಂತ ಮೊದಲು
ವರುಷಗಳೇ ಬೇಕಾಯಿತು ಹೊಂದಿಕೊಳ್ಳಲು.
ಹುಟ್ಟಿದ ಮನೆಗೂ ಮೆಟ್ಟಿದ ಮನೆಗೂ ಕೀರ್ತಿ ತರಬೇಕು ನಾವು
ನಗುತ ಸಾಗೋಣ ಎಂದಿಗೂ ನಗೆ ನೀ//
ಅತ್ತೆ ಮಾವ ಬೈದರೆಂದು ದು:ಖಿಸಬೇಡ
ಭಾವ ಮೈದುನರು ಸಿಟ್ಟಾದರೆಂದು ನೋಯಬೇಡ.
ನಾದಿನಿಯರು ದೂರಿದರೆಂದು ಮುನಿಯಬೇಡ
ಅವರೆಲ್ಲ ನಮ್ಮವರೇ ತಾನೇ ನಗೆ ನೀ//
ಚಾಡಿ ಮಾತುಗಳ ಲೆಕ್ಕಿಸದಿರು ಪತಿಯ ಮುಂದೆ ಗೋಗರೆಯದಿರು. ಕಂಬನಿಯನೆ0ದು ತೋರದಿರು ಸಹನೆಯೊಂದೇ ಭೂಷಣ ನಗೆ ನೀ// ಮಡಿ ಪಿತಾಂಬರಗಳ ಆಮಿಶ ಬೇಡ ಒಡವೆ ಸಿರಿತನಗಳ ಮೋಹ ಬೇಡ. ಇದ್ದುದ ಬಿಟ್ಟು ಇಲ್ಲದಿರುವದರಗೊಡವೆ ಬೇಡ ಎಲ್ಲ ಇದೆ ಎಂದು ತಿಳಿದು ನಗೆ ನೀ// ಮನೆಯ ಗುಟ್ಟು ಬಿಟ್ಟುಕೊಡಬೇಡ ಕೇಳಿದವರೇ ಹಂಗಿಸುವರು ನೋಡಾ. ನಿನ್ನ ತನವ ಕಳೆದುಕೊಳ್ಳಬೇಡಾ ಇದ ತಿಳಿದರೆ ಬಾಳು ಹಸನು ನಗೆ ನೀ// ನಿನ್ನ ನೋವು ನನದೂ ಅಲ್ಲವೇ ಬೇಡ ನಮ್ಮಿಬ್ಬರಲ್ಲಿ ಕೋಪ ತಾಪ. ಒಟ್ಟಾಗಿ ಬಾಳೋಣ ಮನೆಯನ್ನು ಬೆಳಗೋಣ ಸಂತಸದಿ ನಡೆಯೋಣ ನಗೆ ನೀ//
ಜ್ಯೋತಿ.ಸಿ.ಕೋಟಗಿ (ಸ ಶಿ),
ಸ.ಮಾ.ಪ್ರಾ.ಶಾಲೆ ತಲ್ಲೂರ
ಬೆಳಗಾವಿ ಜಿಲ್ಲೆ