*ಜ್ಯೋತಿ ಕೋಟಗಿ ಶಿಕ್ಷಕಿ
ಸ ಮಾ ಪ್ರಾ ಶಾಲೆ ತಲ್ಲೂರ
ಮಠ ಮಂದಿರಗಳು ಬೇಡವೆಂದೆ ಬಸವಣ್ಣ ಕಚ್ಚಾಡುತಿರುವರು ಗಲ್ಲಿಗಳಲಿ ಕಟ್ಟಲೆಂದು ಮೂರ್ತಿ ಪೂಜೆ ಹೋಮ ಹವನ ಯಾಕೆಂದೆ ಅವಿಲ್ಲದೇ ಜೀವನ ಪ್ರಾರಂಭವಾಗದಿಂದು || ಜಾತಿ ಮತಗಳ ದೂರೀಕರಿಸಲು ಹೋರಾಡಿದೆ ಜಾತಿ ಹೆಸರ ಹೇಳದೇ ಎನೂ ನಡೆಯದಿಂದು ಸಮಾನತೆಯ ಸಾರ ತಿಳಿಸುತಲೇ ಪ್ರಾಣ ಬಿಟ್ಟೆ ಅಸಮಾನತೆಯೇ ತಲೆ ಎತ್ತಿ ನಿಂತಿದೆಯಿಂದು || ಕಳವು ಕೊಲೆ ಸುಳ್ಳು ಮೋಸಗಳು ಬೇಡವೆಂದೆ ಎಲ್ಲವೂ ತಿರುವು ಮುರುವಾಗಿ ಕ್ರೌರ್ಯ ಹೆಚ್ಚಿದೆ ಸ್ತ್ರೀಯರನು ಗೌರವಿಸಿ ಸಮಾನತೆ ನೀಡಿರೆಂದೆ ದೊರೆತರೂ ಅದಕಿಂದು ಅರ್ಥವಿಲ್ಲವಾಗಿದೆ || ನೀ ಅಂದು ಹೇಳಿದ ಪಾಲಿಸಿದ ಆದರ್ಶಗಳು ಪುಸ್ತಕಗಳ ಪುಟಗಳಲಿ ಮೂಲೆ ಸೇರಿವೆ ಇಂದು ಮರಳಿ ನೀ ಬಾ ಭುವಿಗೆ ಕೈ ಮುಗಿದು ಬೇಡುವೆ ಜಗದಲಿರುವ ಕೊಳೆಯ ತೊಳೆಯಲೆಂದು || ಸನ್ಮಾರ್ಗದಿ ನಡೆಸಲು ಬಾರೊ ಹೇ ಬಸವಣ್ಣ ಕ್ರೌರ್ಯತೆಗಳ ಸರಮಾಲೆ ಕಳಚ ಬೇಕಿದೆಯಣ್ಣ ಮೊರೆಯಿಡುವೆ ನಾನು ಮಹಾದೇವ ನಿನ್ನಲ್ಲಿ ಬಸವಣ್ಣ ಬೇಕಿರುವ ಕಳಿಸಿಕೊಡು ನಮ್ಮಲ್ಲಿ ||