ಪೂರ್ಣಪ್ರಜ್ಞ ಸುಹೃತ್ ಪಾದ್ಮರಾಜ ಮಂದಿರ ವರ್ಧಕಮ್/
ಶ್ರೀ ವಿಜ್ಞಾನನಿಧಿಂ ವಂದೇ ವೇದವಿಜ್ಞಾನ ದರ್ಶಕಮ್//
ಇಂದು ಶ್ರೀ ಶ್ರೀಪಾದರಾಜ ಮಠದ 20ನೇ (1987-2010) ಶತಮಾನದ ಯತಿಗಳಾದ, ಶ್ರೀ ವಿಜಯನಿಧಿತೀರ್ಥರ ಶಿಷ್ಯರೂ, ಈಗಿನ ಪೀಠಾಧಿಪತಿಗಧಳು ಶ್ರೀ ಕೇಶವನಿಧಿತೀರ್ಥರ ಗುರುಗಳಾದ, ಮಹಾನ್ ಪಂಡಿತರು, ಪರಮ ವೈರಾಗ್ಯ ಸಂಪನ್ನರಾದ ಶ್ರೀ ವಿಜ್ಞಾನನಿಧಿತೀರ್ಥರ ಮಧ್ಯಾರಾಧನಾ ಮಹೋತ್ಸವ.
ಮುಳಬಾಗಿಲಿನಲ್ಲಿ ಇವರಿಗೆ ಶ್ರೀಪಾದರಾಜ ಮಠದಲ್ಲಿ ಪ್ರತ್ಯೇಕ ಸ್ಥಾನವಿದೆ. ಇವರು ವೇದವಿಜ್ಞಾನ ಎನ್ನುವ ಸಂಸ್ಥೆ ಪ್ರಾರಂಭ ಮಾಡಿದ್ದಾರೆ. ಅಲ್ಲದೇ ರಂಗವಿಠಲ ಪತ್ರಿಕಾ ಸ್ಥಾಪಕರಾಗಿದ್ದಾರೆ. ಶ್ರೀ ಅರಳುಮಲ್ಲಿಗೆ ಪಾರ್ಥಸಾರಥಿ ಅ ವರಿಗೆ “ಪಾರ್ಥಸಾರಥಿ” ವಿಠಲ ಎಂದು, ನನ್ನ ಸೋದರಮಾವ ಪರಾಯತಂ ನಾರಾಯಣರಾವ್ ಅವರಿಗೂ “ಶ್ರೀ ಕರುಣಾಸಿಂಧುವಿಠಲ” ಎನ್ನುವ ಅಂಕಿತೋಪದೇಶವನ್ನು ನೀಡಿದ ಗುರುಗಳಿವರು.
ಇವರು ಒಮ್ಮೆ ಚಿಪ್ಪಗಿರಿಯ ಶ್ರೀ ವಿಜಯದಾಸಾರ್ಯರ ಸನ್ನಿಧಾನದಲ್ಲಿ ಸಂಸ್ಥಾನ ಪೂಜೆ ಮಾಡುವಾಗ ಶ್ರೀ ವಿಜಯದಾಸಾರ್ಯರು ಇವರಿಗೆ ದರ್ಶನ ನೀಡಿದ್ದರೂ ಸಹ ದಾಸ ಸಾಹಿತ್ಯದ ಸೇವೆಗೆ ತುಂಬಾ ಕೃಷಿ ಮಾಡಿದ ಯತಿಗಳಾಗಿದ್ದಾರೆ. ಚಕ್ರಾಬ್ಜ ಮಂಡಲಕ್ಕೆ ಒಂದು ರೂಪವನ್ನು ನೀಡಿದರು. ಗೋಶಾಲೆ, ಶ್ರೀಪಾದರಾಜರ ಪೂಜಾ ಮಂದಿರ, ಆಡಿಟೋರಿಯಮ್ ಇತ್ಯಾದಿಗಳನ್ನು ನಿರ್ಮಿಸಿ ನರಸಿಂಹತೀರ್ಥವನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿಯನ್ನು ಮಾಡಿದವರಾಗಿದ್ದಾರೆ.
ಗೋಪೀನಾಥದೀವರಿಗೆ ವಜ್ರಕವಚ, ವಜ್ರ ಕಿರೀಟ ಇತ್ಯಾದಿಗಳನ್ನು ನಿವೇದಿಸಿದವರಾಗಿದ್ದಾರೆ. ಹರಿದಾಸ ಸಾಹಿತ್ಯ ಸಂಬಂಧಿತ ಅನೇಕ ಪುಸ್ತಕಗಳು ಪ್ರಕಟ ಮಾಡಿದ್ದಾರೆ. ಅಲ್ಲದೇ ‘ಶ್ರೀ ಪದ್ಮನಾಭ ತೀರ್ಥರ’ ಮೃತ್ತಿಕಾ ವೃಂದಾವನವನ್ನು ನರಸಿಂಹ ತೀರ್ಥದಲ್ಲಿ ಪ್ರತಿಷ್ಠಾಪಿಸಿದವರೂ ಇವರೇ ಆಗಿದ್ದಾರೆ
ಅವರ 92 ವಯಸ್ಸು ಜೀವನಾವಧಿಯಲ್ಲಿ, 25 ಚಾತುರ್ಮಾಸ್ಯಗಳು, 18ದಿನದ ಮಹಾವಿಷ್ಣು ಯಾಗ, ಬೃಹತೀಸಹಸ್ರನಾಮ ಯಜ್ಞ ತುಂಬಾ ಉತ್ತಮ ರೀತಿಯಲ್ಲಿ ಮಾಡಿದವರಾಗಿದ್ದಾರೆ. ಶ್ರೀ ಶ್ರೀಪಾದರಾಜರ 600 ನೆಯ ಆರಾಧನೆಯೂ ಅದ್ಭುತ ರೀತಿಯಲ್ಲಿ ಮಾಡಿದ ಘನರೇ ಇವರು.
ಶ್ರೀಗಳ ವೃಂದಾವನ ನರಸಿಂಹತೀರ್ಥದಲ್ಲಿ ಶ್ರೀ ಶ್ರೀಪಾದರಾಜರ ವೃಂದಾವನಕ್ಕೆ ಪ್ರದಕ್ಷಿಣೆ ಹಾಕುವಾಗ ಹಿಂಭಾಗದಲ್ಲಿ ಬರುತ್ತೆ. ಈಗಿನ ಕಾಲದಲ್ಲೂ ಇಷ್ಟು ನಿಸ್ವಾರ್ಥ ರೀತಿಯಲ್ಲಿ ಮಠಕ್ಕೆ, ಪರಂಪರೆಗೆ ಸೇವೆ ಮಾಡಿದ ಇಂಥ ಮಹಾನ್ ಯತಿಗಳ ಅನುಗ್ರಹ ಸದಾ ನಮ್ಮ ಎಲ್ಲರ ಮೇಲಿರಲಿ.