ಬೇಕಾಗುವ ಸಾಮಗ್ರಿ: ಹಲಸಿನ ಹಣ್ಣು-4 ಕಪ್, ಬೆಲ್ಲ 2 ಕಪ್, ತುಪ್ಪ 1ಕಪ್, ಕಾರ್ನ್ಫ್ಲೋರ್ ಕಾಲು ಕಪ್, ಗೋಡಂಬಿ 10-15.
ಹಲಸಿನ ಹಣ್ಣನ್ನು ನೀರು ಸೇರಿಸದೆ ನುಣ್ಣಗೆ ರುಬ್ಬಿಕೊಳ್ಳಬೇಕು. ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ 10-15 ಗೋಡಂಬಿಯನ್ನು ಸಣ್ಣ ಚೂರುಗಳನ್ನಾಗಿ ಮಾಡಿ ಕೆಂಬಣ್ಣ ಬರುವವರೆಗೆ ಹುರಿದು ತೆಗೆದಿಟ್ಟುಕೊಳ್ಳಬೇಕು. ಒಣ ಕೊಬ್ಬರಿ ಚೂರುಗಳು, ಬಾದಾಮಿ ಚೂರುಗಳನ್ನು ಕೂಡಾ ಬಳಸಬಹುದು.
ನಂತರ ಅದೇ ಬಾಣಲೆಗೆ ತುಪ್ಪ 2 ಚಮಚ ಹಾಕಿ ರುಬ್ಬಿಟ್ಟುಕೊಂಡಿದ್ದ ಹಲಸಿನ ಹಣ್ಣಿನ ಕಣಕವನ್ನು ಹತ್ತು ನಿಮಿಷ ಬೇಯಿಸಿಕೊಳ್ಳಬೇಕು. ನಂತರ 2 ಕಪ್ ಬೆಲ್ಲವನ್ನು ಸೇರಿಸಬೇಕು. ಚೆನ್ನಾಗಿ ಕಲಕಬೇಕು. ಅರ್ಧ ಗಂಟೆ ಆದ ನಂತರ ಮತ್ತೆ 4 ಚಮಚ ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಮಗುಚುವುದನ್ನು ನಿಲ್ಲಿಸಬಾರದು. ತಳಹಿಡಿಯುವ ಸಾಧ್ಯತೆ ಇರುತ್ತದೆ. ನಂತರ ಅದಕ್ಕೆ ಕಾಲು ಕಪ್ ಕಾರ್ನ್ಫ್ಲೋರ್‌ನ್ನು ನೀರು ಮಾಡಿ ಸೇರಿಸಬೇಕು. ಮುಕ್ಕಾಲು ಗಂಟೆ ಆದ ಮೇಲೆ ಮತ್ತೆರಡು ಚಮಚ ತುಪ್ಪ ಸೇರಿಸಬೇಕು. ಸುಮಾರು ಒಂದು ಗಂಟೆಯ ನಂತರ ತಳ ಬಿಡುವುದಕ್ಕೆ ಶುರುವಾಗುತ್ತದೆ. ನಂತರ ಹಲ್ವಾಕ್ಕೆ ಏಲಕ್ಕಿ ಪುಡಿ, ಹುರಿದಿಟ್ಟುಕೊಂಡಿದ್ದ ಗೋಡಂಬಿ ಚೂರುಗಳನ್ನು ಸೇರಿಸಿ ತುಪ್ಪ ಸವರಿದ ಬಟ್ಟಲಿಗೆ ಹಾಕಿ ಸಪಾಟಾಗಿಸಿ. ಫ್ರಿಡ್ಜö್ನಲ್ಲಿ ಇಡಬಾರದು.