ಮೈಸೂರಿನ ಶ್ರೀ ವ್ಯಾಸರಾಜರ ಮಠದಲ್ಲಿ ಸಂಭ್ರಮ, ಗ್ರಂಥ ಬಿಡುಗಡೆ, ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ
*ವಾರುಣಿ ರಘುರಾಮ್
ಮೈಸೂರು: ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಸೋಸಲೆ ವ್ಯಾಸರಾಜ ಮಠದ ಶ್ರೀ ವ್ಯಾಸತೀರ್ಥ ವಿದ್ಯಾಪೀಠದ 4ನೇ ವಾರ್ಷಿಕೋತ್ಸವ ಫೆ. 28ರ ಸಂಜೆ 5.30ಕ್ಕೆ ಆಯೋಜಿಸಲಾಗಿದೆ. ಕೃಷ್ಣಮೂರ್ತಿಪುರಂ 3ನೇ ಮುಖ್ಯರಸ್ತೆಯಲ್ಲಿರುವ ಶ್ರೀ ಮಠದ ಆವರಣದಲ್ಲಿ ಪೀಠಾಧಿಪತಿ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಂಸ್ಕೃತ ವಿವಿ ಕುಲಪತಿ ಪ್ರೊ. ಕೆ.ಇ. ದೇವನಾಥನ್, ಶ್ರೀ ವ್ಯಾಸತೀರ್ಥ ವಿದ್ಯಾಪೀಠದ ವ್ಯವಸ್ಥಾಪಕ ಟ್ರಸ್ಟಿ ವಿದ್ವಾನ್ ಪಿ.ಎಸ್. ಶೇಷಗಿರಿ ಆಚಾರ್ಯ, ಗೌರವ ಕಾರ್ಯದರ್ಶಿ ಡಾ. ಡಿ.ಪಿ. ಮಧುಸೂದನಾಚಾರ್ಯ, ಪ್ರಾಚಾರ್ಯ ಡಾ. ಸಿ.ಎಚ್. ಶ್ರೀನಿವಾಸಮೂರ್ತಿ ಆಚಾರ್ಯ, ಉಪ ಪ್ರಾಚಾರ್ಯ ವಿದ್ವಾನ್ ಬಿದರಹಳ್ಳಿ ಕೃಷ್ಣಾಚಾರ್ಯ, ವಿದ್ವಾನ್ ಶ್ರೀಕಾಂತಾಚಾರ್ಯ ಕಳಸಾಪುರ ಭಾಗವಹಿಸಲಿದ್ದಾರೆ.
ನವದೆಹಲಿ ಕೇಂದ್ರೀಯ ಸಂಸ್ಕೃತ ವಿವಿ ಕುಲಪತಿಯಾಗಿ ನೇಮಕಗೊಂಡ ಪ್ರೊ. ಶ್ರೀನಿವಾಸ ವರಖೇಡಿ ಅವರಿಗೆ ಮಠದ ವತಿಯಿಂದ ಸನ್ಮಾನಿಸಲಿದ್ದು, ಬೆಂಗಳೂರಿನ ಶ್ರೀ ಪೂರ್ಣಪ್ರಜ್ಞ ಸಂಶೋಧನಾ ಮಂದಿರದ ನಿರ್ದೇಶಕ ಡಾ. ಆನಂದತೀರ್ಥ ನಾಗಸಂಪಿಗೆ ಅಭಿನಂದನಾ ಭಾಷಣ ಮಾಡಲಿದ್ದಾರೆ.
ಗ್ರಂಥ ಬಿಡುಗಡೆ: ಇದೇ ಸಂದರ್ಭ ಶ್ರೀ ಸತ್ಯಧರ್ಮ ತೀರ್ಥ ಸ್ವಾಮೀಜಿ ವಿರಚಿತ ಟೀಕಾ ಮತ್ತು ಟಿಪ್ಪಣಿ ಸಹಿತ `ತತ್ವ ಸಂಖ್ಯಾನ’ ಕನ್ನಡಾನುವಾದ ಗ್ರಂಥವನ್ನು (ಅನುವಾದ: ಶ್ರೀ ವಿದ್ಯಾಶ್ರೀಶ ತೀರ್ಥರು) ಅತಿಥಿಗಳು ಬಿಡುಗಡೆ ಮಾಡಲಿದ್ದಾರೆ. ನಂತರ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ, ಶಾಸ್ತ್ರ ಸಂವಾದ ಮತ್ತು ವಿದ್ಯಾಪೀಠದ ಹಿರಿಯ ವಿದ್ಯಾರ್ಥಿಗಳಿಂದ ಸಂಸ್ಕೃತ ನಾಟಕ ಪ್ರದರ್ಶನ ನಡೆಯಲಿದೆ ಎಂದು ವಿದ್ಯಾಪೀಠದ ಪ್ರಕಟಣೆ ತಿಳಿಸಿದೆ.
ಶ್ರೀ ವ್ಯಾಸತೀರ್ಥ ವಿದ್ಯಾಪೀಠ ನಡೆದುಬಂದ ಹಾದಿ:
ಮೈಸೂರಿನ ಶ್ರೀ ವ್ಯಾಸತೀರ್ಥ ವಿದ್ಯಾಪೀಠ- ಇದು ಶ್ರೀ ಶ್ರೀ ವಿದ್ಯಾತೀರ್ಥ ಮಹಾಸ್ವಾಮಿಗಳ ಕಲ್ಪನೆಯ ಕೂಸು. ಪೂರ್ವಾಶ್ರಮದಲ್ಲಿ ದೇಶದ ವಿವಿಧ ಪ್ರತಿಷ್ಠಿತ ವಿಶ್ವ ವಿದ್ಯಾಲಯಗಳಿಗೆ ಕುಲಪತಿಗಳಾಗಿದ್ದ ಅವರು (ಪ್ರೊ. ಡಿ. ಪ್ರಹ್ಲಾದಾಚಾರ್ಯರು) ತಮ್ಮ ಅನುಭವ, ಕಾಳಜಿ ಮತ್ತು ಕಳಕಳಿಯ ಹಿನ್ನೆಲೆಯಲ್ಲಿ ತಿರುಮಕೂಡಲು ನರಸೀಪುರ ತ್ರಿವೇಣಿ ಸಂಗಮದ ಪವಿತ್ರ ತಾಣದಲ್ಲಿ 2015ರಲ್ಲೇ `ಶ್ರೀ ವ್ಯಾಸತೀರ್ಥ ಸಂಸ್ಕೃತ ವೇದಾಂತ ಗುರುಕುಲ’ ಕ್ಕೆ ಬೀಜಾಂಕುರ ಮಾಡಿದರು. ಕುಲಪತಿ ವೃತ್ತಿಯಿಂದ ನಿವೃತ್ತರಾದರೂ ಅವರ ಬೋಧನಾ ಪ್ರವೃತ್ತಿ, ವಿದ್ಯಾರ್ಥಿ ವಾತ್ಸಲ್ಯ, ಹೊಸದೇ ಆದ ವಿದ್ಯಾಪೀಠ ಕಟ್ಟುವ ಉತ್ಸಾಹ ಮತ್ತಷ್ಟು ಹೆಚ್ಚಾಗುತ್ತಲೇ ಇತ್ತು ಎಂಬುದು ಗಮನೀಯ ಸಂಗತಿ.
ಮಹತ್ತರವಾದ ಭಾರತೀಯ ವೇದ- ಶಾಸ್ತ್ರ ವಿದ್ಯೆಯು ವಿದ್ಯಾರ್ಥಿಗಳ ಮನೋ ಭೂಮಿಕೆಯಲ್ಲಿ ಬೇರೂರಿ ಅವರು ಮಹೋನ್ನತ ವ್ಯಕ್ತಿತ್ವ ಹೊಂದಿ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು. ಇದರೊಂದಿಗೆ ಒಂದು ಹೊಸ ಪೀಳಿಗೆಯೇ ಸನಾತನ ಸಂಸ್ಕೃತಿ, ವೇದ-ಶಾಸ್ತ್ರಗಳ ಪ್ರತಿಮೆ ಮತ್ತು ಪ್ರತೀಕಗಳಾಗಿ ವಿಶ್ವಕ್ಕೆ ಬೆಳಕಾಗಬೇಕು ಎಂಬುದು ಶ್ರೀಗಳ ಮಹತ್ವಾಕಾಂಕ್ಷೆಯಾಗಿತ್ತು. ಅದಕ್ಕಾಗಿ ಅವರು ಸ್ವತಃ ತಿರುಮಕೂಡಲು ನರಸೀಪುರದಲ್ಲೇ ನೆಲೆಸಿ ವಿದ್ಯಾರ್ಥಿಗಳ ತಂಡ ಕಟ್ಟಲು ಆರಂಭಿಸಿದರು. ೬೦ರ ನಂತರ ಅರಳಿ ಮತ್ತೆ ಶಾಸ್ತ್ರವಿದ್ಯಾ ಸಂವರ್ಧನೆಗೆ ಮರಳಿದರು.
ಜೀವನದ ವಿವಿಧ ಮಜಲುಗಳಲ್ಲಿ ಯಶಸ್ವೀ ಪುರುಷರಾದ ಅವರಿಗೆ ಶ್ರೀ ವ್ಯಾಸತೀರ್ಥರ ಪರಮ ಅನುಗ್ರಹವೇ ಸನ್ಯಾಸ ಪೀಠದಲ್ಲಿ ವಿರಾಜಮಾನರಾಗಲು ರಹದಾರಿಯನ್ನೇ ಕಲ್ಪಿಸಿತು. ಸನ್ಯಾಸಾಶ್ರಮ ಸ್ವೀಕಾರದ ನಂತರ ಶ್ರೀ ವಿದ್ಯಾಶ್ರೀಷ ತೀರ್ಥರು ಗುರುಕುಲವನ್ನು ಮೈಸೂರಿನ ಕೃಷ್ಣಮೂರ್ತಿ ಪುರಂಗೆ ಸ್ಥಳಾಂತರಿಸಿ ಶ್ರೀ ವ್ಯಾಸತೀರ್ಥ ವಿದ್ಯಾಪೀಠದ ಕಾರ್ಯ ಚಟುವಟಿಕೆಗಳಿಗೆ ಮರು ಹುಟ್ಟು ನೀಡಿದರು.
ಉನ್ನತ ಮಟ್ಟದ ಬೋಧನೆ:
ಮೊದಲು 5 ಜನ ವಿದ್ಯಾರ್ಥಿಗಳಿಂದ ಆರಂಭವಾದ ವಿದ್ಯಾಪೀಠದಲ್ಲಿ ಇಂದು 42 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಇಲ್ಲಿ ಎರಡು ವಿಭಾಗಗಳಿವೆ. ವೇದ ವಿಭಾಗ(ಋಗ್ ಮತ್ತು ಯಜುರ್) ಮತ್ತು ಶಾಸ್ತ್ರವಿಭಾಗ (ನ್ಯಾಯ, ವ್ಯಾಕರಣ, ವೇದಾಂತ ಮತ್ತು ಮೀಮಾಂಸ)ವನ್ನು ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತಿದೆ. ಇದರೊಂದಿಗೆ ಯೋಗ, ವಿಜ್ಞಾನ, ಇಂಗ್ಲಿಷ್, ಕಂಪ್ಯೂಟರ್ ಶಿಕ್ಷಣವನ್ನೂ ಮಕ್ಕಳಿಗೆ ಒದಗಿಸಲಾಗುತ್ತಿದೆ. ಖಾಸಗಿ ವಿದ್ಯಾರ್ಥಿಯಾಗಿ ಎಸ್ಸೆಸ್ಸೆಲ್ಸಿಯಿಂದ ಪಿಎಚ್‌ಡಿ ವರೆಗೆ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅವಕಾಶವಿದ್ದು, ಇದಕ್ಕೆ ಪರಿಣತರಿಂದ ಪೂರಕ ಬೋಧನೆಯನ್ನೂ ಕೊಡಿಸುವ ವ್ಯವಸ್ಥೆ ವಿದ್ಯಾಪೀಠದಲ್ಲಿ ಇದೆ ಎನ್ನುತ್ತಾರೆ ವಿದ್ಯಾಪೀಠದ ಗೌರವ ಕಾರ್ಯದರ್ಶಿ ಡಾ. ಡಿ.ಪಿ. ಮಧುಸೂದನಾಚಾರ್ಯರು.
ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ವಸತಿ ಮತ್ತು ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಗಿದೆ. 10 ಜನ ಉಪನ್ಯಾಸಕರು, ಒಬ್ಬ ಪ್ರಾಚಾರ್ಯರು ಶಿಕ್ಷಣ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ಆಸಕ್ತಿಗೆ ತಕ್ಕಂತೆ ಜ್ಯೋತಿಷ ಮತ್ತು ಪೌರೋಹಿತ್ಯದಲ್ಲೂ ಹೆಚ್ಚಿನ ಜ್ಞಾನಾರ್ಜನೆಗೆ ಇಲ್ಲಿ ವೇದಿಕೆ ಇದೆ.
ನೂತನ ಯೋಜನೆ: ಮೈಸೂರಿನ ಶ್ರೀನಗರದಲ್ಲಿ ಸದ್ಯ 2.5 ಎಕರೆ ಜಾಗ (ಸಿಎ ಸೈಟ್) ವಿದ್ಯಾಪೀಠಕ್ಕೆ ಮಂಜೂರಾಗಿದೆ. ಅಲ್ಲಿ 6 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಸುಸಜ್ಜಿತ ವಿದ್ಯಾಪೀಠ ಇನ್ನೆರಡು ವರ್ಷದಲ್ಲಿ ತಲೆ ಎತ್ತಲಿದೆ. ಮೂಲಕ ಆರ್ಷ ಪರಂಪರೆಯ ಸಂರಕ್ಷಣೆಗೆ ಇನ್ನಷ್ಟು ಭದ್ರ ಬುನಾದಿ ದೊರಕಲಿದೆ.