ಮಂತ್ರಾಲಯಕ್ಕೆ ಭೇಟಿ ನೀಡಿ ಶ್ರೀ ಗುರುರಾಯರ ದರ್ಶನ ಪಡೆದ ನಂತರ ಪರಿಮಳ ಪ್ರಸಾದವನ್ನು ಸ್ವೀಕರಿಸದ ಹೊರತು ಯಾತ್ರೆ ಪೂರ್ಣಗೊಳ್ಳುವುದಿಲ್ಲ.
ಪ್ರತಿದಿನ ಬೆಳಗ್ಗೆ3 ಗಂಟೆಗೆ ಆರಂಭಗೊಳ್ಳುವ ಪ್ರಸಾದದ ತಯಾರಿ ಪ್ರಕ್ರಿಯೆ ಅಗತ್ಯಕ್ಕೆ ತಕ್ಕಂತೆ ದಿನವಿಡೀ ಮುಂದುವರಿಯುತ್ತದೆ. ರವೆ, ಶುದ್ಧ ತುಪ್ಪ, ಸಕ್ಕರೆ ಬಳಸಿ ತಯಾರಿಸುವ ಪರಿಮಳ ಪ್ರಸಾದದ ಕಂಪು ಅಂದಿಗೂ ಇಂದಿಗೂ ಒಂದೇ ಸ್ವಾದ. ಅದೇ ಪರಿಮಳ. ದಿನವೂ 20 ಸಾವಿರ ಪ್ರಸಾದದ ತುಂಡುಗಳು ಖರ್ಚಾಗುತ್ತವೆ. ಆರಾಧನೆ ಮತ್ತಿತರ ವಿಶೇಷ ಸಂದರ್ಭಗಳಲ್ಲಿ 2 ಲಕ್ಷ ಪ್ರಾಕೆಟ್ ಪ್ರಸಾದ ಭಕ್ತರ ಕೈಸೇರುತ್ತವೆ.
ಮಂತ್ರಾಲಯದಲ್ಲಿ ಆರಾಧನೆಯ ಸಂದರ್ಭದಲ್ಲಿ ಪರಿಮಳ ಪ್ರಸಾದಕ್ಕೆ ಅತಿ ಹೆಚ್ಚು ಬೇಡಿಕೆ. ಪರಿಮಳ ಪ್ರಸಾದವನ್ನು ಆಲಯದ ಪಾಕಶಾಲೆಯಲ್ಲಿ ತಯಾರಿಸಲಾಗುತ್ತದೆ. ಆರಾಧನೆಯ ಸಂದರ್ಭದಲ್ಲಿ ಹೀಗೆ ತಯಾರಾದ ಪರಿಮಳ ಪ್ರಸಾದದ ಪೊಟ್ಟಣವನ್ನು ಕಟ್ಟಲಿಕ್ಕೆಂದೇ ನೂರಾರು ಸ್ವಯಂ ಸೇವಕರು ಭಾಗವಹಿಸುತ್ತಾರೆ. ಪರಿಮಳ ಪ್ರಸಾದವನ್ನು ಇಂದಿಗೂ ಸಾಂಪ್ರದಾಯಿಕ ರೀತಿಯಲ್ಲೇ ತಯಾರಿಸಲಾಗುತ್ತದೆ. ಪ್ರಸಾದ ತಯಾರಿಕೆಗೆ ಸೌದೆ ಒಲೆ ಬಳಕೆಯಾಗುತ್ತದೆ.