ಸತ್ಕರ್ಮಗಳಿಂದ ಬದುಕಿನಲ್ಲಿ ಉನ್ನತಿ ಸಾಧ್ಯ: ಅಭಿನವ ನಾಗಲಿಂಗ ಮಹಾಸ್ವಾಮಿಗಳು


ಸವದತ್ತಿಃ “ಬದುಕಿನಲ್ಲಿ ನಮ್ಮ ಮನಸ್ಸನ್ನು ಸತ್ಕರ್ಮಕ್ಕೆ ಹಚ್ಚುವುದರಿಂದ ಉನ್ನತಿಯನ್ನು ಕಾಣಬಹುದು. ಸತ್ಕರ್ಮದಿಂದ ಬದುಕನ್ನು ನಡೆಸಬೇಕು ಎಂದು ಚಿಕ್ಕುಂಬಿಯ ಶ್ರೋ.ಬ್ರಹ್ಮನಿಷ್ಟ ಶ್ರೀಮದ್ ಅಭಿನವ ನಾಗಲಿಂಗ ಮಹಾಸ್ವಾಮಿಗಳು ನುಡಿದರು.

ಅವರು ಚಿಕ್ಕುಂಬಿಯ ಅಜಾತ ನಾಗಲಿಂಗ ಮಹಾಸ್ವಾಮಿಗಳ ಮಠದಲ್ಲಿ ಬುಧವಾರ ಜರುಗಿದ ಶ್ರೀ ಜಗದ್ಗುರು ಅಜಾತ ನಾಗಲಿಂಗ ಮಹಾಸ್ವಾಮಿಗಳವರ 140ನೆಯ ಪುಣ್ಯಾರಾಧನೆಯ ನಾಲ್ಕನೆಯ ದಿನದ ಕಾರ್ಯಕ್ರಮದಲ್ಲಿ “ದುರಿತವೆಚ್ಚನಿತನಾದರು”ವಿಷಯ ಕುರಿತು ಮಾತನಾಡಿದರು.

ಕೆಟ್ಟ ಕೆಲಸ ಮಾಡಿದರೆ ಪಾಪಕ್ಕೆ ಗುರಿಯಾಗುತ್ತೇವೆ. ನಮ್ಮ ಮನಸ್ಸಿನಲ್ಲಿ ನಾನೇನು ಬಹಳ ಕೆಟ್ಟದ್ದನ್ನು ಮಾಡಿಲ್ಲ ಬೇರೆಯವರು ನನಗಿಂತ ಹೆಚ್ಚು ಕೆಟ್ಟದ್ದನ್ನು ಮಾಡಿರುವರು ಎಂದು ಭಾವಿಸಿದವರು ಸ್ವಲ್ಪವಾದರೂ ಕೆಟ್ಟ ಕರ್ಮ ಮಾಡಿದ್ದೇನೆಂದು ತಿಳಿದರೆ ಅಲ್ಪವೂ ಕೂಡ ಕೆಟ್ಟದ್ದೇ. ತಿಳಿಯದೇ ಮಾಡಿದ ಕೆಟ್ಟ ಕರ್ಮಕ್ಕೂ ಕೂಡ ಕೆಟ್ಟಫಲವುಂಟು. ಅದಕ್ಕಾಗಿ ದುರಿತ ಕರ್ಮವನ್ನೂ ಮಾಡದೇ ಸತ್ಕರ್ಮದಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳುವುದರಿಂದ ಬದುಕು ಪಾವನಮಯವಾಗುವುದು” ಎಂದರು.

ಗದಗ ಜಿಲ್ಲೆಯ ಬೆನಕನಕೊಪ್ಪದ ಶ್ರೀ ಗುರುದೇ ಆಶ್ರಮದ ಶ್ರೋತ್ರೀಯ ಬ್ರಹ್ಮನಿಷ್ಠ ಶ್ರೀ ಶಿವಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಮಲ್ಲಾಪುರ(ಚುಳಕಿ) ಗಾಳೇಶ್ವರಮಠದ ಶ್ರೋತ್ರೀಯ ಬ್ರಹ್ಮನಿಷಠ ಶ್ರೀ ಚಿದಾನಂದ ಮಹಾಸ್ವಾಮಿಗಳು, ಹನುಮನಹಳ್ಳಿ(ದಡೇರಕೊಪ್ಪ)ಶ್ರೀಶಿವಾನಂದ ಆಶ್ರಮದ ಶ್ರೋತ್ರೀಯ ಬ್ರಹ್ಮನಿಷ್ಠ ಶ್ರೀಶಿವಬಸವ ಮಹಾಸ್ವಾಮಿಗಳು, ಅಬ್ಬೀಗೇರಿಯ ಶ್ರೀಯಲ್ಲಾಲಿಂಗೇಶ್ವರಮಠದ ಬಸವರಾಜ ಮಹಾಸ್ವಾಮಿಗಳು, ಹಾರೋಗೊಪ್ಪದ ಶ್ರೀಚನ್ನವೃಷಬೇಂದ್ರ ಲೀಲಾಮಠದ ಮಾತೋಶ್ರೀ ಶಿವಯೋಗಿನಿದೇವಿ, ಮೊರಬ ಶ್ರೀ ಸಿದ್ದಾರೂಢ ಮಠದ ಮಾತೋಶ್ರೀ ಬ್ರಹ್ಮಗಾಯತ್ರಿದೇವಿ, ಅತರ್ಗದ ಅಕ್ಕಮಹಾದೇವಿಮಠದ ಮಾತೋಶ್ರೀ ವಚನಶ್ರೀ, ನೇರಲಗಿಯ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳು ಹಿರೇಮಠ, ಬಾವಿಹಾಳದ ಶ್ರೀ ಚನ್ನಪ್ಪ ಶರಣರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ಅವರಿಗೆ ಗುರುರಕ್ಷೆ ನೀಡಲಾಯಿತು.

ಗುರುರಕ್ಷೆ ಸ್ವೀಕರಿಸಿ ಮಾತನಾಡಿದ ವೈ.ಬಿ.ಕಡಕೋಳ, “ನಾವು ನಮ್ಮ ದೈನಂದಿನ ಬದುಕಿನಲ್ಲಿ ಉತ್ತಮ ಕಾರ್ಯಗಳನ್ನು ಮಾಡಬೇಕು. ನಾಗಲಿಂಗ ಸ್ವಾಮಿಯವರ ಚರಿತ್ರೆ ಅವರು ಪಾದವಿಟ್ಟ ಈ ನೆಲ ಪವಿತ್ರವಾದುದು. ಪ್ರತಿ ವರ್ಷವೂ ಪರಮಪೂಜ್ಯ ಅಭಿನವ ನಾಗಲಿಂಗ ಮಹಾಸ್ವಾಮಿಗಳು ಚಿಕ್ಕುಂಬಿಯಲ್ಲಿ ಅಜಾತ ನಾಗಲಿಂಗ ಮಹಾಸ್ವಾಮಿಗಳವರ ಪುಣ್ಯಾರಾಧನೆಯನ್ನು ನಡೆಸುತ್ತ ನಾಡಿನ ವಿವಿಧ ರಂಗಗಳ ಸಾಧಕರನ್ನು ಗುರುತಿಸಿ ಅವರಿಗೆ ಗುರುರಕ್ಷೆ ನೀಡುವ ಮೂಲಕ ನಮಗೂ ತಮ್ಮ ಆಶೀರ್ವಾದವನ್ನು ಈ ದಿನ ಕರುಣಿಸಿರುವರು. ಪೂಜ್ಯರ ಈ ಸತ್ಕರ್ಮ ಕಾರ್ಯ ನಿಜಕ್ಕೂ ಅಭಿನಂದನಾರ್ಹ”ಎ0ದು ಸನ್ಮಾನಿತರ ಪರವಾಗಿ ಮಾತನಾಡಿದರು.


ಬಳ್ಳೂರಿನ ಕುಮಾರಿ ಐಶ್ವರ್ಯ ಈ ಸಂದರ್ಭದಲ್ಲಿ ಭಕ್ತಿ ಗೀತೆಯನ್ನು ಹಾಡಿದರು. ನಂತರ ಶ್ರೋತ್ರೀಯ ಬ್ರಹ್ಮನಿಷ್ಟ ಶ್ರೀಮದ್ ಅಭಿನವ ನಾಗಲಿಂಗಮಹಾಸ್ವಾಮಿಗಳ ಕಿರೀಟ ಪೂಜೆ ಮತ್ತು ಮಾದಾರ (ಮಾದಲಿ) ಪೂಜೆ ಜರುಗಿತು.

ಕಎಂ.ಎ0.ಬಡಿಗೇರ ಪ್ರಾರ್ಥಿಸಿದರು. ಸವದತ್ತಿ ಕ್ಷೇತ್ರ ಸಂಪನ್ಮೂಲ ಕೇಂದ್ರದ ವಿಕಲಚೇತನ ಮಕ್ಕಳ ಸಂಪನ್ಮೂಲ ಶಿಕ್ಷಕ ಸಿ.ವ್ಹಿ.ಬಾರ್ಕಿಯವರು ಸ್ವಾಗತಿಸಿದರು. ಶಿಕ್ಷಕ ಎಂ.ಪಿ.ಪಾಟೀಲ ಕಾರ್ಯಕ್ರಮ ನಿರೂಪಿಸಿದರು.

ವರದಿ: ವೈ.ಬಿ.ಕಡಕೋಳ ಸಂಪನ್ಮೂಲ ವ್ಯಕ್ತಿಗಳು

Related Articles

ಪ್ರತಿಕ್ರಿಯೆ ನೀಡಿ

Latest Articles