ಪುಷ್ಯ ಎಂಬುದು ಸಂಸ್ಕೃತ ಪದವಾಗಿದ್ದು, ಇದರ ಅರ್ಥ “ಪೋಷಿಸುವುದು”. ಗುರುವಾರ ಅಥವಾ ಭಾನುವಾರ ಪುಷ್ಯ ನಕ್ಷತ್ರ ಬಂದಾಗ ಜ್ಯೋತಿಷಿಗಳು ಇದನ್ನು ಆಧ್ಯಾತ್ಮಿಕ ಸಾಧನೆಗೆ ಅನುಕೂಲಕರವೆಂದು ಪರಿಗಣಿಸಿ ಅದನ್ನು ಅಮೃತ ಯೋಗ ಎಂದು ಕರೆಯುತ್ತಾರೆ.
ಪುಷ್ಯ ನಕ್ಷತ್ರದ ದಿನ ನಮ್ಮಗುರುವಿನ ಆಶೀರ್ವಾದ ಪಡೆಯಲು ಶುಭ ದಿನವಾಗಿದೆ. ಈ ರೀತಿಯಾಗಿಯೇ ಪುಷ್ಯ ಆಧ್ಯಾತ್ಮಿಕ ಮತ್ತು ಧಾರ್ಮಿಕ ವಿಷಯಗಳೊಂದಿಗೆ ಶುಭ ಸಂಬಂಧವನ್ನು ಹೊಂದಿದೆ. ರಾಯರ ಅಂತರಂಗ ಭಕ್ತರಾದ ಅಪ್ಪಣ್ಣಾಚಾರ್ಯರು, ಪುಷ್ಯ ನಕ್ಷತ್ರದ ದಿನ ರಾಯರ ಗುರುಸ್ತೋತ್ರದ ಪಾರಾಯಣದ ಪ್ರಯೋಜನಗಳನ್ನು ಉಲ್ಲೇಖಿಸಿದ್ದಾರೆ.
ಅವರು ರಚಿಸಿರುವ ರಾಘವೇಂದ್ರ ಸ್ತೋತ್ರದಲ್ಲಿ ಶ್ರೀ ಅಪ್ಪಣ್ಣಾಚಾರ್ಯರು, “ಸೋಮ- ಸೂರ್ಯ ಪರಾಗೇಚ ಪುಷ್ಯಾರ್ಕಾದಿ ಸಮಾಗಮೆ, ಯೋನುತ್ತಮ ಮಿದಂ ಸ್ತೋತ್ರಂ ಅಷ್ಟೋತ್ತರ ಶತಮ್ ಜಪೆತ್, ಭೂತ ಪ್ರೇತ ಪಿಶಾಚಾದಿ ಪೀಡಾ ತಸ್ಯ ನ ಜಾಯತೆ ” ಇದರ ಅರ್ಥವೇನೆಂದರೆ, ಚಂದ್ರಗ್ರಹಣ ಅಥವಾ ಸೂರ್ಯಗ್ರಹಣ ಇದ್ದಾಗ ಅಥವಾ ಭಾನುವಾರ ಪುಷ್ಯ ನಕ್ಷತ್ರದ ಸಮಯದಲ್ಲಿ, ಯಾವುದೇ ವ್ಯಕ್ತಿಯು ರಾಯರ ಸ್ತೋತ್ರವನ್ನು 108 ಸಲ ಪಠಿಸಿದರೆ ಜಾತಕದಲ್ಲಿ ಇರುವ ದೋಷಗಳು ಮುಕ್ತವಾಗಿ, ಸನ್ಮಾರ್ಗ ದೊರಕುವುದು.
ಯಾರು ರಾಘವೇಂದ್ರ ಸ್ತೋತ್ರವನ್ನು 108 ಬಾರಿ ಪಠಿಸುವರೋ ಅವರಿಗೆ ಯಾವುದೇ ದುಷ್ಟಶಕ್ತಿಗಳು ತೊಂದರೆಗೊಳಿಸುವುದಿಲ್ಲ. ಆದ್ದರಿಂದ ನಾವೆಲ್ಲರೂ ಆಗಸ್ಟ್ 8 ರ ಭಾನುವಾರ ದಂದು ಶ್ರೀ ರಾಯರ ಮೃತ್ತಿಕಾ ವೃಂದಾವನ ಅಥವಾ ಅವರ ಚಿತ್ರಪಟದ ಮುಂದೆ ಒಗ್ಗೂಡಿ ಪ್ರಸಿದ್ಧ ಶ್ರೀ ರಾಯರ ಸ್ತೋತ್ರವನ್ನು ಸಾಧ್ಯವಾದಷ್ಟು ಬಾರಿ ಜಪಿಸಿ, ಅವರ ಆಶೀರ್ವಾದವನ್ನು ಗಳಿಸಲು ಈ ಶುಭ ದಿನವನ್ನು ಬಳಸಿಕೊಳ್ಳೋಣ.
ಅಜ್ಞಾನವನ್ನು ನಾಶಮಾಡಿ, ಸುಜ್ಞಾನವನ್ನು ನೀಡಿ, ಅನoದವನ್ನು ಸದಾ ನೀಡುವ ರಾಯರ ಅನುಗ್ರಹ ನಮ್ಮೆಲ್ಲರ ಮೇಲೆ ಸದಾ ಇರಲಿ. ಈ ಸಂದರ್ಭದಲ್ಲಿ ಪುಣ್ಯ ಕೀರ್ತಿ ಪಾರಾಯಣ ಸಂಘ, ಬೆಂಗಳೂರು ಇವರಿಂದ ರಾಘವೇಂದ್ರ ಸ್ತೋತ್ರದ ವಿಶೇಷ ಪಾರಾಯಣ ಕಾರ್ಯಕ್ರಮ ಏರ್ಪಡಿಸಲಾಗಿದೆ.