ಕನ್ನಡ ರಾಜ್ಯೋತ್ಸವದ ಈ ಶುಭಸಂದರ್ಭದಲ್ಲಿ ನಾಡಿನ ಜನತೆಗೆ ತಾಯಿ ಭುವನೇಶ್ವರಿದೇವಿಯ ದೇಗುಲದ ಪರಿಚಯ ಇಲ್ಲಿದೆ.
* ಶ್ರೀನಿವಾಸ ಮೂರ್ತಿ ಎನ್ ಎಸ್
ರಾಜ್ಯದ ಉದ್ದಕ್ಕೂ ಹಲವು ದೇಗುಲಗಳನ್ನು ಕಾಣಬಹುದು. ಗಣೇಶ, ಶಿವ, ವಿಷ್ಣು, ಆಂಜನೇಯ, ದುರ್ಗಾದೇವಿ, ಸರಸ್ವತಿ ದೇವಿ ದೇವಸ್ಥಾನಗಳು ಇವೆ. ಆದರೆ ಅಪರೂಪ ಎಂಬ0ತೆ ಕನ್ನಡ ನಾಡ ದೇವತೆ ತಾಯಿ ಭುವನೇಶ್ವರಿ ದೇವಿಯನ್ನು ಪೂಜಿಸುವ ದೇಗುಲ ಕೂಡಾ ನಮ್ಮ ನಾಡಿನ ಪರಂಪರೆಗೆ ಹೆಮ್ಮೆ ತಂದಿದೆ. ಇತಿಹಾಸ ಪುಟದಲ್ಲಿ ನಾಡಿನ ಆರಾಧ್ಯದೇವತೆ ಭುವನೇಶ್ವರಿ ದೇವಾಲಯಗಳು ಅಪರೂಪ. ಇಂತಹ ದೇವಾಲಯಗಳಲ್ಲಿ ಉತ್ತರಕನ್ನಡದ ಸಿದ್ದಾಪುರದ ಭುವನಗಿರಿ ಮತ್ತು ಹಂಪೆಯ ವಿರೂಪಾಕ್ಷ ದೇವಾಲಯ ಪ್ರಮುಖವಾದುದು.
ಭುವನಗಿರಿಯ ಭುವನೇಶ್ವರಿ ದೇವಾಲಯ :
ಇತಿಹಾಸ ಪುಟದಲ್ಲಿ ಇದು ವಿಜಯನಗರ ಸಾಮಂತರಾಗಿದ್ದ ಬೀಳಗಿ ಅರಸರ ಕಾಲದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿತ್ತು. ಅವರ ಕಾಲದಲ್ಲಿ ಇಲ್ಲಿ ನಿರ್ಮಾಣಗೊಂಡ ಕಲ್ಯಾಣಿ ಹಾಗು ದೇವಾಲಯ ನೋಡಬಹುದು. ಬೀಳಗಿ ಅರಸರು ಇಲ್ಲಿನ ಬೀಳಗಿಯಿಂದ ಗಂಗಾವಳಿಯವರೆಗೆ ಅರಸರಾಗಿದ್ದರು. ಇನ್ನು ಮೂಲತಹ ಕದಂಬರ ದೇವಾಲಯವಾಗಿದ್ದ ಭುವನಗಿರಿಯ ದೇವಾಲಯವದಲ್ಲಿ ಭುವನೇಶ್ವರಿಯ ಸ್ಥಾಪನೆ ಮಾಡಿದರು ಎನ್ನಲಾಗಿದೆ.
ಮೂಲತಹ 1692 ರಲ್ಲಿ ಬೀಳಗಿಯ ಅರಸನಾದ ಬಸವೇಂದ್ರ ನಿರ್ಮಿಸಿದ ಈ ದೇವಾಲಯದ ಗರ್ಭಗುಡಿ, ನವರಂಗದ ಭಾಗಗಳ ಹಾಗೇ ಇದ್ದು ಉಳಿದ ಭಾಗಗಳು ನವೀಕರಣಗೊಂಡಿದೆ. ದೇವಾಲಯದ ಪ್ರವೇಶದ್ವಾರ ಮತ್ತು ಕಲ್ಯಾಣ ಮಂಟಪಗಳು ಅಧುನಿಕ ಸೇರ್ಪಡೆ. ಗರ್ಭಗುಡಿಯಲ್ಲ ಸುಂದರವಾದ ಭುವನೇಶ್ವರಿಯ ಶಿಲ್ಪವಿದೆ. ಇಲ್ಲಿನ ಬಲಭಾಗದ್ಲ ಪುರಾತನ ಶಿವಲಿಂಗ ಹಾಗು ನಂತರ ಕಾಲದ ಕೇಶವನ ಶಿಲ್ಪವಿದೆ. ದೇವಾಲಯದ ನವರಂಗದಲ್ಲಿ ಇರುವ ಕಂಭಗಳಲ್ಲಿನ ಉಬ್ಬು ಶಿಲ್ಪಗಳ ಕೆತ್ತನೆ ಗಮನ ಸೆಳೆಯುತ್ತದೆ. ದೇವಾಲಯಕ್ಕೆ ಶೈವ ದ್ವಾರಪಾಲಕರಿದ್ದು ಹೊರಭಿತ್ತಿಯಲ್ಲಿನ ಕೆತ್ತನೆಗಳು ಗಮನ ಸೆಳೆಯುತ್ತದೆ.
ತಲುಪುವ ಬಗ್ಗೆ: ಸಿದ್ದಾಪುರ – ಶಿರಸಿ ದಾರಿಯಲ್ಲಿ ಭುವನಗಿರಿ ಇದ್ದು ಇಲ್ಲಿನ ಬೆಟ್ಟದ ಮೇಲೆ ಈ ದೇವಾಲಯವಿದೆ.
ಹಂಪೆಯ ಭುವನೇಶ್ವರಿ ದೇವಾಲಯ :
ವಿಜಯನಗರ ಅರಸರ ಕಾಲದಲ್ಲಿ ಹಂಪೆಯ ವಿರೂಪಾಕ್ಷನ ಸನ್ನಿಧಿಯಲ್ಲಿ ಭುವನೇಶ್ವರಿಯ ಸುಂದರವಾದ ಮೂರ್ತಿಯನ್ನು ನೋಡಬಹುದು. ಪುರಾತನವಾದ ಈ ದೇವಾಲಯ ವಿಜಯನಗರ ಕಾಲದಲ್ಲಿ ನವೀಕರಣಗೊಂಡಿದೆ.