ವಿಶಿಷ್ಟ ವ್ಯಕ್ತಿತ್ವದ ವೈ ಸುಧೀಂದ್ರರು, ಈಗ ನೆನಪು ಮಾತ್ರ

ಸಂಗೀತ, ಸಾಹಿತ್ಯದಲ್ಲಿ ಅಮೋಘ ಸಾಧನೆ ಮಾಡಿದ ಬಾಗಲಕೋಟೆಯ ವೈ ಸುಧೀಂದ್ರ ಅವರು ಪ್ರತಿಭಾವಂತ ಕವಿಯೆಂದು ಗುರ್ತಿಸಿಕೊಂಡಿದ್ದರು. 2021 ಜುಲೈ 20ರಂದು ಇಹಲೋಕ ತ್ಯಜಿಸಿದ ಅವರು ಈಗ ನೆನಪು ಮಾತ್ರ ಅವರ ಸಾಧನೆ ಕುರಿತ ಲೇಖನ.

*ಎಸ್.ಎಸ್.ಹಳ್ಳೂರ

ಒಬ್ಬ ಮನುಷ್ಯ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡುವುದೇ ಕಠಿಣ. ಆದರೆ ವೈ ಸುಧೀಂದ್ರರು ಬಹುಮುಖ ಪ್ರತಿಭಾವಂತರು. ಅವರು ಹಲವಾರು ಕ್ಷೇತ್ರದಲ್ಲಿ ಸಾಧನೆ ಮಾಡಿ ಬಹಳ ಜನರಿಂದ ಸೈ ಎನಿಸಿಕೊಂಡಿದ್ದರು. ಅವರದು ಹೋಲಿಕೆ ಇಲ್ಲದ ವಿಶಿಷ್ಟ ವ್ಯಕ್ತಿತ್ವ. ಸ್ನೇಹ ಸೌಜನ್ಯ ಹಾಗೂ ಸಂಸ್ಕೃತಿಗಳು ಅವರಲ್ಲಿ ತುಂಬಿಕೊ0ಡಿದ್ದರಿAದ ಬಹಳ ಜನರು ಅವರ ಪ್ರಭಾವಕ್ಕೆ ಒಳಗಾಗಿದ್ದರು. ಅವರು ತುಂಬಿದ ಕೊಡದಂತೆ, ಅಲ್ಲವಾದದ್ದು ಅವರ ಹತ್ತಿರ ಎಂದೂ ಸುಳಿಯಲಿಲ್ಲ.

ವೈ ಸುಧೀಂದ್ರ ಅವರು ಬಡತನದ ಹಿನ್ನೆಲೆಯಲ್ಲಿ ಬೆಳೆದಿದ್ದರೂ ಅಸಾಧ್ಯವಾದುದನ್ನೆ ಸಾಧಿಸಿದ್ದರು. ಅವರು ನಿಧನರಾದಾಗ ಪುರದ ಪುಣ್ಯ ಪುರುಷ ರೂಪಿಂದ ಹೋಯಿತು ಎಂಬ ಮಾತಿನಂತೆ ಅಪಾರ ಜನಸಂದಣಿ ಮಮ್ಮಲ ಮರುಗಿತು. ಅವರೊಬ್ಬ ನಡೆದಾಡುವ ವಿಶ್ವಕೋಶವಿದ್ದಂತೆ ಅಪಾರ ಶಬ್ದ ಸಂಪತ್ತು ಅವರಲ್ಲಿದ್ದುದರಿಂದ ಅವರ ಕಾವ್ಯ ಸತ್ವಯುತವಾಗಿ ಹೊರಹೊಮ್ಮಿತು. ಅನೇಕ ಶಕ್ತಿಗಳನ್ನು ಮೇಳೈಸಿಕೊಂಡು ಒಬ್ಬ ಮಹಾನ್ ವ್ಯಕ್ತಿಯಾಗಿದ್ದರು. ಅವರು ಏಕಾಂತದಲ್ಲಿ ಲೋಕಾಂತವನ್ನು, ಲೋಕಾಂತದಲ್ಲಿ ಏಕಾಂತವನ್ನು ಕಂಡವರು. ಹೀಗಾಗಿ ಕಾವ್ಯ ಕನ್ನಿಕೆ ಅವರನ್ನು ಸುತ್ತುವರಿದಿದ್ದಳು.

ಸಂಗೀತ ಸರಸ್ವತಿ ಅವರಿಗೆ ಮನಸಾರೆ ಒಲಿದಿದ್ದಳು. ಅವರು ಸೋಲರಿಯದ ಸಾಹಸಿಯಾಗಿದ್ದರು, ಅಸಾದೃಶ್ಯವಾದ ಛಲವನ್ನು ಅವರು ತಮ್ಮ ಎದೆಯಲ್ಲಿ ತುಂಬಿಕೊ0ಡಿದ್ದರು.
ಒಬ್ಬ ಲೇಖಕ ಎಷ್ಟು ಬರೆದಿದ್ದಾನೆ ಎನ್ನುವುದು ಲೆಕ್ಕಕ್ಕೆ ಬರುವುದಿಲ್ಲ ಆದರೆ ಜನರ ಹೃದಯಕ್ಕೆ ಮುಟ್ಟುವಂತಹ ಸಾಹಿತ್ಯವನ್ನು ಎಷ್ಟು ಬರೆದಿದ್ದಾನೆನ್ನುವುದು ಬಹು ಮುಖ್ಯವಾಗುತ್ತದೆ. ಅವರ ‘ಶ್ರೀ ಕನಕ ವಿಜಯ’ ಕೃತಿ ಅತ್ಯಮೂಲ್ಯವಾದುದು. ‘ನೀನು ನಗಲು ಬಾಳು ಹಗಲು’ ಅವರ ಮತ್ತೊಂದು ಕವನ ಸಂಕಲನ, ಅದರಲ್ಲಿರುವ ಬಹುತೇಕ ಕವನಗಳು ಅದ್ಭುತವಾಗಿ ಮೂಡಿ ಬಂದಿವೆ. ದೂರದರ್ಶನ ಹಾಗೂ ಆಕಾಶವಾಣಿಯಲ್ಲೂ ಅವರ ಕವಿತೆಗಳು ಪ್ರಸಾರಗೊಂಡಿವೆ. ಬಹಳಷ್ಟು ಕವಿಗಳಿಗೆ ಅವರು ಮಾರ್ಗದರ್ಶನ ನೀಡಿದ್ದಾರೆ.


ಶ್ರೀ ಕನಕ ವಿಜಯ ಕುರಿತು:- ಕನಕದಾಸರ ಜೀವನ ಚರಿತ್ರೆಯನ್ನು ಕುರಿತು ಸಾಕಷ್ಟು ಕೃತಿಗಳು ಗದ್ಯದಲ್ಲಿ ಬಂದಿವೆ. ಆದರೆ ಕಾವ್ಯರೂಪದಲ್ಲಿ ಬರೆದವರು ಅಪರೂಪ. ಅದರಲ್ಲೂ ಭಾಮಿನಿ ಷಟ್ಪದಿಯಲ್ಲಿ ಬರೆದದ್ದು ಇನ್ನೂ ಅಪರೂಪ. ಈ ಕೃತಿ ಹದಿನೆಂಟು ಅಧ್ಯಾಯದಲ್ಲಿ ೧೦೦೨ ಅರ್ಥಗರ್ಬಿತ ಪದ್ಯಗಳಿರುವ ಕೃತಿ. ಇದು ಕಾವ್ಯಾಸಕ್ತರ ಗಮನ ಸೆಳೆದಿರುವುದು ವಿಶೇಷ. ಚರಿತ್ರೆಯನ್ನು ಕಾವ್ಯದಲ್ಲಿ ತರುವುದು ಬಹಳ ಕಷ್ಟಕರವಾದುದು ಇಂಥ ಜಟಿಲವಾದ ಕೆಲಸಕ್ಕೆ ಕೈ ಹಾಕಿ ಸುಧೀಂದ್ರ ಅವರು ಯಶಸ್ವಿಯಾಗಿದ್ದಾರೆ. ಕನಕದಾಸರ ಆಧ್ಯಾತ್ಮಿಕ ಸಾಧನೆ ಹಾಗೂ ವೈ ಸುಧೀಂದ್ರ ಅವರ ಪ್ರತಿಭೆ ಎರಡು ಸೇರಿ ಚಿನ್ನದ ಆಭರಣದಲ್ಲಿ ರತ್ನದ ಹರಳನ್ನು ಸೇರಿಸಿದಂತೆ ಶ್ರೀ ಕನಕ ವಿಜಯ ಕೃತಿಯ ಮೌಲ್ಯದ ಹೊಳಪು ವಿದ್ವಾಂಸರನ್ನು ಮೆಚ್ಚಿಸಿದೆ.
ಅವರ ಕಾವ್ಯದಲ್ಲಿ ಸತ್ವವಿದೆ, ಸಂದೇಶವಿದೆ, ಛಂದಸ್ಸಿದೆ, ಗೇಯತೆ ಇದೆ, ಓದುಗರನ್ನು ಪ್ರಭಾವಿಸುವ, ಮನಸ್ಸನ್ನು ಅರಳಿಸುವ ಹಾಗೂ ಅಂತರAಗಕ್ಕೆ ಸಂತೋಷವನ್ನು ನೀಡುವ ಶಕ್ತಿ ಅವರ ಕಾವ್ಯಕ್ಕಿದೆ. ಇದು ವೈ ಸುಧೀಂದ್ರ ಅವರ ಕಾವ್ಯದ ಹೆಗ್ಗಳಿಕೆ. ಸಂಗೀತ ಹಾಗೂ ಸಾಹಿತ್ಯ ಎರಡನ್ನು ಜೊತೆ ಜೊತೆಯಾಗಿ ಸಾಧನೆ ಮಾಡಿದ್ದು ಅವರ ಕ್ರಿಯಾಶೀಲತೆಗೆ ಸಾಕ್ಷಿ.
ಇಂಗ್ಲೀಷ ಹಾಗೂ ಕನ್ನಡದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ವೈ ಸುಧೀಂದ್ರ ಅವರು ಒಳ್ಳೆಯ ಸಂಗೀತಗಾರರು ಹೌದು. ಅವರು ಕೊಳಲುವಾದನ, ಹಾರ್ಮೋನಿಯಂ, ತಬಲಾದಲ್ಲಿ ಪರಿಣಿತಿ ಹೊಂದಿದ್ದರು. ಸಂಗೀತ ಶಾಲೆಯನ್ನು ನಡೆಸಿ ಹಲವಾರು ಆಸಕ್ತರಿಗೆ ಸಂಗೀತ ಕಲಿಸಿ ಅಪಾರ ಶಿಷ್ಯ ಬಳಗವನ್ನು ಹೊಂದಿದ್ದರು. ಅದರಲ್ಲೂ ಕೊಳಲು ವಾದನದಲ್ಲಿ ವಿಶೇಷ ಸಾಧನೆ ಮಾಡಿದ್ದು, ಮುಧೋಳ, ಬಾಗಲಕೋಟ, ಬಾದಾಮಿ, ಬನಶಂಕರಿ, ಗಜೇಂದ್ರಗಡ, ಹುನಗುಂದ, ವಿಜಯಪುರ, ಗೋಕಾಕ, ಕೆರೂರ, ಗುಳೇದಗುಡ್ಡ, ತುಮಕೂರು, ಬೆಂಗಳೂರು, ಮಂಗಳೂರು, ಗಂಗಾವತಿ, ಅಲಹಾಬಾದ ಹೀಗೆ ನಾಡಿನಾದ್ಯಂತ ಅವರು ಕೊಳಲುವಾದನ ಕಾರ್ಯಕ್ರಮ ಕೊಟ್ಟಿದ್ದು ಸಂಗೀತದಲ್ಲಿ ಅವರ ಸಾಧನೆ ಸಿದ್ದಿಯನ್ನು ತೋರಿಸುತ್ತದೆ.


ಸಂಘಟನೆ ಹಾಗೂ ಸಮಾಜ ಸೇವೆ:-ಪ್ರಾಚೀನ ಕಲಾ ಕೇಂದ್ರ ಚಂಡಿಗಡ ಈ ಸಂಸ್ಥೆಯ ಕರ್ನಾಟಕ ರಾಜ್ಯದ ಪ್ರತಿನಿಧಿಯಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಬಾಗಲಕೋಟ ತಾಲೂಕಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅವರು ರಘುಪ್ರೇಮ ಎಜ್ಯುಕೇಶನ್ ಸೊಸೈಟಿ, ಮಕ್ಕಳ ಸಾಹಿತ್ಯ ಸಮಾಗಮ, ಭಾರತೀಯ ಸಂಗೀತ ಮಹಾಸಭಾ, ಕರ್ನಾಟಕ ಗ್ರಾಮೀಣ ವಿದ್ಯಾಪೀಠ, ಮಂಜುನಾಥ ಶಿಕ್ಷಣ ಸಂಸ್ಥೆ, ಭವಾನಿ ಶಿಕ್ಷಣ ಸಂಸ್ಥೆ ಮುಂತಾದ ಸಂಸ್ಥೆಗಳನ್ನು ಕಟ್ಟಿ ಬೆಳೆಸುವಲ್ಲಿ ಅವರದು ಪ್ರಮುಖ ಪಾತ್ರ.
ಮಕ್ಕಳ ಸಾಹಿತ್ಯ ಸಮಾಗಮದಿಂದ ಸುಮಾರು ೨೦೦ ಮಾಸಿಕ ಕವಿಗೋಷ್ಠಿಗಳನ್ನು ಯಶಸ್ವಿಯಾಗಿ ಪೂರೈಸುವಲ್ಲಿ ಅವರ ಶ್ರಮ ಶ್ಲಾಘನೀಯ. ಜಿಲ್ಲೆಯಲ್ಲಿ ೧೨ ಮಕ್ಕಳ ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸಿ ಯಶಸ್ವಿಗೊಳಿಸುವಲ್ಲಿ ಅವರ ಶ್ರಮ ಅನನ್ಯ. ಸಾಹಿತ್ಯ ಎಲ್ಲರಿಗೂ ಇಲ್ಲ ಎಂದು ಸರ್ವಜ್ಞ ಹೇಳಿದ್ದರೂ, ಸತ್ವಯುತ ಕಾವ್ಯ ರಚಿಸುವಲ್ಲಿ ಕವಿ ವೈ ಸುಧೀಂದ್ರ ಅವರು ಎತ್ತಿದ ಕೈ.


ಪ್ರಶಸ್ತಿಗಳು:-ಧಾರವಾಡ ಆಕಾಶವಾಣಿಯವರು ನಡೆಸಿದ ಭಾವ ಸಂಗಮ ಕಾವ್ಯ ಸ್ಪರ್ಧೆಯಲ್ಲಿ ಎರಡು ಸಲ (೨೦೦೪, ೨೦೦೬) ಬಹುಮಾನ ಗಳಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕ್ರಿಯಾಶೀಲ ಲೇಖಕ ಪ್ರಶಸ್ತಿ, ಶ್ರೀ ಕನಕ ವಿಜಯ ಕೃತಿಗೆ ಜಿಲ್ಲಾ ಕನಕ ಸಿರಿ ಪ್ರಶಸ್ತಿ ಮತ್ತು ಶಿಶು ಸಂಸ್ಕಾರ ಸಂಶೋಧನಾ ಕೇಂದ್ರ ರಟ್ಟಿಹಳ್ಳಿ ಪ್ರಶಸ್ತಿ, ಗದಗ ಜಿಲ್ಲೆಯ ಗಜೇಂದ್ರಗಡದ ಶ್ರೀ ಶಾರದಾ ಸಂಗೀತ ವಿದ್ಯಾಪೀಠದಿಂದ ಸ್ವರ ಮೋಹನ ಪ್ರಶಸ್ತಿ ಅವರಿಗೆ ದೊರತಿರುವುದು ಅವರ ಪ್ರತಿಭಾವಂತಿಕೆಗೆ ಸಾಕ್ಷಿ.


ವೈ. ಸುಧೀಂದ್ರ ಅವರಿಗೆ ಹೃದಯದ ಶಸ್ತç ಚಿಕಿತ್ಸೆ ಅವಶ್ಯವಿದೆ ಎಂದು ಎರಡು ವರ್ಷದ ಹಿಂದೆಯೇ ವೈದ್ಯರು ಸಲಹೆ ನೀಡಿದ್ದರು.ಆದರೆ ಅದನ್ನು ಮುಂದೂಡುತ್ತ ಬಂದ ಈ ಹೃದಯವಂತ ಕವಿ ತನ್ನಲ್ಲಿರುವ ನೋವನ್ನು ಮರೆತು ಪ್ರಸನ್ನ ವೆಂಕಟದಾಸರ ಜೀವನ ಹಾಗೂ ಸಾಧನೆಯನ್ನು ಕುರಿತು ಭಾಮಿನಿ ಷಟ್ಪದಿಯಲ್ಲಿ ಬರೆದರು. ಈ ಅಮೂಲ್ಯವಾದ ಕೃತಿಯನ್ನು ಸಾಹಿತ್ಯ ಲೋಕಕ್ಕೆ ಕೊಟ್ಟು ನಮ್ಮಿಂದ ದೂರವಾದರು. ಮರಣ ಕಾಲಕ್ಕೆ ಅವರಿಗೆ ೫೮ ವರ್ಷ ವಯಸ್ಸಾಗಿತ್ತು. ವೈ. ಸುಧೀಂದ್ರರು ನಿಲ್ದಾಣ ಮುಟ್ಟದೆ ಅರ್ದಕ್ಕೆ ಇಳಿದು ಹೋದಂತೆ ನಮಗೆಲ್ಲ ಭಾಸವಾಗಿದೆ. ಹೀಗಾಗಿ ಅವರ ಕನಸಿನ ಕಾರ್ಯಗಳು ಹಾಗೇ ಉಳಿದವು ಎಂಬ ನೋವು ನಮ್ಮೆಲ್ಲರನ್ನು ಕಾಡುತ್ತಿದೆ. ಅವರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಅಪಾರ ಬಂದು ಬಳಗ, ಅಪಾರ ಶಿಷ್ಯಂದಿರನ್ನು, ಅಭಿಮಾನಿಗಳನ್ನು ಅಗಲಿದ್ದಾರೆ. ಅವರೆಲ್ಲ ದುಃಖದ ಕಡಲಲ್ಲಿದ್ದಾರೆ. ಅವರ ಕುಟುಂಬಕ್ಕೆ ಸಹಾಯದ ಹಸ್ತದ ಜೊತೆಗೆ ಅವರ ನೆನಪು ಶಾಶ್ವತವಾಗಿ ಇರುವಂತೆ ಮಾಡುವುದು ಅವರ ಅಭಿಮಾನಿಗಳೆಲ್ಲರ ಕರ್ತವ್ಯವಾಗಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles