ಪಕೃತಿ ಸ್ವರೂಪಿಣಿ ಪರಮೇಶ್ವರಿ

*ಕೃಷ್ಣಪ್ರಕಾಶ್ ಉಳಿತ್ತಾಯ

33
ಕಾಮೇಶ್ವರಾಸ್ತ್ರನಿರ್ದಗ್ಧಸಭಂಡಾಸುರಶೂನ್ಯಕಾ|
ಬ್ರಹ್ಮೋಪೇಂದ್ರಮಹೇಂದ್ರಾದಿದೇವಸಮಸ್ತುತವೈಭವಾ||

ಭಂಡಾಸುರನು ಶೂನ್ಯಕಾಪುರದಲ್ಲಿರುವವನು. ಲಲಿತೆಯು ಕಾಮೇಶ್ವರಾಸ್ತ್ರವನ್ನು ಬಳಸಿ ಶೂನ್ಯಕಾಪುರಸಹಿತವಾಗಿ ಭಂಡಾಸುರನನ್ನು ವಧಿಸುತ್ತಾಳೆ ಅಥವಾ ದಹಿಸಿಬಿಡುತ್ತಾಳೆ. ಇಂಥ ಪರಮ ಪಾವನಳಾದ ದೇವಿಯ ಈ ಸ್ವರೂಪವನ್ನು ಕುರಿತೇ ಪ್ರಸ್ತುತ ನಾಮ ಚಿಂತಿಸುತ್ತಿರುವುದು. ಜೀವನದ ಎಲ್ಲಾ ನೇತ್ಯಾತ್ಮಕ ತತ್ತ್ವಗಳ ಪ್ರತೀಕವೇ ಭಂಡಾಸುರ. ಇಂಥವನು ಜೀವಿಸುತ್ತಿರುವುದು ಶೂನ್ಯಕಾಪುರ. ಇದನ್ನು ದಹಿಸಲು ಕಾಮನನ್ನು ಸುಟ್ಟ ಕಾಮೇಶ್ವರನ ತತ್ತ್ವವೇ ಬೇಕು. ಈ ಕಾಮೇಶ್ವರ ತತ್ತ್ವವನ್ನು ಹಿಡಿದು ಬಳಸಲು ಪರಮ ಪರಾಪಕೃತಿ ಸ್ವರೂಪಿಣಿಯಾದ ಪರಮೇಶ್ವರಿಯೇ ಬೇಕು. ಆದುದರಿಂದ ಈ ನಾವವಾದ “ಕಾಮೇಶ್ವರಾಸ್ತ್ರನಿರ್ದಗ್ಧಸಭಂಡಾಸುರಶೂನ್ಯಕಾ” ಸ್ಮರಣೆ ಪರಮ ಪಾವನವಾದದ್ದು.
“ಬ್ರಹ್ಮೋಪೇಂದ್ರಮಹೇಂದ್ರಾದಿದೇವಸಮಸ್ತುತವೈಭವಾ” ಹೀಗೆ ಲಲಿತೆ ಭಂಡನನ್ನು ದಮನಿಸಿದಾಗ ಆಕೆ ಬ್ರಹ್ಮ, ಉಪೇಂದ್ರ, ಮಹೇಂದ್ರಾದಿ ದೇವತೆಗಳೆಲ್ಲರಿಂದಲೂ ಸ್ತುತಿಸಲ್ಪಡುತ್ತಾಳೆ. ಹೀಗೆ ಸ್ತುತಿಸಲ್ಪಟ್ಟವಳನ್ನು ಕುರಿತಾದ ಹೆಸರೇ ಇದು.

34
ಹರನೇತ್ರಾಗ್ನಿಸಂದಗ್ಧಕಾಮಸಂಜೀವನೌಷಧಿಃ|
ಶ್ರೀಮದ್ವಾಗ್ಭವಕೂಟೈಕಸ್ವರೂಪಮುಖಪಂಕಜಾ||

ಮನ್ಮಥನು ಹರನ ಮೂರನೆಯ ಕಣ್ಣಿನಿಂದ ಹೊರಟ ಅಗ್ನಿಯಿಂದ ದಹಿಸಲ್ಪಟ್ಟವನು. ಅಂತಹಾ ಸುಟ್ಟುಹೋದ ಮನ್ಮಥನಿಗೆ ಮತ್ತೆ ಜೀವ ಇತ್ತವಳು ಲಲಿತೆ. ಕಾಮನಿಗೆ ಸಂಜೀವನೌಷಧಿಯಾಗಿ ಪರಿಣಮಿಸಿದವಳಾದ ಲಲಿತೆಯ ಈ ರೂಪವೇ “ಹರನೇತ್ರಾಗ್ನಿಸಂದಗ್ಧಕಾಮಸಂಜೀವನೌಷಧಿ:” ಎಂಬುದು.

“ಶ್ರೀಮದ್ವಾಗ್ಭವಕೂಟೈಕಸ್ವರೂಪಮುಖಪಂಕಜಾ” ಲಲಿತೆಯನ್ನು ಆರಾಧಿಸಲು ಪಂಚದಶೀ ಮಂತ್ರವನ್ನು ಶ್ರೀವಿದ್ಯೋಪಾಸಕರು ಉಪಾಸಿಸುತ್ತಾರೆ. ಈ ಮಂತ್ರವು ಮೂರು ಕೂಟಗಳಿಂದ ಕೂಡಿದೆ. ಅವುಗಳು ವಾಗ್ಭವಕೂಟ, ಕಾಮರಾಜಕೂಟ ಮತ್ತು ಶಕ್ತಿಕೂಟವೆಂದು. ದೇವಿಯ ವದನಾರವಿಂದವನ್ನು ಪಂಚದಶೀ ಮಂತ್ರದ ವಾಗ್ಭವಕೂಟಕ್ಕೆ ಸಮೀಕರಿಸಿ ಈ ಹೆಸರು ಆಕೆಯನ್ನು ಸ್ತುತಿಸುತ್ತದೆ.

ಲಲಿತೆ ಮಂತ್ರದೇಹವನ್ನೂ ಹೊಂದಿದ್ದಾಳೆಂಬುದಕ್ಕೆ ಇದು ಪ್ರತೀಕ. ಶ್ರೀವಿದ್ಯೋಪಾಸಕರು ತಾಯಿಯ ಮಂತ್ರವನ್ನೇ ಆಕೆಯ ದೇಹವೆಂದು ಪರಿಭಾವಿಸಿ ಉಪಾಸಿಸುತ್ತಾರೆ. ಇದು ತಾಯಿಯ ಸೂಕ್ಷ್ಮರೂಪವೂ ಹೌದು. ಲಲಿತೆಯ ನಾಮಗಳು ಇನ್ನು ಮುಂದಿನ ಹೆಸರುಗಳಲ್ಲಿ ಸೂಕ್ಷ್ಮಸ್ತರಕ್ಕೆ ಹೋಗಲಿವೆ.

35
ಕಂಠಾಧಃಕಟಿಪರ್ಯಂತಮಧ್ಯಕೂಟಸ್ವರೂಪಿಣೀ|
ಶಕ್ತಿಕೂಟೈಕತಾಪನ್ನಕಟ್ಯಧೋಭಾಗಧಾರಿಣೀ||

ಇಲ್ಲಿ ಕಾಮರಾಜಕೂಟ ಮತ್ತು ಶಕ್ತಿಕೂಟಗಳೆಂಬ ದೇವಿಯ ಮಂತ್ರಸ್ವರೂಪದ ಅನುಸಂಧಾನ ನಡೆದಿದೆ. ಪಂಚದಶೀ ಮಂತ್ರದಲ್ಲಿ ಐದೈದು ಮಂತ್ರಗಳು ಕಾಮರಾಜಕೂಟವೂ ಮತ್ತು ಶಕ್ತಿಕೂಟವೂ ಎಂದು ಕರೆಯಲ್ಪಟ್ಟಿದೆ. ಮೊದಲ ವಾಗ್ಭವಕೂಟವನ್ನು ಈ ಹಿಂದೆ ಅವಲೋಕಿಸಿದ್ದೇವೆ.
ಲಲಿತೆಯ ಕಂಠದಿಂದ ಕಟಿಯವರೆಗಿನ ದೇಹವನ್ನು ಮಧ್ಯಕೂಟವೆಂದು ಕರೆಯುತ್ತಾರೆ. ಪಂಚದಶೀ ಮಂತ್ರದ ಕಾಮರಾಜಕೂಟ ಸಮೂಹವೆಂದು ಕರೆಯಲ್ಪಡುವ ಬೀಜಾಕ್ಷರಗಳ ಸಮುಚ್ಛಯವೇ ಮಧ್ಯಕೂಟ.
ಕಟಿಪ್ರದೇಶದಿಂದ ಕೆಳಗಿನ ಭಾಗವೇ ಶಕ್ತಿಕೂಟ. ಹೀಗೆ ಈ ಮೂರು ಕೂಟಗಳ ಅನುಸಂಧಾನದಿಂದ ಸಕಲ ಸೌಭಾಗ್ಯವೂ ಭಜಕನಿಗೆ ದೊರಕುತ್ತದೆ.

36
ಮೂಲಮಂತ್ರಾತ್ಮಿಕಾ ಮೂಲಕೂಟತ್ರಯಕಲೇವರಾ|
ಕುಲಾಮೃತೈಕರಸಿಕಾ ಕುಲಸಂಕೇತಪಾಲಿನೀ||

ಶ್ರೀವಿದ್ಯೋಪಾಸನೆಯಲ್ಲಿ ಮೂಲಮಂತ್ರವೆಂದರೆ ಪಂಚದಶೀ ಮಂತ್ರ. ಇಂತಹ ಮೂಲಮಂತ್ರ ಸ್ವರೂಪಳಾದ ಲಲಿತೆಯನ್ನು ಮೂಲಮಂತ್ರಾತ್ಮಿಕಾ ಎಂಬ ಹೆಸರಲ್ಲಿ ಸ್ತುತಿಸುತ್ತಾರೆ ಋಷಿಗಳು. ಹಿಂದೆ ಹೇಳಿದಂತೆ ಮಂತ್ರದೇಹವನ್ನು ದೇವಿಯು ಪಡೆದಿದ್ದಾಳಾದುದರಿಂದ ಮಂತ್ರದ ಮನನ ಅದನ್ನು ಧ್ಯಾನಿಸುವವನನ್ನು ಕಾಯುತ್ತದೆ (ಮನನಾತ್ ತ್ರಾಯತೇ ಇತಿ ಮಂತ್ರಃ ಎಂಬ ಉಕ್ತಿ ಪ್ರಸಿದ್ಧವಷ್ಟೆ)
ತಾಯಿ ಲಲಿತೆ ಪಂಚದಶೀ ಮೂಲಮಂತ್ರದ ಮೂರುಕೂಟಗಳನ್ನು ತನ್ನ ದೇಹವನ್ನಾಗಿ ಉಳ್ಳವಳು. ಆ ಮೂರು ಕೂಟಗಳು ಹಿಂದಿನ ನಾಮದಲ್ಲಿ ಬಂದಂತಹಾ ವಾಗ್ಭವಕೂಟ, ಕಾಮರಾಜಕೂಟವೆನ್ನುವ ಮಧ್ಯಕೂಟ ಮತ್ತು ಶಕ್ತಿಕೂಟ. ಇವೇ ತಾಯಿಯ ದೇಹದ ಭಾಗಗಳು. ಇವನ್ನು ಮಂತ್ರ ಸ್ವರೂಪದಲ್ಲಿ ಗುರುಮುಖೇನ ಧ್ಯಾನಿಸಿ ಉಪಾಸನೆ ಮಾಡಬೇಕೆಂಬುದು ಶ್ರೀವಿದ್ಯೆಯಲ್ಲಿರುವ ಚಿಂತನೆ.
“ಕುಲಾಮೃತೈಕರಸಿಕಾ” ಕುಂಡಲಿನೀ ಶಕ್ತಿಯ ಜಾಗ್ರತಾವಸ್ಥೆಯನ್ನು ಇದು ಹೇಳುತ್ತದೆ. ಕುಂಡಲಿನಿ ಶಕ್ತಿ ಜಾಗ್ರತವಾಗುತ್ತಿದ್ದಂತೆಯೇ ಷಟ್ಚಕ್ರಗಳಲ್ಲಿ ಶಕ್ತಿ ಪ್ರವಾಹವಾಗಿ ಸಹಸ್ರಾರದಲ್ಲಿ ಅಮೃತಸಿಂಚನವಾಗುತ್ತದೆ. ಅದೇ ಕುಲಾಮೃತೈಕರಸಿಕಾ ಎಂಬುದು.

“ಕುಲಸಂಕೇತಪಾಲಿನೀ” ದೇವಿಯೇ ಕುಲ – ಆಚಾರಗಳನ್ನು ಅಂದರೆ ಗೂಢವಾದ ಸೂಕ್ಷ್ಮವಾದ ಆತ್ಮತತ್ತ್ವ ವಿದ್ಯೆಯನ್ನು ಕೊಡುವ ಶ್ರೀವಿದ್ಯೆ ಸೂಕ್ಷ್ಮವನ್ನು ಕಾಪಾಡುವವಳು. ಶ್ರೀವಿದ್ಯೋಪದೇಶ ಎಲ್ಲೆಂದರಲ್ಲಿ ಅನರ್ಹರಿಗೆ ಕೊಡುವ ವಿದ್ಯೆಯಲ್ಲ. ಅದನ್ನು ಪಡೆಯಲೂ ಒಂದು ಬಗೆಯ ಆಂತರಿಕ ಸಿದ್ಧತೆ ಬೇಕಾಗುತ್ತದೆ. ಶಿಷ್ಯ ಕೇಳುತ್ತಾನೆಂದು ಗುರುವು ಉಪದೇಶಿಸತಕ್ಕದ್ದಲ್ಲವೆಂಬುದು ಶ್ರೀವಿದ್ಯೋಪಾಸಕರ ಅಂಬೋಣ. ಹಾಗಾಗಿ ಈ ರೀತಿಯ ಶಾಸ್ತ್ರ ಮರ್ಯಾದೆಯ ರೂಪದಲ್ಲಿ ತಾಯಿ “ಕುಲಸಂಕೇತಪಾಲಿನಿ”ಯಾಗಿ ಈ ಆಚಾರಗಳನ್ನು ಕಾಪಾಡುತ್ತಾಳೆ ಎಂಬುದು ಈ ನಾಮದ ಚಿಂತನೆ.

Related Articles

ಪ್ರತಿಕ್ರಿಯೆ ನೀಡಿ

Latest Articles