* ಶ್ರೀನಿವಾಸ ಮೂರ್ತಿ ಎನ್ ಎಸ್
ದೇವಾಲಯಗಳಿಗೆ ಭೇಟಿ ನೀಡುವುದು ದೇವರ ಮೇಲಿನ ಭಕ್ತಿಯಿಂದ ಮತ್ತು ಮನಸ್ಸಿಗೆ ಸಂತೋಷವನ್ನು ಕಂಡುಕೊಳ್ಳಲು. ದೇವಾಲಯ ವಾಸ್ತು ವೈಭವ ಒಂದೆಡೆ ಆದರೆ ಆಧುನಿಕ ಸ್ಪರ್ಶದ ಕೃತಕತೆಯ ಆಡಂಭರದ ದೇವಾಲಯಗಳು ಹಲವು. ಅವುಗಳ ನಡುವೆ ಅವಧೂತರು ಸ್ಥಾಪಿಸಿದ ಸುಂದರ ಪ್ರಶಾಂತವಾದ ಸ್ಥಳಗಳು ಹಲವು. ಬಯಲು ನಾಡಿನಲ್ಲಿ ಹಸಿರಿನ ವೈಭವ ಇರುವ ಒಂದು ಸ್ಥಳವೆಂದರೆ ಚಿಕ್ಕಬಳ್ಳಾಪುರ ಜಿಲ್ಲೆಯ ಮಿಣಕನಗುರ್ಕಿ.
ಮೂಲತಹ ಮಿಣಕನಗುರ್ಕಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಒಂದು ಚಿಕ್ಕ ಗ್ರಾಮ. ಇದು ಕೊಂಡಾರ್ಯ ಅವಧೂತರ ತಪೋಭೂಮಿ. ಇಲ್ಲಿ ಪಾರ್ವತಿಯೇ ಮಹೇಶ್ವರಿಯಾಗಿ ನೆಲೆಸಿದ್ದಾಳೆ ಎಂಬ ನಂಬಿಕೆ ಇದೆ. ಸುಮಾರು 1511 ರ ವಿಜಯನಗರದ ಕೃಷ್ಣದೇವರಾಯನ ಶಾಸನ ಮಾತ್ರ ಲಭ್ಯವಿದ್ದು ಈ ದೇವಾಲಯದ ಬಗ್ಗೆ ವಿವರ ಸಿಗುವುದಿಲ್ಲ. ಗ್ರಹಣದ ದಿನದಂದು ದಾನ ನೀಡಿದ ಉಲ್ಲೇಖ ಮಾತ್ರ ಇದೆ. ಇನ್ನು ಇಲ್ಲಿ ರಾತ್ರಿ ವೇಳೆ ಬೆಳಕು ಬರುತ್ತಿದ್ದ ಕಾರಣ ಮಿಣಕನಗುರ್ಕಿ ಹೆಸರು ಬಂದಿತು ಎನ್ನಲಾಗಿದೆ.
ಇಲ್ಲಿ ಆಧುನಿಕವಾಗಿ ನಿರ್ಮಾಣಗೊಂಡಿರುವ ಮಹೇಶ್ವರಿಯ ದೇವಾಲಯವಿದೆ. ಇಲ್ಲಿನ ಗರ್ಭಗುಡಿಯಲ್ಲಿ ಪುರಾತನ ಶಿರದ ಭಾಗ ಹೊಂದಿರುವ ಶಿಲ್ಪ ಹಾಗು ನೂತನವಾಗಿ ಸ್ಥಾಪಿಸಿದ ಮಹೇಶ್ವರಿ ದೇವಿಯ ಶಿಲ್ಪವಿದೆ. ಇದು ಕುಂಬಾರ ಜನಾಂಗದ ಆರಾಧ್ಯ ದೈವ. ದೇವಿಯ ಆರಾಧಕರಾಗಿದ್ದ ಕೊಂಡಾರ್ಯ ಅವರು ಇಲ್ಲಿಯೇ ಜೀವಂತ ಸಮಾಧಿಯಾದರು ಎಂಬ ನಂಬಿಕೆ ಇದೆ.
ಇಲ್ಲಿನ ವಿಶೇಷತೆ ಇರುವುದು ದೇವಾಲಯದಲ್ಲಿ. ಆವರಣದಲ್ಲಿರುವ ನವಗ್ರಹ ವನ ಹಾಗು ಗಾಯತ್ರಿ ಮಂದಿರ. ಬರಡು ಭೂಮಿಯಾಗಿದ್ದ ಇಲ್ಲಿ ಹಸಿರಿನ ವೈಭವವನ್ನೇ ಸ್ಥಾಪಿಸಲಾಗಿದೆ. ಈಗ ನಿರ್ವಹಣೆ ಕೊರತೆಯಿಂದ ನಲುಗಿದರು ಮೂಲ ಸೌಂದರ್ಯಕ್ಕೆ ಹಾಗು ಪ್ರಶಾಂತತೆಗೆ ಇನ್ನು ಧಕ್ಕೆ ಬಂದಿಲ್ಲ. ನವ ಗ್ರಹಗಳಿಗೆ ಸ್ಥಾಪಿತವಾದ ನವಗ್ರಹ ವನ, ತುಳಸಿ ವನ, ದೇವಿ ವನ, ರಾಶಿ ವನ ಹಾಗು ಶಿವ ಪಂಚಾಯತನ ವನಗಳು ಇವೆ. ಶ್ರೀಸದ್ಗುರು ಕೊಂಡಾರ್ಯ ಉದ್ಯಾನವನ ಇದ್ದು ಮನಸ್ಸಿಗೆ ಮುದ ನೀಡುತ್ತದೆ.
ಇಲ್ಲಿನ ನವಗ್ರಹ ವನದಲ್ಲಿ ಪ್ರತಿ ಗ್ರಹಕ್ಕೂ ಪ್ರತ್ಯೇಕ ಮಂಟಪವನ್ನು ಹಾಗು ಅದಕ್ಕೆ ಸಂಬಂಧಿಸಿದ ವೃಕ್ಷಗಳನ್ನ ಸ್ಥಾಪಿಸಲಾಗಿದೆ. ರಾಶಿ ವನದಲ್ಲಿ 12 ರಾಶಿಗಳನ್ನು ರಾಶಿ ಮಂಡಲದಲ್ಲಿ ತೋರಿಸಲಾಗಿದ್ದು ರಾಶಿಯ ಚಿಹ್ನೆ ಹಾಗು ವೄಕ್ಷದ ಸಮೇತ ತೋರಿಸಲಾಗಿದೆ. ಧನ್ವಂತರಿ ವನದಲ್ಲಿ ವಿವಿಧ ಔಷಧ ಸಸ್ಯ ಹಾಗು ಗಿಡಮೂಲಿಕೆಗಳನ್ನು ಬೆಳೆಸಲಾಗಿದೆ. ಇಲ್ಲಿನ ಸಮೀಪದ ಗುಡ್ಡದಲ್ಲಿ ಯೋಗಾಂಜನೇಯನ ಮೂರ್ತಿ ಇದೆ.
ತಲುಪುವ ಬಗ್ಗೆ : ಮಿಣಕನಗುರ್ಕಿ ಗೌರಿಬಿದನೂರು – ಗುಡಿಬಂಡೆಯ ರಸ್ತೆಯಲ್ಲಿ ಮಂಚೇನಹಳ್ಳಿಯಿಂದ ಸುಮಾರು 2 ಕಿ ಮೀ ದೂರದಲ್ಲಿದೆ. ಗೌರಿಬಿದನೂರಿನಿಂದ ಸುಮಾರು 20 ಕಿ ಮೀ ಹಾಗು ಚಿಕ್ಕಬಳ್ಳಾಪುರದಿಂದಲೂ 20 ಕಿ ಮೀ ದೂರದಲ್ಲಿದೆ.