*ಶ್ರೀನಿವಾಸ ಮೂರ್ತಿ ಎನ್ ಎಸ್
ನಾಡಿನ ವಾಸ್ತು ಲೋಕದಲ್ಲಿ ಹಲವು ರಾಜ ಮನೆತನಗಳು ದೇವಾಲಯ ನಿರ್ಮಾಣ ಮಾಡಿದ್ದು ರಾಜ್ಯದ ಉದ್ದಕ್ಕೂ ಹರಡಿಕೊಂಡಿದೆ. ರಾಜರ ಕಾಲದಲ್ಲಿ ನಿರ್ಮಾಣಗೊಂಡ ವಿಭಿನ್ನ ಶೈಲಿಯ ದೇಗುಲಗಳು ಇಂದಿಗೂ ತನ್ನ ಸೊಬಗನ್ನು ಉಳಿಸಿಕೊಂಡು ಬಂದಿವೆ. ಆದರೆ ರಾಜ್ಯದ ಕೆಲವೊಂದು ದೇಗುಲಗಳು ಬೇರೆ ಬೇರೆ ಕಾರಣಗಳಿಂದ ಸಂರಕ್ಷಿಸಲ್ಪಟ್ಟಿಲ್ಲ. ಸರಿಯಾದ ನಿರ್ವಹಣೆ ಇಲ್ಲದೇ ಅವನತಿಯತ್ತ ಸಾಗಿರುವ ದೇಗುಲ ಸಂಕೀರ್ಣವೊ0ದು ಕಲಬುರಗಿ ಜಿಲ್ಲೆಯ ಕಾಳಗಿಯಲ್ಲಿದೆ.
ಇತಿಹಾಸ ಪುಟದಲ್ಲಿ ವೈಭವದಿಂದ ಮೆರೆದಿದ್ದ ಕಾಳಗಿಯನ್ನು ಶಾಸನಗಳಲ್ಲಿ ಕಾಳುಗೆ ಎಂದು ಕರೆಯಲಾಗಿದೆ. ಇದು ಮುನ್ನದಡಿ 1000 ದ ರಾಜಧಾನಿಯಾಗಿತ್ತು. ಗೋಂಕರಸನ ಕಾಲಲ್ಲಿ ವೈಭವದಿಂದ ಮೆರೆದಿತ್ತು. ಸುಮಾರು 14 ಶಾಸನಗಳಲ್ಲಿ ದಾಖಲಾಗಿದ್ದು ಬಾಣ ವಂಶದಲ್ಲಿ ಪ್ರಮುಖ ಕೇಂದ್ರವಾಗಿದ್ದು 1043 ರ ಜಗದೇಕಮಲ್ಲ ಶಾಸನ ಇಲ್ಲಿನ ಸೋಮೇಶ್ವರ ದೇವಾಲಯಕ್ಕೆ ದತ್ತಿ ನೀಡಿದ ಉಲ್ಲೇಖವಿದ್ದರೆ ಇನ್ನು 1103, 1171 ಹಾಗು 1173 ಶಾಸನಗಳಲ್ಲಿ ಇಲ್ಲಿನ ಕಾಳೇಶ್ವರ ದೇವಾಲಯಕ್ಕೆ ದತ್ತಿ ನೀಡಿದ ಉಲ್ಲೇಖವಿದೆ. 1066 ಹಾಗು 1094 ರ ಶಾಸನಗಳಲ್ಲಿ ಬಿಬ್ಬೇಶ್ವರ ದೇವಾಲಯದ ಉಲ್ಲೇಖವಿದೆ.
ಸೂರ್ಯನಾರಾಯಣ ದೇವಾಲಯ :
ಕಾಳೇಶ್ವರ ದೇವಾಲಯದ ಸನಿಹದಲ್ಲಿರುವ ಈ ದೇವಾಲಯ ತ್ರಿಕೂಟಾಚಲ ಮಾದರಿಯದ್ದು ದೇವಾಲಯ ಮೂರು ಗರ್ಭಗುಡಿ ಹಾಗು ನವರಂಗ ಹೊಂದಿದೆ. ಇಲ್ಲಿನ ಗರ್ಭಗುಡಿಯಲ್ಲಿ ಉತ್ತರ ಹಾಗು ಪಶ್ಚಿಮದಲ್ಲಿ ಶಿವಲಿಂಗವಿದ್ದರೆ ಪೂರ್ವಭಾಗದಲ್ಲಿ ಯಾವುದೇ ಶಿಲ್ಪವಿಲ್ಲ. ನವರಂಗದಲ್ಲಿ ನಂದಿಯ ಶಿಲ್ಪವಿದೆ. ಇನ್ನು ಗರ್ಭಗುಡಿಯ ಬಾಗಿಲುವಾಡ ತ್ರಿಶಾಖ ಮಾದರಿಯಲ್ಲಿದ್ದು ಗಜಲಕ್ಶ್ಮಿ ಹಾಗು ಗಣಪತಿಯ ಕೆತ್ತನೆ ನೋಡಬಹುದು. ಇನ್ನು ದೇವಾಲಯ ಗಮನ ಸೆಳೆಯುವುದೇ ಹೊರಭಿತ್ತಿಯಲ್ಲಿನ ಸುಂದರವಾದ ಶಿಲಾಬಾಲಿಕೆಯರ ಕೆತ್ತನೆಗಳು. ಇಲ್ಲಿನ ಆರಂಭಿಕ ಕೆತ್ತನೆಗಳೇ ಮುಂದೇ ಹೊಯ್ಸಳರಿಗೆ ಮಾದರಿಯಾಗಿರಹುದು. ಅವನತಿಯತ್ತ ಸಾಗಿರುವ ಈ ದೇವಾಲಯವನ್ನು ಉಳಿಸವ ಪ್ರಯತ್ನದ ಅಗತ್ಯವಿದೆ.
ಕಾಳೇಶ್ವರ ದೇವಾಲಯ :
ಇಲ್ಲಿನ ಪ್ರಮುಖ ದೇವಾಲಯವಾದ ಇದು ಸುಮಾರು 10 ನೇ ಶತಮಾನದ ನಿರ್ಮಾಣ. ದೇವಾಲಯ ಗರ್ಭಗುಡಿ, ಅಂತರಾಳ ಹಾಗು ಸಭಾಮಂಟಪ ಹೊಂದಿದ್ದು ಪ್ರಧಾನ ಗರ್ಭಗುಡಿಯಲ್ಲಿ ಕಾಳೇಶ್ವರ ಶಿವಲಿಂಗವಿದ್ದು ಉಳಿದ ಗರ್ಭಗುಡಿಯಲ್ಲಿ ರೇವಣ ಸಿದ್ದೇಶ್ವರ ಎಂದು ಕರೆಯುವ ಶಿವಲಿಂಗವಿದೆ ಹಾಗು ನೈರುತ್ಯದ ಭಾಗದ ಗರ್ಭಗುಡಿಯಲ್ಲಿ ಸೋಮೇಶ್ವರ ಎಂದು ಕರೆಯುವ ಶಿವಲಿಂಗವಿದೆ. ಇಲ್ಲಿನ ಬಾಗಿಲುವಾಡದಲ್ಲಿನ ಮಕರ ತೋರಣದಲ್ಲಿಬ್ರ ಹ್ಮ, ವಿಷ್ಣು ಹಾಗು ಮಹೇಶ್ವರನ ಶಿಲ್ಪವಿದ್ದು ಅಂತರಾಳದಲ್ಲಿನ ವಿತಾನದಲ್ಲಿ ಅಷ್ಟದಿಕ್ಪಾಲಕರು ಹಾಗು ನಟರಾಜನ ಶಿಲ್ಪ ಗಮನ ಸೆಳೆಯುತ್ತದೆ. ಇನ್ನು ಸಭಾಮಂಟಪದಲ್ಲಿನ ವಿತಾನದಲ್ಲಿ ಕೀರ್ತಿಮುಖಗಳನ್ನು ನೋಡಬಹುದು. ಇಲ್ಲಿನ ಚತುರ್ಮುಖ ಗಣಪತಿ ಹಾಗು ಕಾರ್ತಿಕೇಯ ಶಿಲ್ಪ ಸುಂದರವಾಗಿದೆ.
ಇನ್ನು ಇಲ್ಲಿನ ಮತ್ತೊಂದು ದ್ವಿಕೂಟ ದೇವಾಲಯದ ಉತ್ತರದ ಗರ್ಭಗುಡಿಯಲ್ಲಿ ರಾಮೇಶ್ವರ ಹಾಗು ಪಶ್ವಿಮ ಗರ್ಭಗುಡಿಯಲ್ಲಿ ಬಕ್ಕೇಶ್ವರ ಎಂದು ಕರೆಯುವ ಶಿವಲಿಂಗವಿದೆ, ದೇವಾಲಯದ ಮುಂದೆ ನಂದಿಮಂಟಪವಿದ್ದು ಇಲ್ಲಿ ಬೄಹತ್ ನಂದಿ ಇದೆ. ಉತ್ತರದ ಭಾಗದಲ್ಲಿ ಸುಂದರವಾದ ಕೊಳವಿದೆ.
ಮಲ್ಲಿಕಾರ್ಜುನ ದೇವಾಲಯ :
ಸುಮಾರು 12 ನೇ ಶತಮಾನದಲ್ಲಿ ಮಹಾಮಂಡಲೇಶ್ವರ ಬಾಣ ವೀರಗೊಂಕರಸ ನಿರ್ಮಿಸಿದ ಈ ದೇವಾಲಯ ನಕ್ಷಾತ್ರಾಕಾರದ ಜಗತಿಯ ಮೇಲೆ ನಿರ್ಮಾಣವಾಗಿದ್ದು ದೇವಾಲಯ ಗರ್ಭಗುಡಿ, ಅಂತರಾಳ ಹಾಗು ಮಂಟಪವನ್ನು ಹೊಂದಿದ್ದು ಗರ್ಭಗುಡಿಯಲ್ಲಿ ದೊಡ್ಡದಾದ ಶಿವಲಿಂಗವಿದೆ. ಶಾಸನಗಳಲ್ಲಿ ಗೊಂಕೇಶ್ವರ ಎಂದು ಕರೆಯಲಾಗಿದೆ. ಗರ್ಭಗುಡಿಯ ಬಾಗಿವಾಡದಲ್ಲಿ ಅಲಂಕರಣ ಹಾಗು ಜಾಲಂದ್ರಗಳಿವೆ. ಇನ್ನು ಮಂಟಪದಲ್ಲಿನ ವಿತಾನದಲ್ಲಿ ಅಷ್ಟದಿಕ್ಪಾಲಕರ ಕೆತ್ತನೆ ಇದೆ. ಮಂಟಪದಲ್ಲಿ ಕಂಭಗಳು ಹಾಗು ಕಕ್ಷಸನ ನೋಡಬಹುದು.
ರೇವಣ ಸಿದ್ದೇಶ್ವರ ದೇವಾಲಯ
ಮಲ್ಲಿಕಾರ್ಜುನ ದೇವಾಲಯದ ಸನಿಹದಲ್ಲಿರುವ ಈ ದೇವಾಲಯ ಸಹ ಇದೇ ಮಾದರಿಯಲ್ಲಿದ್ದು ಗರ್ಭಗುಡಿಯಲ್ಲಿ ಶಿವಲಿಂಗವಿದೆ. ಗರ್ಭಗುಡಿಯ ಬಾಗಿಲುವಾಡ ಅಲಂಕರಣದಲ್ಲಿ ಅರೆಗಂಭಗಳಿವೆ. ಮಂಟಪದಲ್ಲಿನ ವಿತಾನದಲ್ಲಿ ಸಹ ಆಷ್ಟ ದಿಕ್ಪಾಲಕರೆ ಕೆತ್ತನೆ ನೋಡಬಹುದು. ಇಲ್ಲಿಯೂ ಕಕ್ಷಾಸನ ನೋಡಬಹುದು.
ನರಸಿಂಹ ತೀರ್ಥ :
ಇಲ್ಲಿ ಸುಂದರವಾದ ನೀರಿನ ಕಲ್ಯಾಣಿ ಇದ್ದು ನಡುವಿನ ಭಾಗದಲ್ಲಿ ಸುಂದರವಾದ ಚಿಕ್ಕ ದೇವಾಲಯವಿದೆ. ನಕ್ಶಾತ್ರಾಕಾರದ ಜಗತಿಯ ಮೇಲೆ ನಿರ್ಮಾಣವಾದ ಈ ದೇವಾಲಯಕ್ಕೆ ನಾಲ್ಕು ದಿಕ್ಕಿನಿಂದ ಪ್ರವೇಶವಿದ್ದು ಮುಖಮಂಟಪ ಹಾಗು ಗರ್ಭಗುಡಿ ಹೊಂದಿದೆ. ಇನ್ನು ಬಹುತೇಕ ಅವನತಿಯತ್ತ ಸಾಗಿದ ಈ ದೇವಾಲಯದ ಶಿಖರದ ಭಾಗ ಹಾಗು ಹೊರ ಭಿತ್ತಿಯ ಹಲವು ಭಾಗ ಬಿದ್ದು ಹೋಗಿದೆ.
ಜೈನ ದೇವಾಲಯ :
ತ್ರಿಕೂಟ ಮಾದರಿಯ ಈ ದೇವಾಲಯ ಮೂರು ಗರ್ಭಗುಡಿ, ಅಂತರಾಳ ಹಾಗು ನವರಂಗ ಹೊಂದಿದ್ದು ಗರ್ಭಗುಡಿಯಲ್ಲಿ ಸಿಂಹ ಪಾಣಿಪೀಠದ ಮೇಲೆ ಏಳು ಹೆಡೆಯ ತೀಥಂಕರನ ಸುಂದರ ಶಿಲ್ಪವಿದೆ. ಉಳಿದ ಗರ್ಭಗುಡಿಯಲ್ಲಿ ಶಿಲ್ಪಗಳಿಲ್ಲ. ಈಗ ಉತ್ತರದಲ್ಲಿ ಶಿವಲಿಂಗವಿದೆ. ನವರಂಗದಲ್ಲಿ ಕಂಭಗಳಿದ್ದು ಪ್ರವೇಶ ಮಂಟಪ ಇದೆ. ಇನ್ನು ಗರ್ಭಗುಡಿಯಲ್ಲಿ ಬೆಳಕಿಗಾಗಿ ಜಾಲಂದ್ರಗಳು ಇರುವುದು ವಿಶೇಷ. ಆದರೆ ಈ ದೇವಾಲಯ ಯಾವುದೇ ರಕ್ಷಣೆಯಿಲ್ಲದೆ ಅನಾಥವಾಗಿದೆ. ಸಂಪೂರ್ಣವಾಗಿ ನೆಲಕಚ್ಚುವ ಮುನ್ನ ಉಳಿಸುವ ಅಗತ್ಯವಿದೆ.
ತಲುಪುವ ಬಗ್ಗೆ : ಕಲಬುರಗದಿಂದ ಸುಮಾರು 40 ಕಿ ಮೀ ದೂರದಲ್ಲಿ ಹಾಗು ಚಿತ್ತಾಪುರದಿಂದ ಸುಮಾರು 30 ಕಿ ಮೀ ದೂರದಲ್ಲಿದೆ.