ಮೈಸೂರು ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧ

ಮೈಸೂರು: ಕೋವಿಡ್‌ ಕಾರಣ ಆ.13 ಹಾಗೂ 20ರಂದು ಚಾಮುಂಡಿ ಬೆಟ್ಟಕ್ಕೆ ನಾಗರಿಕರ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ.

ದೇವಾಲಯದಲ್ಲಿ ಧಾರ್ಮಿಕ ಆಚರಣೆಗಳು ಎಂದಿನಂತೆ ನಡೆಯಲಿದ್ದು, ಅಧಿಕಾರಿಗಳು, ಅರ್ಚಕರು, ಸಿಬ್ಬಂದಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ.

ಉಳಿದ ದಿನಗಳಲ್ಲಿಯೂ ಸಂಜೆ 6ರ ನಂತರ ದೇವಾಲಯಕ್ಕೆ ಭಕ್ತರ ಪ್ರವೇಶ ಮತ್ತು ದಾಸೋಹವನ್ನು ನಿರ್ಬಂಧಿಸಲಾಗಿದೆ. ಶಿಷ್ಟಾಚಾರ ವ್ಯವಸ್ಥೆ ಹೊಂದಿರುವ ಗಣ್ಯ ವ್ಯಕ್ತಿಗಳು ಹಾಗೂ ಚಾಮುಂಡಿಬೆಟ್ಟದ ಗ್ರಾಮಸ್ಥರಿಗೆ ನಿರ್ಬಂಧಿತ ದಿನಗಳಂದು ಪ್ರವೇಶ ಇದೆ. ಗ್ರಾಮಸ್ಥರು ನಿರ್ಬಂಧಿತ ದಿನ ಹಾಗೂ ಇತರೆ ದಿನಗಳಂದು ಸಂಜೆ 6 ಗಂಟೆಯ ನಂತರ ವಾಹನ ಬಳಸುವ ಅನಿವಾರ್ಯ ಇದ್ದರೆ, ಬೆಟ್ಟದ ವಾಸಸ್ಥಳ ಗುರುತಿನ ಚೀಟಿ ಬಳಸಬೇಕು ಎಂದು ಪ್ರಕಟಣೆ ತಿಳಿಸಿದೆ.

ನಿಷೇಧಾಜ್ಞೆ ಜಾರಿ: ನಗರದ ವಿ.ವಿ.ಪುರಂನಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ವಿಶೇಷ ಪೂಜೆಗಳು ನಡೆಯಲಿದ್ದು, ಹೆಚ್ಚಿನ ಭಕ್ತರು ಸೇರಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೋವಿಡ್‌ ನಿಯಂತ್ರಿಸಲು ಶ್ರಾವಣ ಮಾಸದ ನಾಲ್ಕೂ ಶನಿವಾರ, ಭಾನುವಾರ ಹಾಗೂ ಶುಕ್ರವಾರಗಳಂದು ಸೆಕ್ಷನ್‌ 144 ನಿಷೇಧಾಜ್ಞೆಯನ್ನು ದೇವಸ್ಥಾನ 200 ಮೀ ವ್ಯಾಪ್ತಿಯಲ್ಲಿ ಜಾರಿಗೊಳಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ. ‌

ಆ.13, 14, 15, 20, 21, 22, 27, 28, 29, ಸೆ.3, 4, 5ರಂದು ದೇವಸ್ಥಾನದ ಅರ್ಚಕರು ಹಾಗೂ ಸಿಬ್ಬಂದಿ ಹೊರತುಪಡಿಸಿ ಭಕ್ತರಿಗೆ ದೇವಸ್ಥಾನ ಪ್ರವೇಶ ಇರುವುದಿಲ್ಲ ಎಂದು ಗುರುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles