*ಶ್ರೀನಿವಾಸ ಮೂರ್ತಿ ಎನ್. ಎಸ್.
ದೇವರ ಅರಾಧನೆಯಲ್ಲಿ ಕಾಣ ಸಿಗುವ ಉದ್ಭವ ನರಸಿಂಹನ ಅರಾಧನೆ ನಮ್ಮಲ್ಲಿ ವಿಫುಲವಾಗಿ ಕಾಣಸಿಗುತ್ತದೆ. ಅದಕ್ಕೆ ಅದರದೇ ಆದ ಇತಿಹಾಸವಿದೆ. ಆದರೆ ಅಲ್ಲಲ್ಲಿ ಉದ್ಭವ ರಂಗನಾಥನ ಆರಾಧನೆ ಪಾಳೇಗಾರರು ಹಾಗು ನಂತರ ಕಾಲದಲ್ಲಿ ಕಾಣ ಸಿಗುತ್ತದೆ. ಅಂತಹ ಅಪರೂಪದ ದೇವಾಲಯಗಳಲ್ಲಿ ಹೆಳವನಕಟ್ಟೆ ಗಿರಿಯಮ್ಮನ ಅರಾಧ್ಯ ದೈವ ಶ್ರೀ ಲಕ್ಶ್ಮೀ ರಂಗನಾಥನನ್ನು ದಾವಣಗೆರೆ ಜಿಲ್ಲೆಯ
ಹರಿಹರ ತಾಲ್ಲೂಕಿನ ಕೊಮಾರನಹಳ್ಳಿಯಲ್ಲಿ ನೋಡಬಹುದು.
ವಿಜಯನಗರ ನಂತರದ ಕಾಲದಲ್ಲಿ ಅದರಲ್ಲೂ ಪಾಳೇಗಾರರ ಕಾಲದಲ್ಲಿ ನಾಡಿನಲ್ಲಿ ರಂಗನಾಥನ ಆರಾಧನೆ ತೀವ್ರವಾಯಿತು. ಶೇಷಶಯನ ರಂಗನಾಥನ ಆರಾಧನೆ ಮಾತ್ರ ಇದ್ದ ಇತಿಹಾಸದಲ್ಲಿ ನಂತರ ಕಾಲದಲ್ಲಿ ಸ್ಥಾನಿಕ ರಂಗನಾಥನ ಶಿಲ್ಪಗಳು ಹಾಗು ಉದ್ಭವ ರಂಗನಾಥನ ಕಲ್ಪನೆಗಳು ಕಾಣಿಸಿಕೊಂಡವು. ಮೂಲತಹ ದನಗಾಹಿಗಳ ಹಾಗು ಬೇಟೆಗಾರರ ಆರಾಧ್ಯ ದೈವವಾಗಿದ್ದ
ರಂಗನಾಥ ನಂತರ ಕಾಲದಲ್ಲಿ ಪ್ರತ್ಯೇಕ ಮಂದಿರಗಳಾಗಿ ಪರಿವರ್ತನೆಗೊಂಡವು. ಇದಕ್ಕೆ
ರಾಜಕೀಯ ಕಾರಣಗಳೂ ಎನೇ ಇದ್ದರೂ ಬಂಡೆಯ ರೂಪವನ್ನೆ ರಂಗನಾಥ ಹಾಗು ನರಸಿಂಹನ
ಸ್ವರೂಪದಲ್ಲಿ ಅರಾಧಿಸುವ ಪರಂಪರೆ ಈ ಪ್ರಾಂತ್ಯಗಳಲ್ಲಿ ಸಾಕಷ್ಟು ಬೆಳೆದು ಬಂದಿದೆ. ಬಹುತೇಕ
ದಕ್ಷಿಣ ಭಾಗದಲ್ಲಿ ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಹಾಗು ಸುತ್ತ
ಮುತ್ತ ಜಲ್ಲೆಗಳಲ್ಲಿ ಈ ರೀತಿಯ ದೇವಾಲಯಗಳನ್ನು ನೋಡಬಹುದು.
ಇನ್ನು ಕೊಮಾರನಹಳ್ಳಿಯಲ್ಲಿನ ಈ ದೇವಾಲಯ ಗರ್ಭಗುಡಿ, ಅಂತರಾಳ, ಸಭಾಮಂಟಪ ಹಾಗು
ಅಂಕಣ ಹೊಂದಿದ್ದು ಸುಮಾರು 17 ನೇ ಶತಮಾನದಲ್ಲಿ ನಿರ್ಮಾಣಗೊಂಡಿದೆ. ಗರ್ಭಗುಡಿಯಲ್ಲಿ ಶ್ರೀ
ಲಕ್ಶ್ಮೀ ರಂಗನಾಥ ಎಂದು ಕರೆಯುವ ಉದ್ಭವ ಬಂಡೆಯ ಸ್ವರೂಪವಿದೆ. ಇಲ್ಲಿ ಇದ್ದ ನೈಸರ್ಗಿಕ
ಬಂಡೆಯನ್ನ ಶ್ರೀ ಲಕ್ಶ್ಮೀ ರಂಗನಾಥನ ಸ್ವರೂಪದಲ್ಲಿ ಸ್ಥಳಿಯರಿಂದ ಅರಾಧಿಸಲ್ಪಟ್ಟಿದ್ದು ಈಗ ಅದಕ್ಕೆ
ದೇವಾಲಯ ನಿರ್ಮಾಣಗೊಂಡಿದೆ. ದೇವಾಲಯದ ಕಂಭಗಳು ವಿಜಯನಗರೋತ್ತರ ಶೈಲಿಯಲ್ಲಿದ್ದು
ದೇವಾಲಯ ಬಹುತೇಕ ಅಧುನಿಕ ಸ್ಪರ್ಶ ಪಡೆದಿದೆ. ದೇವಾಲಯಕ್ಕೆ ಮಹಾದ್ವಾರವನ್ನು ಕಳೆದ
ಶತಮಾನದಲ್ಲಿ ನಿರ್ಮಾಣಗೊಂಡಿದೆ (ಸುಮಾರು 20 ನೇ ಶತಮಾನದ ಆರಂಭದಲ್ಲಿ).
ಇಲ್ಲಿ ಪಕ್ಕದಲ್ಲಿ ಶ್ರೀ ಲಕ್ಶ್ಮೀಗೆ ಪ್ರತ್ಯೇಕ ದೇವಾಲಯವಿದೆ. ಈ ದೇವಾಲಯ ಸಹ ಗರ್ಭಗುಡಿ
ಹಾಗು ಸಭಾಮಂಟಪ ಹೊಂದಿದ್ದು ಗರ್ಭಗುಡಿಯಲ್ಲಿ ಲಕ್ಶ್ಮೀಯ ಶಿಲ್ಪವಿದೆ. ಸಭಾಮಂಟಪದಲ್ಲಿ
ಹಳೆಯ ದೇವಾಲಯದಲ್ಲಿ ಇದ್ದ ಕಂಭಗಳನ್ನು ಬಳಸಿಕೊಳ್ಳಲಾಗಿದೆ. ಶ್ರೀ ಲಕ್ಶ್ಮೀ ರಂಗನಾಥನ
ಭಕ್ತೆಯಾಗಿದ್ದ ಹೆಳವನಕಟ್ಟೆ ಗಿರಿಯಮ್ಮನಿಗೆ ಸಹ ದೇವಾಲಯವನ್ನು ನೂತನವಾಗಿ ಸ್ಥಾಪಿಸಲಾಗಿದೆ.
ಇನ್ನು ದೇವಾಲಯಕ್ಕೆ ಹೊಂದಿಕೊಂಡಂತೆ ಆಂಜನೇಯ ದೇವಾಲಯವೂ ಇದ್ದು ಇದರ ಬಾಗಿಲುವಾಡ್
ಪ್ರಾಚೀನ ದೇವಾಲಯದ್ದು ಇಲ್ಲಿನ ಲಲಾಟದಲ್ಲಿ ಗಜಲಕ್ಶ್ಮಿ ಕೆತ್ತೆನೆ ಇದೆ. ಇಲ್ಲಿನ ಹಲವು ಭಾಗಗಳು
ಹಾಗು ಲಕ್ಷ್ಮೀ ದೇವಾಲಯದ ಕಂಭಗಳು ಇಲ್ಲಿನ ಹಳೆಯ ದೇವಾಲಯವಿದ್ದು ಕುರುಹಗಳು.
ನಾಡಿನ ಅವಧೂತರಲ್ಲಿ ಒಬ್ಬರಾದ ಶ್ರೀ ಶಂಕರಲಿಂಗ ಭಗವಾನರು ತಮ್ಮ ಅಂತ್ಯಕಾಲದಲ್ಲಿ
ಇಲ್ಲಿನ ಪ್ರಶಾಂತವಾದ ವಾತವರಣ ಹಾಗು ರಂಗನಾಥನ ಬಳಿಯಲ್ಲಿ ನೆಲಸಿದ್ದು ಅವರ ಅಂತ್ಯದ
ನಂತರ ಈಗ ಅವರ ಸಮಾಧಿ ಹಾಗು ಅವರ ಬೋಧನೆಯ ಪ್ರಚಾರದಲ್ಲಿ ನಿರತವಾದ ಶ್ರೀ
ರಂಗನಾಥಶ್ರಾಮ ಪಕ್ಕದಲ್ಲಿ ಇದ್ದು ನಿತ್ಯಾ ದಾಸೋಹವಿದೆ. ಇಲ್ಲಿ ಅವರ ಪಾದುಕೆಗಳು ಹಾಗು
ಬಳಸುತ್ತಿದ್ದ ಪರಿಕರಗಳು ಇದ್ದು ಅಧ್ಯಾತ್ಮದ ಪರಿಸರ ಬಯಸುವವರಿಗೆ ಸೂಕ್ತ ಸ್ಥಳ.
ತಲುಪುವ ಬಗೆ: ಕೊಮಾರನಹಳ್ಳಿ, ಶಿವಮೊಗ್ಗ – ಹರಿಹರ ರಸ್ತೆಯಲ್ಲಿ ಮಲೆಬೆನ್ನೂರಿಗಿಂತ ಸುಮಾರು 2
ಕಿಮೀ ಮುಂಚೆ ಸಿಗುತ್ತದೆ. ಹೆದ್ದಾರಿ ಬದಿಯಲ್ಲಿರುವ ಕಾರಣ ಸುಲಭವಾಗಿ ತಲುಪಬಹುದು. ಇನ್ನು
ಹರಿಹರದಿಂದ ಸುಮಾರು 21 ಕಿಮೀ ದೂರದಲ್ಲಿದೆ.