ರಂಭಾಪುರಿ ಪೀಠ (ಬಾಳೆಹೊನ್ನೂರು) : ಜೀವನದ ಜಂಜಡಗಳಲ್ಲಿ ಸಿಲುಕಿರುವ ಮನುಷ್ಯನಿಗೆ ಪುಣ್ಯಕ್ಷೇತ್ರಗಳು ಶಕ್ತಿ ಕೇಂದ್ರಗಳಿದ್ದಂತೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶ್ರೀ ರಂಭಾಪುರಿ ಪೀಠದಲ್ಲಿ ಆಗಸ್ಟ್ 29 ರಂದು ಶ್ರಾವಣ 30 ನೇ ವರ್ಷದ ಇಷ್ಟಲಿಂಗ ಪೂಜಾನುಷ್ಠಾನ ರವಿವಾರದ ಪೂಜಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ವಾಹನಗಳ ಇಂಧನ ತೀರಿದಾಗ ಪೆಟ್ರೋಲ್ ಬಂಕುಗಳಿಗೆ ಬಂದು ಇಂಧನ ತುಂಬಿಸಿಕೊಳ್ಳುವ ಹಾಗೆ ಶಾಂತಿ ನೆಮ್ಮದಿ ಮತ್ತು ಉತ್ಕರ್ಷತೆ ಹೊಂದಲು ಧರ್ಮ ಪೀಠಗಳಿಗೆ ಬಂದು ಪುಣ್ಯ ಸಂಪಾದಿಸಿಕೊಳ್ಳಬೇಕು. ಸೂರ್ಯ ಬೆಳಗದೇ ಇದ್ದರೆ ಗಾಳಿ ಬೀಸದೇ ಇದ್ದರೆ ಮಳೆ ಬೀಳದೇ ಇದ್ದರೆ ಜನರ ಬದುಕು ಅಲ್ಲೋಲ ಕಲ್ಲೋಲವಾಗುವುದು. ಪ್ರತಿಯೊಂದಕ್ಕೂ ಧರ್ಮವಿದೆ. ಧರ್ಮದ ತಳಹದಿಯ ಮೇಲೆ ಮನುಷ್ಯನ ಬದುಕು ನಿಂತುಕೊAಡಿದೆ. ಅಜ್ಞಾನದಿಂದ ಮುಗ್ಗರಿಸಿದ ಜನತೆಯನ್ನು ಸನ್ಮಾರ್ಗಕ್ಕೆ ಕರೆ ತರುವ ಮತ್ತು ಉದ್ಧರಿಸುವ ಶಕ್ತಿ ಗುರುವಿಗೆ ಇದೆ. ಮನುಷ್ಯನಲ್ಲಿ ಉದಾರತೆ, ಸಹೋದರತೆ, ಸಹಾನುಭೂತಿ, ಕರ್ತವ್ಯಶೀಲತೆ, ಶಿಸ್ತು ಶ್ರದ್ಧೆ ಹಾಗೂ ಸಮರ್ಪಣಾ ಮನೋಭಾವ ಬೆಳೆಸಿಕೊಳ್ಳಬೇಕೆಂದರು. ಬಂಕಾಪುರ ಅರಳೆಲೆಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಇದ್ದರು.
ಶ್ರೀ ರಂಭಾಪುರಿ ಪೀಠಕ್ಕೆ ಶಿಕ್ಷಣ ಸಚಿವರ ಭೇಟಿ
ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಶ್ರೀ ರಂಭಾಪುರಿ ಪೀಠಕ್ಕೆ ಭೇಟಿಯಿತ್ತು ಶ್ರೀ ಜಗದ್ಗುರು ರೇಣುಕಾಚಾರ್ಯರು ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿಗೆ ಪೂಜೆ ಸಲ್ಲಿಸಿ ನಂತರ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳಿಂದ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ಮೌಲ್ಯಾಧಾರಿತ ಶಿಕ್ಷಣದ ಅಗತ್ಯವಿದೆ. ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿ ಕಲಿಸುವ ಕೇಂದ್ರಗಳು ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಗುಣಾತ್ಮಕ ಶಿಕ್ಷಣ ಮಕ್ಕಳಿಗೆ ದೊರಕಿಸಿಕೊಡುವ ಅಗತ್ಯವಿದೆ ಎಂದರು. ಈ ಸಂದರ್ಭದಲ್ಲಿ ಹಲವಾರು ಗಣ್ಯರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.
ವರದಿ: ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ,
ಬಾಳೆಹೊನ್ನೂರು