* ಗಿರೀಶ್ ಪಿ ಎಂ
ಮನಸ್ಸಿಗೆ ಬೇಸರವಾಗಿದೆ. ಏನು ಮಾಡಲು ಮನಸ್ಸಿಲ್ಲ. ಮುಂದೆ ದೊಡ್ಡದೇನಾದರೂ ಸಾಧಿಸಬೇಕೆಂಬ ಕನಸಿಲ್ಲ ... ನಮ್ಮ ಮರ್ಕಟ ಮನಸ್ಸಿನಲ್ಲಿ ಈ ರೀತಿಯ ಋಣಾತ್ಮಕ, ಕೆಲಸಕ್ಕೆ ಬಾರದ ಯೋಚನೆಗಳು ಬರತೊಡಗಿದರೆ ಜೀವನ ಕಷ್ಟ ಅನಿಸುತ್ತದೆ. ಈ ಯಾತನೆ ಮುಂದುವರಿದರೆ ಬಲುಬೇಗ ಬೇಸತ್ತು ಹೋಗುವುದರಲ್ಲಿ ಸಂದೇಹ ಬೇಡ. ಒಂದು ಬಾರಿ ಯೋಚಿಸಿ ನೋಡಿ. ನನ್ನಿಂದ ಸಾಧ್ಯ ಎಂದು ಯೋಚಿಸಿದರೆ ಸಬಳವನ್ನೂ ನುಂಗಬಹುದು ಎಂದು ಸಾಧಿಸಿ ತೋರಿಸಿದ ಸಾಧಕರು ನಮ್ಮ ಕಣ್ಣಮುಂದಿರುವಾಗ ನಮಗೇಕೆ ಅದು ಸಾಧ್ಯವಿಲ್ಲ. ಮನಸ್ಸು ಮತ್ತೆ ನೆಪ ಹುಡುಕಲು ಆರಂಭಿಸುತ್ತದೆ. ಇಲ್ಲ, ನಮ್ಮಲ್ಲಿ ಗೆಲ್ಲಬೇಕೆಂಬ ಛಲ, ಗುರಿಮುಟ್ಟುವೆ ಎಂಬ ಆತ್ಮಬಲ ಇದ್ದರೆ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಹಾಗಂತ ಗೆಲುವೇ ಜೀವನವಲ್ಲ. ಸೋಲೇ ಗೆಲುವಿಗೆ ಸೋಪಾನ ಎಂಬಂತೆ ಕೆಲವೊಂದು ಸೋಲುಗಳು ನಮ್ಮನ್ನು ವಿಜಯದ ಉತ್ತುಂಗಕ್ಕೇರಿಸುತ್ತವೆ. ಮುಂದೊಂದು ದಿನ ನಮ್ಮನ್ನು ಶ್ರೇಷ್ಠ ವ್ಯಕ್ತಿಯನ್ನಾಗಿ ರೂಪಿಸಬಹುದು. ಆದರೆ, ನಾ ಸೋತೆ ನನ್ನಿಂದ ಮುಂದೆ ಏನೂ ಆಗದು ಎಂದು ಕೈಕಟ್ಟಿ ಕುಳಿತರೆ ಸಾಧಿಸುವುದು ಈ ಜನ್ಮದಲ್ಲಿ ಅಸಾಧ್ಯ. ದಿಟ್ಟತನದಿಂದ ಮುಂದಡಿಯಿಟ್ಟರೆ ಗೆಲುವು ನಮ್ಮದೇ. ಗೆಳೆಯರೇ, ಭೂಮಿಗೆ ಭಾರವಾಗಿ ಜೀವಿಸುವುದಕ್ಕಿಂತ ಏನಾದರೂ ಸಾಧಿಸಿ ಈ ಮಣ್ಣಿನ ಋಣ ತೀರಿಸಬೇಕು. ನಮ್ಮ ಜೀವನ ಅಂತ್ಯವಾದರೂ, ನಾಲ್ಕು ಜನ ನಮ್ಮ ಕಾಯಕವ ಮೆಚ್ಚಿ ನೆನೆಯಬೇಕು. ಸಾಧನೆಯ ಒಂದೊಂದು ಮೆಟ್ಟಿಲುಗಳು ಕೂಡ ರೋಚಕ, ಕಷ್ಟಕರ. ಊಹಿಸದ ಸವಾಲುಗಳು ಎದುರಾಗುತ್ತವೆ. ತೊಂದರೆಗಳಿಗೆ ಅಳುಕದೆ ಅವುಗಳ ಜೊತೆ ನಿರಂತರ ಯುದ್ಧ ಮಾಡಿ ಗೆಲುವು ದಕ್ಕಿಸಿಕೊಳ್ಳಬೇಕು. ಆ ಗೆಲುವು ನಮ್ಮ ಯಶಸ್ಸಾಗಿರುತ್ತದೆ. ಆ ಸ್ಥಾನಕ್ಕೆ ಮುಟ್ಟಿದಾಗ ಸಿಗುವ ಆನಂದ, ತೃಪ್ತಿ ನಿಜಕ್ಕೂ ದೊಡ್ಡದು. ಮಿತ್ರರೇ, ನಾವು ಏನಾದರೂ ಸಾಧಿಸಬೇಕು ನಮ್ಮನ್ನು ತುಳಿಯಲೆಂದೇ ಇರುವ ಜನರ ಮಧ್ಯೆ ಗೆದ್ದು ತೋರಿಸಬೇಕು. ಇಂದು ನಾವು ಹರಿಸಿದ ಬೆವರಿನ ಫಲ ಮುಂದೊಂದು ದಿನ ನಮ್ಮನ್ನು ಸುಗಮ ಹಾದಿಯತ್ತ ಕೊಂಡೊಯ್ಯುತ್ತದೆ. ನಮ್ಮ ಅಮೂಲ್ಯ ಸಮಯದಲ್ಲಿ ಕೆಲವು ನಿಮಿಷಗಳನ್ನು ಸಾಧನೆಗಾಗಿ ಮೀಸಲಿಡಿ. ಬದುಕು ನಾವಂದುಕೊಂಡದ್ದಕ್ಕಿಂತ ಸುಂದರವಾಗಿರುತ್ತದೆ. ಗಿರೀಶ್ ಪಿ ಎಂ ದ್ವಿತೀಯ ಬಿಎ, ಪತ್ರಿಕೋದ್ಯಮ ವಿವಿ ಕಾಲೇಜು ಮಂಗಳೂರು, ಹಂಪನಕಟ್ಟೆ.