ನಗು ನೀ ಎಂದೆಂದಿಗೂ ….

ಹಾಲುಂಡ ತವರ ತೊರೆದು ಬಂದಿಹೆ ನೀ
ಹೊಸ ಬಾಳ ಕಟ್ಟಿಕೊಳ್ಳಲು.
ಚಿಂತಿಸದಿರು ಕೊರಗದಿರು ಇಗೋ
ನಿನಗೆ ಸ್ವಾಗತವು ನಗೆ ನೀ//


ಹೆತ್ತವರು ದೂರಾದರೆಂದು ಮರುಗದಿರು
ಅತ್ತೆ ಮಾವರೇ ನಮಗೆಲ್ಲ ಮರೆಯದಿರು.
ಸಹೋದರಿಯರ ಸಲುಗೆ ಇಲ್ಲವೆನ್ನದಿರು
ನಾನಿರುವೆ ಜೊತೆಗೆ ನಗೆ ನೀ//


ಭಾವ ಮೈದುನರೇ ಸಹೋದರರು
ಇವರ ಸಂಬ0ಧವ ಬೆಸೆಯುತ್ತಲೇ ಇರು.
ನಾದಿನಿಯೇ ತಿಳಿಸುವಳು ಮನೆಯರೀತಿ ರಿವಾಜು
ಜರಿಯದಿರು ಅವಳನೆಂದು ನಗೆ ನೀ//


ನಾ ಕೂಡಾ ಬಂದಿಲ್ಲವೇ ನಿನಗಿಂತ ಮೊದಲು
ವರುಷಗಳೇ ಬೇಕಾಯಿತು ಹೊಂದಿಕೊಳ್ಳಲು.
ಹುಟ್ಟಿದ ಮನೆಗೂ ಮೆಟ್ಟಿದ ಮನೆಗೂ ಕೀರ್ತಿ ತರಬೇಕು ನಾವು
ನಗುತ ಸಾಗೋಣ ಎಂದಿಗೂ ನಗೆ ನೀ//


ಅತ್ತೆ ಮಾವ ಬೈದರೆಂದು ದು:ಖಿಸಬೇಡ
ಭಾವ ಮೈದುನರು ಸಿಟ್ಟಾದರೆಂದು ನೋಯಬೇಡ.
ನಾದಿನಿಯರು ದೂರಿದರೆಂದು ಮುನಿಯಬೇಡ
ಅವರೆಲ್ಲ ನಮ್ಮವರೇ ತಾನೇ ನಗೆ ನೀ//

ಚಾಡಿ ಮಾತುಗಳ ಲೆಕ್ಕಿಸದಿರು
ಪತಿಯ ಮುಂದೆ ಗೋಗರೆಯದಿರು.
ಕಂಬನಿಯನೆ0ದು ತೋರದಿರು
ಸಹನೆಯೊಂದೇ ಭೂಷಣ ನಗೆ ನೀ//

ಮಡಿ ಪಿತಾಂಬರಗಳ ಆಮಿಶ ಬೇಡ
ಒಡವೆ ಸಿರಿತನಗಳ ಮೋಹ ಬೇಡ.
ಇದ್ದುದ ಬಿಟ್ಟು ಇಲ್ಲದಿರುವದರಗೊಡವೆ ಬೇಡ
ಎಲ್ಲ ಇದೆ ಎಂದು ತಿಳಿದು ನಗೆ ನೀ//

ಮನೆಯ ಗುಟ್ಟು ಬಿಟ್ಟುಕೊಡಬೇಡ
ಕೇಳಿದವರೇ ಹಂಗಿಸುವರು ನೋಡಾ.
ನಿನ್ನ ತನವ ಕಳೆದುಕೊಳ್ಳಬೇಡಾ
ಇದ ತಿಳಿದರೆ ಬಾಳು ಹಸನು ನಗೆ ನೀ//

ನಿನ್ನ ನೋವು ನನದೂ ಅಲ್ಲವೇ
ಬೇಡ ನಮ್ಮಿಬ್ಬರಲ್ಲಿ ಕೋಪ ತಾಪ.
ಒಟ್ಟಾಗಿ ಬಾಳೋಣ ಮನೆಯನ್ನು ಬೆಳಗೋಣ
ಸಂತಸದಿ ನಡೆಯೋಣ ನಗೆ ನೀ//

ಜ್ಯೋತಿ.ಸಿ.ಕೋಟಗಿ (ಸ ಶಿ),

ಸ.ಮಾ.ಪ್ರಾ.ಶಾಲೆ ತಲ್ಲೂರ

ಬೆಳಗಾವಿ ಜಿಲ್ಲೆ

Related Articles

ಪ್ರತಿಕ್ರಿಯೆ ನೀಡಿ

Latest Articles