ನಾಳೆ ನಾನಿರುವುದಿಲ್ಲ !

-ಉಳಿ ಯೋಗೀಂದ್ರ ಭಟ್
ಶ್ರೀ ಕೃಷ್ಣವೃಂದಾವನ, ನ್ಯೂಜೆರ್ಸಿ, ಅಮೇರಿಕ

ಇದು ಪರಮ ಸತ್ಯ. ಆದರೂ ಇದನ್ನು ಚೆನ್ನಾಗಿ ಅರಿತಿರುವ ಮನುಷ್ಯ ಮಾತ್ರ ತಾನು  ಚಿರಂಜೀವಿ ಎಂಬಂತಾಡುವುದು ನಿಜವಾಗಿಯೂ ವಿಚಿತ್ರ! 

ಎಲ್ಲವನ್ನೂ ಕೂಡಿಟ್ಟು, ಯಾರಿಗೂ ಕೊಡದೆ ಬಚ್ಚಿಟ್ಟು, ನಾಳೆ ಇದನ್ನು ನಾನೇ ಅನುಭವಿಸುತ್ತೇನೆ ಎನ್ನುವ ಹುಚ್ಚು ಧೈರ್ಯವೇ ನಮ್ಮ ಜಗತ್ತಿನ ವೈಶಿಷ್ಟ್ಯ!    

 ನಮ್ಮನ್ನು ಬಿಟ್ಟರೆ  ಇತರ ಯಾವ ಜೀವಿಗಳಿಗೂ ದೇವರು, ’ಇದು ನನಗೆ ನಾಳೆಗೆ, ನನ್ನ ವಂಶಜರಿಗೆ’  ಎಂದು ಕೂಡಿಡುವ ಬುದ್ಧಿಯನ್ನು ಕೊಡಲಿಲ್ಲ.  ಹುಟ್ಟಿನ ಗುಟ್ಟು ಅವುಗಳಿಗೆ ಗೊತ್ತಿಲ್ಲ! ಸಾವಿನ ಕಲ್ಪನೆಯೂ ಅವುಗಳಿಗಿಲ್ಲ ! ಆದರೂ ಮನುಷ್ಯನನ್ನು ಹೊರತು ಯಾವೊಂದು ಜೀವಿಯೂ ನಾಳೆಯ ಬಗ್ಗೆ ಚಿಂತಿಸುವುದಿಲ್ಲ! ಈವತ್ತು ಹೊಟ್ಟೆ ತುಂಬಿತೋ ನೆಮ್ಮದಿಯಾಗಿ ನಿದ್ರಿಸಿಬಿಡುತ್ತವೆ! 
  
ಬಹುಶಃ ಈ ಪ್ರಪಂಚದಲ್ಲಿ ನಮ್ಮನ್ನು ಬಿಟ್ಟು ಬೇರೆ ಯಾವ ಜೀವಿಗೂ ನಿದ್ರೆಯ ಕೊರತೆಯಿಲ್ಲ. ವಾಸ್ತವವಾಗಿ ನಿಶ್ಚಿಂತೆಯ ನಿದ್ರೆ ಮನುಷ್ಯನಿಗೆ ಮಾತ್ರ ಬರಬೇಕಿತ್ತು !  ಇಲ್ಲಿರುವುದು ಯಾವುದೂ ಶಾಶ್ವತವಲ್ಲ ಎಂದು ಚೆನ್ನಾಗಿ ಅರಿತವನಿಗೆ ಯಾವುದರ ಚಿಂತೆಯಾದರೂ ಯಾಕೆ? ನಾಳೆ ನಾನೇ ಇರುವುದಿಲ್ಲ,  ’ಇಲ್ಲಿ ಇನ್ನು ಏನಾದರೂ ನನಗೇನು?’ ಎಂದು ನೆಮ್ಮದಿಯಿಂದ ಇರಲು ಯಾಕಾಗುವುದಿಲ್ಲ? ಬಾಡಿಗೆಯ ಮನೆಯಲ್ಲಿರುವವನು ಭಾವಿಸುವಂತೆ ’ಇದು ನನ್ನದಲ್ಲವಲ್ಲ?, ಎಂದಾದರೂ ಬಿಟ್ಟು ಹೋಗಲೇಬೇಕಲ್ಲ?’  ಎನ್ನುವ ಅಸಡ್ಡೆ ನಶ್ವರವಾದ ಈ ಶರೀರ, ಐಶ್ವರ್ಯ, ಸಂಬಂಧಗಳ ಮೇಲೇಕೆ ಬರುವುದಿಲ್ಲ?   

ಸೃಷ್ಟಿಕರ್ತನಷ್ಟೇ ಬಲ್ಲ !     

ಆಯುಷಃ ಕ್ಷಣ ಏಕೋಽಪಿ ಸರ್ವ ರತ್ನೈರ್ನಲಭ್ಯತೇ ........

 ಬದುಕಿನ ಒಂದೊಂದು ಕ್ಷಣವೂ ಅಮೂಲ್ಯ. ಸಿಕ್ಕಿದ್ದು ಸೌಭಾಗ್ಯ. ಬೇಕೆಂದೆನಿಸಿದರೆ ಹಣಕೊಟ್ಟು ಹೆಚ್ಚಿಸಿಕೊಳ್ಳುವ ಅವಕಾಶವನ್ನು ದೇವರು ಯಾರಿಗೂ ಕೊಟ್ಟಿಲ್ಲ. ಅವನ ಕರೆಬಂದಾಗ ಯಾರದಾರೂ ಎಲ್ಲಿದ್ದರೂ ಇದ್ದದ್ದನ್ನು ಇದ್ದಹಾಗೇ ಬಿಟ್ಟು ಹೋಗಲೇ ಬೇಕು ತಾನೇ? ಮತ್ತೆಲ್ಲಿದೆ ಅವಕಾಶ? 

ಇರುವಷ್ಟು ಕಾಲ  ಏನನ್ನಾದರೂ ಒಳಿತನ್ನು ಸಾಧಿಸಲು ಪ್ರಯತ್ನಿಸೋಣ. ಜೀವನದಲ್ಲಿ ಸಿಕ್ಕಿದ ಅಮೂಲ್ಯ ಕ್ಷಣಗಳನ್ನು ಸದುಪಯೋಗಿಸಿಕೊಂಡು  ಪುಣ್ಯಸಂಪಾದಿಸಿಕೊಂಡವನೇ ಜಾಣ!  

ಹಿಂದೆ ಮುಂದೆ ನೋಡದೇ ಬಂದ ಬಸ್ಸನ್ನೇರಿ ಹೊರಟವನು ಹೋಗಿಯೇ ಬಿಡುತ್ತಾನೆ. ಮುಂದೆ ಬೇರೆ ಬಸ್ಸು ಸಿಗಬಹುದೆಂದು ಕಾದು ಕುಳಿತವನು ಭರವಸೆ ಹುಸಿಯಾದರೆ ಅಲ್ಲಿಯೇ ಉಳಿದುಬಿಡುತ್ತಾನೆ!  

ಸತ್ಕರ್ಮದ ಆಚರಣೆಗೆ ಪ್ರೇರಣೆ ಸಿಕ್ಕಿದ ತತ್ ಕ್ಷಣ ಪ್ರವರ್ತಿಸಬೇಕು. ತಡ ಮಾಡಬಾರದು. ನಾಳೆಗೆ ನೋಡೋಣವೆಂದು ಮುಂದೂಡಿದರೆ ನಮಗೇ ನಷ್ಟ. ಹಲಸಿನ ಹಣ್ಣಿನ ಸ್ವಾದವನ್ನು ಅದು ಸಿಗುವ ಕಾಲದಲ್ಲಷ್ಟೇ  ಆಸ್ವಾದಿಸಲು ಸಾಧ್ಯ. ಮತ್ತೆ ಯಾವಾಗಲೋ ಬೇಕೆಂದು ಬಯಸಿದರೆ ಅದು ಸಿಗುವುದಿಲ್ಲ !  
  
ಗೃಹೀತ ಇವ ಕೇಶೇಷು ಮೃತ್ಯುನಾ ಧರ್ಮಮಾಚರೇತ್.....  
 
 ಧರ್ಮಕಾರ್ಯಗಳಿಗೆ ಸಿಗುವ ಪ್ರತಿಯೊಂದು ಸಂದರ್ಭವನ್ನೂ ಅಂತಿಮ ಅವಕಾಶವೆಂದೇ ಭಾವಿಸಬೇಕು.  ಏಕೆಂದರೆ ಮೃತ್ಯುವಂತೂ ಯಾವಾಗಲೂ ನಮ್ಮ ಬಗಲಿಗೇ ತಗಲಿಕೊಂಡಿರುತ್ತಾನೆ !    

ಬದುಕಿನ ಅಮೂಲ್ಯ ಕ್ಷಣಗಳ ಆಳ ಅಗಲವನ್ನು ಕಂಡವರಿಲ್ಲ. ಇರುವಷ್ಟು ಹೊತ್ತು ಸಾಧ್ಯವಾಗುವಷ್ಟು ಸಾಧಿಸುವ ಮಹತ್ಕಾರ್ಯಗಳ ಸಾಧನೆಯಿಂದಷ್ಟೇ ಜೀವನದ ಸಾರ್ಥಕತೆ.  ನೀರಿನಾಳಕ್ಕಿಳಿದು ಶಂಖವನ್ನು, ಮುತ್ತನ್ನು ಸಂಗ್ರಹಿಸುವ ಶ್ರಮಜೀವಿಯಂತೆ.  ಉಸಿರು ಕಟ್ಟಿಕೊಂಡಿರಲು ಸಾಧ್ಯವಾಗುವಷ್ಟು ಹೊತ್ತು ನೀರಿನೊಳಗಿದ್ದು, ಸಮಯವನ್ನು ಸದುಪಯೋಗಪಡಿಸಿಕೊಂಡು ಸಂಗ್ರಹಿಸಿಕೊಳ್ಳಲು ಪ್ರಯತ್ನಿಸಿದ್ದೇ ಸಾಧನೆಯ ಪರಮಾವಧಿ.   
 

Related Articles

ಪ್ರತಿಕ್ರಿಯೆ ನೀಡಿ

Latest Articles