ಮೌನದ ಮಾತು

*ಪ್ರಜ್ವಲ್‌

ಬದುಕು ಎಂಬುದು ಒಂದು ಸಮುದ್ರ ಇದ್ದಂತೆ. ಸಾವಿರಾರು ಮಜಲುಗಳನ್ನು ದಾಟಿ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕಿರುತ್ತದೆ.
ಬಾಳೆಂಬ ನೌಕೆಯನ್ನು ದಾಟಿಸುವಾಗ ಬರುವ ತಾಪತ್ರಯಗಳು ಒಂದೆರಡಲ್ಲ. ಆದರೆ ಆಗ ಯಾವ ನಿರ್ಧಾರವನ್ನು ಕೈಗೊಳ್ಳಬೇಕು, ಯಾವುದು ಸರಿ ಯಾವುದು ತಪ್ಪು ಎನ್ನುವುದೇ ಗೊಂದಲಮಯವಾಗಿ ಕಾಡುವುದುಂಟು.

ಮಾನವ ಜನ್ಮ ಸಿಕ್ಕಿದ್ದು ಪುಣ್ಯ. ಆದರೆ ಜೀವನ ಎಂಬ ಸಮುದ್ರದಲ್ಲಿ ಈಜುವುದು ಸುಲಭ ಎಂದು ತಿಳಿದುಕೊಳ್ಳುವುದು ಸರಿಯೇ, ತಪ್ಪೇ ಎಂದು ಗೊತ್ತಾಗುತ್ತಿಲ್ಲ…

ಯಾಕಂದರೆ ಇಲ್ಲಿ ಸಿಗುವ ಸಂತೋಷಕ್ಕಿಂತ ಹೆಚ್ಚು ದುಃಖವೇ ಯಾಕಾಗುತ್ತದೆ? ಅದೂ ಕೆಲವೊಮ್ಮೆ ನಮ್ಮವರಿಂದಲೇ ನಮಗೆ ನೋವು ಉಂಟಾದಾಗ ಸಹಿಸುವುದಾದರೂ ಹೇಗೆ… ಹೇಳಿಕೊಳ್ಳುವುದಾದರೂ ಯಾರ ಬಳಿ? ಸಾಧಿಸುವ ಸಣ್ಣ ಪ್ರಯತ್ನ ಮಾಡಿದರೆ ಅದನ್ನು ಪ್ರೋತ್ಸಾಹಿಸುವವರಿಗಿಂತ ನೋಡಿ ನಗುವವರು ಹೆಚ್ಚಾಗುತ್ತಿದ್ದಾರೆ. ಆಗ ಯಾವ ಹೆಸರು, ಸಾಧನೆಯೂ ಬೇಡ, ಈ ಜೀವನವೊಮ್ಮೆ ಹಾಗೇ ಮುಗಿದುಬಿಡಲಿ ಅನಿಸಿಬಿಡುತ್ತದೆ…

ಆದರೆ ಪುರಂದರ ದಾಸರು ಹೇಳಿದಂತೆ ಮಾನವ ಜನ್ಮ ದೊಡ್ಡದು ಅದನು ಹಾಳು ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ… ‘ ನಾವು ಬದುಕುವುದು ನಮಗಾಗಿ ಅಲ್ಲವೇ.
ಬದುಕು ತೀರಾ ನಿರ್ದಯಿ ಅಲ್ಲ. ಬದುಕನ್ನು ಹೆಚ್ಚು ಸಂಭ್ರಮಿಸಲು ಹಲವು ಅವಕಾಶಗಳನ್ನು ಮಾಡಿಕೊಡುತ್ತದೆ. ಕಷ್ಟ ಬಂದಾಗ ಕುಗ್ಗದೇ ನೂರಾರು ಅವಕಾಶಗಳೆಡೆಗೆ ಕಣ್ಣೋಟ ಬೀರಬೇಕು. ನಮ್ಮ ಬದುಕನ್ನು ರೂಪಿಸಿಕೊಳ್ಳಲು ಅಲ್ಲಿ ಒಂದಾದರೂ ದಾರಿ ಇದ್ದೇ ಇರುತ್ತದೆ.

ಯಾರಿಂದ ಎಷ್ಟೇ ನೋವಾಗಲಿ, ನಮ್ಮವರಿಂದಲೇ ನಮಗೆ ಬೇಸರವಾಗಲೀ, ಯಾರೂ ನಮ್ಮೊಂದಿಗೆ ಶಾಶ್ವತವಲ್ಲ, ಎಲ್ಲವೂ ದೇವರ ಪರೀಕ್ಷೆ ಅಂದುಕೊಂಡು ಪುಣ್ಯದಿಂದ ಸಿಕ್ಕಿರುವ ಜೀವನವೆಂಬ ದೋಣಿಯಲ್ಲಿ ಸಾಗೋಣ. ದೋಣಿ ಮುಳುಗಿದರೂ ಈಜಿಯಾದರೂ ದಡ ಸೇರಬೇಕೆಂಬ ದೃಢಸಂಕಲ್ಪ ನಮ್ಮದಾಗಿರಲಿ.

ಜೀವನವೆಂಬುದು ಜಗಳವಾಡುವಷ್ಟು, ದ್ವೇಷ ಸಾಧಿಸುವಷ್ಟು ದೊಡ್ಡದಲ್ಲ. ಅಲ್ಪ ಸಮಯದಲ್ಲಿ ನಮ್ಮ ಕಷ್ಟ-ಸುಖದಲ್ಲಿ ಭಾಗಿಯಾದವರಿಗೆ ನಮ್ಮಿಂದಾಗುವ ಸಹಾಯ ಮಾಡೋಣ. ಯಾರೇ ಆಗಲಿ ಕೀರ್ತಿ ಬಂದಾಗ ʼಅವ ನಮ್ಮವʼ ಎನ್ನುತ್ತಾರೆ, ಅದೇ ನಮಗೆ ಕೆಟ್ಟ ಹೆಸರು ಬಂದಾಗ ʼಯಾರವನು?ʼ ಎಂದು ಕೇಳುತ್ತಾರೆ.

ಆ ಬಗ್ಗೆ ಚಿಂತೆ ಬೇಡ. ಯೋಜಿಸಿದಷ್ಟು ಒಳ್ಳೆಯ ಕೆಲಸ ಮಾಡಲು ನಾವು ಅಶಕ್ತರಾಗಿರಬಹುದು, ಆದರೆ ಒಳ್ಳೆಯ ಮನಸ್ಸು ಬೆಳೆಸಿಕೊಂಡರೆ ಅದು ಇತರರಿಗೆ ಒಳ್ಳೆಯದನ್ನೇ ಬಯಸುತ್ತದೆ.

ಒಬ್ಬ ಪುಣ್ಯಾತ್ಮ, ತಮ್ಮ ಕಚೇರಿಯ ಎದುರು ʼಈ ದಿನ ನಿನ್ನ ಮುಂದಿನ ಜೀವನದ ಮೊದಲ ದಿನʼ ಎಂಬ ಬೋರ್ಡ್‌ ಬರೆಸಿ ನೇತು ಹಾಕಿಸಿದರಂತೆ. ಅದೆಷ್ಟು ಅರ್ಥಪೂರ್ಣ ಅಲ್ಲವೇ… ಒಳ್ಳೆಯ ಕೆಲಸಗಳನ್ನು ಜನ ಗುರುತಿಸಿಯೇ ಗುರುತಿಸುತ್ತಾರೆ, ಆದರೆ ಅದೇ ನಮ್ಮ ಉದ್ದೇಶವಾಗದಿರಲಿ. ಮಾಡುವ ಕೆಲಸದಲ್ಲಿ ಆತ್ಮ ಸಂತೋಷವಿರಲಿ.

*ಪ್ರಜ್ವಲ್‌, ಪ್ರಥಮ ಬಿಎ,ಪತ್ರಿಕೋದ್ಯಮ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು, ಹಂಪನಕಟ್ಟೆ.

Related Articles

ಪ್ರತಿಕ್ರಿಯೆ ನೀಡಿ

Latest Articles