ಶ್ರೀ ಇಭರಾಮಪುರ ಅಪ್ಪಾವರು ಕಾಲ – 1789 -1869(ಅಕ್ಟೋಬರ್ 15, ಶುಕ್ರವಾರ, ಅಪ್ಪಾವರ 232ನೇ ವರ್ಧಂತಿ ಪ್ರಯುಕ್ತ ಈ ಲೇಖನ.
*ವಿಷ್ಣುತೀರ್ಥಚಾರ್ಯ, ಇಭರಾಮಪುರ
ಆಚಾರ್ಯತ್ರಯ ರಲ್ಲಿ ಒಬ್ಬರಾದ ದ್ವೈತ ಸಿದ್ಧಾಂತ ಪ್ರತಿಷ್ಠಾಪನಾಚಾರ್ಯರಾದ ಜಗದ್ಗುರು ಮಧ್ವಾಚಾರ್ಯರ ನೇರ ಪರಂಪರೆಯಲ್ಲಿ ಬಂದ ಶ್ರೀ ವಿಜಯೀಂದ್ರ ಕರಕಮಲ ಸಂಜಾತರಾಜ ಶ್ರೀ ಸುಧೀಂದ್ರತೀರ್ಥರವರ ಕುಮಾರರಾದ ಕಲಿಯುಗ ಕಲ್ಪತರು ಕಾಮಧೇನು ಶ್ರೀಮದ್ ರಾಘವೇಂದ್ರ ಗುರುಸಾರ್ವಭೌಮರ ಮಂತ್ರಿಸಿದ್ದಿ ಕ್ಷೇತ್ರ ಮಂತ್ರಾಲಯ. ಮಂತ್ರಾಲಯದ ಹತ್ತಿರದ ಪುಟ್ಟ ಗ್ರಾಮ ಇಭರಾಮಪುರ. ಗ್ರಾಮಕ್ಕೆ ಪೌರಾಣಿಕ ಹಿನ್ನೆಲೆಯು ಇದೆ.
ಶ್ರೀರಾಮಚಂದ್ರ ದೇವರು ಅಂಬಾರಿಯಲ್ಲಿ ಬಂದು ಸ್ವಲ್ಪ ಕಾಲ ವಿಶ್ರಾಂತಿ ಪಡೆದ ಸ್ಥಳವೆಂದು ಸ್ಥಳ ಪುರಾಣ ಹೇಳುತ್ತದೆ.
ಈ ಗ್ರಾಮದಲ್ಲಿ ಸದಾಚಾರ ಸಂಪನ್ನರಾದ ಅಹೋಬಲಾಚಾರ್ಯ ಮತ್ತು ಸಾದ್ವಿ ಕೃಷ್ಣಬಾಯಿ ದಂಪತಿ ನೆಲಸಿದರು. ಅಹೋಬಲಾಚಾರ್ಯರಿಗೆ ಬಹುವರ್ಷದಿಂದ ಸಂತಾನವಿರಲಿಲ್ಲ. ಕುಲಗುರುಗಳಾದ ಶ್ರೀರಾಘವೇಂದ್ರ ಸ್ವಾಮಿಗಳು ಹಾಗೂ ಕುಲ ಸ್ವಾಮಿಯಾದ ತಿರುಪತಿಯ ಶ್ರೀನಿವಾಸ ವಿಶೇಷ ಅನುಗ್ರಹದಿಂದ 1789 ವಿಜಯ ದಶಮಿಯಂದು ಸಂತಾನ ಪ್ರಾಪ್ತಿಯಾಗಿ ಆ ಮಗುವಿಗೆ ಕೃಷ್ಣಚಾರ್ಯವೆಂದು ನಾಮಕರಣ ಮಾಡುತ್ತಾರೆ.
ಚಿಕ್ಕವಯಸಿನಲ್ಲೂ ಅಪಾರವಾದ ಪ್ರೌಢತೆಯನ್ನು ತೋರಿಸಿ ಮೆರದ ಜನರಿಗೆ ಆಶ್ಚರ್ಯವನುಂಟು ಮಾಡುತಿದ್ದರು. ಕೃಷ್ಣಚಾರ್ಯರು ಮಲಗಿದ್ದ ತೊಟ್ಟಿಲು ತಾನಾಗಿಯೇ ತೂಗುತ್ತಿತು. ತಾಯಿ ಪುರಾಣ / ಪ್ರವಚನಕ್ಕೆ ಕರೆದುಕೊಂಡು ಹೋದಕಡೆ ಪುರಾಣದಲ್ಲಿ ಸಜನ್ನರಿಗೆ ತೊಂದರೆಯಾದ ಪ್ರಸಂಗ ಬಂದರೆ ಕೂಸು ಬಿಕ್ಕಿ ಬಿಕ್ಕಿ ಅಳುತ್ತಿತು. ದುರ್ಜನರಿಗೆ ಭಾವಂತ ಶಿಕ್ಷೆಯನ್ನು ಕೊಟ್ಟ ಪ್ರಸಂಗ ಬಂದರೆ ಕೇಕೆ ಹಾಕಿ ನಗುವುದನು ಕಂಡು ಜನರಿಗೆ ಆಶ್ಚರ್ಯವಾಗುತ್ತಿತು.
ಅಹೋಬಲಾಚಾರ್ಯರು ಮಗನಿಗೆ 7ನೆ ವಯಸ್ಸಿನಲ್ಲೇ ಉಪನಯನ ಮಾಡುತ್ತಾರೆ. ಅಪ್ಪಾವರ ಉಪನಯನ ನಂತರ ಶಾಸ್ತ್ರದ ಅಭ್ಯಾಸ ತಮ್ಮಲ್ಲಿಯೇ ಮಾಡಿಸಬೇಕೆಂಬ ಆಸೆ, ಆದರೆ ಚಿಕ್ಕ ವಯಸ್ಸಿನಲ್ಲೇ ದೇವರ , ವೇದ ಶಾಸ್ತ್ರದ ಮೇಲೆ ಅಷ್ಟು ಆಸಕ್ತಿಯನ್ನು ಹೊಂದಿದ ಕೃಷ್ಣಚಾರ್ಯರು ಉಪನಯನ ಆದಮೇಲೆ ಯಾವ ಆಸಕ್ತಿಯನ್ನು ತೋರುತ್ತಿರಲಿಲ್ಲ. ಈ ಮನಃಸ್ಥಿತಿಯಲ್ಲಿ ಕೃಷ್ಣಚಾರ್ಯರನು ನೋಡಿ ಅಹೋಬಲಾಚಾರ್ಯರಿಗೆ ಮಾನಸಿಕವಾಗಿ ಕುಗ್ಗಿಹೋಗುತ್ತಾರೆ. ಒಂದು ದಿವಸ ಮಗನಿಗೆ ಅಹೋಬಲಾಚಾರ್ಯರು ಕೋಪದಿಂದ ಬೈದು ಬುದ್ಧಿಹೇಳುತಾರೆ. ಮನನೊಂದ ಕೃಷ್ಣಚಾರ್ಯರು ಮನೆಬಿತಟ್ಟು ಅಳುತ್ತಾ ಊರಿನ ಹತ್ತಿರದ ಕಾಡಿನಲ್ಲಿ ಕುತಿರುತ್ತಾರೆ. ಅಶ್ವಥಾಮಾಚಾರ್ಯರಿಂದ ಅನುಗ್ರಹ ಮರದ ಕೆಳಗಡೆ ಕೂತು ಕೃಷ್ಣರ್ಯರು ಅಳುವುದನು ನೋಡಿದ ಮಹಾ ತಪಸ್ವಿತರಹ ಇದ್ದ ಒಬ್ಬ ವೃದ್ಧ ಬ್ರಾಹ್ಮಣ ಕೃಷ್ಣರ್ಯರನು ವಿಚಾರಿಸಿ ಅವರ ನಾಲಗೆಯ ಮೇಲೆ ಬೀಜಾಕ್ಷರಗಳನು ಬರೆಸಿ ನಿನ್ನ ಜೀವ ಸ್ವರೂಪವೇ ಬೇರೆ ನಿನ್ನ ಅವತಾರ ನಿನಗೆ ಅರಿವು ಆಗುತ್ತೆ ಹಾಗೂ ಮಂತ್ರಾಲಯದ ಗುರುಸಾರ್ವಭೌಮರಲ್ಲಿ ವಿಶೇಷ ಅನುಗ್ರಹ ಆಗುತ್ತೆ ಅಂತ ಹೇಳಿ ತಾವು ಅಶ್ವಥಮಾಚಾರ್ಯರೆಂದು ಬೀಜಾಕ್ಷರಗಳು ಬರೆಯೋ ಮುಂಚೆ ಹೇಳಿಕೊಂಡು ಅದೃಶ್ಯರಾಗುತ್ತಾರೆ. ಅಶ್ವಥಮಾಚಾರ್ಯರ ಈ ವಿಶೇಷ ಅನುಗ್ರಹದಿಂದ ಕೃಷ್ಣಚಾರ್ಯರು ತಮ್ಮ ಸ್ವರೂಪವನ್ನು ಅರಿತು ಅಪರೋಕ್ಷವನ್ನು ಹೊಂದಿ ಜನರ ಬಾಯಿಯಲ್ಲಿ ಅಪ್ಪ ಅಪ್ಪ ಎಂದು ಕರೆಸಿಕೊಂಡು ಕೃಷ್ಣಚಾರ್ಯರು ಅಪ್ಪವರೆಂದು ಪ್ರಸಿದ್ಧಿ ಹೊಂದುತ್ತಾರೆ.
ಶ್ರೀರಾಘವೇಂದ್ರಚಿತ್ತಜ್ಞಂ : ಶ್ರೀ ಅಪ್ಪಾವರಿಗೆ ಶ್ರೀ ಮಂತ್ರಾಲಯ ಪ್ರಭುಗಳ ಮೇಲೆ ಅಪರಿಮಿತವಾದ ಭಕ್ತಿ. ಶ್ರೀ ರಾಯರು ಸಹ ಶ್ರೀ ಅಪ್ಪಾವರ ಮೇಲೆ ಅತ್ಯಂತ ಅಂತಃಕರಣ – ಪ್ರೀತಿ – ಮಾತೃವಾತ್ಸಲ್ಯ ತೋರುತ್ತಿದ್ದರು. ಇವರಿಬ್ಬರ ಸಂಬಂಧ ಹಸು – ಕರುವಿನ ಸಂಬಂಧ. ಶ್ರೀ ರಾಯರು ಸಹ ಶ್ರೀ ಅಪ್ಪಾವರ ವಿಷಯದಲ್ಲಿ ಅತ್ಯಂತ ಪ್ರಸನ್ನರಾಗಿದ್ದರು. ಶ್ರೀ ರಾಯರು ನಡೆಸುವ ಸಕಲ ವ್ಯಾಪಾರವೂ ಶ್ರೀ ಅಪ್ಪಾವರಿಗೆ ಮೊದಲೇ ತಿಳಿದಿರುತ್ತಿತ್ತು.ಶ್ರೀ ರಾಘವೇಂದ್ರ ಚಿತ್ತಜ್ಞಂ ಸಾರಮಾತ್ರ ವದಾವದಂ ।ದೂರೀಕೃತ ದುರಾಚಾರಂ ಕೃಷ್ಣಾಚಾರ್ಯ ಗುರುಂಭಜೇ ।।ಅಗಮ್ಯ ಮಹಿಮರೆಂದು ಜಗತ್ಪ್ರಸಿದ್ಧರಾದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಮಹಿಮೆಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವ ಸಾಮರ್ಥ್ಯ ಉಳ್ಳವರಾದರಿಂದ ” ಶ್ರೀ ರಾಘವೇಂದ್ರ ಚಿತ್ತಜ್ಞಂ ” ಎಂದು ಹೆಸರು ಪಡೆದರು
ಶ್ರೀ ಅಪ್ಪಾವರಿಗೆ ಪಂಚಮುಖಿಪ್ರಾಣ ದೇವರ ಪ್ರಾಪ್ತಿ : ಮೈಸೂರಿನಲ್ಲಿ ತಮ್ಮ ಮಿತಪರಿವಾರದೊಡನೆ ಶ್ರೀ ಅಪ್ಪಾವರು ಶ್ರೀ ಮನ್ಮಹಾರಾಜರ ಅರಮನೆಯ ಸಮೀಪದಲ್ಲಿಯೇ ಒಂದು ಚಿಕ್ಕ ಮನೆಯಲ್ಲಿ (ಈಗಿನ ಕಟ್ಟೆ ಮನೆ) ಬಿಡಾರ ಮಾಡಿದರು. ಈ ವಾರ್ತೆ ಗ್ರಾಮದಲ್ಲಿರುತ್ತಿದ್ದ ಸಮೀಪವರ್ತಿಗಳಿಗೆ ಮಾತ್ರವಲ್ಲದೆ ಅರಮನೆಯವರೆಲ್ಲರಿಗೂ ಮುಮ್ಮಡಿ ಕೃಷ್ಣರಾಜ ಒಡೆಯರಿಗೂ ತಲುಪಿತ್ತು. ಎಷ್ಟೋ ಉಪಾಯಗಳನ್ನು ಮಾಡಿದರೂ ಪೀಡೆ ತೊಲಗದೇ ಇದ್ದಿದು ತಿಳಿದಿತ್ತು. ಇಂಥಾ ಕಠಿಣಕರವಾದ ಬ್ರಹ್ಮರಾಕ್ಷಸವು ಶ್ರೀ ಅಪ್ಪಾವರು ಆ ಮನೆಯಲ್ಲಿ ಬಂದಿಳಿದ ಮರುದಿನವೇ ಅಪಸ್ವರ ಕೂಗಿ ಈ ಆಚಾರ್ಯರ ಪ್ರತಾಪವನ್ನು ಸಹಿಸಲಾರೆ, ನಾನು ಹೊರಟು ಹೋಗುತ್ತೇನೆಂದು ಸ್ವಪ್ನದಲ್ಲಿ ಹೇಳಿತು. ಬಿಟ್ಟು ಹೋದುದಕ್ಕೆ ಏನು ಗುರುತು ಎಂದು ಕೇಳಲು ಗ್ರಾಮದ ಹೊರಭಾಗದಲ್ಲಿ ಒಂದು ದೊಡ್ಡ ಬಂಡೆಗಲ್ಲಿದೆ. ಅದನ್ನು 100 ಆನೆಗಳನ್ನು ಹಚ್ಚಿ ಜಗ್ಗಿದರೂ ಸರಿಯುವುದಿಲ್ಲ. ಅಂತಹ ಶಿಲೆಯನ್ನು ನಾನು ಉರುಳಿಸಿ ಸ್ಥಳಾಂತರ ಮಾಡಿ ತೋರಿಸುವೆ. ಬಂಡೆಗಲ್ಲು ಉರುಳಿದೊಡನೆಯೇ ನಾನು ಬಿಟ್ಟು ಹೋದಂತೆ ತಿಳಿಯಿರೆಂದು ಹೇಳಿ ಅದರಂತೆ ಮಾಡಿತು. ಈ ಘಟನೆ ಜರುಗಿದ ಎಂಟು ದಿನಕ್ಕೆ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರವರು ಇದ್ದಕ್ಕಿದ್ದ ಹಾಗೆ ಪಾದಚಾರಿಗಳಾಗಿ ಶ್ರೀ ಅಪ್ಪಾವರ ಸಂದರ್ಶನಕ್ಕೆ ಹೊರಡುವುದಾಗಿ ನಿಶ್ಚಯಮಾಡಿಕೊಂಡು ಕೇವಲ ಶ್ರೀ ಮನ್ಮಹಾರಾಣಿಯವರಿಗೆ ಮಾತ್ರವೇ ಈ ವಾರ್ತೆಯನ್ನು ತಿಳಿಸಿದರು. ಮುಮ್ಮಡಿ ಕೃಷ್ಣರಾಜ ಒಡೆಯರು ಶ್ರೀ ಅಪ್ಪಾವರನ್ನು ಸಂದರ್ಶನ ಮಾಡಲು ಅವರು ತಂಗಿದ್ದ ಕಟ್ಟೆ ಮನೆಗೆ ಮಾರು ವೇಷದಲ್ಲಿ ಪಾದಚಾರಿಗಳಾಗಿ ಬಂದರು. ಶ್ರೀ ಅಪಾವರು ಧ್ಯಾನದಲ್ಲಿರುವ ಸಂಗತಿಯನ್ನು ತಿಳಿದು ಅಲ್ಲಿಯೇ ಹೊರಗೆ ಇದ್ದ ಕಟ್ಟೆ ಮೇಲೆ ಕುಳಿತು ಕಾಯುತ್ತಿದ್ದರು. ಅದನ್ನು ಗ್ರಹಣ ಮಾಡಿದ ಶ್ರೀ ಅಪ್ಪಾವರು ತಮ್ಮ ಶಿಷ್ಯರನ್ನು ಕರೆದು “ ಹೊರಗಡೆ ಮಹಾರಾಜರು ಮಾರುವೇಷದಲ್ಲಿ ಬಂದು ಕಾಯುತ್ತಾ ಕುಳಿತಿದ್ದಾರೆ, ಹೋಗಿ ಅವರನ್ನು ರಾಜ ಮರ್ಯಾದೆಯಿಂದ ಬರಮಾಡಿಕೊಂಡು ಬನ್ನಿ “ ಎಂದು ಆಜ್ಞಾಪಿಸಿದರು. ಗುರುಗಳ ಆಜ್ಞೆಯಂತೆ ಮಹಾರಾಜರನ್ನು ಬರಮಾಡಿಕೊಂಡರು. ಕೇವಲ ಮಹಾರಾಣಿಯವರಿಗೆ ಮಾತ್ರ ತಿಳಿದ ವಿಷಯವು ಶ್ರೀ ಅಪ್ಪಾವರ ಜ್ಞಾನ ದೃಷ್ಟಿಗೆ ತಿಳಿದ ಸಂಗತಿಯನ್ನು ಕಂಡು ಮಹಾರಾಜರಿಗೆ ಆಶ್ಚರ್ಯದ ಜೊತೆ ಸಂತೋಷವೂ ಆಯಿತು.
ಶ್ರೀ ಅಪ್ಪಾವರ ದರ್ಶನದಿಂದ ಮನಃಸಂತೋಷಭರಿತರಾದ ಮಹಾರಾಜರು ಅವರ ಪಾದಾರವಿಂದಗಳಿಗೆ ಶಿರಃಸಾಷ್ಟಾಂಗ ನಮಸ್ಕರಿಸಿದರು. ನಂತರ ಈರ್ವರ ನಡುವೆಯೂ ಸಂದರ್ಶನ ಪ್ರಾರಂಭವಾಯಿತು. ಹೀಗೇ ಸಂದರ್ಶನ ನಡೆಯುತ್ತಿರುವಾಗ ಮಹಾರಾಜರು ಶ್ರೀ ಅಪ್ಪಾವರಲ್ಲಿ ಸ್ವಾಮೀ… ಬಹಳ ದಿನಗಳಿಂದ ನನ್ನ ಮನದಲ್ಲಿ ಒಂದು ಪ್ರಶ್ನೆ ಕಾಡುತ್ತಿದೆ, ತಾವು ನನ್ನ ಮೇಲೆ ದಯತೋರಿ ಅದನ್ನು ಪರಿಹರಿಸಬೇಕೆಂದು ಕಳಕಳಿಯಿಂದ ಪ್ರಾರ್ಥಿಸಿದರು. ಶ್ರೀ ಅಪ್ಪಾವರು ಏನೆಂದು ವಿಚಾರಿಸಿದಾಗ ಮಹಾರಾಜರು, ಸ್ವಾಮೀ “ ನಾನು ಪ್ರಸ್ತುತ ಜನ್ಮದಲ್ಲಿ ಇಂತಹ ಒಂದು ರಾಜ ವೈಭೋಗವನ್ನು ಅನುಭವಿಸಬೇಕಾದರೆ, ಪೂರ್ವ ಜನ್ಮದ ಸುಕೃತದ ಫಲವೇ ಆಗಿರಬೇಕು. ದಯಮಾಡಿ ಅದರ ವೃತ್ತಾಂತವನ್ನು ತಿಳಿಸಿಕೊಡಿ” ಎಂದು ಮನವರಿಕೆ ಮಾಡಿಕೊಂಡರು. ಆಗ ಅಪ್ಪಾವರು ಮುಗುಳ್ನಗೆ ಬೀರುತ್ತಾ ಮಹಾರಾಜರ ಪೂರ್ವ ಜನ್ಮದ ವೃತ್ತಾಂತವನ್ನು ಈ ರೀತಿ ತಿಳಿಸುತ್ತಾರೆ.
ಮಹಾರಾಜರು ತಮ್ಮ ಪೂರ್ವ ಜನ್ಮದಲ್ಲಿ ಅಖಿಲಾಂಡ ಕೋಟಿ ಬ್ರಹ್ಮಾಂಡನಾಯಕನಾದ ಶ್ರೀ ವೆಂಕಟೇಶ್ವರ ಸ್ವಾಮಿ ಸನ್ನಿಧಾನ (ತಿರುಮಲೆ) ದಲ್ಲಿ ಕಾರ್ಯರೂಪಕ ಸೇವೆಯನ್ನು ಸಲ್ಲಿಸುತ್ತಿದ್ದರು. ಸ್ವಾಮಿಯ ಅಲಂಕಾರಕ್ಕೆ ಬೇಕಾದ ಹೂವು – ತುಳಸಿಯ ವ್ಯವಸ್ಥೆ ಹಾಗೂ ನಂತರದ ನಿರ್ಮಾಲ್ಯ ವಿಸರ್ಜನೆ (ಸರೋವರದಲ್ಲಿ) ಯು ಅವರ ಕಾರ್ಯಧರ್ಮವಾಗಿತ್ತು. ನಿತ್ಯವೂ ಇದೇ ಸೇವೆಯಲ್ಲಿ ನಿರತರಾದ ಆಚಾರ್ಯರು, ಒಂದು ದಿನ ನಿರ್ಮಾಲ್ಯ ವಿಸರ್ಜನೆಗೆಂದು ಸರೋವರಕ್ಕೆ ಬಂದಾಗ ತಂದ ನಿರ್ಮಾಲ್ಯದಲ್ಲಿ ಶ್ರೀ ಶ್ರೀನಿವಾಸ ದೇವರ ಅಪರೂಪವಾದ ರಾಜಮುದ್ರಿಕೆ ಕಂಡುಬಂತು. ಸ್ವಾಮಿಯ ಮೂರ್ತಿ ದರ್ಶನದ ತೇಜಸ್ಸಿಗೇ ಮಿತಿಯಿಲ್ಲವಾದರೆ ಇನ್ನು ಸಾಕ್ಷಾತ್ ಅವನು ಧರಿಸಿದ ರಾಜಮುದ್ರಿಕೆಯ ಅಪೂರ್ವವಾದ ತೇಜಸ್ಸು ಆಚಾರ್ಯರನ್ನು ಅನಂತ ಆಕರ್ಶಿಸಿ ಅದನ್ನು ಧರಿಸುವಂತೆ ಮನೋಪ್ರೇರಿತವಾಯಿತು. ಅಖಿಲಾಂಡ ಕೋಟಿ ಬ್ರಹ್ಮಾಂಡನಾಯಕನಾದ ಸ್ವಾಮಿಯ ಆಭರಣವನ್ನು ಸಾಮಾನ್ಯ ಮಾನವರಾದ ನಾವು ಅಪೇಕ್ಷಿಸುವುದೇ ತಪ್ಪು, ಅದರಲ್ಲಿಯೂ ಧರಿಸಿದ್ದು ಸರಿಯಾಗಲಾರದು ಎಂದು ತಿಳಿದು ಮತ್ತೆ ಅದನ್ನು ಸ್ವಾಮಿಯ ಸನ್ನಿಧಾನದಲ್ಲಿ ಅರ್ಪಣೆ ಮಾಡಿದರು. ಅಂದು ನೀವು ಸ್ವಾಮಿಯ ರಾಜಮುದ್ರಿಕೆಯನ್ನು ಕ್ಷಣ ಮಾತ್ರ ಧರಿಸಿದ ಕಾರಣ ಪ್ರಸ್ತುತ ಜನ್ಮದಲ್ಲಿ ಅನುಗ್ರಹ ಪೂರ್ವಕ ರಾಜವೈಭೋಗವು ಲಭ್ಯವಾಗಿದೆ ಎಂದು ತಿಳಿಸಿದರು.
ಇದನ್ನು ಕೇಳಿ ಆನಂದ ಭರಿತರಾದ ಮಹಾರಾಜರು ಸ್ವಾಮೀ !! ಪೂರ್ವ ಜನ್ಮದ ವೃತ್ತಾಂತವನ್ನು ಹೇಳಿ ಮಹದಾನುಗ್ರಹ ಮಾಡಿದ್ದೀರಿ. ತಮ್ಮಲ್ಲಿ ನಾವೇನಾದರೂ ಸಮರ್ಪಿಸಿಕೊಳ್ಳಬೇಕು ಎಂದು ಮನಃಸಂತೋಷಭರಿತರಾಗಿ ಪ್ರಾರ್ಥಿಸಿದರು. ಆಗ ಶ್ರೀ ಅಪ್ಪಾವರು ಅರಮನೆಯ ಈಶಾನ್ಯ ಭಾಗವನ್ನು ಖನನ ಮಾಡಿ ಆ ಭೂ ಗೃಹದಲ್ಲಿ ಇರುವ ವಸ್ತುವೊಂದನ್ನು ತಮಗೆ ಕೊಡುವುದಾಗಿ ವಿವರಣೆ ಮಾಡಿದರು.ಭೂ ಖನನ ಮಾಡಿದ ಮೇಲೆ ಅಲ್ಲಿ ಕಂಡು ಬಂದ ಬಹಳ ಅಪರೂಪವಾದ, ಅದ್ಭುತವಾದ ಹಾಗೂ ನಯನ ಮನೋಹರವಾದ ಶ್ರೀ ಪಂಚಮುಖಿ ಪ್ರಾಣದೇವರ ತೇಜೋಮಯವಾದ ವಿಗ್ರಹವನ್ನು ಕಂಡು ಮಹಾರಾಜರಿಗೆ ಅನಂತ ಸಂತೋಷದ ಜೊತೆಗೆ ಮನದಲ್ಲಿ ಪ್ರಶ್ನೆಯೂ ಉದ್ಭವವಾಯಿತು. ಇಂತಹ ಅದ್ಭುತವಾದ ಮೂರ್ತಿಯು ನಮ್ಮ ಅರಮನೆಯಲ್ಲಿ ಹೇಗೆ ಬಂದಿತು, ಇದರ ಮಹಿಮೆಯನ್ನು ತಿಳಿಸಿಕೊಡಿ ಎಂದು ಶ್ರೀ ಅಪ್ಪಾವರಲ್ಲಿ ಪ್ರಾರ್ಥಿಸಿದರು. ಆಗ ಶ್ರೀ ಅಪ್ಪಾವರು ಈ ರೀತಿ ವಿವರಣೆ ಮಾಡುತ್ತಾರೆ. “ ಮಹಾಭಾರತದಲ್ಲಿ ಪಾಂಡವರು ರಾಜಸೂಯ ಮಹಾಯಾಗ ವನ್ನು ನಿರ್ವಹಿಸುವ ಸಂದರ್ಭದಲ್ಲಿ ದೇವಶಿಲ್ಪಿಯಾದ ವಿಶ್ವಕರ್ಮನನ್ನು ಕರೆಯಿಸಿ ಈ ಅಭೂತಪೂರ್ವವಾದ ವಿಗ್ರಹವನ್ನು ನಿರ್ಮಿಸಿದರು. ವಿಶೇಷ ಪೂಜೆ ಉಪಾಸನೆಯೊಂದಿಗೆ ಪರಮಾತ್ಮನ ಉಪಸ್ಥಿತಿಯಲ್ಲಿ ಮಹಾಯಾಗವು ನಿರ್ವಿಘ್ನವಾಗಿ ಜರುಗಿತು. ಕಾಲಾನಂತರ 12 ವರ್ಷ ವನವಾಸವಾಯಿತು. ಇನ್ನು 13ನೇ ವರ್ಷದ ಅಜ್ಞಾತವಾಸದಲ್ಲಿ ಪೂಜೆ, ಉಪಾಸನೆ ಬಹಳ ಕಷ್ಟವಾಯಿತು (ಶ್ರೀ ಪಂಚಮುಖಿ ಪ್ರಾಣದೇವರ ವಿಗ್ರಹವು ಜೊತೆಗಿದ್ದರೆ ಅವರು ಪಾಂಡವರೆಂದು ಗುರುತಿಸಲ್ಪಡುತ್ತಾರೆ, ಹಾಗಾದ ಪಕ್ಷದಲ್ಲಿ ಮತ್ತೆ 12 ವರ್ಷ ವನವಾಸ 1 ವರ್ಷ ಅಜ್ಞಾತವಾಸ ಮಾಡಬೇಕಾಗಿತ್ತು). ಇಂತಹ ಸಂದರ್ಭದಲ್ಲಿ ಈ ಅಭೂತಪೂರ್ವವಾದ ವಿಗ್ರಹವನ್ನು ಭೂ ಗರ್ಭದಲ್ಲಿ ಭದ್ರ ಮಾಡಿದರು (ಭೂ ಗರ್ಭದಲ್ಲಿದ್ದರೆ ಅದರ ಸನ್ನಿಧಾನ ಮತ್ತು ಅದರಲ್ಲಿಯ ವಿಶೇಷ ಶಕ್ತಿ ಯುಗಾಂತರದಲ್ಲಿಯೂ ಹಾಗೆಯೇ ಇರುತ್ತದೆ ಎಂದು ಶಾಸ್ತ್ರ ಹೇಳುತ್ತದೆ). “ ಕಾಲಕ್ರಮೇಣ ಕುರುಕ್ಷೇತ್ರವಾಯಿತು, ಯುಗಗಳು ಕಳೆದವು, ಅರಮನೆ ನಿರ್ಮಾಣವಾಯಿತು ಹಾಗೂ ಈ ಕಾರಣವಾಗಿಯೇ ತಾವು ಹರಿಪ್ರೇರಣೆಯಂತೆ ಆಗಮಿಸಿರುವುದಾಗಿಯೂ ತಿಳಿಸಿದರು. ಇದನ್ನು ಕೇಳಿ ಆನಂದ ಭರಿತರಾದ ಮಹಾರಾಜರು ಸಕಲ ವೈಭವದೊಂದಿಗೆ ಉತ್ಸವ, ರಾಜಮರ್ಯಾದೆ ಪೂರಕವಾಗಿ ಈ ಅಭೂತಪೂರ್ವವಾದ ವಿಗ್ರಹವನ್ನು ಶ್ರೀ ಅಪ್ಪಾವರಲ್ಲಿ ಸಮರ್ಪಣೆ ಮಾಡಿದರು.
ಇದರ ಗುರುತಾಗಿ ರಾಜಾಲಯದಲ್ಲಿಯೇ ಶ್ರೀ ಮಂತ್ರಾಲಯ ಪ್ರಭುಗಳ ಮೃತ್ತಿಕಾ ವೃಂದಾವನವನ್ನು ಸ್ಥಾಪಿಸಿದರು. ನಂತರ ಶ್ರೀ ಅಪ್ಪಾವರು ಪಂಚಮುಖಿ ಪ್ರಾಣದೇವರನ್ನು ತಮ್ಮ ಸ್ವಸ್ಥಾನವಾದ ಇಭರಾಮಪುರಕ್ಕೆ ತೆಗೆದುಕೊಂಡು ಬಂದು ವಿಶೇಷ ಉಪಾಸನೆಯೊಂದಿಗೆ ಬಂದ ಭಕ್ತರಿಗೆಲ್ಲಾ ಅನುಗ್ರಹ ಮಾಡುತ್ತಾ ಮತ್ತಷ್ಟು ವಿಜೃಂಭಿಸತೊಡಗಿದರು. ಪರಮಾತ್ಮನ ಅನುಗ್ರಹಕ್ಕೆ ಮಿತಿಯೇ ಇಲ್ಲವೆಂಬ ಹಾಗೆ ಮಹಾರಾಜರಿಗೆ ಪ್ರಸ್ತುತ ಜನ್ಮದಲ್ಲಿ ಅಪರೂಪವಾದ ರಾಜ ವೈಭೋಗವು ದೊರಕಿದ್ದು ಒಂದು ಕಡೆ ಆದರೆ, ಇನ್ನು ಶ್ರೀ ಅಪ್ಪಾವರು ಕೇವಲ ಪೂರ್ವ ಜನ್ಮದ ವೃತ್ತಾಂತ ಮಾತ್ರವಲ್ಲದೇ ಹಿಂದಿನ ಏಳು ಜನ್ಮದ ವೃತ್ತಾಂತವನ್ನು ಹೇಳುತ್ತಿದ್ದರು.
ಗುರುಜಗನ್ನಾಥದಾಸರಿಗೆ ಅನುಗ್ರಹ :
ಶ್ರೀ ವೆಂಕಟಗಿರಿ ಆಚಾರ್ಯರು ಹಾಗೆ ಶ್ರೀ ಇಭರಾಮಪುರದ ಅಪ್ಪಾವರ ಸ್ನೇಹಿತರು. ಇಬ್ಬರು ಒಬ್ಬರಿಗೊಬ್ಬರು ಅಣ್ಣ ತಮ್ಮನಹಾಗೆ ಅತ್ಮೀಯ ಸಂಬಂಧ. ಶ್ರೀ ವೆಂಕಟಗಿರಿ ಆಚಾರ್ಯರು ಒಂದು ಸಂದರ್ಭದಲ್ಲಿ ಇಭರಾಮಪುರಕೆ ಬಂದಿರುತ್ತಾರೆ. ಬಂದ ಸಂದರ್ಭದಲ್ಲಿ ಅಪ್ಪಾವರ ಪ್ರಾಣದೇವರ ಪೂಜೆಯಲ್ಲಿ ನಿರತರಾಗಿರುತ್ತಾರೆ, ಆಚಾರ್ಯರು ನೊಂದ ಮನಸ್ಸಿನಿಂದ ಅಪ್ಪಾವರಲ್ಲಿ ಪ್ರಾರ್ಥನೆ ಮಾಡುತ್ತಾರೆ ,ಅಣ್ಣಾ ಎಲ್ಲರಿಗೂ ಅನುಗ್ರಹ ಮಾಡ್ತಿಯ, ನನಗೆ ಸಂತಾನ ಇಲ್ಲ ಅಂತ ಬೇಡಿಕೊಂಡಾಗ ಅಪ್ಪಾವರು ತಮ್ಮ ಉಪಸ್ಯಮೂರ್ತಿಯಾದ ಪಂಚಮುಖಿ ಮುಖ್ಯ ಪ್ರಾಣದೇವರಿಗೆ ಅಭಿಷೇಕ ಮಾಡಿದ ಮುತ್ತು ಕೊಡುತ್ತಾ “ವೆಂಕಟಗಿರಿ ನಿನಗೆ ಮುತ್ತಿನಂತಹ ಮಗ ಹುಟ್ಟುತ್ತಾನೆ ಅಂತ ಆಶೀರ್ವಾದ ಮಾಡುತ್ತಾರೆ.ಅಪ್ಪಾವರು ಆಶೀರ್ವಾದದಿಂದ ಗಂಡುಮಗು ಜನನವಾಗಿ ಸ್ವಾಮಿರಾಯ ಅಂತ ನಾಮಕರ್ಣ ಮಾಡುತ್ತಾರೆ ,ಶ್ರೀ ಸ್ವಾಮಿರಾಯಾಚಾರ್ಯರೆ ಮುಂದೆ ಶ್ರೀ ಗುರುಜಗನ್ನಾಥ ದಾಸರು ಅಂತ ಜಗನ್ಮಾನ್ಯರಾದರು.
ಸ್ವಪ್ನದಲ್ಲಿ ಪಾಠ :ಶ್ರೀ ಸ್ವಾಮಿರಾಯ (ಶ್ರೀ ಗುರು ಜಗನಾಥದಾಸರು) ಶ್ರೀಹರಿಯ ಕೃಪರಿಗೆ ಗುರುವೇ ಕಾರಣ ಅತಿರೋಹಿತ ವಿಮಲವಿಜ್ಞಾನಿಗಳಾದ ವಾಯು ದೇವರ ಮೊರೆ ಹೋಗಬೇಕೆಂದು ನಿಶ್ಚಯಸಿದರು.ಸ್ವಗ್ರಾಮ ಕೌತಾಳ ಹತ್ತಿರವಾದ ಬುಡಮಲ ದೊಡ್ಡಿ ಯಂಬ ಪವಿತ್ರ ಕ್ಷೇತ್ರ ಸಾಧನೆಗೆ ಯೋಗ್ಯವಾದ ಸ್ಥಳವೆಂದು ನಿರ್ಧರಿಸಿ ಯಾರಿಗೂ ಹೇಳದೆ ಪ್ರಯಾಣ ಬೆರಿಸುತ್ತಾರೆ. ಆ ಕ್ಷೇತ್ರದಲ್ಲಿಯ ವಾಯು ದೇವರ ಸೇವೆ ಆರಂಭಿಸುತ್ತಾರೆ. ಶ್ರೀ ಸ್ವಾಮಿರಾಯರ ಸೇವೆ ಸ್ವೀಕರಿಸಿದ ಮುಖ್ಯಪ್ರಾಣದೇವರು ಸ್ವಪ್ನದಲ್ಲಿ ನಾಲಿಗೆಯಮೇಲೆ ಬೀಜಕ್ಷರ ಬರೆದು ಸ್ವಗ್ರಾಮಕೇ ತೆರೆಳು ನಿನಗೆ ಉಪದೇಶ ಆಗುತ್ತೆ ಎಂದು ಅನುಗ್ರಹಿಸುತ್ತಾರೆ.ವಾಯುದೇವರ ಆಜ್ಞೆಯಂತೆ ಸ್ವಗ್ರಾಮಗೆ ತೆರುಳಿತರೆ. ರೂಢಿನಾಮ ಸಂವತ್ಸರ ಶ್ರಾವಣ ಶುದ್ಧ ಮಹಲಕ್ಷ್ಮಿಯ ದಿನದಂದು ಸ್ವಪ್ನದಲ್ಲಿ ಶ್ರೀ ಅಪ್ಪಾವರು ಹಾಗು ರಾಘವೇಂದ್ರತೀರ್ಥ ಗುರುಸಾರ್ವಭೌಮರು ಗುರು ಉಪದೇಶ ಕೊಡುತ್ತಾರೆ. ನಂತರ ಶ್ರೀ ಸ್ವಾಮಿರಾಯರು ಮುಂದೆ ಗುರುಜಗನ್ನಾಥ ದಾಸರು ಯಂದು ಜಗನ್ಮಾನ್ಯರಾಗುತ್ತಾರೆ.
ಶ್ರೀ ಗುರು ಜಗನ್ನಾಥದಾಸರು ದಾಸಸಾಹಿತ್ಯಕೆ ಅಪಾರ ಕೊಡುಗೆ ನೀಡಿದರೆ. ತೂಗಿರೆ ರಾಯರ ತೂಗಿರೆ ಗುರುಗಳ ದಾಸರ ಪ್ರಸಿದ್ದವಾದ ರಚನೆ. ದಾಸರು ಕೆಲವ ಕನ್ನಡವಲ್ಲದೆ ಸಂಸ್ಕೃತ ಸಾಹಿತ್ಯ ಶ್ರೀಮಂತಗೊಳಿಸಿದ್ದಾರೆ.
ಭವಿಷ್ಯವಾಣಿ :ಅಪರೋಕ್ಷ ಜ್ಞಾನಿಗಳಾದ ಶ್ರೀ ಅಪ್ಪಾವರು ಪಂಚಮುಖಿ ಮುಖ್ಯಪ್ರಾಣ ಆರಾಧಕರು , ನಿರಂತರ ಶ್ರೀಮಾನ್ ನ್ಯಾಯಸುಧಾ ಪರಿಮಳ ಗ್ರಂಥದ ಪಾರಾಯಣದಿಂದ ಅವರು ನುಡಿದ ಪ್ರತಿಯೊಂದು ಮಾತು ಸತ್ಯವಾಗುತ್ತಿತು. ಶ್ರೀ ಗಣೇಶಾಚಾರ್ಯರು ಮಂತ್ರಾಲಯ ಅಪ್ಪಾವರ ಕಾಲದಲ್ಲಿ ಇದ್ದ ಮಹಾ ಪಂಡಿತರು. ಅಪ್ಪವರು ಶ್ರೀ ರಾಯರ ದರ್ಶನಕೆಂದು ಬಂದಿರುತ್ತಾರೆ. ಅಪ್ಪಾವರನು ಕಂಡು ದೀರ್ಘ ದಂಡ ನಮಸ್ಕಾರ ಮಾಡಿದ ಗಣೇಶಾಚಾರ್ಯರು. ನಮಸ್ಕಾರ ಮಾಡಿದಮೇಲೆ ಅಪ್ಪಾವರು ಅವರಿಗೆ ಇದು ನೀನು ನನಗೆ ಮಾಡುವ ಕೊನೆಯ ನಮಸ್ಕಾರ ನಾಳೆಯಿಂದ ನಾನು ನಿನಗೆ ಮಾಡುತ್ತೆನೆ ಅಂತ ಮಾರ್ಮಿಕವಾಗಿ ಆಚಾರ್ಯರಿಗೆ ಹೇಳುತ್ತಾರೆ.ಮರುದಿನದ ಸಾಯಂಕಾಲ ಸಮಯಕೆ ಶ್ರೀಮಠದಿಂದ ಗಣೇಶಾಚಾರ್ಯರಿಗೆ ಈಗಲೇ ನಂಜನಗೂಡುಗೆ ಹೊರಡ ಬೇಕು ಶ್ರೀ ಸುಜ್ಞಾನೇಂದ್ರ ತೀರ್ಥರಿಗೆ ದೇಹ ಅಲಸ್ಯವಾಗುತ್ತಿದೆ ಅವರು ಮುಂದಿನ ಜವಾಬ್ದಾರಿ ನಿಮಗೆ ವಹಿಸಿದರೆವೆಂದು ಹೇಳಿದ ತತ್ಕ್ಷಣ ನಂಜನಗೂಡುಗೆ ಪ್ರಯಾಣ ಬೆಳಸಿ ಮುಂದೆ ಅವರೇ ಪರಮಹಂಸ ಪೀಠದಲ್ಲಿ ವಿರಾಜಾಮಾನರಾಗಿ ಸುಧರ್ಮೇಂದ್ರತೀರ್ಥರೆಂದು ಜಗನ್ಮಾನ್ಯರಾಗಿದ್ದಾರೆ.
ಶ್ರೀಬೇಲೂರುಕೇಶವದಾಸರಿಗೆಅನುಗ್ರಹ : ಶ್ರೀ ಅಪ್ಪಾವರು ಸಂಚಾರತ್ವೇನ ಉಡುಪಿಯಾತ್ರೇ ಹೋಗಿರುತ್ತಾರೆ. ಶ್ರೀ ಮಧ್ವಾಚಾರ್ಯರ ಜನ್ಮ ಭೂಮಿಯಾದ ಪಾಜಕ ಕ್ಷೇತ್ರ ದರ್ಶನಮಾಡಿ ನಂತರದಲ್ಲಿ ಪರಶುರಾಮ ದೇವರು ಪ್ರತಿಷ್ಠಿತ ಕುಂಜಾರು ಗಿರಿ ಶ್ರೀದುರ್ಗಾ ದೇವಿಯ ದರ್ಶನಕ್ಕೆ ಬಂದಿರುತ್ತಾರೆ.ಅಲ್ಲಿ ಶ್ರೀವೆಂಕಟೇಶ ದಾಸರೆಂಬುವರು ತಮ್ಮ ಪತ್ನಿ ತಿಮ್ಮವ್ವನವರ ಜೊತೆಯಲ್ಲಿ ದುರ್ಗಾದೇವಿಯ ಸೇವೆ ಮಾಡಲು ಬಂದಿರುತ್ತಾರೆ. ತಿಮ್ಮವ್ವನವರು ತಮ್ಮ ಗಂಡನಿಗೆ ಇರುವ ವ್ಯಾಧಿಯ ನಿವಾರಣೆಗೆ ಹಲವು ದಿವಸದಿಂದ ಸೇವೆ ಸಲ್ಲಿಸುತ್ತಿದ್ದರು.ಒಂದು ದಿನ ಶ್ರೀ ವೆಂಕಟೇಶದಾಸರ ಪತ್ನಿ ತಿಮ್ಮವ್ವನವರು ಸೇವೆ ಮುಗಿಸಿಕೊಂಡು ದೇವಿಯ ದರ್ಶನ ಪಡೆದಮೇಲೆ ಅಲ್ಲಿಯ ದೇವಸ್ಥಾನದ ಅರ್ಚಕರು ಪ್ರಸಾದ ಕೊಟ್ಟರು. ಪ್ರಸಾದದಲ್ಲಿ ಅಂಗಾರ ಮತ್ತು ತುಳಸಿ ಇರುವ ಕಾಯಿ ಬಟ್ಟಲು ಬಂತು. ಅರ್ಚಕರು ಕೊಟ್ಟ ಆ ಪ್ರಸಾದವನ್ನು ನೋಡಿ ಅದರಲ್ಲಿ ಇದ್ದ ಅಂಗಾರ ಮತ್ತು ತುಳಸಿಯನು ನೋಡಿ ಅಶುಭಸೂಚಕವೆಂದು ಬಹುದುಃಖದಿಂದ ಅಳ್ಳುತ್ತಾ ಕಣ್ಣೀರು ಹಾಕುತ್ತಿದಳು.ಕಣ್ಣೀರು ಇಡುತ್ತಿದ ತಿಮ್ಮವ್ವನವರನು ನೋಡಿ ಅಲ್ಲಿಯೇ ಇದ್ದ ಅಪ್ಪಾವರು , ಬೇಸರ ಪಡಬೇಡಮ್ಮ ದೇವಿಯು ಪ್ರಸನ್ನಳಾಗಿ ಆ ಪ್ರಸಾದ ಕರುಣಿಸಿದ್ದಾಳೆ.
ನಿಮಗೆ ಅಂಗಾರವನ್ನು ನೀಡುವ ಮೂಲಕ ಅದನ್ನು ಧರಿಸುವ ವೈಷ್ಣವೋತ್ತಮನಾದ ಪುತ್ರನನ್ನು ಹಾಗೂ ತುಳಸಿಯನ್ನು ನೀಡುವ ಮೂಲಕ ಅದನ್ನು ಪೂಜೆಸುವ ಹೆಣ್ಣು ಸಂತಾನವನ್ನು ಕರುಣಿಸುವುದಾಗಿಯೂ ಸೂಚಿಸಿದ್ದಾಳೆ ಎಂದು ತಿಮ್ಮವ್ವನವರಿಗೆ ಸಮಾಧಾನಮಾಡಿ ಅವರಿಗೆ ಅಭಯ ನೀಡುತ್ತಾರೆ. ಮುಂದೆ ಎಲ್ಲವೂ ಒಳ್ಳೆಯದಾಗುವದು ಎಂದು ಆಶೀರ್ವಾದ ಮಾಡಿದರು ಅಪ್ಪಾವರು ಹೇಳಿದ ಮಾತು ಹುಸಿಯಾಗಲಿಲ್ಲ, ಮುಂದೆ ವೆಂಕಟ ದಾಸರಿಗೆ ಒಂದು ಗಂಡು ಮಗು ಜನಿಸಿತು,ಅವರೇ ಶ್ರೀ ಕರ್ಣಾಟಕ ಭಕ್ತ ವಿಜಯ ಎಂಬ ಉತ್ತಮ ಗ್ರಂಥ ವನ್ನು ಬರೆದ ಶ್ರೀ ಬೇಲೂರು ಕೇಶವ ದಾಸರು ಎಂದು ಪ್ರಸಿದ್ಧಿಯನ್ನು ಹೊಂದಿದರು.
ಪರಿಮಳ ಶರೀರ : ಶ್ರೀ ಅಪ್ಪಾವರು ನಿರಂತರವಾಗಿ ಶ್ರೀಮನ್ಯಾಯ ಸುಧಾ ಪರಿಮಳ ಗ್ರಂಥದ ಶ್ರವಣ, ಮನನ, ಧ್ಯಾನ , ಪಾಂಡವರು ಪೂಜಿಸಿದ ಅರ್ಜುನ ಕರಾರ್ಜಿತ ಪಂಚಮುಖಿ ಮುಖ್ಯಪ್ರಾಣದೇವರ ನಿರಂತರ ಸೇವೆ ಇಂದ ಅವರ ಶರೀರದಿಂದ ನಿತಂತರವಾಗಿ ಪರಿಮಳ ಸುವಾಸನೆ ಬರುತಿತ್ತು.ಒಂದು ಬಾರಿ ಶ್ರೀ ಅಪ್ಪಾವರು ದಕ್ಷಿಣ ಭಾರತದ ಯಾತ್ರೆಯ ಸಮಯದಲ್ಲಿ ಕಾವೇರಿ ಸ್ನಾನಕ್ಕೆಂದು ಶ್ರೀರಂಗಪಟ್ಟಣ ನಗರಕ್ಕೆ ಬಂದಾಗ ಅಲ್ಲಿ ಕೆಲವು ಕುಹಕಿಗಳು ಶ್ರೀ ಅಪ್ಪಾವರು ಯಾವುದೋ ದ್ರವ್ಯ ಧಾರಣೆ ಮಾಡಿಕೊಂಡು ಜನರಿಗೆ ತಪ್ಪು ಗ್ರಹಿಕೆ ಮಾಡುತ್ತಿದ್ದಾರೆಯೆಂದು ಅವರ ಪರೀಕ್ಷೆ ಮಾಡುಲು ಮುಂದಾಗುತ್ತಾರೆ.“ನೀವು ಸ್ನಾನ ಮಾಡಿದಾಗ ಪರಿಮಳದ ಸುವಾಸನೆ ಬರುವುದೆಂದು ಕೇಳಿದ್ದೇವೆ , ಅದನ್ನು ನೀವು ಈಗ ಕಾವೇರಿ ನದಿಯಲ್ಲಿ ಸ್ನಾನಮಾಡಿ ತೋರಿಸಿ” ಎನ್ನುತ್ತಾರೆ.ಆಗ ಶ್ರೀ ಅಪ್ಪಾವರು ಸ್ನಾನ ಮಾಡಿದಾಗ ಕಾವೇರಿ ನದಿಯಲ್ಲಿ ಮತ್ತು ಸುತ್ತ- ಮುತ್ತಲಿನ ಗ್ರಾಮದಲ್ಲಿ ಪರಿಮಳದ ಸುವಾಸನೆ ಹರಡಿತು. ಅಪ್ಪಾವರ ಪರೀಕ್ಷೆ ಮಾಡಲು ಬಂದ ಆ ಕುಹಕಿಗಳಿಗೆ ತಮ್ಮ ತಪ್ಪಿನ ಅರಿವಾಗಿ ಅಪ್ಪಾವರ ಬಳಿ ಶರಣಾಗುತ್ತಾರೆ. ಕರುಣಾ ಸಾಗರರಾದ ಅಪ್ಪಾವರು ಪರೀಕ್ಷೆ ಮಾಡಲು ಬಂದ ಆ ಜನರನ್ನು ಕ್ಷಮಿಸಿ ಅನುಗ್ರಹಿಸುತ್ತಾರೆ.ಶ್ರೀ ಅಪ್ಪಾವರು ಬರೆದ ಪತ್ರಗಳು, ಧರಿಸಿದ ಉಡುಪುಗಳು ,ಅವರು ನದಿಯಲ್ಲಿ ಸ್ನಾನ ಮಾಡಿದಾಗ, ಅವರ ಕೈನಿಂದ ಬಂದ ವಸ್ತುಗಳಲ್ಲಿ ಪರಿಮಳದ ಸುವಾಸನೆ ಬರುತ್ತಿದ್ದ ಕಾರಣ ಶ್ರೀ ಅಪ್ಪಾವರು ಶ್ರೀ ಪರಿಮಳಾಚಾರ್ಯರು ಎಂದು ಪ್ರಸಿದ್ಧಿಯಾಗಿದ್ದರು.
ಶ್ರೀ ಅಪ್ಪಾವರು ನಿರಂತರವಾಗಿ ಶ್ರೀಮನ್ಯಾಯ ಸುಧಾ ಪರಿಮಳ ಗ್ರಂಥದ ಶ್ರವಣ, ಮನನ, ಧ್ಯಾನ , ಪಾಂಡವರು ಪೂಜಿಸಿದ ಅರ್ಜುನ ಕರಾರ್ಜಿತ ಪಂಚಮುಖಿ ಮುಖ್ಯಪ್ರಾಣದೇವರ ನಿರಂತರ ಸೇವೆ, ಉಪಾಸನೆ ಮತ್ತು ಅನುಷ್ಠಾನ ಹಾಗೂ ಶ್ರೀ ರಾಯರ ಮತ್ತು ವಾಯುದೇವರ ವಿಶೇಷ ಕಾರುಣ್ಯದಿಂದ ಶೃತಿ- ಸ್ಮೃತಿ ಸಮ್ಮತವಾದ ಈ ಮಹಿಮೆಗಳು ಗೋಚರವಾಗುತ್ತಿತು ಎಂದು ಅಪ್ಪಾವರ ಶಿಷ್ಯರಾದ ಶ್ರೀಯೋಗಿ ನಾರಾಯಣಾಚಾರ್ಯರು ರಚಿಸಿದ ಶ್ರೀ ಇಭರಾಮಪುರ ಶ್ರೀಕೃಷ್ಣಾರ್ಯ ಸ್ತೋತ್ರದಲ್ಲಿ ಸ್ಪಷ್ಟವಾಗಿ ತಿಳಿಸುತ್ತಾರೆ.
ಶ್ರೀ ಅಪ್ಪಾವರಶಿಷ್ಯರುಶ್ರೀಯೋಗಿನಾರಾಯಣಾಚಾರ್ಯರು : ಶ್ರೀ ಅಪ್ಪಾವರಿಗೆ ದೇಶದೆಲ್ಲೆಡೆ ಹಲವಾರು ಶಿಷ್ಯರು ಅಪ್ಪಾವರ ಅನುಗ್ರಹಕ್ಕೆ ಪಾತ್ರರಾಗಿದ್ದರು. ಅವರ ಪ್ರಮುಖ ಶಿಷ್ಯರಲ್ಲಿ ಶ್ರೀ ಯೋಗಿ ನಾರಾಯಣಾಚಾರ್ಯರು ಒಬ್ಬರು.ಶ್ರೀ ನಾರಾಯಣಾಚಾರ್ಯರು ಮೂಲತಃ ಗದಗಿ ನವರು. ಆಚಾರ್ಯರು ಗದಗಿನ ವೀರ ನಾರಾಯಣನ ಅಂತರಂಗ ಭಕ್ತರು. ತಮ್ಮ ಸ್ವರೂಪೊದ್ದಾರಕ ಗುರುಗಳ ಪ್ರಾಪ್ತಿಗಾಗಿ ನಿತ್ಯವೂ ಶ್ರೀ ನಾರಾಯಣಾಚಾರ್ಯರು ವೀರ ನಾರಾಯಣನ ಸೇವೆ ಮಾಡುತಿದ್ದರು. ಆಚಾರ್ಯರ ನಿಷ್ಠೆಯ ಸೇವೆಗೆ ಮೆಚ್ಚಿದ ವೀರ ನಾರಾಯಣ ದೇವರು ಸ್ವಪ್ನದಲ್ಲಿ ಆಚಾರ್ಯರಿಗೆ ನಿಮ್ಮ ಸ್ವರೂಪೊದ್ದಾರಕರು ಅತಿ ಶೀಘ್ರದಲ್ಲಿ ನಿನಗೆ ಭೇಟಿ ಆಗುತ್ತರೆ ಅಂತ ಸೂಚನೆ ಕೊಡುತ್ತಾರೆ.
ಶ್ರೀ ಅಪ್ಪಾವರು ಸಂಚಾರ ಅನ್ವಯ ಗದಗಗೆ ಬಂದಿರುತ್ತಾರೆ. ಅಲ್ಲಿ ಮಧ್ಯಾಹ್ನದ ಸಮಯಕೆ ಶ್ರೀ ವೀರ ನಾರಾಯಣನ ದರ್ಶನಕ್ಕೆ ಅಪ್ಪಾವರು ಬಂದಿರುತ್ತಾರೆ , ಬಂದ ಸಮಯದಲ್ಲಿ ಅರ್ಚಕರು ದೇವಸ್ಥಾನ ಗರ್ಭಗುಡಿ ಬೀಗ ಹಾಕಿರುತ್ತಾರೆ. ದೇವಸ್ಥಾನದ ಪ್ರಾಂಗಣದಲ್ಲಿ ಅಪ್ಪಾವರು ವೀರ ನಾರಾಯಣನ ಪ್ರಾರ್ಥಿಸುತ್ತಾ- ಸ್ವಾಮಿ ನಾನು ನಿನ್ನ ದರ್ಶನಕ್ಕಾಗಿ ಇಭರಾಮಪುರದಿಂದ ಬಂದಿದ್ದೇನೆ ಅಂತ ಪ್ರಾರ್ಥಿಸಿದಾಗ , ದೇವಸ್ಥಾನದ ಗರ್ಭಗುಡಿಯ ಬಾಗಿಲು ತಾನಾಗಿಯೇ ತೆರೆಯುತ್ತದೆ.ಇದೇ ಸಮಯದಲ್ಲಿ ಶ್ರೀ ಯೋಗಿ ನಾರಾಯಣಾಚಾರ್ಯರು ದೇವಸ್ಥಾನ ಪ್ರಾಂಗಣದಲ್ಲಿಯೇ ಇರುತ್ತಾರೆ. ಶ್ರೀ ಅಪ್ಪಾವರನ್ನು ಯಾರೋ ಯಾತ್ರಿಕರು ನಾರಾಯಣನ ದರ್ಶನಕ್ಕಾಗಿ ಬಂದಿದ್ದಾರೆ ಎಂದು ತಿಳಿದಿರುತ್ತಾರೆ ಆದರೆ ಅಲ್ಲಿ ನಡೆದಿದ್ದು ಬೇರೆ. ಅಪ್ಪಾವರ ಪ್ರಾರ್ಥನೆ ದೇವಸ್ಥಾನದ ಗರ್ಭಗುಡಿಯ ಬಾಗಿಲು ತಾನಾಗಿಯೇ ತೆರೆದುದನ್ನು ಕಂಡು ಆಚಾರ್ಯರು ಒಂದು ಕ್ಷಣ ಏನು ತೋಚಲಾಗದೆ ಬೆರಗಾಗುತ್ತಾರೆ.ಶ್ರೀ ಅಪ್ಪಾವರು ವೀರ ನಾರಾಯಣನ ಜೊತೆ ನೇರವಾಗಿ ಸಂದರ್ಶನ ಮಾಡುವುದನ್ನು ಕಂಡು ಶ್ರೀ ಯೋಗಿ ನಾರಾಯಣಾಚಾರ್ಯರು ಅಪ್ಪಾವರಲ್ಲಿ ಶಿಷ್ಯ ಸ್ವೀಕಾರಕ್ಕಾಗಿ ಪ್ರಾರ್ಥನೆ ಮಾಡುತ್ತಾರೆ. ಆಚಾರ್ಯರ ಪ್ರಾರ್ಥನೆಗೆ ಶ್ರೀ ಅಪ್ಪಾವರು ಸಂತುಷ್ಟರಾಗಿ ಅವರನ್ನು ತಮ್ಮ ಶಿಷ್ಯರನ್ನಾಗಿ ಸ್ವೀಕರಿಸುತ್ತಾರೆ.
ರಾಯರಮೃತಿಕಾಬೃಂದಾವನ :ಶಿಷ್ಯತ್ವ ಸ್ವೀಕಾರದ ಪ್ರತೀಕವಾಗಿ ನಮ್ಮ ಕುಲ ಗುರುಗಳಾದ ಮಂತ್ರಾಲಯ ಗುರುಸೌರ್ವಭೌಮರ ಬೃಂದಾವನ ಪ್ರತಿಷ್ಠಾಪಿಸಲು ಶ್ರೀ ಅಪ್ಪಾವರು ಇಚಿಸುತ್ತಾರೆ. ಅಪ್ಪಾವರ ಅಜ್ಞೆಯಂತೆ ಶ್ರೀ ಯೋಗಿ ನಾರಾಯಣಾಚಾರ್ಯರು ಬೃಂದಾವನ ಕೆತ್ತನೆ ಮಾಡುತ್ತಾರೆ.ಶ್ರೀ ಅಪ್ಪಾವರು ವೀರ ನಾರಾಯಣನ ಸನ್ನಿಧಾನದಲ್ಲಿಯೇ ರಾಯರ ಭವ್ಯ ಬೃಂದಾವನವನು ಪ್ರತಿಷ್ಠಾಪನೆ ಮಾಡುತ್ತಾರೆ.
ಶಿಲ್ಪಕಳಾನಿಪುಣರುಶ್ರೀಯೋಗಿನಾರಾಯಣಾಚಾರ್ಯರು :ಶ್ರೀ ಅಪ್ಪಾವರು ಹಾಗೂ ವೀರ ನಾರಾಯಣನ ಅನುಗ್ರಹದಿಂದ ಶ್ರೀ ಯೋಗಿ ನಾರಾಯಣಾಚಾರ್ಯರು ಶಿಲ್ಪಕಲೆಯ ಅನುಗ್ರಹ ಹೊಂದಿರುತ್ತಾರೆ. ವೀರ ನಾರಾಯಣನ ಸನ್ನಿಧಾನದಲ್ಲಿಯೇ ರಾಯರ ಬೃಂದಾವನ , ಅಪ್ಪಾವರ ಕಟ್ಟೆಯಲ್ಲಿ ಮಂಟಪದಲ್ಲಿ ಕೆತ್ತನೆಗಳು , ಮಂತ್ರಾಲಯದ ತುಂಗಾ ತಟದಲ್ಲಿ ರಾಯರು ಅಹ್ನಿಕ ಮಾಡುತಿದ್ದ ಸ್ಥಳ ಗುರುತಿಸಿ ಅಲ್ಲಿ ಅವತಾರತ್ರಯ ಪ್ರಾಣದೇವರು , ಅಪ್ಪಾವರ ಕಟ್ಟೆಯಲ್ಲಿ ಶಾಲಿಗ್ರಾಮ ಶಿಲೆಯಲ್ಲಿ ಚತುರ್ಭುಜ ವೇಣುಗೋಪಾಲ ಹಾಗು ಶ್ರೀ ಅಪ್ಪಾವರ ಭವ್ಯವಾದ ಮೂರ್ತಿಯು ಶ್ರೀ ಯೋಗಿ ನಾರಾಯಣಾಚಾರ್ಯರ ನೈಪುಣ್ಯತೆ ತೋರಿಸುತ್ತದೆ.ಯೋಗಿ ನಾರಾಯಣಾಚಾರ್ಯರು ರಚಿಸಿದ ಶ್ರೀ ಅಪ್ಪಾವರ ಸ್ತೋತ್ರಶ್ರೀ ಆಚಾರ್ಯರು ತಮ್ಮ ಗುರುಗಳಾದ ಶ್ರೀ ಅಪ್ಪಾವರ ಮಹಿಮೆ ಸಾರುವ ಶ್ರೀ ಇಭಾರಾಮಪುರ ಶ್ರೀ ಕೃಷ್ಣಾರ್ಯ ಸ್ತೋತ್ರ ರಚಿಸಿದರು. ತಾವು ಪ್ರತ್ಯಕ್ಷ್ಯವಾಗಿ ಕಂಡ ಹಾಗು ಶ್ರುತಿ ಸ್ಮೃತಿ ಸಮ್ಮತಿಸುವ ಮಹಿಮೆಗಳು ಮತ್ತು ಆ ಮಹಿಗಳು ಯಾವ ಯಾವ ಪುರಾಣಗಳಲ್ಲಿ ಉಲ್ಲೇಖವಾಗಿದೇ ಎಂದು ಸ್ತೋತ್ರಮಾಡಿದರೆ.ಅಪರೋಕ್ಷ ಜ್ಞಾನಿಗಳು ಯೋಗಿ ನಾರಾಯಣಾಚಾರ್ಯರುಸುರಪುರದ ಆನಂದ ದಾಸರು ತಮ್ಮ ಸಮಕಾಲೀನ ಎಲ್ಲಾ ಅಪರೋಕ್ಷ ಜ್ಞಾನಿಗಳನು ಗುರುತಿಸಿ ರಚಿಸಿದ ಕೀರ್ತನೆಶ್ರೀ ರಾಘವೇಂದ್ರರಾಯರ ಪಾದಾಂಬುಜದಾರಾಧಕರ ಕೊಂಡಾಡಿರೋ ।। ಪಲ್ಲವಿ ।।ಹಲವು ಸಜ್ಜನರೊಳು ತಿಳಿಸಿ ಕೊಳ್ಳದಲಿಪ್ಪ ।ಬಲವಂತ ಯೋಗಿ ನಾರಾಯಣಾರ್ಯರ ।।ಮೇಲೆಕಂಡ ಕೀರ್ತನೆಯಿಂದ ಶ್ರೀ ಯೋಗಿ ನಾರಾಯಣಾಚಾರ್ಯರು ಗುರು ಸಾರ್ವಭೌಮ ಶ್ರೀ ಅಪ್ಪಾವರ ಹಾಗೂ ತಮ್ಮ ಇಷ್ಟ ದೈವ ಶ್ರೀ ವೀರ ನಾರಾಯಣನ ಅನುಗ್ರಹಕೆ ಪಾತ್ರರಾಗಿ ಅಪರೋಕ್ಷ ಜ್ಞಾನ ಹೊಂದಿದ್ದಾರೆ ಎಂದು ತಿಳಿಯಬಹುದು.
ಶ್ರೀಅಪ್ಪಾವರಹೆಸರಿನಮಹಿಮೆ :ಶ್ರೀ ಅಪ್ಪಾವರ ಕೀರ್ತಿಯು ಅಪಾರವಾದದು , ದೇಶದೆಲ್ಲೆಡೆ ಹಲವಾರು ಶಿಷ್ಯರು ಅಪ್ಪಾವರ ಅನುಗ್ರಹಕೆ ಪಾತ್ರರಾಗಿದರು. ಹೀಗೆ ಅಪ್ಪಾವರ ಶಿಷ್ಯರಾದ ಶ್ರೀ ಕೆರೊಡೆ ಕೃಷ್ಣರಾಯರು ಅಮಂತ್ರಣಮೆರೆಗೆ ಶಿವಮೊಗ್ಗಕೆ ಬಂದಿರುತ್ತಾರೆ.
ಅಪ್ಪಾವರ ಸಂಪೂರ್ಣ ಅನುಗ್ರಹಕೆ ಪಾತ್ರರಾಗಿದ ಕೃಷ್ಣರಾಯರು ಮನೆತನದವರು ತಮ್ಮ ಸರ್ವಸ್ವವವು ಅಪ್ಪಾವರಿಗೆ ಸಮರ್ಪಣೆಯ ಸಂಕಲ್ಪಿಸಿದರು. ಆದರೆ ಯದ್ಪಚ್ಛಾಲಾಭ ಸಂತುಷ್ಟರಾದ ಅಪ್ಪಾವರು ಇದಕ್ಕೆ ಸಮ್ಮತಿಸಲಿಲ್ಲ. ತಮ್ಮಿಂದ ಏನನ್ನಾದರೂ ಸ್ವೀಕರಿಸಿ ಅಂತ ಶಿಷ್ಯ ಒತ್ತಾಯ ಮಾಡಿದಾಗ ಅಪ್ಪಾವರು ನಿನಗೆ ಕೊಡಲೇಬೇಕೆಂಬ ಇಚ್ಛೆಯಿದರೆ ನಿಮ್ಮಲ್ಲಿ ಇರುವ ಮರದ ದಿಮ್ಮಿಗಳನು ನಮಗೆ ಕೊಡಿ ಎಂದರು. ಶ್ರೀ ಅಪ್ಪಾವರ ಆಜ್ಞೆಯಂತೆ ಸಂತುಷ್ಠರಾದ ಕುಟುಂಬದವರು ಎಲ್ಲವೂ ಸಮರ್ಪಣೆ ಮಾಡುತ್ತಾರೆ.
ಆ ಕಾಲದಲ್ಲಿ ಇಂಥಹ ದೊಡ್ಡದಾದ ವಸ್ತುಗಳ ಸಾಗಣೆಗೆ ವ್ಯವಸ್ಥೆ ಇರಲಿಲ್ಲ. ಈ ವಿಷಯದ ಬಗ್ಗೆ ಕುಟುಂಬದ ಸದಸ್ಯರು ಗೊಂದಲ ಉಂಟಾಗುತದೆ. ಈ ಸಮಸ್ಯದ ಬಗ್ಗೆ ಶ್ರೀ ಅಪ್ಪಾವರಲ್ಲಿ ಹೇಳಿದಾಗ , ಚಿಂತಿಸಬೇಡಿ ಮರದ ದಿಮ್ಮಿಗಳಮೇಲೆ ಶ್ರೀ ಇಭರಾಮಪುರ ಅಪ್ಪಾವರು ಅಂತ ಬರೆದು ನಿಮ್ಮ ಊರಿನಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ಬಿಡಿ ಅವು ನನಗೆ ತಲುಪುತ್ತೆ. ಅಪ್ಪಾವರು ಹೇಳಿದಾಗೇ ಅವರ ಶಿಷ್ಯ ಪರಿವಾರ ಆ ಮರದ ದಿಮ್ಮಿಗಳು ಶಿವಮೊಗ್ಗದ ತುಂಗಾ ನದಿಯಲ್ಲಿ ಹಾಕಿದರು. ಶಿವಮೊಗ್ಗದಿಂದ ತುಂಗಭದ್ರ ನದಿಯಿಂದ ಮಂತ್ರಾಲಯಕೆ ಬಂದು ತಲುಪಿದವು.ಈ ಮರದ ದಿಮ್ಮಿಯಿಂದ ಶ್ರೀ ಅಪ್ಪಾವರು ಮಂತ್ರಾಲಯದಲ್ಲಿ ತಮ್ಮ ಮನೆನಿರ್ಮಾಣಕೆ ಉಪಯೋಗ ಮಾಡಿದರು.
ನಂದವಾರ ಇಭರಾಮಪುರ ಗ್ರಾಮಕ್ಕೆ ಹತ್ತಿರವಾದ ಗ್ರಾಮ. ಆ ಗ್ರಾಮದಲ್ಲಿ ನಂದವಾರ ದೇಸಾಯಿ ಮನೆತನದವರು ನೆಲಸಿದ್ರು. ಸುಖ ಸಂಪತಿನಲ್ಲಿ ಇದ್ದ ದೇಸಾಯಿ ಮನೆತನಕೆ ಸಂತಾನ ಭಾಗ್ಯ ಇರಲಿಲ್ಲ. ಸಂತಾನ ಅನುಗ್ರಹಕಾಗಿ ಅಪ್ಪಾವರ ಮೊರೆ ಹೋಗುತ್ತಾರೆ. ಶ್ರೀ ಅಪ್ಪಾವರ ಅನುಗ್ರಹದಿಂದ ಅವರ ವಂಶ ಬೆಳೆಯುತೇ.
ಶ್ರೀ ಅಪ್ಪಾವರು ಮಾಡಿದ ಅನುಗ್ರಹಕೆ ದೇಸಾಯಿವರು ಶ್ರೀ ಅಪ್ಪಾವರಿಗೆ ನಿತ್ಯ ಅನುಷ್ಠನಕೆ ಇಭರಾಮಪುರದಲ್ಲಿ ಮಂಟಪ ಕಟ್ಟಲು ಸಂಕಲ್ಪಿಸುತ್ತಾರೆ.ಮಂಟಪ ಕಟ್ಟಲು ಬೇಕಾದ ಎಲ್ಲಾ ಬಂಡೆಗಳು ರಾಂಪುರ ಗ್ರಾಮದಲ್ಲಿ ಇರುತ್ತೆ. ಕಲ್ಲು ಬಂಡೆಗಳು ಸಾಗಿಸಲು ದೂರದ ಇಭರಾಮಪುರಕೆ ಸೇರಿಸುವುದು ಅಸಾದ್ಯದ ಮಾತು. ದೇಸಾಯಿಯವರ ಅಪ್ಪಾವರಲ್ಲಿ ಈ ಸಮಸ್ಯೆಯನ್ನು ಹೇಳಿಕೊಳ್ಳುತ್ತಾರೆ. ಅಪ್ಪಾವರು ಆಗ ಬಂದು ಎಲ್ಲಾ ಬಂಡೆಗಳ ಮೇಲೆ ಇಭರಾಮಪುರ ಶ್ರೀ ಅಪ್ಪಾವರ ಅಂತ ಬರೆದು ನದಿಗೆ ಹಾಕಿಸು ಅಂತ ಹೇಳುತ್ತಾರೆ. ಅಪ್ಪಾವರ ಮಾತಿನಂತೆ ಆ ಕಲ್ಲುಗಳ ಮೇಲೆ ಇಭರಾಮಪುರ ಶ್ರೀ ಅಪ್ಪಾವರ ಅಂತ ಬರೆದು ನದಿಯಲ್ಲಿ ಹಾಕುತ್ತಾರೆ. ಇಭರಾಮಪುರ ಹತ್ತಿರದಲ್ಲಿ ಇದ್ದ ನದಿಖೈರವಾಡಿಯಲ್ಲಿ ತೇಲಿಬಂದವು. ಆ ದೊಡ್ಡ ಗಾತ್ರದ ಕಲ್ಲುಬಂಡೆಗಳು ಭಾರವು ಹುಲ್ಲುಕಡ್ಡಿಯಂತ ಆಗಿತು ನದಿಖೈರವಾಡಿಯಿಂದ ಇಭರಾಮಪುರಕೆ ಅತಿಸುಲಭವಾಗಿ ಸಾಗಿಸಿ ಅಲ್ಲಿ ಮಂಟಪ ನಿರ್ಮಾಣವಾಯಿತು .ಶ್ರೀ ಕ್ಷೇತ್ರ ಅಪ್ಪಾವರ ಕಟ್ಟೆಯಲ್ಲಿ ಈಗಿನ ಮಂಟಪವಾಗಿದೆ. ಈ ಮಂಟಪದಲ್ಲಿ ಶ್ರೀ ಯೋಗಿನರಾಯಣಾಚಾರ್ಯರು ಮಂಟಪದ ಕಂಬದ ಮೇಲೆ ಗಣಪತಿ , ಪ್ರಾಣದೇವರು , ರುದ್ರದೇವರು , ರಾಯರುನು , ಅವತಾರತ್ರಯ ಪ್ರಾಣದೇವರ ಕೆತ್ತನೆ ಮಾಡಿದರೆ.
ಹರಿದಾಸರಿಗೆಮಂದಿರ :ಶ್ರೀ ಅಪ್ಪಾವರಿಂದ ಅನುಗ್ರಹೀತರಾದ ದಾಸರು ಮತ್ತು ಜ್ಞಾನಿಗಳು೧. ಶ್ರೀ ಗಂಧರ್ವಾಂಶ ಸಂಭೂತರಾದ ಸುರಪುರದ ಆನಂದದಾಸರು೨. ಶ್ರೀ ಗುರು ಜಗನ್ನಾಥದಾಸರು೩. ಅಪರೋಕ್ಷ ಜ್ಞಾನಿಗಳಾದ ವಿದ್ವಾನ್ ಶ್ರೀ ಯಳಮೇಲಿ ಹಯಗ್ರೀವಾಚಾರ್ಯರು೪. ವಿದ್ವಾನ್ ಯಳಮೇಲಿ ವಿಠಲಾಚಾರ್ಯರು೫. ಶ್ರೀ ವಿಜಯರಾಮಚಂದ್ರದಾಸರು೬. ಶ್ರೀ ಜಯೇಶವಿಠಲರು೭. ಶ್ರೀ ಕಾರ್ಪರ ನರಹರಿ ದಾಸರು೮. ಶ್ರೀ ಮುದ್ದು ಭೀಮಾಚಾರ್ಯರು೯. ಬೇಲೂರು ಕೇಶವ ದಾಸರು೧೦. ಶ್ರೀ ಯೋಗಿ ನಾರಾಯಣಾಚಾರ್ಯರು೧೧. ಶ್ರೀ ಇಂದಿರೇಶ ದಾಸರುಹೀಗೆ ಅಪರೋಕ್ಷ ಜ್ಞಾನಿಗಳ ಸಮೂಹಕೆ ಸ್ವರೂಪಧಕಾರಾದೆ ಅಪ್ಪಾವರು .ಸುರಪುರದ ಆನಂದ ದಾಸರು ತಮ್ಮ ಸ್ವರೂಪೋದ್ಧಾರಕ ಗುರುಗಳಾದ ಶ್ರೀ ಅಪ್ಪಾವರು, ಶ್ರೀ ರಾಯರ ದಯಾಳುತ್ವವನ್ನು ಸ್ಮರಿಸುತ್ತಾ ಅವರ ಕಾಲದಲ್ಲಿ ಶ್ರೀ ರಾಯರ ಅಂತರಂಗ ಭಕ್ತರು ಹಾಗೂ ಅಪರೋಕ್ಷ ಜ್ಞಾನಿಗಳನು ಗುರುತಿಸಿ ರಚಿಸಿದ ಕೀರ್ತನೆ.
ಶ್ರೀ ರಾಘವೇಂದ್ರರಾಯರ ಪಾದಾಂಬುಜ ।ದಾರಾಧಕರ ಕೊಂಡಾಡಿರೋ ।। ಪಲ್ಲವಿ ।।ನಾರಾಯಣ ನಾಮ ಪಾರಾಯಣರ । ಪಾ ।ದಾರವಿಂದ ಸುಧಾ ರಸವ ಬೀರುವಾ ।। ಅ. ಪ ।।ಅಲವಬೋಧ ಸತ್ಕುಲ ದೀಪರೆನಿಸಿದ ।ಹುಲುಗಿಯ ನರಸಪ್ಪಾಚಾರ್ಯರ ।ಕಲಿಯೊಳು ಕಲಿಕೃತ ಕಲ್ಮಶ ಕಳೆವೆ ।ನಿರ್ಮಲ ರಾಯಚುರು ಕೃಷ್ಣಾಚಾರ್ಯರ ।।ಇಳೆಯೊಳು ಚುಷಷ್ಠಿ ಕಳದಿ ನಿಪುಣರಾದ ।ಯಳಮೇಲಿ ಹಯಗ್ರೀವಾಚಾರ್ಯರ ।ಹಲವು ಸಜ್ಜನರೊಳು ತಿಳಿಸಿ ಕೊಳ್ಳದಲಿಪ್ಪ ।ಬಲವಂತ ಯೋಗಿ ನಾರಾಯಣಾರ್ಯರ ।। ಧರಣಿದೇವರಿಗೆ ನಿರುತಾನ್ನವನೀವ ।ವರ ಹರಿಹರ ಭೀಮಾಚಾರ್ಯರ ।ಹರಿದಾಸರಿಗೆ ಮಂದಿರವಾದ ।ಇಭರಾಂಪುರದಲ್ಲಿ ಮೆರೆವ ಕೃಷ್ಣಾಚಾರ್ಯರ ।।ಶಿರಿಪಾದ ಪುತ್ರ ಪಂಡಿತರೊಳಗಗ್ರೇ ।ಸರ ಶ್ರೀ ರಂಗದ ರಾಮಾಚಾರ್ಯರ ।ಸುರಪುರ ಶ್ರೀ ನರಹರಿಯ ಪಾದಾಂಬುಜ ।ಸಿರಿಯೊಳ್ಮೆರೆವ ಅಸ್ಮದ್ಗುರು ರಾಜಾಚಾರ್ಯರ ।।ಶ್ರೀ ರಾಘವೇಂದ್ರರಾಯರ ಭೂಮಿಯೊಳವ ।ಮಾಡಿದ ಆರಂಭದಿಂ ।ದಾರಾರು ಬೃಂದಾವನ ಪೂಜಾ ಸ್ತೋತ್ರದಿಂ ।ದಾರಾಧಿಸುವರಾನಂದದಿ ।।ಸಾರ ಭಕ್ತರ ಪಾದಾರವಿಂದಕೆ । ನಮ ।ಸ್ಕಾರ ಮಾಡಿರೋ ಸಾಷ್ಟಾಂಗದಿ ।ಧೀರ ಶ್ರೀ ಕಮಲೇಶವಿಠ್ಠಲ ವಲಿದು ತನ್ನ ।ಸಾರೂಪ್ಯವ ಕೊಟ್ಟು ಸಲಹುವ ಸಂತತಾ ।।
ಸರ್ವವಿದ್ಯಾಪಾರಂಗತರು :ಕಲಿಯುಗದ ಕಾಮಧೇನು ಕಲ್ಪವೃಕ್ಷವೇಂದೆ ಪ್ರಸಿದ್ಧರಾದ ಮಂಚ್ಚಾಲೆಯ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಸೇವೆ ಮಾಡದ ಜನರಿಲ್ಲ.
ಹೀಗಿರುವಾಗ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಶ್ರೀ ರಾಮಚಾರ್ಯರೆಂಬ ಪಂಡಿತರು ಶ್ರೀ ಗುರುರಾಜರ ಸೇವೆಗಾಗಿ ಮಂತ್ರಾಲಯಕ್ಕೆ ಬಂದಿರುತ್ತಾರೆ.
ಸೇವೆ ಮಾಡುತಿದ್ದ ಆ ಪಂಡಿತರ ಕನಸಿನಲ್ಲಿ ರಾಯರು ಅನುಗ್ರಹಿಸಿ ನಾನು ನಾಳೆ ಇಭರಾಮಪುರದಲ್ಲಿ ಶ್ರೀ ಕೃಷ್ಣಚಾರ್ಯರ ವರ್ಧಂತಿಯ ಅಂಗವಾಗಿ ನಡಿಯುತ್ತಿರುವ ಜ್ಞಾನಸತ್ರದಲ್ಲಿ ಇರುತ್ತೇನೆ ಎಂದು ಅನುಗ್ರಹ ಮಾಡುತ್ತಾರೆ.
ರಾಯರ ಅನುಗ್ರಹಕ್ಕೆ ಸಂತುಷ್ಟರಾದ ಶ್ರೀರಾಮಚಾರ್ಯರು ಇಭರಾಪುರದಲ್ಲಿ ಅತಿ ವೈಭವದಿಂದ ನಡೆಯುತ್ತಿದ್ದ ಶ್ರೀ ಅಪ್ಪಾವರ ವರ್ಧಂತಿಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ರಾಮಚಾರ್ಯರು ತೀರ್ಥ-ಪ್ರಸಾದವನ್ನು ಮುಗಿಸಿ ನಂತರ ವಿದ್ವತ್ ಗೋಷ್ಠಿಯಲ್ಲಿ ಭಾಗಿಯಾಗಿ ತಮ್ಮ ಪಾಂಡಿತ್ಯ ಪ್ರದರ್ಶಸಿಸಲು ಸಭೆಯ ಮಧ್ಯೆ ಎದ್ದು ತಮ್ಮ ಜೊತೆ ಶಾಸ್ತ್ರದ ಚರ್ಚೆಗೆ ಬರಲು ಅಲ್ಲಿ ನೆರೆದ ಪಂಡಿತರಿಗೆ ಸವಾಲು ಹಾಕುತ್ತಾರೆ. ಆಗ ಶ್ರೀ ಅಪ್ಪಾವರು ರಾಮಚಾರ್ಯರಿಗೆ ತಮ್ಮ ಪೂರ್ವ ಪಕ್ಷವಾದ ಮಂಡಿಸಲು ಹೇಳುತ್ತಾರೆ.ಆ ಪಂಡಿತ ತಾನು ಮಂಡಿಸಿದ ಪೂರ್ವಪಕ್ಷದ ವಾದವನ್ನು ಕೇಳಿದ ಅಪ್ಪಾವರು ನಗುತ್ತಾ, ತಮ್ಮಲ್ಲಿ ಸೇವೆಮಾಡುತಿದ್ದ ನೀರು ತರುವವನ್ನು ಕರೆಯುತ್ತಾರೆ , ಪಂಡಿತನಿಗೆ ಸಮರ್ಥವಾಗಿ ಉತ್ತರ ಕೊಡು ಅಂತ ಆ ನೀರು ತರುವವನ ಬೆನ್ನು ತಟ್ಟಿದರು. ಶಾಸ್ತ್ರದ ಬಗ್ಗೆ ಏನು ಅರಿಯದ ಆ ವ್ಯಕ್ತಿ ಅಪ್ಪಾವರು ಬೆನ್ನು ತಟ್ಟಿದ ಮೇಲೆ ಆ ಪಂಡಿತನಿಗೆ ಸಮರ್ಥವಾಗಿ ಶ್ರೀಮನ್ ನ್ಯಾಯಸುಧಾ ಪರಿಮಳದ ಅನುವಾದ ಮಾಡುತ್ತಾನೆ. ಅಪ್ಪಾವರು ಒಳಗೆನಿಂತು ಅಶಕ್ತನಾದವನಿಂದ ಉತ್ತರ ಕೊಡಿಸುತ್ತಾರೆ.
ತಾನೇ ಎಂಬ ಅಹಂಭಾವ ಮತ್ತು ದುರಾಭಿಮಾನ ಹೊಂದಿದ ರಾಮಚಾರ್ಯರು ಶ್ರೀ ಅಪ್ಪಾವರು ಮಹಿಮೆಯನ್ನು ಕಣ್ಣಾರೆ ಕಂಡು ಅವರಲ್ಲಿ ಶರಣು ಹೋಗುತ್ತಾರೆ.
ಶಿರಹಟ್ಟಿಭೀಮಚಾರ್ಯರಿಗೆಭಾಗವತರತ್ನದಅನುಗ್ರಹ :
ಶ್ರೀ ಅಪ್ಪವರಿಗೆ ದೇಶದೆಲ್ಲೆಡೆ ಶಿಷ್ಯಸಂಪತ್ತು. ಅದರಲ್ಲಿ ವಿದ್ವಾಂಸರಾದ ಶಿರಹಟ್ಟಿ ಭೀಮಚಾರ್ಯರು ಒಬ್ಬರು. ಅಪ್ಪಾವರ ಪರಮ ಆಪ್ತರಾಗಿದರು. ಸಂಚಾರಾನ್ವಯ ಅಪ್ಪಾವರ ಅವರ ಮನೆಯಲ್ಲಿ ಉಳಿದುಕೊಂಡರು. ಆಚಾರ್ಯರ ಹೆಂಡತಿ ಸ್ವರ್ಗಸ್ಥರಾಗಿದರು ಜೊತೆಯಲ್ಲಿ ಸಂತಾನವಿರಲಿಲ್ಲ.ಅಪ್ಪಾವರ ಭೀಮಾಚಾರ್ಯರಿಗೆ ವಿಚಾರಿಸಿದಾಗ ಯಾಕೋ ಭೀಮ ತುಂಬಾ ಚಿಂತೆಯಲ್ಲಿ ಇದ್ದಿ ಅಂತ ಕೇಳಿದಾಗ ಆಚಾರ್ಯರು ” ಸ್ವಾಮಿ ನಿಮಗೇ ತಿಳಿಯದ ಸಂಗತಿ ಏನು ಇಲ್ಲ ಈ ವಯಸ್ಸಿನಲ್ಲಿ ನಾನು ಒಬ್ಬಂಟಿ ಹೆಂಡತಿ ಇಲ್ಲ ಸಂತಾನ ಭಾಗ್ಯವೂ ದೇವರು ಕರುಣಿಸಲಿಲ್ಲ ಎಂದು ಬಹು ದುಃಖದಿಂದ ಹೇಳಿಕೊಂಡರು.” ಅಪ್ಪಾವರ ಸಮಾಧಾನ ಹೇಳಿ ಚಿಂತಿಸಬೇಡ ಭೀಮ ನಿನಗೆ ಕಲ್ಯಾಣವಾಗಿ ಒಳ್ಳೆಯ ಕೀರ್ತಿಶಾಲಿ ಶಾಸ್ತ್ರಸಂಪನ್ನವಾದ ಪುತ್ರ ಜನಿಸುತ್ತಾನೆ.ಶ್ರೀ ಅಪ್ಪಾವರು ಆಶೀರ್ವಚನದಂತೆ ಭೀಮಾಚಾರ್ಯರಿಗೆ ಲಕ್ಷ್ಮೇಶ್ವರದ ಕನ್ಯೆಯ ಜೊತೆ ಮದುವೆಯಾಗಿ ಸುಪುತ್ರ ಪ್ರಾಪ್ತಿಯಾಯಿತು. ಅವರ ಸುಪುತ್ರರೆ ಶ್ರೀ ಶಿರಹಟ್ಟಿ ನಾರಾಯಣಾಚಾರ್ಯರು. ತಂದೆಯಲ್ಲಿಯೇ ಸಕಲ ಶಾಸ್ತ್ರವನ್ನು ಅಧ್ಯಯನ ಮಾಡಿ ಭಾಗವತ ಶಿರೋಮಣಿಗಳೆಂದು ಮಾನ್ಯರಾಗಿ ಜನರ ಮಾತಿನಲ್ಲಿ ಇವರು ಭಾಗವತರತ್ನ ನಾರಾಯಣಾಚಾರ್ಯರೆಂದು ಪ್ರಸಿದ್ದರಾದರು. ಶ್ರೀನಾರಾಯಣಾಚಾರ್ಯರು ಗದಗಿನಲ್ಲಿ ಶ್ರೀಅಪ್ಪಾವರು ಪ್ರತಿಷ್ಠಿತ ರಾಯರು ಬೃಂದಾವನ ಸನ್ನಿಧಾನದಲ್ಲಿ ರಾಯರ ಆರಾಧನೆ ಅತಿವಿಜೃಂಭಣೆ ಮಾಡುತಿದ್ದರು.
ಇಚ್ಛಾರೂಪಸಿದ್ಧಿ :ಒಂದು ಬಾರಿ ಶ್ರೀ ಅಪ್ಪಾವರು ಮಾನವಿಗೆ ಬಂದಿದ್ದರು. ಅಪ್ಪಾವರ ಆಗಮನದ ಸುದ್ದಿ ತಿಳಿದ ಅಲ್ಲಿಯ ಕುಲಕರ್ಣಿಯವರ ಕುಟುಂಬದವರು ಅಪ್ಪಾವರಿಗೆ ತಮ್ಮ ಮನೆಯಲ್ಲಿ ನಡೆಯುವ ಶ್ರೀಮಧ್ವನವಮಿಯ ಉತ್ಸವಕ್ಕೆ ಬರಬೇಕೆಂದು ಪ್ರಾರ್ಥನೆ ಮಾಡಿದರು. ಅಪ್ಪಾವರು ಅವರ ಆಮಂತ್ರಣವನ್ನು ಸ್ವೀಕರಿಸಿ ಮಧ್ಯಾಹ್ನ 12 ಗಂಟೆಗೆ ಬರುತ್ತೆನೆ ಎಂದು ತಿಳಿಸಿದರು. ಆದರೆ ಅಪ್ಪಾವರು ಪೂರ್ವನಿಯೋಜಿತವಾದ ಇನ್ನೊಂದು ಕಡೆಯೂ ಹೋಗಬೇಗಿತ್ತು.
ಶ್ರೀಮಧ್ವ ನವಮಿಯ ದಿನ ಕುಲಕರ್ಣಿಯವರ ಮನೆಯಲ್ಲಿ ನೆರದ ವಿಪ್ರರಿಂದ ವಾಯುಸ್ತುತಿ, ಸುಮಧ್ವವಿಜಯದ ಪಾರಾಯಣ ಪಂಡಿತರಿಂದ ಉಪನ್ಯಾಸ ಎಲ್ಲವೂ ಮುಕ್ತಾಯ ಹಂತಕ್ಕೆ ಬಂತು ಮನೆಯವರೆಲ್ಲಾ ಅಪ್ಪಾವರ ನಿರೀಕ್ಷೆಯಲ್ಲಿದ್ದರು. ಗಂಟೆ 12 ಆಯಿತು ಅಪ್ಪಾವರು ಇನ್ನೂ ಬರಲಿಲ್ಲ.
ಆದರೆ ಅಪ್ಪಾವರು ಬಂದಿದ್ದಾರೆ ಎಂಬ ಸೂಚನೆ ಅವರ ದೇವರ ಮನೆಯಿಂದ ಕಸ್ತೂರಿ ಸುಗಂಧ ಪರಿಮಳದ ಸುವಾಸನೆ. ದೇವರ ಕೋಣೆಗೆ ಮನೆ ಯಜಮಾನರು ಹೋಗಿ ನೋಡಿದಾಗ ಆಶ್ಚರ್ಯ!! ದೇವರ ಕಟ್ಟೆಯ ಮೇಲೆ ಒಂದು ಘಟಸರ್ಪ ಕಂಡಿತು. ಆ ಸರ್ಪದ ಮುಖದಲ್ಲಿ ಅಪ್ಪಾವರ ಮುಖ ದರ್ಶನವಾಯಿತು. ಇದನ್ನು ಕಂಡು ಕುಲಕರ್ಣಿ ಅವರು ಅಪ್ಪಾವರಿಗೆ ಶ್ರದ್ಧೆ- ಭಕ್ತಿಯಿಂದ ನಮಸ್ಕರಿಸಿ ಬಂದ ಜನರಿಗೆಲ್ಲ ಈ ವಿಷಯವನ್ನು ತಿಳಿಸಿ ಅಪ್ಪಾವರ ದರ್ಶನಕ್ಕೆ ಅನುವು ಮಾಡಿಕೊಟ್ಟರು ನಂತರ ಆ ಸರ್ಪವು ಅದೃಶ್ಯವಾಯಿತು.
ಕೊಪ್ಪರಕ್ಷೇತ್ರದಲ್ಲಿತೋರಿದಮಹಿಮೆ :ಕೊಪ್ಪರ ಕ್ಷೇತ್ರದಲ್ಲಿ ಅಲ್ಲಿಯ ಅರ್ಚಕರ ಮಗಳಾ ನರಸಮ್ಮನವರಿಗೆ ಸಂತಾನವಿರಲಿಲ್ಲ. ಅಪ್ಪಾವರು ಶ್ರೀಕ್ಷೇತ್ರದಲ್ಲಿಯ ನಂದಿ ಮಂಟಪದಲ್ಲಿ ತಪಸ್ಸು ಮಾಡುತ್ತಿದರು. ಅಪ್ಪಾವರ ಆ ತಪವರ್ಚಸನ್ನು ನೋಡಿ ನಿತ್ಯದಲ್ಲಿ ನರಸಿಂಹ ದೇವರ ಜೊತೆಗೆ ಅಪ್ಪಾವರನ್ನು ನಮಸ್ಕರಿಸುತ್ತಿದ್ದರು. ಅಲ್ಲಿಯ ಅರ್ಚಕರು ಅಪ್ಪಾವರ ಮಹಿಮೆಯನ್ನು ಅರಿಯದೆ ಅವರು ತಮ್ಮ ಸೊಸೆಗೆ ಯಾರೋ ಊರಿನ ಜೋಯಿಸರು ಕೊಪ್ಪರ ಕ್ಷೇತ್ರಕ್ಕೆ ಬಂದು ಸೇವೆ ಮಾಡುತ್ತಿದ್ದಾರೆ ಅವರಿಗೆ ಯಾಕೆ ನಮಸ್ಕಾರ ಮಾಡುತ್ತಿಯ ಎಂದು ಕೇಳುತ್ತಾರೆ.ಮರುದಿನದ ಪ್ರತಿದಿನದಂತೆ ದೇವರ ನಮಸ್ಕಾರ ಜೊತೆಗೆ ಅಪ್ಪಾವರ ನಮಸ್ಕಾರ ಮಾಡುತ್ತಾಳೆ. ಅಪ್ಪಾವರು ನಮಸ್ಕಾರ ಮಾಡುವ ಸಮಯದಲ್ಲಿ ನರಸಮ್ಮನವರಿಗೆ “*ನಾನು ಯಾವುದೋ ಊರಿನ ಜೋಯಿಸ ಇಲ್ಲಿ ಸೇವೆಮಾಡಲು ಬಂದಿನಿ ನನಗೆ ಯಾಕೆ ನಮಸ್ಕಾರ ಮಾಡ್ತಿಯ*” ಎಂದು ಆ ಅರ್ಚಕರು ಹೇಳಿದ ಮಾತುಗಳನ್ನೇ ಅಪ್ಪಾವರು ಹೇಳುತ್ತಾರೆ. ಅಪ್ಪಾವರ ಮಹಿಮೆಗಳನು ತಿಳಿಯದೆ ಅವಮಾನ ಮಾಡಿದಕ್ಕೆ ಅರ್ಚಕರ ಮನೆಯವರು ಅಪ್ಪಾವರನ್ನು ಕ್ಷಮೆ ಕೇಳಿ ಮಗಳಿಗೆ ಸಂತಾನದ ಅನುಗ್ರಹಕ್ಕಾಗಿ ಪ್ರಾರ್ಥನೆ ಮಾಡುತ್ತಾರೆ. ಕರುಣಾಸಮುದ್ರರಾದ ಅಪ್ಪಾವರು ಎರಡು ತುಂಬಿದ ಕಾಯಿ ತರಲು ಹೇಳುತ್ತಾರೆ.
ಆ ಸಮಯದಲ್ಲಿ ಅಪ್ಪಾವರು ತಮ್ಮ ತೊಡೆ ಬಾರಿಸಿದಾಗ *ಘಟಸರ್ಪ* ರೂಪವನ್ನು ತಾಳಿ ಮತ್ತೆ ತಮ್ಮ ನಿಜರೂಪವನ್ನು ತಾಳುತ್ತಾರೆ.ಅಭಿಮಂತ್ರಿಸಿ ಕಾಯಿಯನ್ನು ನರಸಮ್ಮನವರ ಊಡಿಯಲ್ಲಿ ಹಾಕಿದರು. ಒಂದು ಕಾಯಿ ಕೆಳಗಡೆ ಬಿಳುತ್ತದೆ. 2ನೇಯದ್ದು ಸಂತಾನವಾಗುತ್ತದೆ ಆದರೆ ಒಂದರಿಂದ ನಿಮ್ಮ ವಂಶ ಅಭಿವೃದ್ಧಿಯಾಗುತ್ತದೆ ಎಂದೇಳಿ ಅನುಗ್ರಹಿಸುತ್ತಾರೆ.
ಸ್ಮರಿಸುವ ನರನೇ ಧನ್ಯ ಸನ್ಮಾನ್ಯ || ಪ ||ಸ್ಮರಿಸುವರಿಗೆ ಸುರತರುಕಲ್ಪ ವಿಭರಾಮಪುರದಿ ಶ್ರೀಹರಿ ಧ್ಯಾನಪರ ಶ್ರೀ ಕೃಷ್ಣಾಚಾರ್ಯರ ||ಅ.ಪ ||
ಚಿರಕಾಲ ಶೇವಿಪ ಪರಮ ವಂಧ್ಯರಿಗೆಲ್ಲವರಪುತ್ರ ಸೌಖ್ಯವ ಕರುಣಿಸುವರು ಸತ್ಯಅಪರಿಮಿತ ಮಹಿಮರೆಂದರಿಯದೆ ಇವರನ್ನುಜರಿಯಲಾಕ್ಷಣದಲಿ ಅರಿತು *ಭೀಕರವಾದ**ಉರಗರೂಪವ ತೋರುತ ತ್ಯಜಿಸಿ ಮತ್ತೆ**ನಿಜರೂಪದಿಂದಿರುತ* ನೋಳ್ಪರಿಗತ್ಯಾಶ್ಚರ್ಯ ಸದ್ಗುಣಭರಿತ ಕಾರ್ಪರ ನರಹರಿಯ ಪರೋಕ್ಷದಿ ನಿರುತ ಸುಖಿಪರಂಘ್ರಿ |– ಕಾರ್ಪರ ನರಹರಿ (ಅರ್ಚಕ ಗಿರಿಯಾಚಾರ್ಯರು)
ಶ್ರೀ ಕಾರ್ಪರ ನರಹರಿ ಅಂಕಿತರಾದ ಅರ್ಚಕ ಗಿರಿಯಾಚಾರ್ಯರು ಸ್ಮರಿಸುವ ನರನೇ ಧನ್ಯ ಸನ್ಮಾನ್ಯ ಕೀರ್ತನೆಯಲ್ಲಿ ಅಪ್ಪಾವರು ಕೊಪ್ಪರದಲ್ಲಿ ತೋರಿದ ಈ ಮಹಿಮೆಗಳನ್ನು ವರ್ಣಿಸಿದ್ದಾರೆ.
ಅನೇಕಕಾರಕಾಯೈಃ ಯಃ ಸ್ವಾತ್ಮಾನಂ ಬಹುಧಾ ನೃಣಾಮ್ |ದರ್ಶಯತ್ಯೇ ಚಕಿತಾಭೂತ್ ಯತ್ರ ಕುತ್ರಾಪಿ ವರ್ತಿನಾಮ್ ||– ಶ್ರೀ ಯೋಗಿನಾರಾಯಣಾಚಾರ್ಯರು
*ಸುರಪುರದಲ್ಲಿ ತೋರಿದ ಮಹಿಮೆ*
ಶ್ರೀ ಅಪ್ಪಾವರು ಪ್ರತಿವರ್ಷವು ಸುರಪುರದಲ್ಲಿ ಅತಿವೈಭವದಿಂದ ನಡೆಯುತ್ತಿದ್ದ ನರಸಿಂಹ ಜಯಂತಿಯಲ್ಲಿ ಪಾಲ್ಗೊಳ್ಳುತ್ತಿದ್ದರು. ಒಂದು ವರ್ಷ ಕಾರಣಾಂತರಗಳಿಂದ ಅಪ್ಪಾವರು ಅಲ್ಲಿಯ ಉತ್ಸವಕ್ಕೆ ಹೋಗಲು ಆಗಲಿಲ್ಲ. ದೇವರಿಗೆ ನೈವೇದ್ಯದ ಅಡಿಗೆಳನ್ನು ಸಿದ್ದಪಡಿಸಿ ಅರ್ಚಕರು ಎಲ್ಲಾ ವ್ಯವಸ್ಥೆ ಮಾಡಿದರು. ಮಧ್ಯಾಹ್ನ 3 ಗಂಟೆ ಅಪ್ಪಾವರ ಆಗಮನದ ನಿರೀಕ್ಷೆಯಲ್ಲಿದ್ದರು ಆದರೆ ಅಪ್ಪಾವರು ಬರಲಿಲ್ಲ.ಬಂದ ಭಕ್ತರಿಗೆ ಇನ್ನೇನು ತೀರ್ಥ-ಪ್ರಸಾದದ ವ್ಯವಸ್ಥೆಯಾಗಬೇಕಿತ್ತು ಆ ಸಮಯದಲ್ಲಿ ಅಡಿಗೆ ಮನೆಯಲ್ಲಿ ನಾಯಿ ಬಂದು ನೈವೇದ್ಯ ಮಾಡಿದ ಹೋಳಿಗೆ ಬಾಯಿಯಲ್ಲಿ ತೆಗೆದುಕೊಂಡು ಹೋಯ್ತು. ಅಡೆಗೆಯವನು ಇದನ್ನು ನೋಡಿ ನಾಯಿಗೆ ಕೋಲಿನಿಂದ ಅದರ ಬೆನ್ನಿಗೇ ಹೊಡೆದು ಓಡಿಸುತ್ತಾನೆ. ನಾಯಿ ಎಂಜಲು ಮಾಡಿದ ವಿಷಯ ತಿಳಿಸಿದರೆ ಅವ್ಯವಸ್ಥೆ ಆಗುತ್ತದೆ ಎಂದು ಯಾರಿಗೂ ಹೇಳದೆ ಮುಂದಿನ ಕಾರ್ಯಕ್ರಮ ಮುಂದುವರಿಸುತ್ತಾರೆ. ಮುಂದಿನ ವರ್ಷ ಅಪ್ಪಾವರು ಬರಲೇಬೇಕು ಎಂದು ಅರ್ಚಕರು ಆಮಂತ್ರಣ ನೀಡಲು ಇಭರಾಮಪುರಕೆ ಬಂದಿರುತ್ತಾರೆ. ಆಮಂತ್ರಣ ನೀಡಿದ ಅರ್ಚರು ಅಪ್ಪಾವರು ಈ ಹಿಂದೆ ಯಾವ ಕಾರಣದಿಂದ ಬರಲು ಆಗಲಿಲ್ಲ ಎಂದು ಅಪ್ಪಾವರೊಂದಿಗೆ ವಿಚಾರಿಸುವಾಗ ಅಪ್ಪಾವರು ನಾನು ಉತ್ಸವಕ್ಕೆ ಬಂದು ಪ್ರಸಾದ ಸ್ವೀಕಾರ ಮಾಡಿದ್ದೇನೆಂದು ಹೇಳಿದಾಗ ಅರ್ಚಕರು ಆಶ್ಚರ್ಯರಾಗುತ್ತಾರೆ. ನಾನು ಶುನಕ ರೂಪದಿಂದ ಅಲ್ಲಿಗೆ ಬಂದಿದ್ದು ನಿಮ್ಮ ಅಡಿಗೆ ಮಾಡುವವ ಭೀಮಣ್ಣ ನನಗೆ ಕಟ್ಟಿಗೆಯಿಂದ ನನ್ನ ಬೆನ್ನಿಗೆ ಹೊಡೆದಿದ್ದಾನೆ. ಹೊಡೆದ ಜೋರಿಗೆ ನನ್ನ ಬೆನ್ನಿಗೆ ಬಿದ್ದ ಬಾರು ಇನ್ನು ಇದೆ ಎಂದು ತಮ್ಮ ಬೆನ್ನು ತೋರಿಸಿದರು. ತಮ್ಮ ಅಜ್ಞಾನದಿಂದ ಅಪ್ಪಾವರನ್ನು ಗುರುತಿಸಲಿಕ್ಕೆ ಆಗಲಿಲ್ಲವೆಂದು ಎಂದು ಅರ್ಚಕರು ಪ್ರಾರ್ಥಿಸುತ್ತಾರೆ. ಕರುಣಾಸಮುದ್ರರಾದ ಅಪ್ಪಾವರು ಅರ್ಚಕರ ವಿನಂಮ್ರತೆಯನು ಮೆಚ್ಚಿ ವಿಶೇಷವಾಗಿ ಅನುಗ್ರಹಿಸಿ ಮತ್ತೆ ಪ್ರತಿವರ್ಷದಂತೆ ಪುನಃ ದೇವರ ಉತ್ಸವಕ್ಕೆ ಬರುತ್ತೇನೆ ಎಂದು ಹೇಳುತ್ತಾರೆ.
ಹುಲಿಮರಡಿ :ಇಭರಾಮಪುರದ ಹತ್ತಿರ ಹುಲಿ ಮರಡಿ ಎಂಬ ಸ್ಥಳವಿದೆ. ನಿರ್ಜನವಾದ ಗುಡ್ಡಗಾಡಿನ ಪ್ರದೇಶವಾದ ಅಲ್ಲಿ ಹಿಂದೆ ಹುಲಿಯ ಕಾಟವಿದ್ದುದರಿಂದ ಹುಲಿಮರಡಿ ಎಂಬ ಹೆಸರು ಬಂದಿದೆ.
ಶ್ರೀ ಅಪ್ಪಾವರ ಕಾಲದಲ್ಲಿ ಆ ನಿರ್ಜನವಾದ ಬೆಟ್ಟದ ಪ್ರದೇಶದಲ್ಲಿ ಹುಲಿಯ ಕಾಟ ವಿಪರೀತವಾಗಿತ್ತು. ಅಲ್ಲಿ ವ್ಯಾಘ್ರವೊಂದು ಸೇರಿಕೊಂಡು ಜನ- ಜಾನುವಾರುಗಳಿಗೆ ಬಹಳ ತೊಂದರೆಯನ್ನು ಕೊಡುತಿತ್ತು ಅಲ್ಲದೆ ಜೀವಹಾನಿಗೆ ಕಾರಣವಾಗಿತ್ತು. ಹಾಗಾಗಿ ತಮ್ಮ ಜಾನುವಾರುಗಳನ್ನು ಕಳೆದುಕೊಂಡ ಗ್ರಾಮಸ್ಥರು ಆ ಸ್ಥಳದಕಡೆ ತಿರುಗಿಯೂ ನೋಡುತ್ತಿರಲಿಲ್ಲ.
ಆ ವ್ಯಾಘ್ರ ಹುಲಿಯ ಭಾದೆಯನ್ನು ಸಹಿಸಲಾರದೇ ಆ ಗ್ರಾಮದ ಜನರು ಶ್ರೀ ಅಪ್ಪಾವರ ಮೋರೆ ಹೋಗುತ್ತಾರೆ. ಗ್ರಾಮಸ್ಥರ ಈ ಸಮಸ್ಯೆಯನ್ನು ಕೇಳಿದ ಅಪ್ಪಾವರು ಭಯಭೀತರಾಗಿ ಬಂದು ನಿಂತಿದ್ದವರೇಲ್ಲರೀಗೂ ಧೈರ್ಯ ಹಾಗು ಆತ್ಮಸ್ಥೈರ್ಯವನ್ನು ತುಂಬಿ ಮಂತ್ರಾಕ್ಷತೆಯನ್ನು ಕೊಟ್ಟು, ನಾಳೆಯಿಂದ ನಿಮಗೆ ಆ ವ್ಯಾಘ್ರದಭಾದೆ ಇರುವುದಿಲ್ಲ ನೀವುಗಳು ನಿಶ್ಚಿಂತೆಯಿಂದ ನಿಮ್ಮ ಗ್ರಾಮಕ್ಕೆ ತೆರಳಿ ಎಂದು ತಿಳಿಸಿದರು. ಅಪ್ಪಾವರ ಮಾತಿಗೆ ಸಂತುಷ್ಟರಾದ ಗ್ರಾಮಸ್ಥರು ನೆಮ್ಮದಿಯಿಂದ ಊರಿನ ಕಡೆಗೆ ಪ್ರಯಾಣ ಬೆಳೆಸಿದರು.
ಮರುದಿನ ಬೆಳಗಾಗುವುದರಲ್ಲಿ ಆ ದಟ್ಟ ಅರಣ್ಯದಲ್ಲಿದ್ದ ವ್ಯಾಘ್ರ ಅಲ್ಲಿಂದ ಪಲಾಯನವಾಗಿ ಬಿಟ್ಟಿತ್ತು.ಅಂದು ರಾತ್ರಿ ಸ್ವತಃ ಶ್ರೀ ಅಪ್ಪಾವರು ತಮ್ಮ ರೂಪವನ್ನು ಬದಲಿಸಿ *ಹೆಬ್ಬುಲಿಯಾಗಿ* ಆ ಬೆಟ್ಟದಲ್ಲಿ ಹೋಗಿ ಆ ಕ್ರೂರ ವ್ಯಾಘ್ರವನ್ನು ಓಡಿಸಿರುತ್ತಾರೆ.
ಜನ್ಮಾಂಧನಿಗೆಕಣ್ಣು :ಶ್ರೀ ಅಪ್ಪಾವರ ಕಾಲದಲ್ಲಿ ಜೀವನರಾಯನೆಂಬ ಜನ್ಮಾಂಧನೋಬ್ಬ ತನಗೆ ಕಣ್ಣು ಬೇಕೆಂದು ರಾಯರ ಸೇವೆಗೆ ಬಂದಿರುತ್ತಾನೆ.ಅಗಮ್ಯ ಮಹಿಮರಾದ ಮಂತ್ರಾಲಯ ಗುರುಸರ್ವಭೌಮರ ಸ್ತೋತ್ರದಲ್ಲಿ ಹೇಳುವಂತೆ ಅಂಧೋಪಿ ದಿವ್ಯ ದೃಷ್ಟಿಸ್ಸ್ಯಾದೇಡಮೂಕೋಪಿ ವಾಕ್ಪತಿಃ ಅಂಧರಿಗೆ ದಿವ್ಯದೃಷ್ಠಿ ಮತ್ತು ಮಾತು ಬಾರದ ಮೂಕರಿಗೆ ವಾಕ್ ಶಕ್ತಿಯನ್ನು ಕೊಟ್ಟು ಗುರುರಾಜರು ಅನುಗ್ರಹಿಸುತ್ತಾರೆ.ಈ ವಾಕ್ಯದಲ್ಲಿ ವಿಶ್ವಾಸ ಇಟ್ಟು ಆ ಜನ್ಮಾಂಧನು ಪ್ರತಿನಿತ್ಯ ರಾಯರ ಪ್ರದಕ್ಷಣೆ ಸೇವೆ ಮಾಡಿ ರಾಯರಲ್ಲಿ ತನಗೆ ಕಣ್ಣು ಬೇಕು , ರಾಯರ ದರ್ಶನ ಮಾಡಬೇಕು ಎಂಬ ಬಯಕೆ.ಒಂದು ದಿವಸ ಆ ಜನ್ಮಾಂಧನು ಪ್ರದಕ್ಷಿಣೆ ಸೇವೆ ಮಾಡುವ ಸಮಯದಲ್ಲಿ ಶ್ರೀ ಅಪ್ಪಾವರು ಆ ಭಕ್ತನ ವ್ಯಾಧಿ ಅರಿತು ಅವನಿಗೆ ರಾಯರ ಬೃಂದಾವನ ಮುಂದೆ ನಿಲ್ಲಿಸುತ್ತಾರೆ. ರಾಯರ ಬೃಂದಾವನ ಮುಂದೆ ನಿಂತು ಶ್ರೀ ಅಪ್ಪಾವರು ರಾಯರಿಗೆ ಪ್ರಾರ್ಥನೆ ಮಾಡಿ ತಮ್ಮ ಎರಡು ಕೈಗಳಿಂದ ಭಕ್ತನ ಕಣ್ಣಿಗೆ ತಮ್ಮ ವರಹಸ್ತವನಿಟ್ಟು ಅನುಗ್ರಹಿಸುತ್ತಾರೆ. ಶ್ರೀ ಅಪ್ಪಾವರ ರಾಯರ ಅನುಗ್ರಹದಿಂದ ಜನ್ಮಾಂಧನಾದ ಆ ಭಕ್ತನಿಗೆ ಅನುಗ್ರಹಿಸುತ್ತಾರೆ.ಆ ಭಕ್ತನ ಸಂತೋಷಕೆ ಮಿತಿಯಿಲ್ಲ ಕಣ್ಣು ತೆಗೆದ ತತ್ ಕ್ಷಣ ಭವ್ಯಾವಾದ ರಾಯರ ಬೃಂದಾವನ. ಗೋಪಾಲ ದಾಸರಾಯರು ಹೇಳುವಂತೆ ರಾಯರ ಬೃಂದಾವನ ಬರೆ ಬೃಂದಾವನವಲ್ಲ , ಅಲ್ಲಿ ನರಹರಿ ಕೃಷ್ಣ ರಾಮ ವೇದವ್ಯಾಸರು ಸೇರಿದಂತೆ ಸಕಲ ದೇವತಾ ಪರಿವಾರವು ರಾಯರಲ್ಲಿ ಸನ್ನಿತರಾಗುದರೆ. ಮಧ್ವಾಚಾರ್ಯ,ಪದ್ಮನಾಭ ತೀರ್ಥರು , ಜಯರಾಯರು ಸೇರಿದಂತೆ ಸಕಲ ಜ್ಞಾನಿಗಳ ಸಮ್ಮುಹವೆ ರಾಯರ ವೃಂದಾವನದಲ್ಲಿ ವಿರಾಜಮಾನರಾಗಿದರೆ.
ನರಹರಿಕೃಷ್ಣರಾಮ ಸಿರಿ ವೇದವ್ಯಾಸ ಎರಡೆರಡು ನಾಲ್ಕು ಹರಿಮೂರ್ತಿಗಳುಪರಿವಾರ ಸಹಿತಾಗಿ ಸಿರಿಸಹಿತ ನಿಂದುಸುರಗುರು ಮಧ್ವಾಚಾರ್ಯರೆ ಮೊದಲಾಗಿತರುವಾಯದಲ್ಲಿನ್ನು ತಾರತಮ್ಯಾನುಸಾರಪರಿಪರಿಯತಿಗಳು ಇರುತಿಪ್ಪರು ಇಲ್ಲಿಹರುಷದಿಂದಲಿ ವೇದ ಬರೆದು ಶಾಸ್ತ್ರಗಳಿನ್ನುಪರಿಪರಿ ಪುರಾಣ ಭಾರತಾಗಮದಲ್ಲಿಸರಿಸರಿ ಬಂದಂತೆ ಸರಿಗಮವೆನುತಲಿಭರದಿಂದಲಿ ಕುಣಿದು ಭಕುತಿಯಿಂದಲಿ ಇನ್ನುಹರಿಯ ಪೂಜಿಸುತ ಇರುಳು ಹಗಲು ಬಿಡದೆಪರಿಪರಿ ವಿವರವ ಪರಿಪರಿ ಕೇಳ್ವರುಗರುಡವಾಹನ ರಂಗ ಗೋಪಾಲವಿಠಲ ತನ್ನಶರಣರ ಪಾಲಿಸುತಿರುತಿಪ್ಪನಿಲ್ಲಿ ||– ಶ್ರೀ ಗೋಪಾಲ ದಾಸರು
ಇಂತಹ ಭವ್ಯಸ್ವರೂಪವನ್ನು ಕಂಡು ಆ ಭಕ್ತನ ಕಣ್ಣಲ್ಲಿ ಆನಂದ ಭಾಷ್ಪ , ಆ ಭಕ್ತ ಮತ್ತೆ ಶ್ರೀಅಪ್ಪಾವರಲ್ಲಿ ಪ್ರಾರ್ಥನೆ ಮಾಡುತ್ತಾನೆ.ಅಪ್ಪಾವರೆ , ನಾನು ರಾಯರು ಮತ್ತೆ ನಿಮ್ಮಂತಹ ಜ್ಞಾನಿಗಳ ದರ್ಶನ ಮಾಡಿ ನನ್ನ ಜನ್ಮ ಸಾರ್ಥಕವಾಯಿತು. ನನಗೆ ಈ ಘೋರ ಕಲಿಯುಗದಲ್ಲಿ ಜ್ಞಾನಿಗಳ ದರ್ಶನ ಬಳಿಕ ಇನ್ನು ಪಾಪ ಕರ್ಮಗಳ ನೋಡಲು ಇಚ್ಚಿಸುವದಿಲ್ಲ ಇನ್ನು ನನಗೆ ಕಣ್ಣು ಬೇಡ ನಾನು ಮತ್ತೆ ಅಂಧನಾಗಲು ಇಚ್ಚೆಸುತೇನೆಯಂದು ಪ್ರಾರ್ಥನೆ ಮಾಡುತ್ತಾನೆ. ಶ್ರೀಅಪ್ಪಾವರು ಆ ಭಕ್ತನ ಪ್ರಾರ್ಥನೆಯ ಮೇರೆಗೆ ಮತ್ತೆ ಮೊದಲನೆಯ ಸ್ಥಿತಿಗೆ ಅನುಗಹಿಸುತ್ತಾರೆ.
ಜನ್ಮೋಂಧೋಪ್ಯೇಕದಾ ಕಚ್ಚಿತ್ ವರಹ ಹಸ್ತೇನ ದೃಷ್ಟಮಾನ್ |ಕಿಂಚಿತ್ ಕಾಲಂ ವಿಧಾಯಸೌ ಯಥಾಪೂರ್ವಮಕಲ್ಪಯತ್ ||
ಶ್ರೀ ಅಪ್ಪಾವರು ಶಿಷ್ಯರಾದ ಶ್ರೀಯೋಗಿ ನಾಯಣಾಚಾರ್ಯರು ರಚಿಸಿದ ಶ್ರೀ ಇಭರಾಮಪುರ ಶ್ರೀಕೃಷ್ಣಾರ್ಯ ಸ್ತೋತ್ರದಲ್ಲಿ ಜನ್ಮಾಂಧನಿಗೆ ಕಣ್ಣು ಕೊಟ್ಟ ಮಹಿಮೆಯನ್ನು ಕೊಂಡಾಡಿದಾರೆ.
ಶ್ಯಾನುಭೋಗರಮಗನಿಗೆವಿಚಿತ್ರವಾದವ್ಯಾಧಿನಿವಾರಣೆ :ಶ್ರೀ ಅಪ್ಪಾವರಿಗೆ ದೇಶದೆಲ್ಲೆಡೆ ಹಲವಾರು ಶಿಷ್ಯರು. ಎಲ್ಲಡೆ ಅವರ ಕೀರ್ತಿ ವ್ಯಾಪಿಸಿ ನಿತ್ಯದಲ್ಲಿ ಅಪ್ಪಾವರಿಗೆ ಒಂದಿಲ್ಲಾ ಒಂದೂರಿಗೆ ಪ್ರಾಣದೇವರ ಪೂಜೆಗೆ ಆಮಂತ್ರಣವಿರುತಿತ್ತು. ಹೀಗೆ ಒಂದು ದಿನ ಸಂಚಾರದಲ್ಲಿ ಇದ್ದಾಗ ಅವರ ಪೂಜೆಗೆ ಅನುಕೂಲವಾಗುವಂತಹ ಸುಂದರವಾದ ತೋಟ ಅಲ್ಲಿ ನಿತ್ಯದ ಅನುಷ್ಠಾನಕ್ಕೆ ಅನುಕೂಲವಾಗುವಂತಹ ಪ್ರಶಸ್ತವಾದ ವಾತಾವರಣವಿತ್ತು.ಆ ತೋಟದ ಮಾಲೀಕರು ಊರಿನ ಶಾನುಭೋಗರು. ಅವರ ತೋಟದಲ್ಲಿ ಪೂಜೆ ವ್ಯವಸ್ಥೆಯಾಗಬೇಕು ಎಂದು ಶಿಷ್ಯರಮೂಲಕವಾಗಿ ಶಾನುಭೋಗರಿಗೆ ಅಪ್ಪಾವರು ಹೇಳಿ ಕಳುಹಿಸಿದರು. ಅಪ್ಪಾವರ ಆಗಮನ ಮತ್ತು ಅವರ ತೋಟದಲ್ಲಿಯೇ ಪೂಜೆಯನ್ನು ಕೈಗೊಳ್ಳುತ್ತಿದ್ದಾರೆ ಎಂದು ಮನೆಯಲ್ಲಿ ಹರುಷದ ವಾತಾವರಣ. ಎಲ್ಲವೂ ಅನುಕೂಲ ಮಾಡಿಕೊಟ್ಟ ಅವರ ಕುಟುಂಬಕ್ಕೆ ಅಪ್ಪಾವರು ಮಾಡುವ ಪ್ರಾಣದೇವರ ವಿಶೇಷ ಪೂಜೆ ಮತ್ತು ವಿಶೇಷವಾಗಿ ತೀರ್ಥಪ್ರಸಾದ ವ್ಯವಸ್ಥೆ ಮಾಡಲಾಯಿತು.
ತೀರ್ಥಪ್ರಸಾದದ ನಂತರ ಶಾನುಭೋಗರ ಕುಟುಂಬದವರಿಗೆ ಅನುಗ್ರಹಿಸುತ್ತಾ ಅಪ್ಪಾವರ ಶಾನುಭೋಗರಿಗೆ ಪ್ರಾಣದೇವರ ಪ್ರಸಾದವನ್ನು ಕೊಟ್ಟು ನಿಮ್ಮ ಮಗನಿಗೆ ಈ ಪ್ರಸಾದವನ್ನು ಉಣ್ಣಿಸಿ ಎಲ್ಲವೂ ಒಳ್ಳೆಯದು ಆಗುತ್ತದೆ ಎಂದು ಅನುಗ್ರಹಿಸುತ್ತಾರೆ. ಶಾನುಭೋಗರು ತಮ್ಮ ಮಗನಿಗಿರುವ ವ್ಯಾಧಿಯ ಬಗ್ಗೆ ಅಪ್ಪಾವರಿಗೆ ಮೊದಲೇ ತಿಳಿದಿದ್ದನ್ನು ಕಂಡು ಪರಮಾಶ್ಚರ್ಯವಾಯಿತು. ಶಾನುಭೋಗರ ಕಣ್ಣಲಿ ಸಂತೋಷದಿಂದ ಕಣ್ಣೀರು ಬರುತಿತ್ತು. ಅವರ ಮಗನಿಗೆ ವಿಚಿತ್ರವಾದ ವ್ಯಾಧಿ ಏನು ತಿಂದರು ದಕ್ಕುತಿರಲಿಲ್ಲ. ಆಹಾರ ತೆಗೆದುಕೊಂಡರು ವಾಂತಿಯಾಗುತ್ತಿತು.ಯಾವ ವೈದ್ಯರಲ್ಲಿಯೂ ಪರಿಹಾರ ಕಾಣದೆ ಸಾಯುವ ಸ್ಥಿತಿಯಲ್ಲಿ ಮಗನ ರಕ್ಷಣೆಗೆ ಅಪ್ಪಾವರು ಬಂದಿದ್ದಾರೆಯೆಂದು ತಿಳಿದು ಅವರ ಪಾದವನ್ನು ಭಕ್ತಿಯಿಂದ ನಮಸ್ಕರಿಸುತ್ತಾರೆ.
ಅಪ್ಪಾವರು ಅಲ್ಲಿ ಶಾನುಭೋಗರು ಅಳುತ್ತಾ ಸ್ವಾಮಿ ನನ್ನ ಮಗ ಏನು ತಿನ್ನುವ ಪರಿಸ್ಥಿತಿಯಲ್ಲಿ ಇಲ್ಲ ಪ್ರಸಾದ ಹೇಗೆ ಸ್ವೀಕರಿಸಿಸುತ್ತಾನೆ ಎಂದು ವಿನಮ್ರವಾಗಿ ಹೇಳಿದಾಗ ಅಪ್ಪಾವರು ಮುಖ್ಯಪ್ರಾಣ ಅನುಗ್ರಹ ಮಾಡುತ್ತಾನೆಯೆಂದು ಹೇಳಿ ಮಂತ್ರಾಕ್ಷತೆ ಕೊಟ್ಟು ಅನುಗ್ರಹಿಸುತ್ತಾರೆ.ವರ್ಷಗಳಿಂದ ಆಹಾರವನ್ನೇ ತಿನ್ನದ ಶಾನುಭೋಗರ ಮಗ ಅಂದು ಪ್ರಸಾದವನ್ನು ಸಾಮಾನ್ಯರು ಹೇಗೆ ಸ್ವೀಕರಿಸುತ್ತಾರೋ ಹಾಗೆ ಸ್ವೀಕಾರ ಮಾಡುತ್ತಾರೆ.
ಸುಮಾರು ವರ್ಷಗಳ ನಂತರ ಅದೇ ಊರಿಗೆ ಮತ್ತೆ ಅಪ್ಪಾವರು ಬಂದಾಗ ಶಾನುಭೋಗರು ಸ್ವರ್ಗಸ್ಥರಾಗಿರುತ್ತಾರೆ. ಶಾನುಭೋಗರು ಮಗ ತಂದೆಯ ಎಲ್ಲಾ ವ್ಯವಹಾರಗಳನ್ನು ನೋಡಿಕೊಂಡು ಹೋಗುತ್ತಿದ್ದ. ಅಪ್ಪಾವರ ಆಗಮನದ ವಿಷಯ ಕೇಳಿ ಅವರನ್ನು ಮನೆಗೆ ಗೌರವದಿಂದ ಸತ್ಕಾರ ಮಾಡಿ ನಂತರದಲಿ ಅಪ್ಪಾವರು ಅವನಿಗೆ ಕೀರ್ತಿವಂತನಾಗು ಅಂತ ಆಶೀರ್ವಾದ ಮಾಡುತ್ತಾರೆ.
ಯತ್ ಸ್ಪೃಷ್ಟಧೂಪಧೂಮಸ್ಯ ಸೇವನಾದ್ ರೋಗ ಜಾತಯಃ |ತತ್ಕ್ಷಣಾದೇವ ನಶ್ಯಂತಿ ಸ ಕೃಷ್ಣೋ ಮಾಂ ಸಾದವರು ||– ಶ್ರೀ ಮಹಿಷಿ ಚಕ್ರಪಾಣಿ
ಕುಷ್ಠದಿ ಶ್ರೇಷ್ಠ ರೋಗಾ ಯೇ ಗಂಧಕಾಷ್ಠಶ್ಚ ಭಸ್ಮನಾ |ಮೃತಿಕಾಧೂಪಧೂಮಾದಿ ಸಾಧನೈರ್ತಾಶಿತಾಃ ಸತಾಮ್ ||– ಶ್ರೀ ಯೋಗಿ ನಾರಾಯಣಾಚಾರ್ಯ
ಶ್ರೀ ಮಹಿಷಿ ಚಕ್ರಪಾಣಿ ಹಾಗೂ ಶ್ರೀ ಯೋಗಿ ನಾರಾಯಣಾಚಾರ್ಯರು ಅಪ್ಪಾವರ ಮಹಿಮೆ ಸಾರುವ ಸ್ತೋತ್ರದಲ್ಲಿ ಹೇಳುವಂತೆ ಶ್ರೀಅಪ್ಪಾವರ ಸಂದರ್ಶನ ಅವರು ಪೂಜೆ ಮಾಡುವ ಪಂಚಮುಖಿ ಮುಖ್ಯಪ್ರಾಣದೇವರ ದರ್ಶನ , ಅದಕ್ಕೆ ಅರ್ಪಿಸುತ್ತಿದ ಧೂಪ ಧೂಮಾದಿಗಳು , ಪ್ರಸಾದ ಸ್ವೀಕಾರದಿಂದ ಆ ತತ್ಕ್ಷಣದಲ್ಲಿಯೇ ಕುಷ್ಠಾದಿ ಸಕಲ ವ್ಯಾಧಿಗಳು ನಿವಾರಣೆಯಾಗುತಿತ್ತು.
ಕಿವಿಓಲೆಸಾಲಿಗ್ರಾಮವಾಗಿಪರಿವರ್ತನೆಯಾದದು :ಶ್ರೀ ಅಪ್ಪಾವರ ಕರುಣಾಸುಪಾತ್ರಾರಾದ ಶ್ರೀ ಇಂದಿರೇಶ ದಾಸರು ಶ್ರೀ ಅಪ್ಪಾವರ ಮಹಿಮೆಗಳನ್ನು ಸಾರುವ ಗುರುಕಥಾಮೃತಸಾರವೆಂಬ ಸುಂದರವಾದ ಷಟ್ಪದಿಯಲ್ಲಿ ಅಪ್ಪಾವರ ಮಹಿಮೆಗಳನ್ನು ಸಂಗ್ರಹಿಸಿದ್ದಾರೆ. ಗುರುಕಥಾಮೃತಸಾರ ಮಹಿಮಾ ಸಂಧಿ , ಶೃಂಗಾರ-ವರ್ಣನಾ ಸಂಧಿ, ಭಕ್ತಿಸಂಧಿ ಎಂಬುದಾಗಿ ಮೂರು ವಿಭಾಗದಲ್ಲಿ ವಿಂಗಡಿಸಿ ಅಪ್ಪಾವರ ಚರಿತ್ರೆಯನ್ನು ಹೇಳಿದ್ದಾರೆ.
ಕಲಿಮಲಾಪಹರೆನಿಪ ಗುರುಗಳಪೊಳೆವ ಗಾತ್ರದ ಮುರುವು ಪೂಜಿಸೆಕೆಲವು ದಿನ ಪೋದ ಬಲಿಕದು ಥಳಥಳಿಸುತಲೀ |ಚೆಲುವ ಶಾಲಿಗ್ರಾಮವೆನಿಸಿತುತಿಳಿಯದವರ ಉತ್ಕೃಷ್ಟ ಮಹಿಮೆಯಜಲರುಹೇಕ್ಷಣ ತಾನೆ ಬಲ್ಲನು ಇಳೆಯೊಳಚ್ಚರಿಯ ||
ಗುರುಕಥಾಮೃತಸಾರ, ಮಹಿಮಾಸಂಧಿ
ಒಂದು ಬಾರಿ ಶ್ರೀ ಅಪ್ಪಾವರ ಸಂದರ್ಶನ ಬಂದ ಭಕ್ತರೊಬ್ಬರು ಅವರಲ್ಲಿ ಶರಣಾಗಿ ತಮ್ಮ ತಾಪತ್ರಯವನ್ನು ಹೇಳಿಕೊಳುತ್ತಾರೆ. ಬಂದ ಆ ಭಕ್ತನಿಗೆ ಅಭಯ ನೀಡಿ ನಿಮಗೆ ಮುಂದೆ ಶ್ರೀ ಮುಖ್ಯಪ್ರಾಣದೇವರ ವಿಶೇಷ ಅನುಗ್ರಹವಾಗುತ್ತದೆ ಎಂದು ಮಂತ್ರಾಕ್ಷತೆಯನ್ನು ಕೂಟ್ಟು ಅನುಗ್ರಹಿಸುತ್ತಾರೆ. ಆ ವ್ಯಕ್ತಿ ಹೊರಡುವಾಗ ಅವನ ಅಚಲವಾದ ಭಕ್ತಿ , ಶ್ರದ್ಧೆಗೆ ಮೆಚ್ಚಿ ಅಪ್ಪಾವರು ತಾವು ಧರಿಸಿದ ವಜ್ರದ ಓಲೆಯನ್ನು ಕೊಡುತ್ತಾರೆ. ಕರುಣಾ ಸಮುದ್ರರಾದ ಅಪ್ಪಾವರ ಅನುಗ್ರಹದಿಂದ ಬಂದ ಆ ಓಲೆಯನ್ನು ಆ ವ್ಯಕ್ತಿ ಧರಿಸದೆ ಅದನ್ನು ನಿತ್ಯದಲ್ಲಿ ಪೂಜಿಸುತ್ತಾನೆ. ಕೆಲವು ದಿನಗಳ ನಂತರ ಆ ಓಲೆಯು ಸಾಲಿಗ್ರಾಮವಾಗಿ ಪರಿವರ್ತನೆಯಾಗುತ್ತದೆ. ಈ ಮಹಿಮೆಯನ್ನು ಇಂದಿರೇಶ ದಾಸರಾಯರು ಗುರುಕಥಾಮೃತಸಾರ , ಮಹಿಮಾಸಂಧಿಯಲ್ಲಿ ವರ್ಣಿಸಿದ್ದಾರೆ.
ಹೀಗೆ ಅಪರೋಕ್ಷ ಜ್ಞಾನಿಗಳು ಧರಿಸುವ , ಬಳಸುವ ಪ್ರತಿಯೊಂದು ವಸ್ತುಗಳಲ್ಲಿ ವಿಶೇಷವಾಗಿ ಭಗವಂತ ಸನ್ನಿಧಾನವಿರುತ್ತದೆ ಎಂದು ಈ ಮಹಿಮೆಯಲ್ಲಿ ನಾವು ನೋಡಬಹುದು.
ಶ್ರೀ ಇಭರಾಮಪುರೋಪಾಖ್ಯಾ ಕೃಷ್ಣಾರ್ಯಮಹಿಮಾಂ ಭುದೇಃ |ಏಕಸ್ಯಾಲ್ಪ ತರಂಗಸ್ಯ ವರ್ಣನಂ ಸಮುದೀರಿತಮ್ ||
ಅಪರೋಕ್ಷ ಜ್ಞಾನಿಗಳದ ಶ್ರೀ ಮದ್ ಅಪ್ಪಾವರ ಮಹಿಮೆಯು ಅಪಾರ. ಅವರ ಮಹಿಮೆಗಳು ನಮ್ಮ ಊಹೆಗೂ ಮೀರಿದ್ದು , ಅವರ ಸ್ಮರಣೆಯಿಂದ ಸಕಲ ದುರಿತಗಳು ಪರಿಹಾರವಾಗಿ ನಮಗೆ ಸುಜ್ಞಾನದ ಮಾರ್ಗ ದೊರೆಯುತ್ತದೆ.
ಅವರು ತೋರಿಸಿದ ಮಹಿಮೆಗಳು ಸಮುದ್ರದ ಆಗಾದ ಅಲೆಗಳಲ್ಲಿ ಒಂದು ಚಿಕ್ಕದಾದ ಅಲೆಯಂತೆ ಯಥಾವತ್ತಾಗಿ ಅವರ ಅನುಗ್ರಹದಿಂದ ಹೇಳುತ್ತಿದ್ದೇನೆ ಎಂದು ಶ್ರೀ ಯೋಗಿ ನಾರಾಯಣಾಚಾರ್ಯರು ಅಪ್ಪಾವರ ಮಹಿಮಾ ಸ್ತೋತ್ರದಲ್ಲಿ ಕೊಂಡಾಡಿದ್ದಾರೆ.
*ಮಂತ್ರಾಕ್ಷತೆಯು ಪ್ರತಿಮೆಯಾದದು*
ಮಂತ್ರಾಕ್ಷತಸಮಾಯುಕ್ತೇ ಸಂಪುಟೇ ಯತ್ಕರಾರ್ಚಿತೆ |ಪ್ರತಿಮಾ ಭೂತ್ಸಾರ್ಚಕಾನಾಂ ಕ್ವಚಿತ್ ಕಾಲಾಂತರೇಣ ವೈ ||
ಶ್ರೀ ಅಪ್ಪಾವರ ಪ್ರಮುಖ ಶಿಷ್ಯರಲ್ಲಿ ಒಬ್ಬರಾದ ಅಪರೋಕ್ಷ ಜ್ಞಾನಿಗಳಾದ ತಮ್ಮ ಯೋಗ ಶಕ್ತಿಯಿಂದ ಗದುಗಿನ ವೀರನಾರಾಯಣನನ್ನು ಸಾಕ್ಷಾತ್ಕಾರ ಮಾಡಿಕೊಂಡಂತಹ ಮತ್ತು ಮಂತ್ರಾಲಯ ಪ್ರಭುಗಳ ಏಕಾಂತ ಭಕ್ತ ರಾದ ಶ್ರೀ ಯೋಗಿ ನಾರಾಯಣಾಚಾರ್ಯರು ಶ್ರೀ ಅಪ್ಪಾವರ ಮಹಿಮೆ ಹೇಳುವ ಮಹಿಮಾ ಸ್ತೋತ್ರವಿದು.
ಅಪ್ಪಾವರು ಮಂತ್ರಾಕ್ಷತೆ ಕೊಟ್ಟರೆ ಆ ಮಂತ್ರಾಕ್ಷತೆಯು ಪ್ರತಿಮೆಯಾಗುತ್ತಾ ಇತ್ತು ಅಂತ ಶ್ರೀ ಯೋಗಿ ನಾರಾಯಣ ಆಚಾರ್ಯರು ವರ್ಣನೆ ಮಾಡಿದಾರೆ.
ಶ್ರೀ ಅಪ್ಪಾವರು ತಾವು ಕೊಟ್ಟ ಮಂತ್ರಾಕ್ಷತೆಯು ಪ್ರತಿಮೆಯಾಗಿ ಮುಜಾಮುದಾರರ ಮನೆತನಕೆ ಅನುಗ್ರಹ ಮಾಡಿದರು.
ಒಮ್ಮೆ ಶ್ರೀಅಪ್ಪಾವರು ಸಂಚಾರತ್ವೇನ ತಮ್ಮ ಭಕ್ತರಾದ ಮುಜಾಮುದಾರರ ಮನೆಗೆ ಬರುತ್ತಾರೆ. ಅವಾಗ ಮುಜಾಮುದಾರರು ಅಪ್ಪಾವರ ಬಳಿ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ ಸ್ವಾಮಿ ತಾವು ಎಲ್ಲರಿಗು ಅನುಗ್ರಹ ಮಾಡಿದ್ದೀರಿ ,ಎಲ್ಲರಿಗು ಅವರು ಕೇಳಿದ್ದು ಕೊಟ್ಟಿದ್ದೀರಿ,ತಮ್ಮ ಪಾದುಕೆಗಳು, ಕೋಲು, ಹೀಗೆ ನಮಗು ಸಹ ಅನುಗ್ರಹ ಮಾಡಿ ಅಂತ ಬಹಳ ಕೇಳಿಕೊಂಡಾಗ ಅವಾಗ್ಗೆ ಅಪ್ಪಾವರು ಮಂತ್ರಾಕ್ಷತೆ ಕೋಟು ಹೇಳುತ್ತಾರೆ , ನಾನೇ ನಿಮ್ಮ ಮನೆಯಲ್ಲಿ ಇದ್ದೀನಿ ಅಂತಾ ಮಾರ್ಮಿಕವಾಗಿ ಹೇಳಿ ಮುಂದೆ ಪಯಣವನ್ನು ಬೆಳೆಸುತ್ತಾರೆ.
ಅಪ್ಪಾವರ ಕೊಟ್ಟ ಮಂತ್ರಾಕ್ಷತೆಯನ್ನು ಮುಜಾಮುದಾರರು ದೊಡ್ಡವರು ಮಾಡಿದ ಅನುಗ್ರಹ , ಅಂತ ಭಕ್ತಿ ಇಂದ ಅದನ್ನುಸಂಪುಷ್ಟದಲಿ ಇಡುತ್ತಾರೆ. ಮುಜಾಮುದಾರರದ್ದು ಒಂದು ಪದ್ದತಿ. ಸ್ನಾನ ವಾದನಂತರ ದೇವರ ಮನೆ,ಕಟ್ಟಿ ಸ್ವಚ್ಛತೆ ಮಾಡಿ ಅಲ್ಲಿ ಇಟ್ಟಿರುವ ಸಂಪುಷ್ಟ ತೆಗೆದುಕೊಂಡು ತುಳಸಿ ತರುವದು ನಿತ್ಯ ಪದ್ಧತಿ.ಆದಿನ ಸಂಪುಷ್ಟ ಬಹು ಭಾರವಾಗಿ ತೋರಿತು ಯಾಕೆ ಇಷ್ಟು ಭಾರವಾಗಿದೆ ,ಅದರಲ್ಲಿ ಏನು ಇಟ್ಟಿಲ್ಲ !!!
ಅಂತ ತೆಗೆದು ನೋಡಲಾಗಿಅಪ್ಪಾವರ ಬೆಳ್ಳಿಯ ಮೂರ್ತೀ ಸುಮಾರು 3inch ಅಳತೆಯ ಪ್ರತಿಮೆ ಕಾಣುತ್ತದೆ. ತಕ್ಷಣ, ಮುಜಾಮುದಾರರಿಗೆಅಪ್ಪಾವರು ತಮ್ಮ ಮೇಲೆ ಮಾಡಿದ ಅನುಗ್ರಹ ನೆನೆದು ಆನಂದಭರಿತರಾಗುತ್ತಾರೆ.
ಅಪ್ಪಾವರು ತಾವು ಕೊಟ್ಟ ಮಂತ್ರಾಕ್ಷತೆಯಿಂದ ಆದ ಪ್ರತಿಮೆಯುಮುಜಾಮುದಾರರ ಮನೆಯಲ್ಲಿ ಈಗಲೂ ಇದೆ. ಕಿತ್ತೂರಿನಲ್ಲಿ ಅವರ ವಂಶಸ್ಥರ ಮನೆಯಲ್ಲಿ ಇದೆ.ಶ್ರೀ ಇಭರಾಮಪುರೋಪಾಖ್ಯಾ ಕೃಷ್ಣಾರ್ಯ ಮಹಿಮಾಂ ಭುದೇಃ |ಏಕಸ್ಯಾಲ್ಪ ತರಂಗಸ್ಯ ವರ್ಣನಂ ಸಮುದೀರಿತಮ್||
ಶ್ರೀ ಮದ್ ಇಭರಾಮಪುರಾಧೀಶರಾದ ಅಪ್ಪಾವರ ಮಹಿಮಾ ಸಮುದ್ರದ ಅಗಾದ ಅಲೆಗಳಲ್ಲಿ ಒಂದು ಚಿಕ್ಕದಾದ ಅಲೆಯಂತೆ ಯಥಾವತ್ತಾಗಿ ಅವರ ಅನುಗ್ರಹದಿಂದ ಹೇಳುತ್ತಿದ್ದೇನೆ.
ಸುಜ್ಞಾನ ಬೆಳಕಿನಕಣ್ಮರೆ :ಶ್ರೀ ಅಪ್ಪಾವರು ಶ್ರೀ ಪಂಚಮುಖಿ ಪ್ರಾಣದೇವರನ್ನು ಪ್ರತಿನಿತ್ಯ ಪೂಜಿಸುತ್ತಾ; ಪಂಚಮುಖನ ಪಂಚ ರೂಪಗಳನ್ನು ತಮ್ಮ ಮನೋ ಪಂಕಜದಲ್ಲಿ ಸದಾ ಧ್ಯಾನಿಸುತ್ತಾ ಅಪೂರ್ವವಾದ ಆನಂದವನ್ನು ಸೂರೆಗೊಂಡ ಶ್ರೀ ಅಪ್ಪಾವರು ತಮ್ಮ ಕೊನೆಯ ಕಾಲ ಸ್ವಗ್ರಾಮವಾದ ಇಭರಾಮಪುರದಲ್ಲಿಯೇ ನೆಲಸಿದರು.
ಅಗಮ್ಯ ಮಹಿಮನಾದ ವಾಯುವಾಹನ ತಮ್ಮ ಮೂಲಕ ಪ್ರಕಟಿಸಿದ ವಿವಿಧ ಮಹಿಮೆಗಳನ್ನು ಮೆಲಕು ಹಾಕಿದರು. ತಮ್ಮ ಮೇಲೆ ಶ್ರೀ ಪಂಚಮುಖಿ ಪ್ರಾಣದೇವರು ಸುರಿಸಿದ ಕಾರುಣ್ಯ ವೃಷ್ಟಿಯನ್ನು ಸ್ಮರಿಸಿ ಅವರ ಕಣ್ಣಲೆಗಳು ತೇಲಿ ಬಂದವು. ತಮ್ಮ ಜೀವನದಲ್ಲಿ ನಡೆದ ಸಕಲ ಕ್ರಿಯೆಗಳನ್ನೂ ಶ್ರೀ ಭಾರತೀ ರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ನೃಸಿಂಹದೇವರಿಗೆ ಪಾದಾರವಿಂದಗಳಲ್ಲಿ ಸಲ್ಲಿಸಿ ” ಶ್ರಾವಣ ಶುದ್ಧ ತೃತೀಯಾ 1869 ಶ್ರೀ ಕೃಷ್ಣ ಪಾದಾರವಿಂದವನ್ನು ಸೇರಿದರು!