ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆಯ ಸಂಭ್ರಮ

*ಶ್ರೀನಿವಾಸ ಮೂರ್ತಿ ಎನ್ ಎಸ್

ಪ್ರತಿ ಗ್ರಾಮ ಅಥವಾ ಊರಿನಲ್ಲೂ ನಡೆಯುವ ಜಾತ್ರೆಗಳು ಸಾಂಸ್ಕೃತಿಕ ಕೊಂಡಿಯಲ್ಲದೇ ಜನರನ್ನು ಬೆಸೆಯುವ ಹಾಗು ಪಾರಂಪರಿಕತೆಯನ್ನು ಎತ್ತಿ ಹಿಡಿಯುವ ಸಂಭ್ರಮವಾಗಿ ಬೆಳೆದಿದೆ. ಇದಕ್ಕೆ ಬೆಂಗಳೂರು ಹೊರತಲ್ಲ.  ಬೆಂಗಳೂರಿನಲ್ಲಿ ಹಲವೆಡೆ ಜಾತ್ರೆಗಳು ನಡೆದರು ಬಸವನಗುಡಿಯ ಕಡಲೆ ಕಾಯಿ ಪರಿಷೆ ಅಥವಾ ದೊಡ್ಡ ಬಸವಣ್ಣನ ಜಾತ್ರೆ ಪ್ರಮುಖ ಪಾರಂಪರಿಕ ಕೊಂಡಿಯಾಗಿದೆ. ಇಲ್ಲಿನ ಸುಂಕದಕಟ್ಟೆಯಲ್ಲಿ ನಡೆಯುತ್ತಿದ್ದ ಜಾತ್ರೆ  ಈಗ ಬೆಂಗಳೂರಿನ ಜಾತ್ರೆಯಾಗಿ ಬದಲಾಗಿದೆ.

ಪ್ರತಿ ವರ್ಷ ಕಾರ್ತೀಕ ಮಾಸದ ಕಡೆಯ ಸೋಮವಾರ ಮತ್ತು ಮಂಗಳವಾರ ನಡೆಯುವ ಜಾತ್ರೆ ತನ್ನದೇ ಆದ ಪಾರಂಪರಿಕ ಹಿನ್ನೆಲೆಯಲ್ಲಿ ಆಧುನಿಕ ಸ್ಪರ್ಶ ಪಡೆದಿದೆ. ಬಸವನಗುಡಿಯ ದೇವಾಲಯದ ಮುಂದೆ ಸೇರುವ ಜಾತ್ರೆಯಲ್ಲಿ ರಾಜ್ಯ ಹಾಗು ಹೊರ ರಾಜ್ಯದ ಕಡಲೆಕಾಯಿಯ ಜೊತೆಯಲ್ಲಿ ವಿವಿಧ ಮಾರಾಟ ಮಳಿಗೆಗಳು ಅಧುನಿಕತೆಯನ್ನು ಪಡೆದಿದ್ದರೂ ತನ್ನದೇ ಆದ ಪಾರಂಪರಿಕ ವೈಭವದ ಕಳೆಯನ್ನು ಉಳಿಸಿಕೊಂಡಿದೆ.  ಕಾರ್ತೀಕ ಕಡೆಯ ಸೋಮವಾರ ನಂದಿಗೆ ವಿಶೇಷ ಪೂಜೆ ಸಲ್ಲಿಸಿ ಕಡಲೆ ಕಾಯಿ ಅಭಿಷೇಕದಿಂದ ಅರಂಭವಾಗುವ ಜಾತ್ರೆ ಮೂರು ದಿನ ನಡೆಯುತ್ತದೆ.

ಜಾನಪದ ಕತೆಯನ್ನ ಆಧರಿಸಿ ಹೇಳುವುದಾದರೆ ಇಲ್ಲಿ ಮುಂಚೆ ಅಪಾರ ಪ್ರಮಾಣದಲ್ಲಿ ಕಡಲೆಕಾಯಿ ಬೆಳೆ  ಬೆಳೆಯಲಾಗುತಿತ್ತು.  ಆದರೆ ಈ ಬೆಳೆಗಳು ರೈತರಿಗೆ ದಕ್ಕದೇ  ರಾತ್ರೋ ರಾತ್ರಿ ನಾಶವಾಗುತ್ತಿದ್ದನ್ನು ಕಂಡು ವಿಸ್ಮಯವಾಗುತಿತ್ತು.  ಇದಕ್ಕೆ ಪರಿಹಾರ ಕಾಣಿಸಲು  ಕಾವಲು ಕುಳಿತ ರೈತರಿಗೆ ಮಧ್ಯರಾತ್ರಿ ಬಸವ ಬೆಳೆದು ನಿಂತ ಫಸಲನ್ನು ತಿಂದು ಪಕ್ಕದ  ವೃಷಭಾವತಿಯಲ್ಲಿ ನೀರು ಕುಡಿಯುವದನ್ನು ನೋಡಿ ರೈತರು ಬಸವನನ್ನ ಓಡಿಸಲು ಹೋದಾಗ ಅದು ಅಲ್ಲಿಯೇ ಕಲ್ಲಾಯಿತು. ಈ ವಿಸ್ಮಯ ನೋಡಿದ ರೈತರಿಗೆ ಕಾರ್ತೀಕ ಮಾಸದಲ್ಲಿ ಕಡೆಯ ಸೋಮವಾರ ತನ್ನ ಹೆಸರಿನಲ್ಲಿ ಪೂಜೆ ಮಾಡುವಂತೆ ಕೇಳಿದ  ಬಂದ ಆಶರೀರವಾಣಿಯನ್ನ ಆಧರಿಸಿ ಈ ಜಾತ್ರೆ ನಡೆದು ಬಂದಿದೆ ಎಂಬ ಪ್ರತೀತಿ ಇದೆ. ನಂತರ ಕಲ್ಲಾಗಿ ಬೆಳೆದ ಬಸವ ಬೆಳೆಯುತ್ತ ಹೋದಾಗ ಗಡಾರಿಯಿಂದ ಹೊಡೆದು ನಿಲ್ಲಿಸಿದರು ಎಂಬ ನಂಬಿಕೆ ಇದೆ.  ನಂದಿಯ ಮೇಲೆ ಗಡಾರಿಯ ಗುರುತನ್ನು ಈಗಲೂ ನೋಡಬಹುದು.

ಇತಿಹಾಸದ ಪುಟ ನೋಡಿದಾಗ ಬಸವನಹಳ್ಳಿ ಎಂದು ಕರೆಯುತ್ತಿದ್ದ ಈ ಹಳ್ಳಿ ಬಸವನಪುರ ಆಗಿ ಬಸವನಗುಡಿಯಾಗಿದೆ. ಇಲ್ಲಿನ ನಂದಿಯ ಕೆಳ ಭಾಗದ ಶಾಸನದಲ್ಲಿ ನಂದಿಯ ಪಾದದಿಂದ ವೃಶಾಭವತಿ ನದಿ ಹುಟ್ಟಿದ ಉಲ್ಲೇಖವಿದೆ. ವಿಶಾಲವಾದ ಈ ದೇವಾಲಯದಲ್ಲಿ ಶಿವಲಿಂಗವಿರುವ ಚಿಕ್ಕ ಗರ್ಭಗುಡಿ, ಬೃಹತ ನಂದಿ ಇರುವ ನಂದಿ ಮಂಟಪ, ಮುಖಮಂಟಪ ಹಾಗು ವಿಶಾಲವಾದ ತೆರೆದ ಪ್ರದಕ್ಶಿಣ ಪಥಾ ಹೊಂದಿದೆ.  ಕೆಂಪೆಗೌಡರ ಕಾಲದಲ್ಲಿ ಈ ದೇವಾಲಯ ನಿರ್ಮಾಣವಾಗಿದ್ದು  ನಂದಿ ಮಂಟಪದಲ್ಲಿ  ಸುಮಾರು 15 ಅಡಿ ಎತ್ತರದ ಹಾಗು ೨೦ ಅಡಿ ಉದ್ದದ ನಂದಿ ಇದೆ. ಬೃಹತ್  ಬಂಡೆಯಲ್ಲಿ  ಕೆತ್ತಿದ ನಂದಿ ಕುಳಿತಿದ್ದು ಕೊರಳಿನ ಘಂಟೆ ಹಾಗು ಹಾರದ ಕೆತ್ತನೆ ಸುಂದರವಾಗಿದೆ. ಜಾನಪದ ಹಿನ್ನೆಲೆಯಲ್ಲಿ ನಂದಿಯ ಕುಶಲತೆ ಕಳೆದು ಹೋದರು ಸುಂದರ ಶಿಲ್ಪ. 

ಇದು ರಾಜ್ಯದ ದೊಡ್ಡ ನಂದಿಗಳಲ್ಲಿ ಒಂದು. ಪೌರಾಣಿಕ ಕಥೆ ಏನೇ ಇದ್ದರು ನಾಡಿನ ಅತ್ಯಂತ ಸುಂದರವಾದ ದೊಡ್ಡ ನಂದಿಗಳಲ್ಲಿ ಇದು ಒಂದು ಎನ್ನುವದರಲ್ಲಿ ಅತಿಶಯವಿಲ್ಲ. ಪ್ರಸ್ತುತ ನಂದಿ ಮಂಟಪವೇ ಬೃಹತ್ ನಂದಿಯಿಂದ ನಂದಿ ದೇವಾಲಯ ಎಂದೇ ಖ್ಯಾತಿ ಪಡೆದಿದೆ. ಬಸವನ ಕಾರಣದಿಂದ ಇಲ್ಲಿಗೆ ಬಸವನಗುಡಿ ಎಂಬ ಹೆಸರು ಬಂದಿದೆ. 

ಇಲ್ಲಿ ಪ್ರತೀ ವರ್ಷವೂ ಬರುತ್ತಿದ್ದ ಕಡಲೇಕಾಯಿಗೆ ವಾಣಿಜ್ಯ ಮಾರುಕಟ್ಟೆಗೆ ಪಾರಂಪರಿಕ ಸೊಬಗನ್ನು ಬಳಸಿಕೊಂಡು ಬರುವುದು ರೈತರಿಗೆ ಆಗಿನ ಕಾಲದಲ್ಲಿ ಅನಿವಾರ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಹುಟ್ಟಿದ ಕಥೆಗಳು ಅಂದಿನ ಸಮಯದಲ್ಲಿ ಒಳ್ಳೆಯ ಮಾರುಕಟ್ಟೆ ತಂದಿದ್ದು ನಿಜ.  ಇಂದು ಕಡಲೆಯಕಾಯಿ ಬೆಳೆಗೆ ಜಾತ್ರೆ ಪೂರಕವಲ್ಲದಿದ್ದರು ಪರಂಪರೆ ಉಳಿವಿಗೆ ಸಹಕಾರಿ ಎನ್ನುವುದರಲ್ಲಿ ಅನುಮಾನವಿಲ್ಲ. ವಾಣಿಜ್ಯ ಮತ್ತು ಪಾರಂಪರಿಕ ಸೊಬಗಿನಿಂದ ಆರಂಭವಾದ ಜಾತ್ರೆ ನಂತರ ಕಾಲಘಟ್ಟದಲ್ಲಿ ವಾಣಿಜ್ಯಕರಣದತ್ತ ಸಾಗಿದ್ದರೂ  ಪಾರಂಪರಿಕ ಆಚರಣೆಯ ಉಳಿವಿಗೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿರುವುದಂತೂ ನಿಜ. 

ಹಿಂದೆ ಕಹಳೆ ಬಂಡೆ ಎಂದು ಕರೆಯಲಾಗುತ್ತಿದ್ದ ಇಲ್ಲಿ ನಂದಿಯ ದೇವಾಲಯದ ಸನಿಹದಲ್ಲಿ ಬೃಹತ್ ಗಣಪತಿಯ ಶಿಲ್ಪವಿದ್ದು ನಂತರ  ಕಾಲದಲ್ಲ ಪ್ರತ್ಯೇಕ ದೇವಾಲಯ ನಿರ್ಮಾಣಗೊಂಡಿದೆ. ಇಲ್ಲಿ ಕಾರಂಜಿ ಆಂಜನೇಯ ದೇವಾಲಯ ಸಹ ಇದೆ. ಬೆಂಗಳೂರಿನ ಪುರಾತನ ಕೊಂಡಿಯಂತೆ ಈ ದೇವಾಲಯಗಳೂ ಇಲ್ಲಿನ ಕಲ್ಲಿನ ಬಂಡೆಗಳು ಅದರಲ್ಲಿನ ಶಾಸನಗಳು ಎಲ್ಲರನ್ನೂ ತನ್ನತ್ತ ಸೆಳೆಯುತ್ತ ಇರುವುದರಲ್ಲಿ ಸಂಶಯವಿಲ್ಲ.

Related Articles

ಪ್ರತಿಕ್ರಿಯೆ ನೀಡಿ

Latest Articles