ಪುರಾತನ ಇತಿಹಾಸದ ಕೊಂಡಿ, ಸಾದಲಿ ಚನ್ನಕೇಶವ ದೇವಾಲಯ

*ಶ್ರೀನಿವಾಸ ಮೂರ್ತಿ ಎನ್ ಎಸ್

ರಾಜ್ಯದಲ್ಲಿ ವಿಜಯನಗರ ಹಾಗು ನಂತರ ಕಾಲದಲ್ಲಿ ಹಲವು ಪಾಳೇಗಾರರು ಆಡಳಿತ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯೂ ಇದಕ್ಕೆ ಹೊರತಲ್ಲ. ಇಲ್ಲಿ ಹಲವು ಮಾಂಡಲೀಕರು ಹಾಗು ಪಾಳೇಗಾರರು ಆಡಳಿತ ನಡೆಸಿದ್ದು ಮಾತ್ರವಲ್ಲ, ಹಲವು ದೇವಾಲಯಗಳನ್ನ ನಿರ್ಮಿಸಿದ್ದಾರೆ. ಕೆಲವು ದೇವಾಲಯಗಳು ಉತ್ತಮ ಸ್ಥಿತಿಯಲ್ಲಿದ್ದರೆ ಕೆಲವು ನಿರ್ವಹಣೆ ಕೊರತೆಯಿಂದ ಬಳಲುತ್ತಿವೆ. 

ಅಂತಹ ದೇವಾಲಯಗಳಲ್ಲಿ ಬಾಗೇಪಲ್ಲಿ ತಾಲ್ಲೂಕಿನ ಸಾದಲಿಯ ದೇವಾಲಯಗಳು ಪ್ರಮುಖವಾದದ್ದು.  ಸುಂದರ ದೇವಾಲಯಗಳು ಜನ ಹಾಗು ಸರ್ಕಾರದ ಗಮನಕ್ಕೆ ಕಾಯುತ್ತಿವೆ.

ಸಾದಲಿ ವಿಜಯನಗರ ಕಾಲದಲ್ಲಿ ಪ್ರಮುಖ ಪಟ್ಟಣವಾಗಿತ್ತು. ಬುಕ್ಕನ ಕಾಲದಲ್ಲಿ ನಾಗಣ್ಣ ಒಡೆಯರ್ ಹಾಗು ಅವನ ಪುತ್ರ ದೀಪಣ್ಣ ಒಡೆಯರ್ ಇಲ್ಲಿ ಆಡಳಿತ ನಡೆಸುತ್ತಿದ್ದರು.  ಅವರ ಕಾಲದಲ್ಲಿಯೇ ಇಲ್ಲಿ ಚನ್ನಕೇಶವ ದೇವಾಲಯ ನಿರ್ಮಾಣವಾಗಿತ್ತು. 1792 ರಲ್ಲಿ ಅವತಿ ನಾಡಪ್ರಭು ದೊಡ್ಡ ಭೈರೇಗೌಡನ ಮೊಮ್ಮಗ ಚನ್ನಪ್ಪಣ್ಣಯ್ಯನ ಮಗ ರಾಮಸ್ವಾಮಿ ನಂದಿಕೇಶ್ವರ ದೇವಾಲಯಕ್ಕೆ ದತ್ತಿ ನೀಡಿದ ಉಲ್ಲೇಖವಿದೆ. ಸ್ಥಳೀಯ ಪುರಾಣದ ಪ್ರಕಾರ ಸಹದೇವನು ಇಲ್ಲಿನ ನಂದಿಕೇಶ್ವರ ದೇವಾಲಯವನ್ನು ನಿರ್ಮಿಸಿದ ಎಂಬ ನಂಬಿಕೆಯಿದೆ. ಹಾಗಾಗಿ ಈ ಸ್ಥಳ ಸಹದೇವಪುರ – ಸಹದೇವಪಲ್ಲಿ – ಸಾದಲಿ ಎಂದು ಆಗಿದೆ ಎಂಬ ನಂಬಿಕೆ ಇದೆ.

ನಾಗಣ್ಣ ಒಡೆಯರ್ ಕಾಲದಲ್ಲಿ ನಿರ್ಮಾಣವಾದ ಚನ್ನಕೇಶವ ದೇವಾಲಯ ವಿಜಯನಗರ ಕಾಲದ ದೇವಾಲಯವನ್ನ ನೆನಪಿಸುತ್ತದೆ.  ದೇವಾಲಯ ಗರ್ಭಗುಡಿ, ಅಂತರಾಳ, ನವರಂಗ, ಪ್ರವೇಶ ಮಂಟಪ ಹಾಗು ಪ್ರತ್ಯೇಕವಾದ ತೆರೆದ ಮಂಟಪವನ್ನು ಹೊಂದಿದೆ. ಪೆದ್ದಗುಡಿ (ದೊಡ್ಡಗುಡಿ) ಎಂದು ಕರೆಯಲಾಗುತ್ತದೆ. ಇಲ್ಲಿ ಇದ್ದ ಚನ್ನಕೇಶವನ ಮೂರ್ತಿಯನ್ನು ರಕ್ಷಣೆಯ ದೄಷ್ಟಿಯಿಂದ ಉರಿನಲ್ಲಿ ಸ್ಥಳಾಂತರಿಸಲಾಗಿದೆ. ದೇವಾಲಯದ ಪ್ರವೇಶ ಹಾಗು ಮಂಟಪಗಳಲ್ಲಿನ ಕಂಭಗಳು ವಿಜಯನಗರ ಕಾಲದ ಹೋಲಿಕೆಯಿದ್ದು ಕಂಬದಲ್ಲಿನ ಹಾಗು ಹೊರಭಿತ್ತಿಯಲ್ಲಿನ ಉಬ್ಬು ಶಿಲ್ಪಗಳ ಕೆತ್ತನೆ ನೋಡಬಹುದು. ಮುಖ್ಯವಾಗಿ ಇಲ್ಲಿನ ಮೂಲ ರೂಪದ ದಶಾವತಾರಗಳ ಕೆತ್ತನೆ, ಹನುಮಂತ ವಿಶ್ರಾಂತ ರಾಮನನ್ನು ಕಾಯುತ್ತಿರುವ ಚಿತ್ರ, ಉಗ್ರ ನರಸಿಂಹ, ನೃತ್ಯಾಗಾರರ ಕೆತ್ತನೆ ಸುಂದರವಾಗಿದೆ.

ಇಲ್ಲಿನ ಸ್ಥಳೀಯ ಕಥೆಯಂತೆ ತಿರುಮಲ ಎಂಬ ಪಾಳೇಗಾರನ ಕಾಲದಲ್ಲಿ ಇಲ್ಲಿನ ಬಡ ಮಹಿಳೆಯ ಮಕ್ಕಳ ಮೇಲೆ ಜೋಳವನ್ನು ಕದ್ದ ಸುಳ್ಳು ಅಪವಾದ ಬಂದು ರಾಜ ಅವರನ್ನು ಕೊಲ್ಲಿಸುತ್ತಾನೆ.  ಆಗ ಆ ಮಹಿಳೆ ಇಲ್ಲಿನ ಬೆಳೆ ನಾಶವಾಗಲಿ ಎಂದು ಶಾಪ ನೀಡುತ್ತಾಳೆ. ಆಗ ಸಾದಲಮ್ಮ ದೇವರಲ್ಲಿ ಕ್ಷಮೆ ಕೋರಿ ಹೊಸಾದಾಗಿ ಪೂರ್ವ ದಿಕ್ಕಿನದಲ್ಲಿ ಈಗಿನ ಪಟ್ಟಣವನ್ನು ನಿರ್ಮಿಸಿದರು ಎಂಬ ನಂಬಿಕೆ ಇದೆ.  ಸಾದಲಮ್ಮನ ದೇವಾಲಯ ಈಗಲೂ ಇದ್ದು ಊರ ದೇವತೆಯಾಗಿ ಪೂಜಿಸಲ್ಪಡುತ್ತಿದ್ದಾಳೆ.  

ತಲುಪುವ ಬಗ್ಗೆ: ಬಾಗೇಪಲ್ಲಿ – ಚಿಂತಾಮಣಿ ದಾರಿಯಲ್ಲಿ  ಬಾಗೇಪಲ್ಲಿಯಿಂದ ಸುಮಾರು 22 ಕಿ ಮೀ ದೂರದಲ್ಲಿ ಹಾಗು ಚಿಕ್ಕಬಳ್ಳಾಪುರದಿಂದ ಸುಮಾರು 30 ಕಿ.ಮೀ ದೂರದಲ್ಲಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles