- ಹೇಮಶ್ರೀಧರ್, ಪ್ರಕಾಶನಗರ ಬೆಂಗಳೂರು
ಅಜ್ಞಾನ ತಿಮಿರ ಛ್ಘೇದಂ ಬುದ್ಧಿ ಸಂಪತ್ಪ್ರದಾಯಕಂ ವಿಜ್ಞಾನ ವಿಮಲಂ ಶಾಂತಂ ವಿಜಯಾಖ್ಯ ಗುರುಂ ಭಜೇ. ಅರ್ಥಗಳಲ್ಲಿ ಪುರುಷಾರ್ಥ ಚತುಷ್ಟಯಗಳಂತೆ ಕರ್ನಾಟಕದಲ್ಲಿ ಹರಿದಾಸ ಚತುಷ್ಟಯರೆಂದರೆ ಅತ್ಯಂತ ಪ್ರಸಿದ್ಧರಾದವರು ಪುರಂದರದಾಸರು ವಿಜಯದಾಸರು ಗೋಪಾಲದಾಸರು ಮತ್ತು ಜಗನ್ನಾಥದಾಸರು.ಈ ನಾಲ್ವರ ಹಿಂದಾಗಲಿ ಮುಂದಾಗಲಿ ನೂರಾರು ಮಂದಿ ಪ್ರಖ್ಯಾತ ಹರಿದಾಸರುಗಳು ಅವತರಿಸಿದರು ಅವರಿಗೆ ಈ ನಾಲ್ವರ ಕೀರ್ತಿ ದೊರೆತಿಲ್ಲ. ಈ ನಾಲ್ವರು ದಾಸರ ನುಡಿಗಳು ಹಾಡುಗಳು ಸುಳಾದಿಗಳು ವ್ಯಾಸಸಾಹಿತ್ಯದಂತೆ ಮಾನ್ಯವಾಗಿದೆ. ಭಾಗವತದ ಧರ್ಮೋಪದೇಶಕ್ಕೆ ವ್ಯವಸ್ಥಿತವಾದ ಮಾರ್ಗವನ್ನೂ ತೋರಿಸಿಕೊಟ್ಟವರು ಪುರಂದರದಾಸರು. ಕೀರ್ತನೆ ಮಾಡುವವರಿಗೆ ಹಾದಿಯನ್ನು ಹಾಕಿಕೊಟ್ಟವರು ಪುರಂದರದಾಸರು. ಮನುಷ್ಯ ಮಾತ್ರದಿಂದ ಸಾಧ್ಯವಾಗದ ಅನೇಕ ಮಹತ್ಕಾರ್ಯಗಳನ್ನು ಮಾಡುವುದರಿಂದ ದಾಸರನ್ನು ಮನುಷ್ಯ ದೇಹದಿಂದ ಬಂದ ದೇವತೆಗಳೆಂದು ತಿಳಿಯಬೇಕು ಎಂದು ಪುರಂದರದಾಸರ ಸಾಕ್ಷಾತ್ ಶಿಷ್ಯರಾದ ವಿಜಯದಾಸರು ಗುರುಗಳ ಬಗ್ಗೆ ತಿಳಿಸಿದ್ದಾರೆ. ಪ್ರಸ್ತುತ ಕಾರ್ತಿಕ ಶುದ್ಧ ದಶಮಿ ಮಹಾನುಭಾವರಾದ ವಿಜಯ ಪ್ರಭುಗಳ ಆರಾಧನೆ. ತನ್ನಿಮಿತ್ತ ಪರಮಾತ್ಮನ ಪ್ರೇರಣೆಯಿಂದ ವಿಜಯರಾಯರ ಅಂತರ್ಯಾಮಿ ವಿಜಯವಿಠಲನ ಅನುಗ್ರಹದಿಂದ ಈ ಪುಟ್ಟ ಲೇಖನವನ್ನು ಬರೆಯುತ್ತಿದ್ದೇನೆ.
ಜೀವನ ಚರಿತ್ರೆ
ತುಂಗಭದ್ರ ತೀರದ ಚಿಕಲಪರವಿ ಅವರ ಜನ್ಮಸ್ಥಳ ಇದು ಶ್ರೀಪಾದರಾಜರಿಂದ ಸ್ಥಾಪಿತವಾದ ನರಸಿಂಹ ಕ್ಷೇತ್ರವೆನಿಸಿದೆ . ಈ ಅಶ್ವತ್ಥ ನರಸಿಂಹನ ದಯದಿಂದ ಶ್ರೀನಿವಾಸಪ್ಪ-ಕೂಸಮ್ಮನಿಗೆ ಜನಿಸಿದ ಇವರಿಗೆ ದಾಸಪ್ಪ ಎಂದು ನಾಮಕರಣ ಮಾಡಲಾಯಿತು. ದಾಸಪ್ಪನಿಗೆ ಕಡುಬಡತನದಿಂದ, ಹಳ್ಳಿಯ ವಾಸದಿಂದ ಹೆಚ್ಚಿನ ವಿದ್ಯಾಭ್ಯಾಸ ಆಗಲಿಲ್ಲ ಸಾಮಾನ್ಯ ಬಡ ಕುಟುಂಬದಲ್ಲಿ ಜನಿಸಿ ಸಂಕಷ್ಟ ಅವಮಾನಗಳ ಜೊತೆಗೆ ಬೆಳೆದವರು ದಾಸಪ್ಪನವರು. ಆ ಕಾಲದಲ್ಲಿ ಆದವಾನಿ ರಾಘವೇಂದ್ರರಾಯ ಎಂಬವರ ಮಗಳ ಮದುವೆಯಲ್ಲಿ ಸಂಜೆಯತನಕ ಉಪವಾಸವಿದ್ದರೂ ಸ್ವಲ್ಪ ಗಂಜಿ ಕೂಡ ಕೊಡದೆ ಕೂಸಿಮಗ ದಾಸ ಎಂದು ಅವಮಾನ ಮಾಡಿದರು. ಈ ಅವಮಾನದಿಂದ ಮನನೊಂದು ದುಃಖಿಸುತ್ತಾ ಕಾಲುನಡಿಗೆಯಲ್ಲಿ ಛಾಗಿಗೆ ಬಂದರು . ಛಾಗಿ ಕೇಶವರಾಯರು ಅವರಿಗೆ ಹೊಟ್ಟೆತುಂಬುವಂತೆ ಹುಗ್ಗಿ ತುಪ್ಪ ಹಾಕಿ ಬಡಿಸಿದರು. ನಂತರ ದಾಸರು ತಹಸಿಲ್ದಾರರ ಮನೆಯಲ್ಲಿ ಆದ ಅವಮಾನವನ್ನು ನೆನೆಸಿಕೊಂಡು ತಂದೆ-ತಾಯಿಗೆ ಕೂಡ ಹೇಳದೆ ಉತ್ತರ ಯಾತ್ರೆಗೆ ತೆರಳಿದರು. ಆತ್ಮಹತ್ಯೆ ಮಹಾಪಾಪ ಎಂದು ತಿಳಿದು ಕಾಶಿಯನ್ನು ಸೇರಿ ಗಂಗೆ ಮೊದಲಾದ ತೀರ್ಥಗಳಲ್ಲಿ ಮಿಂದು ವಿರಾಗಿಯಾಗಿ ನಾಲ್ಕಾರು ವರ್ಷಗಳ ಕಾಲ ಸಂಚರಿಸಿ ಮರಳಿ ತನ್ನ 20ನೇ ವಯಸ್ಸಿಗೆ ಚಿಕಲಪರವಿ ಗೆ ಬಂದರು. ಮಗನನ್ನು ನೋಡಿ ಪರಮಾನಂದ ಭರಿತರಳಾದ ಕೂಸಮ್ಮ ಅರಳಮ್ಮ ಎಂಬ ಕನ್ಯೆಯೊಂದಿಗೆ ವಿವಾಹ ಮಾಡಿದರು. ದಾಸಪ್ಪ ಪತ್ನಿಯೊಂದಿಗೆ ಕೆಲಕಾಲ ಸಂಸಾರಿ ಯಾಗಿದ್ದರು ತಂದೆ-ತಾಯಿಗಳು ಮೃತರಾಗುತ್ತಲೇ ಮತ್ತೆ ಕಾಶಿಯಾತ್ರೆ ಮಾಡುವೆನೆಂದು ಹೊರಟರು. ಮಾರ್ಗದಲ್ಲಿ ಕಳ್ಳರು ಆತನನ್ನು ಬಡಿದು ಇದ್ದ ಒಂದು ತಂಬಿಗೆಯನ್ನೂ ಅಪಹರಿಸಿದರು ಈ ಬಾರಿ ಭಗವದನುಗ್ರಹವಾದರೆ ಮನೆ. ಇಲ್ಲವಾದರೆ ಮಣಿಕರ್ಣಿಕಾ ಘಾಟಿನಲ್ಲಿ ದೇಹತ್ಯಾಗ ಎಂದು ಸಂಕಲ್ಪ ಮಾಡಿ ಕಾಶಿಗೆ ಬಂದರು. ಕಾಶಿಗೆ ಬಂದು ಸಾಧುಗಳ ಗುಂಪಿನಲ್ಲಿ ಸೇರಿ ಎಂದಾದರೂ ಯಾವುದಾದರೂ ಛತ್ರದಲ್ಲಿ ಊಟ ಮಾಡಿ ಶುದ್ಧವಾದ ಮನಸ್ಸಿನಿಂದ ಶ್ರೀಹರಿಯನ್ನು ಧ್ಯಾನಿಸುತ್ತಾ ಕಾಲಕಳೆದರು. ಇಷ್ಟು ಕಷ್ಟಗಳನ್ನು ಅನುಭವಿಸಿ ಒಂದೇ ಮನಸ್ಸಿನಿಂದ ಹರಿಯನ್ನು ಧ್ಯಾನಿಸುತ್ತಿದ್ದರು. ಒಂದು ರಾತ್ರಿ ಸ್ವಪ್ನದಲ್ಲಿ ಶ್ರೀಹರಿಯು ಪುರಂದರದಾಸರ ರೂಪದಿಂದ ಬಂದು ದಾಸಪ್ಪನನ್ನು ಎಬ್ಬಿಸಿದರು. ಗಂಗೆಯ ಆಚೆಯ ದಡದಲ್ಲಿ ಇರುವ ವ್ಯಾಸ ಕಾಶಿಗೆ ಕರೆದೊಯ್ದು ವೇದವ್ಯಾಸರ ದರ್ಶನ ಮಾಡಿಸಿದರು. ಇಂದಿನಿಂದ ನೀನು ಹರಿದಾಸನಾದೆ ಎಂದು ಆತನ ನಾಲಿಗೆಯ ಮೇಲೆ ವಿಜಯ ಎಂಬ ಬೀಜಾಕ್ಷರ ಗಳನ್ನು ಬರೆದರು. ನೀನು ಇಂದಿನಿಂದ ಮಹಾಕವಿ ಎನಿಸಿ ರಾಜಾಧಿರಾಜ ನಂತೆ ವೈಭವದೊಂದಿಗೆ ಇರುವೆ ಎಂದು ಹರಿಸಿದರು. ಆ ನಿಮಿಷದಿಂದ ದಾಸಪ್ಪನ ಬದುಕು ಬದಲಾಯಿತು. ಆಡಿದ ಮಾತುಗಳೆಲ್ಲ ಹಾಡಾಯಿತು. ಕಿಮಲಭ್ಯಂ ಭಗವತಿ ಪ್ರಸನ್ನೇ ಶ್ರೀನಿಕೇತನೇ ಎಂಬಂತೆ ಭಗವಂತನ ಅನುಗ್ರಹ ಆದಮೇಲೆ ಹೇಳುವುದೇನು. ಭಗವದನುಗ್ರಹ ಆದರೆ ಮನೆ. ಇಲ್ಲದಿದ್ದರೆ ಮರಣವೆಂದು ಜೀವನದ ಆಸೆ ಬಿಟ್ಟು ಬಂದ ದಾಸಪ್ಪ ಮಹಾ ಸಿದ್ಧಪುರುಷನೆನಿಸಿದರು. ಕೂಸಿ ಮಗ ದಾಸನು ವಿಜಯದಾಸರು ಎಂಬ ಪಾವನ ನಾಮದಿಂದ ಕರೆಸಿಕೊಂಡರು. ವಿಜಯದಾಸರು ಕಾಶಿಯಿಂದ ಹೊರಟರೆ ದಾಸರ ಜೊತೆಯಲ್ಲಿ ನೂರಾರು ಜನ ಶಿಷ್ಯರಾದರು. ಊರು ಊರುಗಳಲ್ಲಿ ಸ್ವಾಗತ ಸನ್ಮಾನವಾದವು. ಈ ಎಲ್ಲವನ್ನು ಒಂದೊಂದಾಗಿ ನೆನೆಸಿಕೊಂಡು ತಮ್ಮಲ್ಲಿ ತಾವೇ ಆಶ್ಚರ್ಯಪಡುತ್ತ ಪರಮಾತ್ಮನನ್ನು ವಂದಿಸುತ್ತಾ ಸ್ತುತಿಸುತ್ತ ಆಗ ಬರೆದದ್ದೇ ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು ಮನ್ನಿಸುವರೋ ಮಹಾರಾಯ ಎನ್ನ ಪುಣ್ಯಗಳಿಂದ ಈ ಪರಿ ಉಂಟೇನೋ ನಿನ್ನದೇ ಸಕಲ ಸಂಪತ್ತು ಎಂದು ಕೊಂಡಾಡಿದ್ದಾರೆ. ವಿಜಯದಾಸರು ಕಾಶಿಯಿಂದ ಕರ್ನಾಟಕಕ್ಕೆ ಬರುವುದಕ್ಕೆ ವರ್ಷಗಳೇ ಬೇಕಾಯಿತು. ಈ ಪ್ರಕಾರ ವಿಜಯದಾಸರು ಪರಿವಾರ ಸಹಿತರಾಗಿ ಚೀಕಲಪರವಿಗೆ ಮರಳಿ ಬಂದರು. ತುಂಗಭದ್ರೆಯಲ್ಲಿ ಮಿಂದು ಅಶ್ವತ್ಥ ನರಸಿಂಹನಿಗೆ ಎರಗಿದರು. ವಿವಾಹವಾಗಿದ್ದ ಅರಳಮ್ಮನಿಗೆ ಪರಮ ಸಂತೋಷವಾಯಿತು. ಕಾಲಂತರದಲ್ಲಿ ದಾಸರಿಗೆ ಇಬ್ಬರು ಮಕ್ಕಳಾದರು. ಅವರಲ್ಲಿ ಒಬ್ಬರ ಹೆಸರು ಶೇಷಗಿರಿದಾಸರು. ಆ ಕಾಲದಲ್ಲಿ ವಿಜಯದಾಸ ರಿಂದ ಅಂಕಿತ ಪಡೆದ ಶಿಷ್ಯರ ಸಂಖ್ಯೆ 60ಕ್ಕಿಂತಲೂ ಹೆಚ್ಚಾಗಿತ್ತು. ಒಬ್ಬೊಬ್ಬರೂ ಜ್ಞಾನಿಗಳು ಎನಿಸಿದರು. ಎಲ್ಲರ ಚರಿತ್ರೆ ಸರಿಯಾಗಿ ತಿಳಿದುಬಂದಿಲ್ಲ. ಆದರೆ ಭಕ್ತಿಯಲ್ಲಿ ಭಾಗಣ್ಣ, ಯುಕ್ತಿಯಲ್ಲಿ ಮೋಹನ್ನ ಶಕ್ತಿಯಲ್ಲಿ ತಿಮ್ಮಣ್ಣ ಎಂಬಂತೆ ಈ ಮೂರು ಜನ ಪ್ರಸಿದ್ಧ ಮತ್ತು ಪ್ರೀತಿಯ ಶಿಷ್ಯರು.
ಅವತಾರಗಳು
ಶ್ರೀವಿಜಯದಾಸರು ಭೃಗು ಮಹರ್ಷಿಗಳ ಅವತಾರವೆಂದು ಪ್ರತೀತಿ. ಆ ಮುನಿವರ್ಯರು ತ್ರೇತಾಯುಗದಲ್ಲಿ ಸುರಲೀಲ ಎಂಬ ಕಪಿಯಾಗಿ , ದ್ವಾಪರದಲ್ಲಿ ನಿಕಂಪ ಎಂಬ ಯಾದವನಾಗಿ, ಕಲಿಯುಗದಲ್ಲಿ ಶ್ರೀಪುರಂದರದಾಸರ ಮನೆಯಲ್ಲಿ ಆಕಳ ಕರು ವಾಗಿದ್ದು ಅನಂತರ ಅವರ ಕಡೆಯ ಮಗ ಮಧ್ವಪತಿ ಯಾಗಿ ಅವತರಿಸಿದರಂತೆ. ಐದು ಲಕ್ಷ ದೇವರನಾಮಗಳನ್ನು ಪುರಂದರದಾಸರು ಮಾಡಲು ಸಂಕಲ್ಪಿಸಿದ್ದರು ಅದರಲ್ಲಿ 475000 ಪೂರ್ತಿಯಾಗಿ ಮಿಕ್ಕ 25000 ದೇವರನಾಮಗಳನ್ನು ಅವರ ಮಗನಿಗೆ ನೀನು ಪೂರ್ತಿ ಮಾಡು ಎಂದು ಹೇಳಿದಾಗ ಈ ಜನ್ಮದಲ್ಲಿ ಸಾಧ್ಯವೇ ಎಂದರೆ, ಈ ಜನ್ಮದಲ್ಲಿ ಸಾಧ್ಯವಾಗದಿದ್ದರೆ ಮುಂದಿನ ಜನ್ಮದಲ್ಲಿ ಮಾಡು ಎಂದರು. ಅವರೇ ವಿಜಯರಾಯರಾಗಿ ಅವತರಿಸಿ ಅದನ್ನು ಪೂರ್ತಿ ಮಾಡಿದರೆಂದು ಐತಿಹ್ಯವಿದೆ. ಈ ವಿಚಾರವನ್ನೆಲ್ಲ ವಿಜಯದಾಸರ ತಮ್ಮ ಆನಂದ ದಾಸರು (ಹಯವದನ ವಿಠಲರು) ದಾಸವರ್ಯರ ಸಂಕ್ಷೇಪ ಚರಿತ್ರೆಯನ್ನು ಉದಯ ರಾಗದಲ್ಲಿ ಹಾಡಿದ್ದಾರೆ.
ಮಹಿಮೆಗಳು
ವಿಜಯರಾಯರ ಮಹಿಮೆಗಳು ಅಪಾರ ಅವರ ಮಹಿಮೆಗಳನ್ನು ಹೇಳುವ ಯೋಗ್ಯತೆ ನಮ್ಮದಲ್ಲ. ಆದರೂ ಅವರ ಅನುಗ್ರಹಕ್ಕೋಸ್ಕರ ಹೇಳುವುದು ತಪ್ಪಲ್ಲ. ಆ ಕಾಲದಲ್ಲಿ ಕಲ್ಲೂರು ಸುಬ್ಬಣ್ಣಾಚಾರ್ಯರು ಎಂಬ ಸುಧಾ ಪಂಡಿತರು ಒಬ್ಬರಿದ್ದರು. ಆಗಿನ ಕಾಲದಲ್ಲಿ ಸುಧಾ ಪಂಡಿತರಿಗೆ ರಾಜಾಶ್ರಯ ಇರುತ್ತಿತ್ತು. ದಾಸರೆಂದರೆ ಅವರಿಗೆ ಸೇರುತ್ತಿರಲಿಲ್ಲ. ವಿಜಯದಾಸರನ್ನಂತೂ ಕೂಸಿಮಗ ದಾಸ ಎಂದು ಕರೆಯುತ್ತಿದ್ದರು. ದಾಸರಿಗೆ ಎಲ್ಲವೂ ಗೊತ್ತಿದ್ದರೂ ಅವರು ಮಾತನಾಡುತ್ತಿರಲಿಲ್ಲ. ಒಮ್ಮೆ ಆಚಾರ್ಯರು ಸುಧಾ ಮಂಗಳಕ್ಕೆ ಸಾವಿರಾರು ಜನರನ್ನು ಆಹ್ವಾನ ಮಾಡಿದ್ದರು. ಮಂಡಿಗೆ ಊಟ ಎಂದು ನಿರ್ಧಾರವಾಗಿತ್ತು. ಮಂಡಿಗೆ ಮಾಡುವ ಪ್ರಸಿದ್ಧ ಪಾಚಕ ದೇಹಾಲಸ್ಯದಿಂದ ಬರಲಿಲ್ಲ. ಆಚಾರ್ಯರು ಚಿಂತಾಕ್ರಾಂತರಾದರು ಈ ಸಂಗತಿಯನ್ನು ಜ್ಞಾನ ದೃಷ್ಟಿಯಿಂದ ತಿಳಿದ ವಿಜಯರಾಯರು ಉತ್ಸಾಹ ಭಂಗ ವಾಗಬಾರದು ಎಂದು ತಿಳಿದು ತಾವೇ ಪಾಚಕನ ವೇಷತಾಳಿ ಕಲ್ಲೂರಿಗೆ ಬಂದರು. ಚಿಂತೆ ಬೇಡ ಸಕಾಲದಲ್ಲಿ ಮೂರಲ್ಲ ನಾಲ್ಕುಸಾವಿರ ಮಂಡಿಗೆಗಳನ್ನು ಮಾಡುವೆ ಎಂದು ಭರವಸೆ ಕೊಟ್ಟರು. ನಂತರ ಮಂಡಿಗೆಗಳನ್ನು ಮಾಡಿ ಸುಧಾ ಅನುವಾದದ ಸ್ಥಳಕ್ಕೆ ಬರುತ್ತಾರೆ. ಎಲ್ಲರಿಗೂ ಅವರು ವಿಜಯದಾಸರು ಎಂದು ತಿಳಿಯುತ್ತದೆ. ವ್ಯವಸ್ಥಾಪಕ ಕ್ಷಮೆಯನ್ನು ಯಾಚಿಸುತ್ತೇನೆ. ಆಚಾರ್ಯರು ವಿಜಯದಾಸರನ್ನು ನೀವೇನಾ ಕೂಸಿ ಮಗ ದಾಸ ಎಂದು ಕೇಳುತ್ತಾರೆ. ಆಗ ದಾಸರು ಹೌದು ಸ್ವಾಮಿ. ಪರಮಾನುಗ್ರಹ ಮಾಡಿ ನನಗೊಂದು ನ್ಯಾಯಸುಧಾ ವಾಕ್ಯವನ್ನು ಉಪದೇಶ ಮಾಡಬೇಕೆಂದು ಕೇಳುತ್ತಾರೆ. ಅದಕ್ಕೆ ಆಚಾರ್ಯರು ನಿಮಗೆ ಏನೇನು ಗ್ರಂಥದ ಪಾಠವಾಗಿದೆ ಎಂದು ಕೇಳುತ್ತಾರೆ. ಅವರು ನನಗೆ ಯಾವ ಪಾಠವೂ ಆಗಿಲ್ಲ ಎಂದರು. ಹಾಗಾದರೆ ನಿಮಗೆ ಸುಧಾ ಓದುವ ಅಧಿಕಾರವಿಲ್ಲ. ನಿಮಗೇನು ಅರ್ಥವಾಗುತ್ತದೆ. ಸುಧಾ ವಾಕ್ಯ ನಿಮ್ಮ ಕನ್ನಡ ಪದ ಎಂದು ತಿಳಿದಿದ್ದೀರ ಎಂದು ಅವಹೇಳನ ಮಾಡುತ್ತಾರೆ. ಆಗ ವಿಜಯದಾಸರು ಸಭೆಯಿಂದ ಎದ್ದು ಪಾಕಶಾಲೆಗೆ ಬಂದು ನೀರು ತರುತ್ತಿದ್ದ ಪರಿಚಾರಕನ ಕೈ ಹಿಡಿದುಕೊಂಡು ಕರೆತರುತ್ತಾರೆ. ಅವನು ಪ್ರವರ ಕೂಡ ತಿಳಿಯದ ಶುಂಠನಾಗಿರುತ್ತಾನೆ. ವಿಜಯದಾಸರು ಅವನ ತಲೆಯ ಮೇಲೆ ಕೈ ಇಟ್ಟು ಮಂತ್ರಾಕ್ಷತೆಯನ್ನು ಹಾಕಿ ನೀನೀಗ ಸುಧಾ ಅನುವಾದ ಮಾಡು ಎಂದಾಗ ಅವನು ನಿರರ್ಗಳವಾಗಿ ಸುಧಾ ವಾಕ್ಯಗಳನ್ನು ಪರಿಮಳ ವಾಕ್ಯಗಳನ್ನು ಅನುವಾದ ಮಾಡಿದನು. ಸಭೆಯು ನಿಬ್ಬರ ವಾಗಿ ಅವನು ಮಾಡಿದ ಅನುವಾದವನ್ನು ಕೇಳಿ ಮೂಕವಿಸ್ಮಿತರಾದರು. ವಿಜಯದಾಸರು ಕೈ ತೆಗೆದ ಕೂಡಲೇ ಪರಿಚಾರಕರು ಮೊದಲಿನಂತೆ ಆದನು. ಆಚಾರ್ಯರು ಅವನ ಬಾಯಿಂದ ಬಂದ ಅನುವಾದವನ್ನು ಕೇಳಿ ತುಂಬಾ ಆಶ್ಚರ್ಯಪಟ್ಟು ತಲೆದೂಗ ಬೇಕಾಯಿತು. ದಾಸರಿಗೆ ಶರಣಾಗತರಾದರು. ನನ್ನನ್ನು ಶಿಷ್ಯನಾಗಿ ಮಾಡಿಕೊಂಡು ಅಪರೋಕ್ಷ ಜ್ಞಾನ ಪ್ರಧಾನ ಮಾಡಬೇಕೆಂದು ಪ್ರಾರ್ಥಿಸಿದರು. ವಿಜಯರಾಯರು ಆಚಾರ್ಯರಲ್ಲಿ ನಿಜವಾದ ವೈರಾಗ್ಯವನ್ನು ಕಂಡು ಕೆಲಕಾಲ ತಮ್ಮ ಜೊತೆಯಲ್ಲಿ ಇರಿಸಿಕೊಂಡು ಕಂಕಣಾಕಾರ ಸುಳಾದಿಯನ್ನು ಉಪದೇಶ ಮಾಡಿದರು. ಭಗವದುಪಾಸನೆಯಿಂದ ಅಪರೋಕ್ಷಿಗಳಾದರು. ಹರಿದಾಸರಾಗಬೇಕೆಂಬ ಇಚ್ಛೆ ಇದ್ದುದರಿಂದ ಅವರಿಗೆ ವ್ಯಾಸ ವಿಠಲ ಎಂಬ ಅಂಕಿತವನ್ನು ಶಿಷ್ಯರಿಂದ ಕೊಡಿಸಿದರು. ಅವರೇ ವಿಜಯರಾಯರ ಅತ್ಯಂತ ಮಹಿಮೆಯುಳ್ಳ ಸ್ಮರಿಸಿ ಬದುಕಿರೋ ದಿವ್ಯ ಚರಣಕೆರಗಿರೋ ಎಂಬ ಸ್ತೋತ್ರ ಮಾಡಿ ಪುನೀತರಾಗಿದ್ದಾರೆ. ಇದನ್ನು ವಿಜಯರಾಯರ ಕವಚ ಎಂದು ಕರೆಯುತ್ತಾರೆ. ವಿಜಯದಾಸರು ಪುರಂದರದಾಸರು ವಾಸವಾಗಿದ್ದ ಚಕ್ರತೀರ್ಥದಲ್ಲಿ ದಾಸರ ಆರಾಧನೆ ನಿಮಿತ್ತವಾಗಿ ಜ್ಞಾನಸತ್ರ ವನ್ನು ಮಾಡಿ ಸಹಸ್ರಾರು ಜನರಿಗೆ ಮೃಷ್ಠಾನ್ನ ಭೋಜನವನ್ನು ಹಾಕುತ್ತಿರುತ್ತಾರೆ. ದೇಹ ರಕ್ಷಣೆಗೆ ಆಹಾರ ಹಾಗೂ ಆತ್ಮರಕ್ಷಣೆಗೆ ಧರ್ಮೋಪದೇಶ ಮಾಡುತ್ತಾರೆಂದು ಅನೇಕ ವಿದ್ವಾಂಸರು ಅಲ್ಲಿ ಆಶ್ರಯ ಪಡೆದಿದ್ದರು. ಅದೇ ಕಾಲದಲ್ಲಿ ಆನೆಗೊಂದಿಯಲ್ಲಿ ಭೀಮಪ್ಪ ನಾಯಕ ಎಂಬ ಒಬ್ಬ ಶ್ರೀಮಂತ ಚೀನಿ ವ್ಯಾಪಾರಸ್ಥ. ವ್ಯಾಪಾರದಿಂದ ಬಹು ಧನವನ್ನು ಸಂಪಾದಿಸಿ ಗರ್ಭಿಣಿ ಹೆಂಡತಿಗೆ ಕೊಡದೆ ತಮ್ಮಂದಿರಿಗೆ ಒಪ್ಪಿಸಿ ಮೃತನಾಗುತ್ತಾನೆ. ಕೃತಘ್ನರಾದ ತಮ್ಮಂದಿರು ಅತ್ತಿಗೆಯನ್ನು ಮನೆಯಿಂದ ಹೊರ ಹಾಕುತ್ತಾರೆ. ಆ ದೀನ ಹೆಂಗಸು ತಾಯಿಯ ಮನೆ ಸೇರಿ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ದುರ್ದೈವದಿಂದ ಆಕೆಯ ತಾಯಿಯೂ ಮೃತಳಾದಳು. ಆಶ್ರಯದಾತರಿಲ್ಲದೆ ಅವಳು ಆನೆಗೊಂದಿಗೆ ಬಂದಳು. ಆಕೆಗೆ ಬಂಧು-ಬಾಂಧವರು ಯಾರೂ ಕರುಣೆ ತೋರಲಿಲ್ಲ. ಕಾಲಕಾಲಕ್ಕೆ ಅನ್ನ ಉದಕಗಳು ಇಲ್ಲದ ಕಾರಣ ಮಗುವಿಗೆ ಮೈಯೆಲ್ಲಾ ಕಜ್ಜಿ ಯಾಗಿ ದುರ್ಗಂಧವಾಗಿತ್ತು. ಆ ಸಮಯದಲ್ಲಿ ಈ ಬಡ ಪ್ರಾಣಿಗೆ ವಿಜಯದಾಸರ ಸತ್ರ ಯಾಗುವು ಅನುಕೂಲವಾಯಿತು ಬಿಸಿಬಿಸಿಯಾಗಿ ಮಗುವಿಗೆ ಹೊಟ್ಟೆತುಂಬಾ ಉಣಿಸುವ ಸೌಭಾಗ್ಯ ದೊರೆತಂತಾಯಿತು. ಕಜ್ಜಿ ಬುರುಕ ಎಂದು ಪಂಕ್ತಿಯಿಂದ ದೂರ ಕುಡಿಸುತ್ತಿದ್ದರು. ಒಂದು ಮಧ್ಯಾಹ್ನ ಪಂಕ್ತಿಯಲ್ಲಿ ಊಟಕ್ಕೆ ಕೂತಾಗ ಮಗು ಹೇಸಿಗೆ ಮಾಡಿಬಿಟ್ಟಿತ್ತು. ಅಕ್ಕಪಕ್ಕದವರು ಬಾಯಿಗೆ ಬಂದಂತೆ ಬೈದರು ಇದರಿಂದ ಮನನೊಂದ ಆಕೆ ಮಗುವಿನ ಸಹಿತವಾಗಿ ಚಕ್ರತೀರ್ಥದಲ್ಲಿ ಪ್ರಾಣತ್ಯಾಗ ಮಾಡಬೇಕೆಂದು ಸಂಕಲ್ಪಿಸಿದರು. ಮಾರನೇ ದಿನ ಬೆಳಗಿನ ಜಾವ ಮಗುವಿನ ಸಹಿತ ಅಲ್ಲಿಗೆ ಬಂದು ಇನ್ನೇನು ನದಿಗೆ ಹಾರಬೇಕು ಎನ್ನುವಷ್ಟರಲ್ಲಿ ಆ ಕಾಲಕ್ಕೆ ಸ್ನಾನಕ್ಕೆ ಬಂದ ವಿಜಯರಾಯರು ಅವರನ್ನು ನೋಡಿ ವಿಚಾರಿಸಿದಾಗ ಆಕೆ ನಡೆದದ್ದೆಲ್ಲ ಹೇಳಿ ದುಃಖಭರಿತಳಾಗುತ್ತಾಳೆ. ಆಗ ವಿಜಯರಾಯರು ಆ ಮಗುವನ್ನು ನನಗೆ ಕೊಟ್ಟುಬಿಡು ನನ್ನ ತಂಗಿಯಾಗಿ ನನ್ನ ಮನೆಯಲ್ಲೇ ಇರು ಎಂದು ಹೇಳಿದಾಗ ಆಕೆ ಆ ಮಗುವನ್ನು ವಿಜಯ ರಾಯರಿಗೆ ಒಪ್ಪಿಸುತ್ತಾಳೆ. ಆಗ ವಿಜಯರಾಯರು ತೊಡೆಯ ಮೇಲೆ ಮಲಗಿಸಿಕೊಂಡು ಆಶೀರ್ವಾದ ರೂಪವಾಗಿ ಈ ಹಾಡನ್ನು ಹಾಡುತ್ತಾರೆ. ಚಿರಂಜೀವಿ ಆಗಲು ಚಿಣ್ಣ ನೀನು ಹರಿದಾಸ ದಾಸ ದಾಸರ ಪಾದಧೂಳಾಗಿ ಎಂದು ಹಾಡಿ ಮಗುವಿನ ಕಿವಿಯಲ್ಲಿ ಮಂತ್ರೋಪದೇಶವನ್ನು ಮಾಡುತ್ತಾರೆ. ಮಗು ಅಳುವುದನ್ನು ನಿಲ್ಲಿಸುತ್ತದೆ. ದಾಸರು ಮಗುವನ್ನು ಅರಳಮ್ಮನಿಗೆ ಒಪ್ಪಿಸುತ್ತಾರೆ. ಅರಳಮ್ಮನ ಪ್ರೀತಿಯ ಆರೈಕೆಯಿಂದ ಮಗು ಸುಂದರವಾಗಿ ಮೋಹನನಾಗಿ ಆದನು. ವಿಜಯದಾಸರ ಮೋಹದ ಪುತ್ರನಾದ ಮೋಹನನು ಕಾಲಾಂತರದಲ್ಲಿ ಪ್ರಸಿದ್ಧ ಮೋಹನದಾಸರಾದರು. ದಾಯಾದಿಗಳು ಸಂತಾನವಿಲ್ಲದೆ ಮೃತ ರಾಗಲು ಪಿತ್ರಾರ್ಜಿತ ಸಕಲ ಐಶ್ವರ್ಯವು ಮೋಹನದಾಸರದಾಯಿತು. ವಿಜಯದಾಸರು ಆದವಾನಿಗೆ ಬಂದಾಗ ಆದವಾನಿ ದಿವಾನರ ಬಳಿ ಇದ್ದ ಒಬ್ಬನನ್ನು ನೋಡಿ ಏನು ಪಂಗನಾಮ ತಿಮ್ಮಣ್ಣ ಎಂದು ಮಾತನಾಡಿದರು. ಶ್ರೀ ಪುರಂದರದಾಸರ ಸಮಕಾಲೀನರಾಗಿದ್ದ ಬೇಲೂರು ವೈಕುಂಠದಾಸರೇ ತಿಮ್ಮಣ್ಣ ನಾಗಿ ಅವತರಿಸಿದ್ದರು. ಪಂಗನಾಮ ತಿಮ್ಮಣ್ಣ ಎಂದು ಕೇಳಿದ ಕೂಡಲೇ ಅವರಿಗೆ ಪೂರ್ವಜನ್ಮದ ವೃತ್ತಾಂತ ತಿಳಿದು ಪರಮ ವೈರಾಗ್ಯಶಾಲಿಯಾದರು. ಅವರಿಗೆ ವೇಣುಗೋಪಾಲ ವಿಠ್ಠಲ ಎಂಬ ಅಂಕಿತ ನೀಡಿ ಉದ್ದಾರ ಮಾಡಿದರು. ಒಮ್ಮೆ ವಿಜಯದಾಸರು ತಿರುಪತಿಗೆ ಬಂದು ಪುರಂದರ ಮಂಟಪದಲ್ಲಿ ಕುಳಿತು ಶ್ರೀನಿವಾಸನ ಸ್ತೋತ್ರ ರೂಪವಾದ ಅನೇಕ ಪದಗಳನ್ನು ಹಾಡಿದರು. ಅದು ಬ್ರಹ್ಮೋತ್ಸವದ ಕಾಲವಾದ್ದರಿಂದ ಸ್ವಾಮಿಯ ದರ್ಶನವಾಗಲಿಲ್ಲ ದಾಸರು “ನಿನ್ನ ದರುಶನಕೆ ಬಂದವನಲ್ಲವೊ ದೇವ. ಪುಣ್ಯವಂತರ ದಿವ್ಯ ಚರಣ ನೋಡಲು ಬಂದೆ ” ಎಂದು ಹಾಡಿದರು. ಮಾರನೆಯ ದಿನವೂ ದಾಸರಿಗೆ ದರ್ಶನ ವಾಗದಿರಲು ಧ್ಯಾನದಲ್ಲಿ ಕುಳಿತರು. ಶಿಷ್ಯರು ರಥ ಬರುತ್ತಿದೆ ಎಂದು ಹೇಳಿದಾಗ ಒಂದು ಚೀಟಿಯನ್ನು ಕೊಟ್ಟು ರಥದ ಕೆಳಗೆ ಹಾಕಿ ಬನ್ನಿ ಎಂದರು. ಆಗ ರಥ ಅಲ್ಲೇ ನಿಂತಿತ್ತು ಎಷ್ಟು ಪ್ರಯತ್ನಪಟ್ಟರೂ ಕದಲಲಿಲ್ಲ. ಆಗ ಮಹಂತರು ಯಾರಿಗೂ ಅಪಚಾರವಾಗಿದೆ ಅಥವಾ ಹರಿಕೆ ಸಲ್ಲಿಸಿಲ್ಲ ಎಂದು ಹೇಳಿದಾಗ ಒಬ್ಬ ಚಿಕ್ಕ ಬಾಲಕನಲ್ಲಿ ಶ್ರೀನಿವಾಸ ದೇವರ ಆವೇಶವಾಗಿ ನನ್ನ ದಾಸರು ಬಂದರೆ ನಾನು ಬರುವೆನು ಎಂದು ಹೇಳಿದಾಗ ಮಹಂತರು ದಾಸರು ಯಾರು ಎಂದು ಕಂಡುಹಿಡಿದು ದೇವಸ್ಥಾನದ ಸಕಲ ಮರ್ಯಾದೆಗಳೊಂದಿಗೆ ವಿಜಯದಾಸರನ್ನು ಪ್ರಾರ್ಥಿಸಿ ರಥದ ಬಳಿಗೆ ಕರೆತಂದರು. ದಾಸರು ಶ್ರೀಹರಿಯು ತನ್ನ ಮಾತನ್ನು ಮನ್ನಿಸಿ ಅನುಗ್ರಹ ಮಾಡಿದನೆಂದು ತಿಳಿದು ಭಕ್ತಿಯಿಂದ ಈ ಹಾಡು ಹಾಡಿದರು. “ಸಾಗಿ ಬಾರಯ್ಯ ಭವರೋಗದ ವೈದ್ಯನೆ ಭಾಗುವೆ ನಿನಗೆ ಚೆನ್ನಾಗಿ ಸ್ತುತಿಸಿ ಇಂದು …. “ಎಂದು ಪ್ರಾರ್ಥಿಸಿದಾಗ ವಿಶೇಷ ಪ್ರಯತ್ನವಿಲ್ಲದೆ ರಥ ದಡದಡನೆ ಸಾಗಿ ಬಂದು ನೆಲೆ ನಿಂತಿತು. ಶ್ರೀವಿಜಯದಾಸರು ದಕ್ಷಿಣ ಯಾತ್ರೆ ಮಾಡಿ ಸಕಲ ದೇವತೆಗಳ ದರ್ಶನ ಮಾಡಿ ಭಕ್ತಿಯಿಂದ ಕೊಂಡಾಡಿ ನಂತರ ಕೆಲಕಾಲ ಚೀಕಲಪರವಿಯಲ್ಲಿ ವಾಸಮಾಡಿದರು. ಹೀಗಿರಲು ಕೆಲವು ಕಾಲದ ನಂತರ ತೃತೀಯ ಬಾರಿ ಕಾಶಿ ಯಾತ್ರೆ ಮಾಡಬೇಕೆಂದು ಸಂಕಲ್ಪಿಸಿ ದಾಗ ಶಿಷ್ಯ ಪರಿವಾರವೆಲ್ಲವೂ ಹೊರಟಿತು. ಆದರೆ ಮೋಹನದಾಸರಿಗೆ ಮಾತ್ರ ಯಾತ್ರೆಗೆ ಅಪ್ಪಣೆ ಆಗಲಿಲ್ಲ ದಾಸರು ಹೊರಡುವಾಗ ಮೋಹನದಾಸರ ಹೆಂಡತಿಯನ್ನು ಕರೆದು ಮೋಹನನಿಗೆ ಅಪಮೃತ್ಯು ಬರುವುದು. ಮೃತ ನಾದೆನೆಂದು ದೇಹವನ್ನು ಸಂಸ್ಕಾರಕ್ಕೆ ಕೊಡಬೇಡ ಅವನು ಮತ್ತೆ ಬದುಕುತ್ತಾನೆ ಎಂದು ಹೇಳಿ ಈ ವಿಚಾರ ಅವನಿಗೆ ಹೇಳಬೇಡ ಎಂದರು. ದಾಸರು ಪ್ರಯಾಣ ಬೆಳೆಸಿದ ಮೇಲೆ ಮೋಹನದಾಸರು ಆನೆಗೊಂದಿಗೆ ಬಂದರು ಕೆಲಕಾಲದ ನಂತರ ನಾಲ್ಕು ದಿನ ಜ್ವರ ಬಂದು ಅವರು ಮೃತರಾದರಂತೆ ಕಂಡರು. ದೇಹದ ಸಂಸ್ಕಾರ ಮಾಡಬೇಕೆಂದು ಪ್ರಯತ್ನಿಸಿದ ಜನರಿಗೆ ಅವರ ಮಡದಿ ಅವಕಾಶಕೊಡದೆ ವಿಜಯರಾಯರನ್ನು ಸ್ಮರಿಸುತ್ತಾ ಕುಳಿತಳು. ಆ ಕಾಲಕ್ಕೆ ಸರಿಯಾಗಿ ದಾಸರು ತನ್ನ ನಿಜ ರೂಪದಿಂದ ( ಭೃಗು ಋಷಿ) ಧರ್ಮರಾಜನ ಸಭೆಗೆ ಬಂದು ಈ ಮೋಹನನು ನಮ್ಮ ಶಿಷ್ಯನು ಈತನ ಭೂಲೋಕ ವಾಸದ ಅವಧಿ ಇನ್ನೂ ಮುಗಿದಿಲ್ಲ ಯಾರನ್ನೋ ಕರೆತರುವುದಕ್ಕೆ ಬದಲಾಗಿ ನಿನ್ನ ದೂತರು ಈತನನ್ನು ಕರೆತಂದಿದ್ದಾರೆ. ಈತನನ್ನು ಬಿಟ್ಟುಬಿಡು ಎಂದಾಗ ವಿಚಾರ ಮಾಡಿ ಋಷಿವಾಕ್ಯ ಸತ್ಯ ಎಂದು ತಿಳಿದು ಮೋಹನ ದಾಸರಿಗೆ ಯಮ ಬಂಧನದಿಂದ ಬಿಡುಗಡೆ ಮಾಡಲಾಯಿತು. ಇತ್ತ ಆನೆಗೊಂದಿಯಲ್ಲಿ ಸಂಸ್ಕಾರ ಮಾಡಬೇಕೆಂದು ಒಬ್ಬ ಹಠಹಿಡಿದು ಶವದ ಬಳಿ ಬಂದಾಗ ಅಷ್ಟರಲ್ಲಿ ಮೋಹನದಾಸರ ಆತ್ಮವು ದೇಹ ವನ್ನು ಪ್ರವೇಶಿಸಿತು. ನನಗೆ ಸಿದ್ಧ ಮಾಡುವೆಯಾ ನಡಿ ಎಂದು ಮೋಹನದಾಸರು ಎದ್ದು ಕುಳಿತರು. ಆಗ ಉದ್ಧಟನ ತಲೆಗೆ ಕಲ್ಲು ಬಡಿದು ಮೃತನಾದನು. ಆಗ ಮೋಹನದಾಸರು ಇದೆಲ್ಲಾ ಏನು ಎಂದು ಪತ್ನಿಯನ್ನು ವಿಚಾರಿಸಿದಾಗ ವಿಜಯರಾಯರು ಕಾಶಿಗೆ ಹೋಗಬೇಕಾದಾಗ ಆಡಿದ ಮಾತುಗಳು ತರುವಾಯಾ ನಡೆದದ್ದು ಎಲ್ಲವನ್ನು ವಿವರಿಸಿದಳು. ಅಷ್ಟರಲ್ಲಿ ವಿಜಯದಾಸರು ಮೋಹನದಾಸರ ಎದುರಿಗೆ ಬಂದು ನಿಂತರು. ಆಗ ಹಾಡಿದ್ದೆ “ತಂದೆ ವಿಜಯರಾಯ ಈ ವೇಳೆಗೆ ಬಂದು ವಿಜಯರಾಯ” ಎಂದು ಸ್ತೋತ್ರ ಮಾಡಿದರು. ಸಾಂಶರಾದ ದೇವತೆಗಳ ತಿಳಿದುಕೊಳ್ಳುವ ಬಗೆ ಹೇಗೆ. ಉತ್ತರ ಕ್ಷಣದಲ್ಲಿ ವಿಜಯರಾಯರು ನನಗೆ ಸ್ನಾನದ ವೇಳೆ ಆಯಿತೆಂದು ಅದೃಶ್ಯರಾದರು. ಆ ದಿನದಲ್ಲಿ ದಾಸವರೇಣ್ಯರು ಪರಿವಾರ ಸಹಿತವಾಗಿ ವಾರಣಾಸಿಯಲ್ಲಿ ಇದ್ದರು. ಕಾಶಿಯಿಂದ ಬರುತ್ತಾ ಶ್ರೀವಿಜಯದಾಸರು ಧರ್ಮೋಪದೇಶ ಮಾಡುತ್ತಾ ಒಂದು ಗ್ರಾಮದ ಬಳಿಗೆ ಬಂದರು. ಅದೇ ಗ್ರಾಮಕ್ಕೆ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಬೋಧ ತೀರ್ಥರು ಸಹ ದಯಮಾಡಿಸಿದ್ದರು. ಇಬ್ಬರೂ ಕೆಲಕಾಲ ಅದೇ ಗ್ರಾಮದಲ್ಲಿದ್ದರು. ವಿಜಯದಾಸರು ಮತ್ತೆ ರಾಮೇಶ್ವರಾದಿ ಮಹಾ ಕ್ಷೇತ್ರಗಳನ್ನು, ಉಡುಪಿಯನ್ನು ಸಂದರ್ಶಿಸಿದರು. ಉಡುಪಿಯ ಶ್ರೀ ಕೃಷ್ಣನ ಮಹಿಮೆಗಳನ್ನು ಅನೇಕ ಪದ ಸುಳಾದಿಗಳಿಂದ ಕೊಂಡಾಡಿದರು. ಆ ತರುವಾಯ ಆದವಾನಿ ಸಮೀಪದಲ್ಲಿರುವ ಛಾಗಿಗೆ ಬಂದರು. ಛಾಗಿ ಕೇಶವ ರಾಯನ ಮನೆಯಲ್ಲಿ ಮಗನ ನಿಷೇಕ ಮುಹೂರ್ತ ನಿರ್ಧಾರವಾಗಿತ್ತು. ರಾಯರ ಮನೆಯಲ್ಲಿ ಮಹೋತ್ಸವವು ನಡೆದಿತ್ತು. ಈ ಸಂಚಾರದಲ್ಲಿ ಗೋಪಾಲದಾಸರು ವಿಜಯದಾಸರನ್ನು ಹಿಂಬಾಲಿಸಿದ್ದರು. ಅದೇ ಕಾಲದಲ್ಲಿ ನೀರಿಗೆ ಬರ ಬಂದಿತ್ತು. ಬಾವಿಗಳಲ್ಲಿ ಚಿಪ್ಪಿನಿಂದ ಕೆರೆದು ಸ್ನಾನ ಪಾನಗಳಿಗೆ ನೀರು ಒದಗಿಸಬೇಕಾಗಿತ್ತು. ಈ ನೀರಿನ ಅಭಾವದಲ್ಲಿ ಸ್ನಾನಕ್ಕೆಂದು ಸಿದ್ಧವಾಗಿದ್ದ ನೀರನ್ನು ವಿಜಯದಾಸರು ನೀರಿಗಾಗಿ ಬಾಯಾರಿದ ಒಂದು ಕತ್ತೆಗೆ ನಿರು ಕುಡಿಸಿ ಬಿಟ್ಟರು. ಮತ್ತೆ ಸ್ನಾನಕ್ಕೆ ನೀರು ಸಿದ್ಧವಾಗಲು ಕಾಯಬೇಕಾಗಿತ್ತು. ಅಷ್ಟರಲ್ಲಿ ದುರ್ದೈವಕ್ಕೆ ತಕ್ಕಂತೆ ಮದುವಣಿಗ ಹಸೆ ಮನೆಗೆ ಬರುವ ಸಡಗರದಲ್ಲಿ ಬಾಗಿಲಿಗೆ ತಲೆ ತಗಲಿ ಮೂರ್ಛಿತರಾಗಿ ರಕ್ತ ಹರಿದು ಮೃತನಾದ. ಜನರಲ್ಲಿ ಹಾಹಾಕಾರವುಂಟಾಯಿತು. ನೋಡಿದಿಯಾ ಭಾಗಣ್ಣ ನೀರು ಕುಡಿಸಿದರಿಂದ ಊಟಕ್ಕೆ ಹೊತ್ತಾಯಿತು ಇಷ್ಟೊತ್ತಿಗೆ ಆಗುತ್ತಿತ್ತು. ಊರೊಳಗಿನ ಗದ್ದಲ ಕೇಳಿದೆಯಾ. ಆಗ ಗೋಪಾಲದಾಸರು ಛಾಗಿ ಕೇಶವರಾಯರ ಮಗ ಮೃತನಾದ ಸುದ್ದಿ ಬಂದಿದೆ ಎಂದರು. ಮೂರು ಜನ್ಮ ಗಳ ಗಣಿತ ನೋಡಿದರೂ ಅವನಿಗೆ ಅಪಮೃತ್ಯು ಇಲ್ಲ ಇದು ಹೇಗೆ ಎಂದು ವಿಜಯದಾಸರನ್ನು ಪ್ರಶ್ನಿಸಿದರು. ಆಗ ವಿಜಯದಾಸರು ನಿನಗೆ ಮೂರು ಜನ್ಮಗಳ ವೃತ್ತಾಂತ ಗೊತ್ತು ಆದರೆ ಇದು ಏಳನೇ ಜನ್ಮದ ಪಾತಕ ಎಂದರು. ವಿಜಯರಾಯರಿಗೆ ಏಳು ಜನ್ಮಗಳ ವೃತ್ತಾಂತ ಗೊತ್ತಾಗುತ್ತಿತ್ತು. ಗೋಪಾಲದಾಸರು ಕಾಶಿಯಾತ್ರೆ ಮಾಡಿದ ಪುಣ್ಯದಿಂದ ಮಗನನ್ನು ಬದುಕಿಸೋಣ ಎಂದರು. ಅದಕ್ಕೆ ವಿಜಯದಾಸರು ಕಾಶಿಯಾತ್ರೆಯ ಪುಣ್ಯ ಬೇಡ ಕತ್ತೆಗೆ ನೀರು ಕುಡಿಸಿದ ಪುಣ್ಯದಿಂದ ಬದುಕಿಸೋಣ ಎಂದರು. ಕಾಶಿಯಾತ್ರೆ ಇನ್ನೊಮ್ಮೆ ಮಾಡಬಹುದು ಆದರೆ ಕತ್ತೆಗೆ ನೀರು ಕುಡಿಸಿದ ಪುಣ್ಯ ಬಹುದೊಡ್ಡದು ಎಂದರು. ಇತ್ತ ಮದುಮಗಳು ದಾಸರ ಹತ್ತಿರ ಬಂದು ನಮಸ್ಕಾರವನ್ನು ಮಾಡಿದಳು ಅವರು ದೀರ್ಘ ಸುಮಂಗಲಿ ಭವ ಎಂದು ಆಶೀರ್ವಾದ ಮಾಡಿದರು. ಇದನ್ನು ಭಗವಂತ ಅವರ ಬಾಯಿಯಲ್ಲಿ ನಿಂತು ನುಡಿಸಿದನು. ಅವನು ನುಡಿಸಿದ ಮೇಲೆ ಅವನೇ ಅದನ್ನು ನೆರವೇರಿಸಬೇಕು ಇಲ್ಲದಿದ್ದರೆ ಅವನಿಗೆ ಅಪಕೀರ್ತಿ ಎಂದು ಹೇಳಿ ಒಂದೇ ಬಾರಿಗೆ 13 ಉಗಾಭೋಗಗಳಿಂದ ದೇವರ ಸ್ತೋತ್ರ ಮಾಡಿದರು. ದಾಸರು ಈ ಪ್ರಕಾರ ಸ್ತೋತ್ರ ಮಾಡಿ ಅನನ್ಯ ಭಾವನೆಯಿಂದ ಪರಮಾತ್ಮನನ್ನು ಧ್ಯಾನಿಸುತ್ತಿರುವಾಗ ದಿವ್ಯಜ್ಯೋತಿಯೊಂದು ಹೊಳೆಯಿತು. ವಿಜಯದಾಸರು ಶ್ರೀಹರಿ ಎಂದು ಕಣ್ಣು ತೆರೆದಾಗ ಮೃತದೇಹದೊಳಗೆ ಪ್ರಾಣ ಸಂಚಾರವಾಗಿ ಚಲನವಲನ ತೋರಿತು. ಅಲ್ಲಿ ನೆರೆದಿದ್ದ ಜನರು ಜಯ ಜಯ ಎಂದು ಆನಂದದಿಂದ ಕುಣಿದಾಡಿದರು. ಮದುಮಗನನ್ನು ದಾಸರು ತೊಡೆಯ ಮೇಲೆ ಕೂಡಿಸಿಕೊಂಡು ತಮ್ಮ ಮೂರು ವರ್ಷ ಆಯಸ್ಸನ್ನು ಧಾರೆ ಎರೆದರು. ಆಮೇಲೆ ಅವರ ಅಜ್ಜಿ ಮೊಮ್ಮಗನಿಗೆ ಅಂತ 7 ವರ್ಷ ಆಯುರ್ದಾನ ಮಾಡಿದರು. ಮುಂದೆ 10 ವರ್ಷಗಳ ಕಾಲ ಈ ಮದುಮಗ ಬದುಕುವನೆಂದು ಅಭಯದಾನ ಮಾಡಿದರು. ವಿಜಯದಾಸರು ಕೇಶವರಾಯನನ್ನು ಕರೆದು ಅಂದು ನೀನು ನನ್ನ ಹಸಿದ ಹೊಟ್ಟೆಗೆ ಹುಗ್ಗಿ ತುಪ್ಪ ಬಡಿಸಿ ನನ್ನನ್ನು ಆದರಿಸಿದ್ದಿ ಎಂದರು. ಕೇಶವರಾಯ ಆದರದಿಂದ ಮಾಡಿದ ಅನ್ನದಾನಕ್ಕೆ ಪ್ರತಿಯಾಗಿ ದಾಸರು ಅವನ ಮಗನ ಅಪಮೃತ್ಯುವನ್ನು ಪರಿಹರಿಸಿ ಅವನ ವಂಶವನ್ನು ಉದ್ದಾರ ಮಾಡಿದರು. ಇದು ಸತ್ಪಾತ್ರರಿಗೆ ಅನ್ನದಾನ ಮಾಡಿದ ಫಲ.
ಕೃತಿಗಳು
ವಿಜಯದಾಸರ ಕೃತಿಗಳು ಅಮೋಘ ಮತ್ತು ಅಪಾರ. ವಿಜಯದಾಸರು ಸುಳಾದಿ ದಾಸರೆಂದು ಪ್ರಸಿದ್ಧರಾದವರು. ಸುಳಾದಿ ಎಂದರೆ ಸುಳಿವಿಗೆ ಹಾದಿ ಅಂದರೆ ಮೋಕ್ಷದ ದಾರಿಗೆ ಸುಳಿವು ಕೊಟ್ಟವರು. ಇವರು ಅಪಾರವಾಗಿ ಸುಳಾದಿ ಗಳನ್ನು ಬರೆದಿದ್ದಾರೆ. ಭಕ್ತಿಯಲ್ಲಿ ಭಾಗಣ್ಣ ಎಂದೇ ಪ್ರಖ್ಯಾತರಾದ ಗೋಪಾಲದಾಸರಿಂದ ಶ್ರೀನಿವಾಸಾಚಾರ್ಯರಿಗೆ 40ವರ್ಷ ಆಯುರ್ದಾನ ಮಾಡಿಸಿ ಅವರನ್ನು ಜಗನ್ನಾಥದಾಸರಾಗಿ ಪರಿವರ್ತಿಸಿದ ಕೀರ್ತಿ ವಿಜಯರಾಯರದು. ಹರಿಕಥಾಮೃತಸಾರ ಎಂಬ ಮೇರುಕೃತಿ ಜಗತ್ತಿನ ದಾಸಸಾಹಿತ್ಯಕ್ಕೆ ದೊರಕಿದೆ ಎಂದರೆ ಅದು ಕೇವಲ ವಿಜಯದಾಸರ ದಯದಿಂದ. ವಿಜಯದಾಸರ ಸುಳಾದಿಗಳು ಜಗನ್ನಾಥ ದಾಸರ ಹರಿಕಥಾಮೃತಸಾರ ದಾಸಸಾಹಿತ್ಯಕ್ಕೆ ಅಷ್ಟೇ ಅಲ್ಲದೆ ಸಮಗ್ರ ಕನ್ನಡ ಸಾಹಿತ್ಯದ ಉತ್ತುಂಗ ಶೃಂಗ ಕೃತಿಗಳು. ವಿಜಯರಾಯರು ಅವರ ಸುಳಾದಿಗಳಲ್ಲಿ ಉಪನಿಷತ್ತುಗಳು ಪುರಾಣಗಳು. ಭಾಗವತ ಮತ್ತು ಪಂಚರಾತ್ರಗಳ ಸಾರವನ್ನು ತುಂಬಿದ್ದಾರೆ. ದಾಸರು ಮಾತುಮಾತಿಗೆ ಭಗವಂತನನ್ನು ನೆನೆಯುತ್ತಾರೆ. ತೇನವಿನಾ ತೃಣಮಪಿ ನ ಚಲತಿ ಎಂಬಂತೆ ಅವರು ದೇವರನ್ನು ಬಿಟ್ಟು ಬೇರೆ ಏನನ್ನೂ ಕಂಡವರಲ್ಲ. ಅವರ ಎರಡು ಸುಳಾದಿಗಳ ಅರ್ಥವನ್ನು ನೋಡೋಣ. ನರಸಿಂಹ ಸುಳಾದಿಯಲ್ಲಿ ಭಾಗವತ ಸಪ್ತಮ ಸ್ಕಂದ ಅಡಗಿದೆ. ಪರಮಾತ್ಮನ ಅಚಲ ಭಕ್ತನಾದ ಪ್ರಹ್ಲಾದನಿಗೆ ಅವರ ತಂದೆ ಹಿರಣ್ಯ ಕಶಿಪು ಎಷ್ಟು ಬಗೆ ತೊಂದರೆ ಕೊಟ್ಟರು ಅವನಿಗೆ ಕಿಂಚಿತ್ತು ಏನೂ ಆಗಲಿಲ್ಲ. ಇದುವೇ ಪರಮಾತ್ಮ ಅಚಲವಾದ ಭಕ್ತಿಗೆ ಉದಾಹರಣೆ. ಹಿರಣ್ಯ ಎಂದರೆ ಧನಕನಕಾದಿ ಗಳು ಕಶಿಪು ಎಂದರೆ ಭೋಗ ವಿಳಾಸಗಳು. ತಂದೆಯ ಜೀವನದ ಪರಮ ಆದರ್ಶ. ಇದಕ್ಕೆ ವಿರುದ್ಧವಾದ ಜೀವನಶೈಲಿ ಪ್ರಹ್ಲಾದನದು. ತಂದೆ ಲಕ್ಷ್ಮಿಯ ದಾಸ ಮಗ ಲಕ್ಷ್ಮಿಪತಿಯ ದಾಸ. ನರಸಿಂಹ ಸುಳಾದಿಯಲ್ಲಿ ಭಯ ನಿವಾರಣ ನಿರ್ಗುಣ ಎಂಬ ಪದ ಇದೆ. ನಿರ್ಗುಣ ಎಂದರೆ ಪರಮಾತ್ಮನಿಗೆ ಗುಣಗಳೇ ಇಲ್ಲವೇ ಅಂದರೆ ಕಲ್ಯಾಣ ಗುಣಗಳ ಪರಿಪೂರ್ಣ ಅವನಿಗೆ ನಮ್ಮಂತೆ ಪ್ರಾಕೃತ ಗುಣಗಳ ಲೇಪವಿಲ್ಲ. ಈ ಅರ್ಥದಲ್ಲಿ ಅವನು ನಿರ್ಗುಣ. ” ದುಷ್ಟರಿಗೆ ಭೀಕರವೋ ಸಜ್ಜನ ಪಾಲ ” ಎಂದಿದ್ದಾರೆ. ಅಂದರೆ ಹಿರಣ್ಯಕಶಿಪುವಿಗೆ ದುರ್ಗತಿ ಆಯಿತು. ಅವನೊಳಗಿದ್ದ ಜಯನಿಗೆ ಸದ್ಗತಿಯ ಆಯಿತು. ದ್ವೇಷಿ ಗೆ ತಮಸ್ಸು ಭಕ್ತನಿಗೆ ಮುಕ್ತಿ. ಇದು ಭಗವಂತನ ನಿಯಮ. ಧನ್ವಂತರಿ ಸುಳಾದಿಯಲ್ಲಿ ಭಾಗವತ ಅಷ್ಟಮ ಸ್ಕಂದದ ಸಮುದ್ರಮಥನ ವಿವರಿಸಲಾಗಿದೆ . ” ಅಸುರ ನಿರ್ಜರ ಸತಿ ನೆರೆದು ಗಿರಿಯ ತಂದು ಮಿಸುಕದೆ ಮಹೋದಧಿ ಮಥಿಸಲಾಗಿ ನಸುನಗುತ ಹುಟ್ಟಿದೆ ಪಿಯೂಷ ಘಟ ಧರಿಸಿ ಅಸಮ ದೈವನೇ” ಇಲ್ಲಿ ಐಶ್ವರ್ಯ ಹೀನರಾದ ಇಂದ್ರಾದಿ ದೇವತೆಗಳು ಅಸುರರ ಆಕ್ರಮಣಕ್ಕೆ ಒಳಗಾದರು. ಶ್ರೀಹರಿಯ ಆದೇಶದಂತೆ ಸಮುದ್ರಮಥನಕ್ಕೆ ಸಿದ್ಧರಾದರು. ಸಮುದ್ರಮಥನ ಕಾಲದಲ್ಲಿ ಎಲ್ಲ ರೂಪಗಳಿಂದ ಎಲ್ಲಾ ತಾನೇ ಮಾಡಿ ಧನ್ವಂತರಿ ರೂಪದಿಂದ ಅಮೃತವನ್ನು ತಂದು ಮೋಹಿನಿ ರೂಪದಿಂದ ಸುರರಿಗೆ ಉಣಬಡಿಸಿದನು. ಭಗವಂತ ಎಲ್ಲವನ್ನೂ ತಾನೇ ಮಾಡಿ ಮಾಡಿಸಿರ ಫಲಗಳನ್ನು ಯೋಗ್ಯರೀತಿಯಲ್ಲಿ ಅರ್ಹರಿಗೆ ನೀಡುವ ಸರ್ವಶಕ್ತ. ಇದೇ ಅವನ ಮಹಿಮೆ. ಸಮುದ್ರಮಥನ ಕಾಲದಲ್ಲಿ ಮೊದಲು ಉದ್ಭವಿಸಿದ್ದು ಕಾಲಕೂಟ ಕೊನೆಗೆ ಬಂದದ್ದು ಅಮೃತ. ಸಾತ್ವಿಕ ಸುಖದ ಲಕ್ಷಣ ಇದೆ. ಮೊದಲಿಗೆ ದುಃಖ ಕೊನೆಯಲ್ಲಿ ಶಾಶ್ವತ ಸುಖವಾದ ಮೋಕ್ಷ. ಭಾಗವತ ತೃತೀಯ ಸ್ಕಂದದ ಕಪಿಲೋಪಾಖ್ಯಾನ ಕಪಿಲ ಸುಳಾದಿ ಯಲ್ಲಿ ಅಡಗಿದೆ “ಕರ್ದಮ ಮುನಿಸೂನು ವಿಜಯ ವಿಠ್ಠಲ ನಿರ್ದೋಷ ಕರುಣಾಬ್ದಿ ಸರ್ವರಾಧಾರಿ”. ಪರಮಾತ್ಮ ಯಾರಿಗೂ ಮಗನಲ್ಲ ನಿಮಿತ್ತಮಾತ್ರ ಅವರಿಗೆ ಅನುಗ್ರಹ ಮಾಡಲು ಅವತರಿಸುತ್ತಾನೆ. ಬ್ರಹ್ಮ ಪುತ್ರರಾದ ಕರ್ದಮರು ಸ್ವರ್ಗಲೋಕದ ನಂದನವನಕ್ಕೆ ತೆರಳಿ ಒಂಬತ್ತು ರೂಪಗಳನ್ನು ಧರಿಸಿ ದೇವಹೂತಿ ಯೊಂದಿಗೆ ವಿಹರಿಸುತ್ತಾರೆ. ಕಡೆಗೆ ಪರಮಾತ್ಮನ ಕಪಿಲ ಅವತಾರ ಆದಮೇಲೆ ವೈರಾಗ್ಯ ತಾಳಿ ತಪಸ್ಸಿಗೆ ಹೊರಡುತ್ತಾರೆ.
ಕಪಿಲ ಉಪದೇಶ
” ಜನನಿ ದೇವಹೂತಿಗೆ ಉಪದೇಶ ಮಾಡಿ ಗುಣ ಮೊದಲಾದ ತತ್ವ ತಿಳಿಸಿದೆ. ಯೋಗಮಾರ್ಗ ತಿಳಿಸಿದೆ.” ವೈರಾಗ್ಯ ಸಿದ್ಧಿಯೇ ಗುರು ಪ್ರಾಪ್ತಿಯ ಸಾಧನ. ವೈರಾಗ್ಯ ಪೂರ್ವಕವಾದ ಅಧ್ಯಯನದಿಂದ ಲಭಿಸುವ ತತ್ವಜ್ಞಾನ ಅಪರೋಕ್ಷಕ್ಕೆ ಸಾಧನ. ಭಗವಧ್ಯಾನ ಮುಮುಕ್ಷ ವಿನ ನಿತ್ಯವಿಧಿ ಇಂತಹ ಸಾಧನ ಮೋಕ್ಷದಲ್ಲಿ ಆನಂದದ ಅತಿಶಯಕ್ಕೆ ಕಾರಣ ಎಂದಿದ್ದಾರೆ. “ಕಪಟ ಜೀವರು ಈತನು ಒಬ್ಬ ಋಷಿ ಎಂದು ತಪಿಸುವವರು ಕಾಣೋ ನಿತ್ಯ ನರಕದಲ್ಲಿ.” ವಾಸುದೇವ ಕಪಿಲ ನಿರೂಪಿಸಿದ ಈ ಸಂಖ್ಯಾಶಾಸ್ತ್ರ ಪರಮ ಸಾಂಖ್ಯ ಶಾಸ್ತ್ರ ಮತ್ತು ವೈದಿಕ ಸಾಂಖ್ಯ ಶಾಸ್ತ್ರ. ಆದರೆ ಮತ್ತೊಬ್ಬ ಕಪಿಲ ತಿಳಿಸಿದ ಸಾಂಖ್ಯ ಶಾಸ್ತ್ರ ಅವೈದಿಕ ವಾದದ್ದು ಅಸುರ ಮೋಹನಕ್ಕಾಗಿ ಭಗವಂತ ಮಾಡುವ ಲೀಲೆಗಳಲ್ಲಿ ಇದೂ ಒಂದು. ಬಹಿರಂತರ ರೋಗ ನಿವಾರಣಾ ಸುಳಾದಿಯಲ್ಲಿ ನಮಗೆ ಯಾವ ಔಷಧದ ಪ್ರಮೇಯ ವಿಲ್ಲದೆ ರೋಗನಿವಾರಣೆ ತಿಳಿಸಿದ್ದಾರೆ. “ಅಡವಿ ಗಿಡವ ತುಕ್ಕಿ ಅಗಳಿ ತರುವುದಲ್ಲ ಕೊಡಲಿಯಲಿ ಕಡೆದು ಪೊತ್ತು ತರುವುದಲ್ಲ ಕಡಲ ಶಯನ ನಮ್ಮ ವಿಜಯವಿಠ್ಠಲರೇಯನ ನಾಮ ಕಡು ನಾಮಾಮೃತವು ಸರ್ವರೋಗ ಹರವು” ಎಂದಿದ್ದಾರೆ. ಸಕಲ ಆಪತ್ತು ನಿವಾರಣ ಸುಳಾದಿಯಲ್ಲಿ ಆಪತ್ತು ಬಂದಾಗ ಮನುಷ್ಯ ಹೇಗಿರುತ್ತಾನೆ ಎಂದು ತಿಳಿಸಿದ್ದಾರೆ. “ಕಣ್ಣಲ್ಲೇ ಕೋರ ಜೀವ ಹಿಡಕೊಂಡು ಜನರು ಖಿನ್ನ ರಾಗಿ ಬಹಳ ಖೇದ ಬಡುತಿಹರೋ ಮುನ್ನೆ ಉಪಾಯಗಳು ಒಂದಾದರೂ ಅವರು ಇನ್ನೂ ಕಾಣರು ಕಾಣೋ ಇತ್ತ ಮೊಗವಾಗೊ”…. ಘನ್ನ ಮಹಿಮ ವಿಜಯ ವಿಠಲ ದೈತ್ಯಾರಣ್ಯವ ಸವರುವ ಸಂತತ ಗುಣಶೀಲ” ಎಂದು ಕೊಂಡಾಡಿದ್ದಾರೆ.
ಎರಡು ಪ್ರಸಿದ್ಧ ಉಗಾಭೋಗಗಳು
1. ಆಪತ್ತು ಪರಿಹಾರ ಸ್ತೋತ್ರ “ಒಂದು ಕೈಯಲ್ಲಿ ಖಡ್ಗ ಒಂದು ಕೈಯಲ್ಲಿ ಹಲಗೆ ಅಂದವಾಗಿ ಹಿಡಿದುಕೊಂಡು ದಿವಾ ರಾತ್ರಿಯಲ್ಲಿ ನಿತ್ಯ ಬಾರಸನಾಗಿ ಹಿಂದೆ-ಮುಂದೆ ಉಪದ್ರವಾಗದಂತೆ ಇಂದಿರೆರಮಣ ಕಾಯುತ್ತಲಿರೆ ಎನಗಾವ ಬಂಧಕಗಳು ಇಲ್ಲ ಧನ್ಯ ಧನ್ಯ ಕಂದರ್ಪನಯ್ಯ ಸಿರಿ ವಿಜಯ ವಿಟ್ಟಲರೇಯ ಆಪತ್ತು ಬರಲೀಯ ನೋಡು” ಈ ಉಗಾಭೋಗವನ್ನು ಹೇಳಿ ಎಲ್ಲಿಗಾದರೂ ಹೊರಟರೆ ಯಾವ ಆಪತ್ತು ಬರುವುದಿಲ್ಲ.
2. ತತ್ವಾಭಿಮಾನಿಗಳ ಉಗಾಭೋಗ “ತತ್ವಾಭಿಮಾನಿಗಳಿರಾ ಉತ್ತರ ಲಾಲಿಪುದು ಎತ್ತಿ ಕರವ ಮುಗಿವೆ ಆತ್ಮದೊಳಗೆ ನಿಮ್ಮ ವ್ಯಾಪಾರ ಘನವಯ್ಯ… ” ಇದನ್ನು ನಿತ್ಯ ಪಾರಾಯಣ ಮಾಡಿದರೆ ತತ್ವಾಭಿಮಾನಿ ದೇವತೆಗಳ ಅನುಗ್ರಹವಾಗುತ್ತದೆ. ವಿಜಯದಾಸರು ತಮ್ಮ ಜೀವನದ ಅಂತ್ಯಕಾಲದಲ್ಲಿ ಚಿಪ್ಪಗಿರಿಯಲ್ಲೇ ವಾಸಮಾಡಿದರು. ಮೋಹನದಾಸರು ಮಾತ್ರ ಎಡಬಿಡದೆ ದಾಸರ ಜೊತೆಯಲ್ಲೇ ಇದ್ದರು. ದಾಸರು ಚಿಪ್ಪಗಿರಿಯನ್ನು ಭಾಸ್ಕರ ಕ್ಷೇತ್ರ ಎಂದು ತಿಳಿದು ತಮ್ಮ ಅಂತಿಮ ದಿನಗಳನ್ನು ಅಲ್ಲೇ ಕಳೆದರು. ಚಿಪ್ಪಗಿರಿ ಯಲ್ಲಿ ಅನೇಕ ದೇವಸ್ಥಾನಗಳು ಇದೆ. ಅಲ್ಲಿ ಚಂದಪ್ಪ ಎಂಬುವರ ಜಮೀನಿನ ಬಾವಿಯಲ್ಲಿ ಗೋಪಾಲಕೃಷ್ಣನ ವಿಗ್ರಹ ಇದೆ ಎಂದು ದಾಸರು ಹೇಳಿದರು. ಇಲ್ಲಿ ನಿಮ್ಮ ದೇವರು ಸಿಕ್ಕರೆ ಗುಡಿ ಕಟ್ಟಿಸುತ್ತೇನೆ ಎಂದು ಹೇಳಿದ. ತರುವಾಯ ಆ ಬಾವಿಯಲ್ಲಿ ಗೋಪಾಲಕೃಷ್ಣ ದೊರೆತಾಗ ದಾಸರ ಆನಂದ ಅಷ್ಟಿಷ್ಟಲ್ಲ. ಚಂದಪ್ಪ ಅಲ್ಲೇ ಒಂದು ಗುಡಿ ನಿರ್ಮಾಣ ಮಾಡಿಸಿ ಐದು ಎಕರೆ ಭೂಮಿಯನ್ನು ದಾನ ಮಾಡುತ್ತಾನೆ. ನಂತರ ದಾಸರು ಕಾರ್ತಿಕ ಶುದ್ಧ ದಶಮಿಯಂದು ಚಿಪ್ಪಗಿರಿ ಯಲ್ಲಿ ದೇಹತ್ಯಾಗ ಮಾಡಿದರು. ಚಿಪ್ಪಗಿರಿ ಗುಂತಕಲ್ಲಿನಿಂದ 8 ಮೈಲಿ ದೂರದಲ್ಲಿದೆ. ಇಲ್ಲಿ ದಾಸರ ಆರಾಧನೆಯನ್ನು ಮೋಹನ ದಾಸರ ವಂಶಸ್ಥರು ವಿಜೃಂಭಣೆಯಿಂದ ಮಾಡುತ್ತಾರೆ. ದಾಸರ ನಿಜವಾದ ಆರಾಧನೆ ಎಂದರೆ ದಾಸರ ಸುಳಾದಿಗಳ ಪ್ರಚಾರ ಪಾರಾಯಣ ಮುದ್ರಣ ಮುಂತಾದವುಗಳು. ಬರೀ ಪಾರಾಯಣವಲ್ಲದೆ ದಾಸರು ಹಾಕಿಕೊಟ್ಟ ನೀತಿ ಮಾರ್ಗದಲ್ಲಿ ನಡೆದು ಪ್ರಾಮಾಣಿಕವಾಗಿ ನಮ್ಮ ಬದುಕನ್ನು ನಡೆಸಬೇಕು. ಇದು ದಾಸರಿಗೆ ಮತ್ತು ಅವರ ಸ್ವಾಮಿಯಾದ ವಿಜಯವಿಠಲನಿಗೂ ಅತ್ಯಂತ ಪ್ರೀಯವಾದದ್ದು. ದಾಸರ ಬಗ್ಗೆ ಓದುವುದು ತಿಳಿಯುವುದು ಭಕ್ತಿ ಮಾಡುವುದು ಒಂದು ಯೋಗ. ಅದೇ ಹಬ್ಬ, ಅದೇ ಉತ್ಸವ, ಅದೇ ಆರಾಧನೆ. ಭಾವಶುದ್ಧಿ ,ಮನೋ ಶುದ್ದಿ, ಹೃದಯ ಶುದ್ದಿ ಬೇಕೆನ್ನುವವರು ದಾಸಸಾಹಿತ್ಯಕ್ಕೆ ಬರಬೇಕು.