ಬೆಂಗಳೂರು: ಭಾರತೀಯ ವಿದ್ಯಾಭವನ, ಉದಯ ಪ್ರಕಾಶನ ಬೆಂಗಳೂರು ಮತ್ತು ಪ್ರೊ.ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನ(ರಿ) ಕಲಬುರಗಿ ಇವರ ಸಹಯೋಗದೊಡನೆ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಅವರ ‘ಬ್ರಹ್ಮಯಾನ’ ಕೃತಿ ಲೋಕಾರ್ಪಣ ಸಮಾರಂಭ ಹಾಗೂ ಪ್ರೊ.ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಆಗಸ್ಟ್ 14ರಂದು
ಬೆಳಗ್ಗೆ 11 ಗಂಟೆಗೆ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದ ಖಿಂಚ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನಮಠ, ಸುತ್ತೂರು ಶ್ರೀಕ್ಷೇತ್ರದ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯವನ್ನು ವಹಿಸುತ್ತಾರೆ. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ ಕೃತಿ ಲೋಕಾರ್ಪಣೆ ಗೊಳಿಸುವರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಮನು ಬಳಿಗಾರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರೊ.ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನ, ಕಲಬುರಗಿ ಅವರು ಪ್ರತಿವರ್ಷ ಕೊಡಮಾಡುವ 2020ರ ‘ಪ್ರೊ. ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ’ಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ.ಬಿ.ವಿ.ವಸಂತಕುಮಾರ್ ಅವರಿಗೆ ಪ್ರದಾನ ಮಾಡಲಿದ್ದಾರೆ. ಕರ್ನಾಟಕ ಗಾಂಧೀಸ್ಮಾರಕ ನಿಧಿ, ಗಾಂಧೀಭವನದ ಅಧ್ಯಕ್ಷರಾದ ಡಾ. ವೂಡೇ ಪಿ. ಕೃಷ್ಣ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರತಿಷ್ಠಾನದ ಗೌ. ಕಾರ‍್ಯದರ್ಶಿ ಡಾ.ಎಂ.ಬಿ ಕಟ್ಟಿ, ಉದಯ ಪ್ರಕಾಶನದ ವ್ಯವಸ್ಥಾಪಕಿ ಎಂ.ಡಿ.ಶೈಲಜಾ ಹಾಗೂ ಭಾರತೀಯ ವಿದ್ಯಾಭವನದ ಹೆಚ್.ಎನ್.ಸುರೇಶ್ ತಿಳಿಸಿರುತ್ತಾರೆ
ಕೃತಿ ಬಗ್ಗೆ:
‘ಬ್ರಹ್ಮಯಾನ' ಮಹಾಸಂಪುಟ ಭೌತಿಕಚರ್ಯೆಯನ್ನು ವಿಮುಕ್ತಗೊಳಿಸಿ ಪಾರಮಾರ್ಥಿಕ ನೆಲೆಗೆ ನಮ್ಮನ್ನು ಒಯ್ಯುವ ವಿಶಿಷ್ಟ ಬೆಳಗೂ ಇದಾಗಿದೆ. ಇದೊಂದು
ವೇದಾಂತ ಕಾವ್ಯ ಅದರಲ್ಲೂ ಅದ್ವೈತ ಕಾವ್ಯ! ಕಾವ್ಯವು ಹಿನ್ನೆಲೆಗಿದ್ದು; ತತ್ತ್ವಮುನ್ನೆಲೆಯಲ್ಲಿದೆ ! ವೇದಗಳು ವಿಶ್ವದ ಅತ್ಯಂತ ಪ್ರಾಚೀನತಮವಾದ ಜ್ಞಾನನಿಧಿಯಷ್ಟೆ. ಈ ವೇದಗಳಲ್ಲಿ ಎರಡು ವಿಭಾಗಗಳುಂಟು. ಮೊದಲನೆಯದು ಕರ್ಮಕಾಂಡ. ಎರಡನೆಯದು ಜ್ಞಾನಕಾಂಡ.
ಕರ್ಮಕಾಂಡವು ಪ್ರಧಾನವಾಗಿ ಯಜ್ಞ-ಯಾಗಾದಿ ಕಾಮ್ಯಕರ್ಮಗಳ ಬಗ್ಗೆ ತಿಳಿಸುತ್ತದೆ. ಜ್ಞಾನಕಾಂಡವು ಕೇವಲ ತತ್ತ್ವಚಿಂತನೆಯನ್ನು ಮಾತ್ರ ತಿಳಿಸುತ್ತದೆ. ಹೀಗಾಗಿ, ಜ್ಞಾನಕಾಂಡದ ಭಾಗವೇ ಉಪನಿಷತ್ತುಗಳು. ಈ ಉಪನಿಷತ್ತುಗಳು ಪ್ರಧಾನವಾಗಿ ಹತ್ತು. ಇವುಗಳಿಗೆ ಆಚಾರ್ಯತ್ರಯರು ಭಾಷ್ಯಗಳನ್ನು ಬರೆದಿದ್ದಾರೆ. ಇವು ಅಜ್ಞಾನಿಯನ್ನು ಜ್ಞಾನಿಯನ್ನಾಗಿಯೂ, ಬುದ್ಧನನ್ನು ಮುಕ್ತನನ್ನಾಗಿಯೂ ಮಾಡಿ ಮರ್ತ್ಯಲೋಕದಿಂದ ಅಮೃತತ್ತ್ವಕ್ಕೆ ಏರಿಸುವ ಸೋಪಾನಗಳಂತಿವೆ. ಎಲ್ಲಾ ಚರಾಚರ ವಸ್ತುವಿನ ಹಿಂದೆ ಇರುವ ಅಖಂಡವಾದ ಮೂಲ ಚೈತನ್ಯವನ್ನು ಸಾಕ್ಷಾತ್ಕರಿಸಿಕೊಂಡು ಪ್ರತಿಯೊಬ್ಬ ಮನುಷ್ಯನಿಗೂ ನಿತ್ಯಶಾಂತಿಯನ್ನು ನೀಡುವುದೇ ಈ ಉಪನಿಷತ್ತುಗಳ ಪ್ರಮುಖ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಮಹಲಿಂಗರ0ಗನ ‘ಅನುಭವಾಮೃತ’ ವೇದಾಂತ ಕಾವ್ಯವು ಕನ್ನಡದಲ್ಲಿ ಮೂಡಿದೆ.
ಪ್ರತಿಯೊಂದು ಅಧ್ಯಾಯದ ಒಂದೊ0ದು ಘಟ್ಟವನ್ನು ವೈಚಾರಿಕ ಆಕೃತಿಯ ನೆಲೆಯಲ್ಲಿ ನೋಡಿ; ಸೂಕ್ತವಾದ ಪದ್ಯಗಳನ್ನು ಆಯ್ದು ಅನುವಾದಿಸಿ, ವಿವರಿಸಲಾಗಿದೆ. ಈ ಪುಸ್ತಕವು ಅದ್ವೈತ ವೇದಾಂತದ ಪ್ರವೇಶಿಕೆಯಾಗಿ ಸಾಧಕರಿಗೆ, ಆಸಕ್ತರಿಗೆ, ಉಪಯೋಗ ಆಗಬೇಕೆಂಬ ಮಹದುದ್ದೇಶವನ್ನು ಹೊಂದಿದೆ. ಇದಕ್ಕೆ ಅನುಗುಣವಾಗಿ ಪ್ರಸ್ತಾವನೆ ಮತ್ತು ಅನುಬಂಧಗಳು ಜೋಡಣೆಗೊಂಡಿವೆ.
ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಕಿರು ಪರಿಚಯ
ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ 1952 ಜೂನ್ 5ರಂದು ಬೆಂಗಳೂರು ಗ್ರಾಮಾಂತರ ಹೆಬ್ಬಗೋಡಿಯಲ್ಲಿ ಜನನ. ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾಭ್ಯಾಸ ನೆಲಮಂಗಲದ ಸರ್ಕಾರಿ ಮತ್ತು ಹೈಯರ್‌ಸೆಕೆಂಡರಿ ಶಾಲೆ. ಮೊದಲ ಸಂಸ್ಕೃತ-ಕನ್ನಡ ಗುರುಗಳು ಎಸ್.ವಿ. ರಾಮಸ್ವಾಮಿ ಅಯ್ಯಂಗಾರ್. ಸಿದ್ಧಗಂಗಾ ಮಠದಲ್ಲಿ ಕನ್ನಡ ಪಂಡಿತ್ ಮತ್ತು ಸಂಸ್ಕೃತ ಅಲಂಕಾರ ವಿದ್ವತ್ ವ್ಯಾಸಂಗ. ವಿದ್ವಾನ್ ಬಿ. ವೆಂಕಟರಾಮಭಟ್ಟ, ಇವರಲ್ಲಿ ಕಾವ್ಯಾಲಂಕಾರಗಳ ಅಧ್ಯಯನ. ಬೆಂಗಳೂರಿನ ಶ್ರೀರಾಮಕೃಷ್ಣಾಶ್ರಮದಲ್ಲಿ ಸ್ವಾಮಿ ಆದಿದೇವಾನಂದರಿ0ದ ಅದ್ವೈತ ವೇದಾಂತದ ಅನುಗ್ರಹ. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ., ಮೂರನೇ ರ‍್ಯಾಂಕಿನೊಡನೆ ಕುವೆಂಪು ಚಿನ್ನದ ಪದಕ, ಸಂಸ್ಕೃತ ಎಂ.ಎ., ಉನ್ನತ ಶ್ರೇಣಿಯೊಂದಿಗೆ ತೇರ್ಗಡೆ. ಕನಕಪುರದಲ್ಲಿ ಕನ್ನಡ ಶಿಕ್ಷಕರಾಗಿ ವೃತ್ತಿಜೀವನ ಪ್ರಾರಂಭ. ಬೆಂಗಳೂರಿನ ಮಹಾನಗರ ಪಾಲಿಕೆಯ ಪ್ರೌಢಶಾಲೆಯಲ್ಲಿ ಕನ್ನಡ ಪಂಡಿತ. 1992ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಪ್ರವೇಶ. ಅಲ್ಲಿ ಪ್ರವಾಚಕ, ಅಧ್ಯಯನಾಂಗದ ನಿರ್ದೇಶಕ 1998ರಲ್ಲಿ ಕುಲಸಚಿವ. 2001ರಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ. 2004ರಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿ, ಡೀನ್ ಮತ್ತು ಪ್ರಸಾರಾಂಗದ ನಿರ್ದೇಶಕ, 2008ರಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶೇಷಾಧಿಕಾರಿಯಾಗಿ ನೇಮಕ. 2010 ಮೇ 26ರಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಥಮ ಕುಲಪತಿ. ೨೦೧೫ರಿಂದ ಕಲಬುರಗಿಯ ಪಾಲಿ ಇನ್‌ಸ್ಟಿಟ್ಯೂಟ್ ಸಂಸ್ಥೆಯ ಗೌರವ ನಿರ್ದೇಶಕ. ಎಂಬತ್ತಕ್ಕೂ ಹೆಚ್ಚು ಸಾಹಿತ್ಯ, ಸಂಸ್ಕೃತಿ ಮತ್ತು ಭಾಷೆಗೆ ಸಂಬ0ಧಿಸಿದ0ತೆ ಪುಸ್ತಕಗಳ ಪ್ರಕಟಣೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2008ರಲ್ಲಿ ಗೌರವ ಪ್ರಶಸ್ತಿ ಹಾಗೂ 2009ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2011ರಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ. 2012ರಲ್ಲಿ ಸಿದ್ಧಗಂಗಾ ಮಠದಿಂದ ‘ಸಿದ್ಧಗಂಗಾಶ್ರೀ’ ಪ್ರಶಸ್ತಿ. 2016-ಶಾಸ್ತ್ರಚೂಡಾಮಣಿಯಾಗಿ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ, ನವದೆಹಲಿಯಿಂದ ಆಯ್ಕೆ. 2017ರಲ್ಲಿ ಶಿವಗಂಗೆಯ ಮೇಲಣಗವಿಮಠದಿಂದ ‘ಶಿವಗಂಗಾಶ್ರೀ’ ಪ್ರಶಸ್ತಿ ಮತ್ತು ಬೆಂಗಳೂರಿನ ಬಸವ ವೇದಿಕೆ ಸಂಸ್ಥೆಯಿ0ದ ‘ವಚನ ಸಾಹಿತ್ಯಶ್ರೀ’ ಪ್ರಶಸ್ತಿ. 2018ರಲ್ಲಿ ಸಂಸ್ಕೃತಿ ಪ್ರಕಾಶನ ಸೇಡಮ್ ಸಂಸ್ಕೃತಿ ಸಮ್ಮಾನ್’ ಪ್ರಶಸ್ತಿ. ಅಮ್ಮೆಂಬಳ ಶಂಕರನಾರಾಯಣ ನಾವಡ ಪ್ರತಿಷ್ಠಾನದಿಂದ
ಅಮ್ಮೆಂಬಳ ಸಾಹಿತ್ಯ ಪ್ರಶಸ್ತಿ, 2020ರಲ್ಲಿ ಹಾವೇರಿಯ ಬಸವಕೇಂದ್ರ, ಶ್ರೀ ಹೊಸಮಠದಿಂದ `ಡಾ.ಶಿಮುಶ ಪ್ರಶಸ್ತಿ’, ಕನ್ನಡ ಸಾಹಿತ್ಯ ಪರಿಷತ್ತಿನ ‘ಆಜೀವ ಸದಸ್ಯ ಪುರಸ್ಕಾರ’, ಸಾಗರದ ಪ್ರಜ್ಞಾಭಾರತಿ ವಿದ್ಯಾಮಂದಿರದಿ0ದ ‘ವಿದ್ವಾನ್ ಎನ್.ರಂಗನಾಥಶರ್ಮಾ ಸಂಸ್ಕೃತಿ ಪುರಸ್ಕಾರ’.