ಚೆಲುವ ನಾರಾಯಣಸ್ವಾಮಿ ಸನ್ನಿಧಿಯಲ್ಲಿ ಶೇಷ ವಾಹನೋತ್ಸವ ಸಂಭ್ರಮ

ಮೇಲುಕೋಟೆ: ಚೆಲುವ ನಾರಾಯಣಸ್ವಾಮಿ ಸನ್ನಿಧಿಯಲ್ಲಿ ಆಂಡಾಳ್ ಅವತರಿಸಿದ ದಿನವಾದ ಬುಧವಾರ ತಿರುವಾಡಿಪ್ಪೂರಂ ಶ್ರದ್ಧಾಭಕ್ತಿಯಿಂದ ನೆರವೇರಿತು.

ಯದುಗಿರಿ ನಾಯಕಿ ಅಮ್ಮನವರಿಗೆ ತಿರುವಾಡಿಪ್ಪೂರಂ ಅಂಗವಾಗಿ ವಿಶೇಷ ಕೈಂಕರ್ಯಗಳು ನೆರವೇರಿದವು. ಆಂಡಾಳ್ ಅವತರಿಸಿದ ಪ್ರತೀಕವಾಗಿ ನಡೆಯುವ ಮಹೋತ್ಸವ ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲಿ ಅರ್ಥಪೂರ್ಣವಾಗಿ ನೆರವೇರುತ್ತಾ ಬಂದಿದ್ದು, ಈ ವರ್ಷ ಕೋವಿಡ್‌ನಿಂದಾಗಿ ಸಾಂಪ್ರದಾಯಿಕವಾಗಿ ನೆರವೇರಿತು. ಏಳು ದಿನಗಳಿಂದ ನಡೆಯುತ್ತಿದ್ದ ತಿರುವಾಡಿಪ್ಪೂರಂ ಮಹೋತ್ಸವ ಇಂದು ಸಂಪನ್ನಗೊಂಡಿದೆ. ‌

ಬೆಳಗ್ಗೆ ಮಹಾಲಕ್ಷ್ಮಿ ಯದುಗಿರಿ ನಾಯಕಿಗೆ ಅಭಿಷೇಕದ ನಂತರ ದೇವಾಲಯದ ಒಳ ಭಾಗದಲ್ಲಿ ಚಿಕ್ಕಶೇಷವಾಹನೋತ್ಸವ ನೆರವೇರಿತು. ಸಂಜೆ ಚೆಲುವನಾರಾಯಣಸ್ವಾಮಿ ಸಮೇತ ಬೆಳ್ಳಿಯ ಪಲ್ಲಕ್ಕಿ ಉತ್ಸವ ನಡೆಯಿತು. ಉತ್ಸವದ ವೇಳೆ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿತ್ತು. ಸಂಜೆ ಮೇಲುಕೋಟೆಯಲ್ಲಿ ಒಂದು ತಾಸು ವರ್ಷಧಾರೆ ಸುರಿಯಿತು.

ಶ್ರಾವಣ ಶನಿವಾರ ದರ್ಶನ ಇಲ್ಲ: ಚೆಲುವ ನಾರಾಯಣಸ್ವಾಮಿ ಮತ್ತು ಯೋಗನರಸಿಂಹಸ್ವಾಮಿ ದೇವಾಲಯಗಳಲ್ಲಿ ಶ್ರಾವಣ ಶನಿವಾರ ಮತ್ತು ಭಾನುವಾರ ದರ್ಶನ ಇರುವುದಿಲ್ಲ. ಕೋವಿಡ್ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮ ಜಾರಿಮಾಡಲಾಗಿದೆ. ಪ್ರವಾಸಿ ಮಂದಿರ ಬಳಿ ಪೊಲೀಸ್ ಭದ್ರತೆ ನಿಯೋಜಿಸಿ ಭಕ್ತರ ವಾಹನ ಪ್ರವೇಶಿಸದಂತೆ ಎಚ್ಚರವಹಿಸಲಾಗುತ್ತಿದೆ. ಭಕ್ತರು ದೇವಸ್ಥಾನಕ್ಕೆ ಬಾರಬಾರದು. ಕೋವಿಡ್‌ ನಿಯಂತ್ರಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles