ಗೌರಿಗದ್ದೆಯಲ್ಲಿಅರಳಿದ ಸನ್ಯಾಸಪುಷ್ಪ ಶ್ರೀ ವಾದಿರಾಜರು

ಮಾರ್ಚ್ 21 ಶ್ರೀ ವಾದಿರಾಜ ಗುರುಗಳ ಆರಾಧನೆಯ ಪ್ರಯುಕ್ತ ಈ ಲೇಖನ.

*ಡಾ.ವಿದ್ಯಾಶ್ರೀ ಕುಲಕರ್ಣಿ. ಮಾನವಿ.

||ತಪೋವಿದ್ಯಾ ವಿರಕ್ತ್ಯಾದಿ ಸದ್ಗುಣೌ ಘಾಕರಾನಹಮ್ ವಾದಿರಾಜ ಗುರೂನ್ ವಂದೇ ಹಯಗ್ರೀವ ದಯಾಶ್ರಯಾನ್|| ಶ್ರೀಮಧ್ವಾಚಾರ್ಯರ ಬಳಿಕ ದ್ವೈತಮತದ ಪ್ರವರ್ತಕರಾಗಿ ಮೆರೆದು ಭಾರತದ ಭಕ್ತಿಪಂಥದ ಪರಂಪರೆಯಲ್ಲಿ ಅತಿ ಎತ್ತರದ ಸ್ಥಾನ ಪಡೆದವರು ಶ್ರೀವಾದಿರಾಜರು. ವಾದಿರಾಜ ಸಾರ್ವಬೌಮರು ಮಧ್ವ ಗುರುಗಳಲ್ಲಿ ಪ್ರಮುಖರಾದ ಯತಿವರೇಣ್ಯರು.

ಮಾಘ ಶುದ್ಧ ದ್ವಾದಶಿ ವಾದಿರಾಜರಸ್ವಾಮಿಗಳು ಮನುಕುಲದ ಉದ್ಧಾರಕ್ಕೆ ಈ ಪವಿತ್ರ ಭೂಮಿಯಲ್ಲಿ ಅವತರಿಸಿದ ದಿನ. ಈ ಮಹಾನುಭಾವರು ಹುಟ್ಟುತ್ತಲೆ ಮಹಿಮೆ ತೋರಿದವರು. ಇವತ್ತಿಗು ತೋರಿಸುತ್ತಲೇ ಇದ್ದಾರೆ. ಇವರ ಪೂರ್ವಾಶ್ರಮದ ತಂದೆ ತಾಯಿಗಳು ರಾಮಾಚಾರ್ಯ ಹಾಗೂ ಗೌರಿದೇವಿ ಇದ್ದದ್ದು ಕುಂದಾಪುರ ಸಮೀಪದ ಆನೆಗುಡ್ಡೆ.

ಮದುವೆ ಆಗಿ ತುಂಬಾ ವರ್ಷಗಳು ಕಳೆದರೂ ಮಕ್ಕಳು ಆಗದೆ ಪರಿತಪಿಸುತ್ತಿದ್ದ ಜೀವಗಳಿಗೆ ಭಗವಂತನ ಅನುಗ್ರಹವಾದ ಸಮಯ. ಆವಾಗ ಅಲ್ಲಿಗೆ ಶ್ರೀ ವಾಗೀಶ ತೀರ್ಥರ ಆಗಮನ. ಈ ದಂಪತಿಗಳ ಮನದಿಂಗಿತ ತಿಳಿದಿದ್ದ ಭಗವಂತನ ಇಚ್ಛೆಯಮತೆಯೇ ಅನುಗ್ರಹಿಸಿದರು. ಆಗ ಶ್ರೀ ವಾಗೀಶ ತೀರ್ಥರು ಹೇಳಿದರು ನಿಮಗೆ ಭಗವತ್ಸಂಕಲ್ಪದಂತೆ ಮಗು ಆಗುತ್ತದೆ. ಆದರೆ ಆ ಮಗುವನ್ನು ಭೂಸ್ಪರ್ಶ ಮಾಡದೆಯೇ ನೀವು ನಮಗೆ ಕೊಡಬೇಕು ಅಂತ ಹೇಳಿದರು. ಶ್ರೀವಾಗೀಶ ತೀರ್ಥರು ಹೀಗೆ ಹೇಳಿದರು. ಒಂದು ವೇಳೆ ಮಗು ಮನೆಯ ಹೊರಗೆ ಹುಟ್ಟಿದರೆ ಅದು ನಮಗೆ ಸೇರಿದ್ದು. ಮನೆಯ ಒಳಗೆ ಹುಟ್ಟಿದರೆ ನಿಮಗೆ ಸೇರಿದ್ದು. ಮನಸಿಗೆ ಚಿಂತೆಯಾದರೂ ಗುರುಗಳ ಆಜ್ಞೆ, ಭಗವಂತನ ಇಚ್ಛೆಯೆಂದರಿತಿದ್ದರು. ಆದರೂ ಈ ಮಾತಿನಿಂದ ದಂಪತಿಗಳಿಬ್ಬರೂ ತುಂಬಾ ಬಹಲ ಎಚ್ಚರಿಕೆ ವಹಿಸಿದರು. ಗರ್ಭಿಣಿ ಹೆಂಡತಿ ದಿನ ತುಂಬಿದಂತೆಲ್ಲ ಮನೆಯ ಹೊರಗೆ ಹೋಗದಂತೆ ನೋಡಿಕೊಂಡರು. ಹೊಸಿಲು ಕೂಡಾ ದಾಟಲು ಬಿಟ್ಟಿರಲಿಲ್ಲ. ಆದರೆ ಅವನ ಸಂಕಲ್ಪ ಹೀಗೇ ಇದ್ದಾಗ ಅದನ್ನು ಬದಲಾಯಿಸಲು ಯಾರಿಂದ ಸಾಧ್ಯ. ಆ ಅಮೃತ ಘಳಿಗೆ ಬಂದೇ ಬಿಟ್ಟಿತು.

ಒಂದು ಮಾಘ ಶುದ್ಧ ದ್ವಾದಶಿ ಸಾಧನ ದ್ವಾದಶಿ ಊಟಕ್ಕೆ ಕುಳಿತ ಸಮಯ. ಗೋವುಗಳನ್ನು ಕಾಯುವ ಗೋಪಾಲನ ಸಂಕಲ್ಪದಂತೆ ಒಂದು ಗೋವು ಬಂದು ಬೆಳೆದ ಬೆಳೆಯನ್ನೆಲ್ಲಾ ತಿನ್ನುತ್ತಿರುವಾಗ , ಆ ಗೋವನ್ನು ಓಡಿಸಲು ಹೋದರು. ಆ ಗೌರೀಗದ್ದೆಯಲ್ಲೇ ಹೆರಿಗೆ ಆಯಿತು . ಸನ್ಯಾಸಪುಷ್ಪ ಅರಳಿತು. ದೇವರ ಸಂಕಲ್ಪ ನೆರವೇರಿತು. ಬಂಗಾರದ ಹರಿವಾಣದಲ್ಲಿ ಮಗುವನ್ನು ಮಠಕ್ಕೆ ತಂದರು ಶ್ರೀವಾಗೀಶ ತೀರ್ಥರೆ ಸ್ವತಃ ತಾವೇ ಮಗುವಿನ ಮೈ ತೊಳೆದರು.

ಭೂವರಾಹ ಅಂತ ನಾಮಕರಣ, ದಂಪತಿಗಳ ಮನಸ್ಸಿಗೆ ದುಃಖವಾಗಬಾರದು ಎಂದು ಅವರಲ್ಲಿಯೇ ಕೆಲಕಾಲ ಪಾಲನೆ ಮಾಡಲು ಅವಕಾಶ ಕೊಟ್ಟರು. ನಿತ್ಯ ಆಚಾರ್ಯರು ವಿಷ್ಣುತೀರ್ಥರಿಗೆ ಕೊಟ್ಟ ಭೂವರಾಹ ದೇವರ ಪ್ರತಿಮೆಗೆ ಅಭಿಷೇಕ ಮಾಡಿದ ಹಾಲನ್ನೆ ಕಳಿಸುತ್ತಿದ್ದರು. ಆ ಮಗು ಆ ಹಾಲನ್ನು ಕುಡಿದು ಭೂಮಂಡಲಕ್ಕೆ ತಂಪೆರೆವ ಚಂದ್ರಮನಂತೆ ಬೆಳೆಯತೊಡಗಿತು.

ಮುಂದೆ 5 ವರ್ಷಕ್ಕೆ ಉಪನಯನ. 8 ವರ್ಷಕ್ಕೆ ಸನ್ಯಾಸ ದೀಕ್ಷೆ ಕೊಟ್ಟು ಶ್ರೀವಾದಿರಾಜತೀರ್ಥರು ಎಂದು ನಾಮಕರಣ ಮಾಡಿದರು. ಜ್ಞಾನಾನಂದಮಯನಾದ ಹಯಗ್ರೀವ ದೇವರು ಒಲಿದು ಬಂದಿದ್ದು. ಇನ್ನು ವಾದಿರಾಜರಿಗೆ ಹಯಗ್ರೀವ ದೇವರು ಒಲಿದು ಬಂದ ಪ್ರಸಂಗವೇ ಬಹಳ ವಿಸ್ಮಯಕಾರಿ.

ಸುಮಾರು ಹದಿನಾರನೆಯ ಶತಮಾನದಲ್ಲಿ ಗೋವಾ ಪ್ರಾಂತದಲ್ಲಿ ನೆಲೆಸಿದ್ದ ಹಿಂದೂಗಳನ್ನು ಪೋರ್ಚುಗೀಸರ ದಬ್ಬಾಳಿಕೆ, ಬಲವಂತದ ಮತಾಂತರ ನಡೆಯುತ್ತಿದ್ದ ಕಾಲ. ಇದರಿಂದ ನೊಂದ ಬ್ರಾಹ್ಮಣ ಜನ ಮತ್ತು ಅಕ್ಕಸಾಲಿಗರು ಇದ್ದ ಬಿದ್ದ ಮನೆ ಐಶ್ವರ್ಯಗಳನ್ನು ಬಿಟ್ಟು ಆತ್ಮರಕ್ಷಣೆ ಯಲ್ಲದೆ ಧರ್ಮ ರಕ್ಷಣೆಗಾಗಿ ಗೋವಾ ಪ್ರಾಂತ ಬಿಟ್ಟು ಕರ್ನಾಟಕದ ಕಾರವಾರ, ಶಿರ್ಸಿ ಮತ್ತು ಕರಾವಳಿ ಪ್ರದೇಶಗಳನ್ನು ತಮ್ಮ ನೆಲೆಯಾಗಿ ಇಟ್ಟುಕೊಂಡರು. ಈ ಸೋನಾರರು ದೈವಜ್ಞ ಬ್ರಾಹ್ಮಣರೆಂದು ಕರೆಸಿಕೊಳ್ಳುತ್ತಿದ್ದರು. ಒಂದುಸಲ ಒಬ್ಬ ಸಿರಿವಂತನು ಕುಶಲಕರ್ಮಿಯಾದ ದೈವಜ್ಞನಿಗೆ ಒಂದು ಗಣಪತಿ ಮೂರ್ತಿ ಮಾಡಿಕೊಡಲು ಕೇಳಿಕೊಂಡನು. ದೈವಜ್ಞ ಸಂತೋಷದಿಂದ ಪಂಚಲೋಹ ಕರಗಿಸಿ ಗಣಪತಿಯ ಅಚ್ಚಿನಲ್ಲಿ ಎರಕ ಹೊಯ್ದು ಇಟ್ಟನು. ಕೆಲವು ದಿನಗಳ ನಂತರ ತೆಗೆದು ನೋಡಿದರೆ ಆಶ್ಚರ್ಯ ಕಾದಿತ್ತು.

ಲೋಹವು ಗಣಪತಿ ಬದಲು ಹಯಮುಖವಾಗಿ ಹಯಗ್ರೀವ ರೂಪ ತಾಳಿತ್ತು. ವಿಗ್ರಹ ತಣ್ಣಗಾಗಿರಲಿಲ್ಲ. ಮತ್ತೊಮ್ಮೆ ಕರಗಿಸಿ ಹಾಕಲು ಪ್ರಯತ್ನಿಸಿದನು. ಮತ್ತೆ ಮತ್ತೆ ಕರಗಿಸಿ ಎರಕ ಹೊಯ್ದರೂ ಆ ರಾತ್ರಿ ದೈವಜ್ಞ ಬ್ರಾಹ್ಮಣನಿಗೆ ದೇವರು ಕಾಣಿಸಿಕೊಂಡು ನೀನು ಅಚ್ಚಿಗೆ ಹಾಕಿ ತೆಗೆದ ಹಯಗ್ರೀವ ಮೂರ್ತಿಯನ್ನು ನಾಳೆ ಮುಂಜಾನೆ ಬರುತ್ತಿರುವ ಶ್ರೀ ವಾದಿರಾಜರಿಗೆ ಒಪ್ಪಿಸು ಎಂದು ಹೇಳಿದಂತಾಯಿತು. ಕುಶಲಕರ್ಮಿ ಕನಸಿನ ವಿಷಯ ತನ್ನ ಸಮಾಜ ಬಾಂಧವರಿಗೆ ಹೇಳಿದನು. ಇದು ಒಳ್ಳೆದಾಯಿತು. ಈ ಸಂದರ್ಭವನ್ನು ಸದುಪಯೋಗ ಮಾಡಿಕೊಂಡು ದೇಶಬಿಟ್ಟು ದೇಶಕ್ಕೆ ಬಂದ ನಮ್ಮೆಲ್ಲರ ಸಂಕಷ್ಟ ದೂರಾಗಲಿ ಎಂದು ಪ್ರಾರ್ಥಿಸೋಣ ಎಂದು ನಿರ್ಧರಿಸಿ ಗುರುಗಳಿಗೆ ಸಮರ್ಪಿಸಿದರು.ಹೀಗೆ ಒಲಿದು ಬಂದ ಹಯಗ್ರೀವದೇವರು. ಮುಂದೆ ಶ್ರೀವಾದಿರಾಜರು ಜನಸಾಮಾನ್ಯರ ಕನ್ನಡ ಭಾಷೆಯಲ್ಲೇ ಹಾಡುಗಳನ್ನು ರಚಿಸಿ ಜನತೆಗೆ ತುಂಬಾ ಹತ್ತಿರವಾದರು.

ಲಕ್ಷ್ಮಿ ಶೋಭಾನೆ ” ಹಾಡು

ಗುರುಗಳ ಕರುಣ ಸುಸ್ಥಿರವಾಗಿದ್ದವರಿಗೆ ಹರಿ ನಿನ್ನಾಶ್ರಯ ದೊರಕುವುದೊ” ಎಂಬಂತೆ , ಶ್ರೀವಾದಿರಾಜರ ಕೃತಿಗಳ ಪಾರಾಯಣ ಮಾಡಿದರೆ, ಗುರುಗಳ ಅನುಗ್ರಹ ದೊರೆತಂತೆ. ಅವರೇ ನಮಗೆ ಶ್ರೀಹರಿಯ ಕಾರುಣ್ಯವನ್ನು ಅನುಭವಿಸಲು ದಾರಿ ಮಾಡಿಕೊಡುವ ಯತಿವರೆಣ್ಯರು. ಸಾಮಾಜಿಕ ಸುಧಾರಣೆಗಳ ಜತೆಗೆ ಆಧ್ಯಾತ್ಮದ ಬದುಕಿಗೊಂದು ಕಲಾತ್ಮಕತೆಯನ್ನಿತ್ತು ಲೌಕಿಕಕ್ಕೆ ಅಲೌಕಿಕದ ಬೆರಗನ್ನಿತ್ತವರು ಶ್ರೀವಾದಿರಾಜರು. ತತ್ವ ಸತ್ವ ಮಹತ್ವಗಳ ” ಲಕ್ಷ್ಮೀ ಶೋಭಾನೆ” ಒಲವು ಚೆಲುವು ಗೆಲುವು, ಜ್ಞಾನ ಭಕ್ತಿ ವೈರಾಗ್ಯಗಳ, ಒಡತಿ ಜಗಜ್ಜನನಿ ಶ್ರೀಮಹಾಲಕ್ಷ್ಮಿ, ಇಂತಹ ಜಗನ್ಮಾತೆಯು ಶ್ರೀಮನ್ನಾರಾಯಣನಿಗೆ ಶುಭಕೋರುವ, ಶ್ರೀಹರಿಯ ಸರ್ವೋತ್ತಮತ್ವವನ್ನು ಸಾರುವ, ಭಗವಂತನಿಗೆ ಸಮರ್ಪಣೆ ಮಾಡಿರುವ, ಸುಂದರ ರತ್ನಖಚಿತ ಹಾರವೇ ಶ್ರೀವಾದಿರಾಜರ “ಲಕ್ಷ್ಮೀ ಶೋಭಾನೆ” ಇಂತಹ ಲಾವಣ್ಯಮಯವಾದ ಹಾರವನ್ನು ಎಲ್ಲರ ಮನನದಲ್ಲೂ ಕಂಗೊಳಿಸುವಂತೆ ಮಾಡಿದವರು ಶ್ರೀವಾದಿರಾಜರು. ಅದರಲ್ಲೂ ಅಂದಿನಿಂದ ಇಂದಿನವರೆಗೂ ಅಬಾಲವೃದ್ಧರಾದಿಯಾಗಿ ಎಲ್ಲರ ಬಾಯಲ್ಲೂ ಸರಾಗವಾಗಿ, ಸುಶ್ರಾವ್ಯವಾಗಿ , ಸ್ತ್ರೀಪುರುಷರಿಬ್ಬರೂ ಅತ್ಯಂತ ಭಕ್ತಿ ಶ್ರದ್ಧೆಯಿಂದ ಹೇಳಲ್ಪಡುವ ಅದ್ಭುತ ವಾದ ಕೃತಿ “ಲಕ್ಷ್ಮಿ ಶೋಭಾನೆ” ತುಂಬ ವಿಶೇಷವಾದದ್ದು.

“ಸಿರಿನಿಲಯನ ಗುಣಗಳ ತಿಳಿದು ಭಜಿಸುವುದೇ ಫಲವಿದು ಬಾಳ್ದುದಕೆ” ಎಂದು ದಾಸರು ಹೇಳಿದಂತೆ, ನಾವು ಹೇಳುವ ಮಂತ್ರ,ಹಾಡುಗಳ ಅರ್ಥವನ್ನು ತಿಳಿದು ಭಜಿಸಿದರೆ ಇನ್ನೂ ಫಲಪ್ರದವಾಗುತ್ತದೆ. ಲಕ್ಷ್ಮೀ ಶೋಭಾನೆ ಹಾಡು ಸರಳ ಸುಂದರವಾಗಿ ಹೇಳುತ್ತೇವೆ. ಕೆಲವು ಸಾಲುಗಳ ಅರ್ಥ ಮೇಲ್ನೋಟಕ್ಕೆ ತಿಳಿದರೂ, ಎಷ್ಟೋ ಸಾಲುಗಳ ನಿಜಾರ್ಥ ತಿಳಿಯುವುದು ಕಷ್ಟವೇ.

ಯತಿಗಳು ರಚಿಸಿರುವ “ಲಕ್ಷ್ಮಿ ಶೋಭಾನೆ ” ಹಾಡು ಅಪಾರವಾದ ಜನಪ್ರಿಯತೆ ಹೊಂದಿ ಮದುವೆಗಳಲ್ಲಿ ಹಾಡಿದರೆ ಮದುಮಕ್ಕಳಿಗಷ್ಟೇ ಅಲ್ಲ ಸಮಸ್ತ ಮನುಕುಲಕ್ಕೆ ಶುಭವಾಗುವುದರಲ್ಲಿ ಸಂದೇಹವೇ ಇಲ್ಲ. ಇದನ್ನು ಪಾರಾಯಣ ಮಾಡುವುದರಿ೦ದ ಮನಸ್ಸಿಗೆ ಶಾಂತಿ, ನೆಮ್ಮದಿ,ಸಂತೋಷ, ಸಂಭ್ರಮ, ದೊರೆಯುತ್ತದೆ. ಮನೋಬಲ ಹೆಚ್ಚುತ್ತದೆ, ಭಯ ದೂರವಾಗುತ್ತದೆ. ಮನೋಧೈರ್ಯ ಬರುತ್ತದೆ. ಪಾರಾಯಣದಿಂದ ನಮ್ಮ ಜೀವನದಲ್ಲಿ ಬಂದೊದಗುವ ಸಂಕಟ, ಸಂಕಷ್ಟ,ಕಂಟಕಗಳನ್ನು ಎದುರಿಸುವ ಮನೋಸ್ಥೈರ್ಯ ನಮಗೆ ದೊರೆಯುವುದೆಂಬುದರಲ್ಲಿ ಸಂದೇಹವಿಲ್ಲ. ಸ್ವ ಇಚ್ಛೆಯಿಂದ ದೇವಲೋಕಕ್ಕೆ ನಡೆದ ಮಹಾನ್ ಯೋಗಿ, ಯೋಗಿಗಳ ರಾಜರು ಶ್ರೀವಾದಿರಾಜರು. ಆಚಾರ್ಯ ಮಧ್ವರಿಗೊಲಿದ ಕಡೆಗೋಲ ಕೃಷ್ಣ ನೆಲೆನಿಂತ ಉಡುಪಿಯ ಇತಿಹಾಸಕ್ಕೆ ಚಿನ್ನದ ಮೆರುಗನ್ನಿತ್ತವರು ಶ್ರೀವಾದಿರಾಜರು. ಶ್ರೀ ಮಧ್ವಾಚಾರ್ಯರ ಕಾಲದಿ೦ದಲೂ ಉಡುಪಿಯಲ್ಲಿ ಎರಡು ತಿಂಗಳಿಗೊಮ್ಮೆ ಪರ್ಯಾಯವಾಗುತ್ತಿತ್ತು. ಶ್ರೀವಾದಿರಾಜರು ಎಲ್ಲಾ ಮಠಾಧೀಶರ ಒಪ್ಪಿಗೆ ಪಡೆದು 2 ವರ್ಷಗಳಿಗೆ ಬದಲಾಯಿಸಿದರು. ಇದರಿಂದ ಉಳಿದ ಮಠಾಧೀಶರಿಗೆ 14 ವರ್ಷಗಳ ಬಿಡುವು ದೊರೆತು ಅವರು ಆ ಸಮಯದಲ್ಲಿ ದೇಶ ಪರ್ಯಟನೆ ಮಾಡಿ ಜ್ಞಾನ ಸಂಪಾದನೆ, ಕ್ಷೇತ್ರದರ್ಶನ, ಶಿಷ್ಯರ ಸ೦ಪರ್ಕ ಮಾಡಬಹುದಾಯಿತು. ಈ ಪರಿವರ್ತನೆಯಿಂದ ಮಧ್ವ ಮತ ಪ್ರಚಾರಕ್ಕೆ ಇನ್ನಷ್ಟು ಅನುಕೂಲವಾಯಿತು.

ಶ್ರೀ ವಾದಿರಾಜ ಗುರುಗಳು ರಚಿಸಿದ ಒಂದೊಂದು ರಚನೆಗಳೂ ಅನರ್ಘ್ಯ ಸಂಪತ್ತು. ರಾಜರ ಅನೇಕ ಗ್ರಂಥಗಳಲ್ಲಿ ವಾದಿರಾಜರ ಪ್ರಾಮಾಣಿಕತೆ, ಸತ್ಯಸಂಧತೆ, ಸಮಾಜದ ದೀನ-ದಲಿತರ ಬಗ್ಗೆ ಅವರಿಗಿದ್ದ ಅನುಕಂಪ, ವಿಷ್ಣುಸರ್ವೋತ್ತಮತ್ವ, ಪ್ರೀತಿ, ಕರ್ತವ್ಯ ಮತ್ತು ಭಕ್ತಿಯ ಸಂದೇಶ ಗಳನ್ನು ಸಾರುತ್ತಲೇ ಮಧ್ವಾಚಾರ್ಯರ ತತ್ವಗಳನ್ನು ಸವಿಸ್ತಾರವಾಗಿ ತಿಳಿಸಿಕೊಟ್ಟರು. ತೀರ್ಥಪ್ರಬಂಧ, ಗುಂಡಕ್ರಿಯೆ, ರುಕ್ಮಿಣೀಶವಿಜಯ, ಯುಕ್ತಿಮಲ್ಲಿಕಾ ಮೊದಲಾದ ಅಪೂರ್ವ ಗ್ರಂಥ ಕರ್ತೃಗಳಾದ, ಲಾತವ್ಯರು, ಋಜುಗಣಸ್ಥರೂ, ಶ್ರೀಮಚ್ಚಂದ್ರಿಕಾಚಾರ್ಯರ ಪ್ರೀತಿಪಾತ್ರರು, ವ್ಯಾಸ-ದಾಸ ಸಾಹಿತ್ಯದ ಅಧಿನಾಯಕರೂ ಆದ ಪರಮ ಪರಮ ಮಹಿಮಾಶಾಲಿಗಳು, .ಹರಿದಾಸರ ನಾಡಾದ ಈ ಪುಣ್ಯ ಭೂಮಿಯಲ್ಲಿ ಅವತರಿಸಿ , ಕೃತಿಗಳ ಮೂಲಕ ಮನುಕುಲವನ್ನು ಉದ್ಧರಿಸಲು ಕಾರಣರಾದ ಹರಿದಾಸಪಂಥ, ಯತಿಶ್ರೇಷ್ಠರ ಗ್ರಂಥ,ಕೃತಿಗಳ ಚಿಂತನ ಮಂಥನಗಳನ್ನು ಇಂದಿನ ಆಧುನಿಕ ಯುಗದಲ್ಲಿ ಮರೆತು ಕರೋನಾದಂತಹ ಮಹಾಮಾರಿಗೆ ತುತ್ತಾಗಿ ಮನುಕುಲ ಅಧೋಗತಿಗೆ ತಲುಪಿತು. ಆದರೆ ಎಂತಹುದೇ ಗಂಭೀರ ಪರಿಸ್ಥಿತಿಗಳಲ್ಲೂ ನಮ್ಮನ್ನು ಒಂದೆಡೆ ಗಟ್ಟಿಯಾಗಿ ಆತ್ಮವಿಶ್ವಾಸದಿಂದ ನಿಲ್ಲುವಂತೆ ಮಾಡುವುದು ಭಗವಂತನಲ್ಲಿ ನಾವು ಮಾಡುವ ಭಕ್ತಿ ಮಾತ್ರ.‌ ಅಂತಹ ಭಕ್ತಿಯನ್ನು ,ಆಧ್ಯಾತ್ಮದ ವಾತಾವರಣವನ್ನು ಮತ್ತೆ ತರುವಂತೆ ಮಾಡುವುದು ನಮ್ನೆಲ್ಲರ ಕರ್ತವ್ಯವಾಗಿದೆ. ಶಾಲಾ ಕಾಲೇಜುಗಳಲ್ಲಿಯೂ ಸಹ ತಿಂಗಳಿಗೊಮ್ಮೆಯಾದರೂ ಭಕ್ತಿಸಾಹಿತ್ಯ, ರಾಮಾಯಣ, ಮಹಾಭಾರತ, ಭಗವದ್ಗೀತೆ, ಹರಿದಾಸಸಾಹಿತ್ಯ, ಶರಣರ ವಚನಗಳ ಕುರಿತು ಒಂದಾದರು ತರಗತಿ ನಡೆಯುವಂತಾಗಬೇಕು.

ಯಾರು ಎಷ್ಟೇ ಎತ್ತರಕ್ಕೆ ಬೆಳೆದರೂ ಭಗವಂತನ ಹೊರತಾಗಿ ಯಾವುದೂ‌ಇಲ್ಲ. ಹಾಗಿದ್ದ ಮೇಲೆ ಸರ್ವಧರ್ಮಕ್ಕೂ ಒಳಿತು ಮಾಡುವ, ಸರ್ವಕಾಲಕ್ಕೂ ಮಾರ್ಗದರ್ಶನ ಮಾಡಬಲ್ಲ ಭಗವದ್ಗೀತೆ ಯ ಪಾಠ ನಡೆಯುವಂತಾದರೆ ಮಾತ್ರ ಜನಮನಗಳಲ್ಲಿ, ಸಮಾಜದಲ್ಲಿ ಒಂದು ರೀತಿಯ ನೆಮ್ಮದಿಯ ವಾತಾವರಣ ನಿರ್ಮಾಣವಾಗಲು ಸಾಧ್ಯ.

ನಮ್ಮಂತಹ ಸಾಮಾನ್ಯ ಗೃಹಿಣಿಯರಿಗೆಲ್ಲ ಈ ದೇವರನಾಮ, ಲಕ್ಷ್ಮೀ ಶೋಭಾನೆಯಂತಹ ಹಾಡುಗಳೇ ಆತ್ಮವಿಶ್ವಾಸಕ್ಕೆ ಬಲ ನೀಡಿ, ಮನೊಸ್ಥೈರ್ಯವನ್ನು ತುಂಬುತ್ತವೆ. ಗುರುಗಳು 120 ವರುಷ ತುಂಬು ಜೀವನ ಹಯವದನನ ಸೇವೆಯಲ್ಲಿ ನಿರತರಾಗಿ ಸಶರೀರವಾಗಿ ಬೃಂದಾವನಸ್ಥರಾದ ಪ್ರಥಮ ಯತಿಗಳಾದರು.

– ಲೇಖಕರು: ಕನ್ನಡ ಅಧ್ಯಾಪಕಿ,ಪೂರ್ಣಪ್ರಮತಿ ಶಾಲೆ ಬೆಂಗಳೂರು.

Related Articles

ಪ್ರತಿಕ್ರಿಯೆ ನೀಡಿ

Latest Articles