ಬೆಂಗಳೂರು : ಪ್ರಣವಾಂಜಲಿ ಸಂಸ್ಥೆಯು ನಗರದ ಜೆ ಸಿ ರಸ್ತೆಯಲ್ಲಿರುವ ನಯನ ಸಭಾಂಗಣದಲ್ಲಿ ಡಿಸೆಂಬರ್ 25ರಂದು ಆಯೋಜಿಸಿದ್ದ ಒಂದು ವಿಶಿಷ್ಟ ನೃತ್ಯ ಹಬ್ಬ ಕಿಕ್ಕಿರಿದ ಜನಸಾಗರದಲ್ಲಿ ಅದ್ಭುತವಾಗಿ ಮೂಡಿಬಂತು. ವಿಧವಿಧವಾದ ನೃತ್ಯಗಳ ಸಮಾಗಮವು ನೋಡುಗರ ಮನ ಸೂರೆಗೊಂಡಿತು. ಈಶ್ವರಿ ಕಲಾ ಸಂಸ್ಥೆಯಿಂದ ಮೂಡಿಬಂದ ಕಂಸವಧೆ ಯಕ್ಷಗಾನದಲ್ಲಿ ಕಂಸನ ಪಾತ್ರ ಮಾಡಿದ್ದ ಶ್ರೀಮತಿ ಅನ್ನಪೂರ್ಣೇಶ್ವರಿ ಕಟೀಲ್ ರವರ ಪ್ರದರ್ಶನ ಪ್ರೇಕ್ಷಕರ ಮೈ ರೋಮಾಂಚನಗೊಳಿಸಿತು. ಮಡಕೇರಿಯ ಕುಶಾಲನಗರದಿಂದ ಆಗಮಿಸಿದ್ದ ಕುಂದಣ ನೃತ್ಯ ಸಂಸ್ಥೆಯ ಕಲಾವಿದರು ಗಣೇಶ ಕೌತ್ವಂ, ಶ್ಲೋಕ, ನರಸಿಂಹ ಕೌತ್ವಂ, ಕನಡ ತಿಲ್ಲಾನಗಳನ್ನೂ ಬಹಳ ಅದ್ಭುತವಾಗಿ ಪ್ರದರ್ಶಿಸಿದರು. ಕಾಳಿಕಾಂಭ ಫೈನ್ ಆರ್ಟ್ಸ್ ಸಂಸ್ಥೆಯ ನಿರ್ದೇಶಕಿ ವಿದುಷಿ ಓಜಸ್ವಿನಿ ರವರು ಸಂಯೋಜಿಸಿದ್ದ ದೇವಿ ಸ್ತುತಿ ಹಾಗು ನರಸಿಂಹ ಕೌತ್ವಂ ನೆರೆದ ಕಲಾರಸಿಕರ ಮನಸೂರೆಗೊಂಡಿತು. ಬೆಂಗಳೂರಿನ ಪದ್ಮಿನಿಪ್ರಿಯ ನೃತ್ಯ ಸಂಸ್ಥೆಯ ಕಲಾವಿದರು ಶ್ರೀಮತಿ ಉಷಾ ಬಸಪ್ಪನವರು ನಿರ್ದೇಶಿಸಿದ್ದ ಶಿವನು ಭಿಕ್ಷೆಗೆ ಬಂದ, ಘಲ್ಲು ಘಲ್ಲೆನುತಾ ಗೆಜ್ಜೆ, ಜಕಣಕ್ಕ ಜಾನಪದ ನೃತ್ಯಗಳನ್ನು, ಹಿಮಗಿರಿ ತನಯೇ ಹೇಮಲತೆ ಹಾಗೂ ಏನೀಮಹಾನಂದವೇ ಭರತನಾಟ್ಯವನ್ನು ಬಹಳ ಅಚ್ಚುಕಟ್ಟಾಗಿ ಪ್ರದರ್ಶಿಸಿದರು. ಬೆಂಗಳೂರಿನ ತಮೋಹ ಆರ್ಟ್ಸ್ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಗಾಯತ್ರಿ ಮಯ್ಯ ರವರ ಶಿಷ್ಯೆ ಹಾಗೂ ಮಗಳೂ ಆದ ಏಳು ವರ್ಷದ ಪುಟ್ಟ ಕಿಶೋರಿ ಪಿ ಆದ್ಯ ಮಯ್ಯ ಪುಷ್ಪಾಂಜಲಿ, ಗಣೇಶ ಶ್ಲೋಕ ಮತ್ತು ಪುರಂದರದಾಸರು ರಚಿಸಿರುವ ಕೃಷ್ಣನ ಒಂದು ಅದ್ಭುತವಾದ ದೇವರನಾಮ ತಾತ್ತಧಿಮಿತ ಈ ಎಲ್ಲ ನೃತ್ಯಗಳನ್ನು ನಿಜಕ್ಕೂ ಸುಲಲಿತವಾಗಿ ನರ್ತಿಸಿದ ಈ ಪುಟ್ಟ ಪೋರಿ ನೆರೆದ ಎಲ್ಲಾ ಸಭಿಕರ ಮೆಚ್ಚುಗೆಗೆ ಪಾತ್ರಳಾದಳು . ಪ್ರಣವಾಂಜಲಿ ಸಂಸ್ಥೆಯ ನೃತ್ಯ ಕಲಾವಿದರಾದ ಭವನ, ಕೃತಿ, ದೀಪಾಂಜಲಿ, ನಕ್ಷತ್ರ, ಸಾರಿಕಾ, ಶ್ರೀಹಿತ, ಸಾನ್ವಿ, ದೀಕ್ಷಾ, ಶ್ರೇಷ್ಠ, ಸೃಷ್ಟಿ, ಈಶಾನ, ರಮ್ಯಾ, ನಿಧಿಶ್ರೀ, ಅದಿತಿ, ಅನನ್ಯ, ಅಮೃತ, ಪೂರ್ವಿ, ಪ್ರೇರಣಾ, ಕಶ್ವಿ, ಧನ್ಯ, ಧಾನ್ವಿ, ಜೈಸ್ವಿ, ಜ್ಞಾನ, ಹಿಮಧೃತಿ, ರೀತನ್ಯ, ತನ್ಮಯಿ ಭಟ್, ಶ್ರಿಯಾ, ಹಾರಿಕ, ಸಿಂಚನ, ಸಿರಿ ಬಹಳ ಸುಂದರವಾಗಿ ಎಲ್ಲಾ ನೃತ್ಯಗಳನ್ನು ಪ್ರದರ್ಶಿಸಿ ಸಭಿಕರ ಮೆಚ್ಚುಗೆಗೆ ಪಾತ್ರರಾದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ವಿದುಷಿ ಶ್ರೀಮತಿ ಉಷಾ ಬಸಪ್ಪನವರು ಮಾತನಾಡಿ, ಉದಯೋನ್ಮುಖ ಕಲಾವಿದರಿಗೆ ಇಂತಹ ವೇದಿಕೆಗಳ ಅವಶ್ಯಕತೆ ಇದೆ. ಹೀಗೆ ಸಾಕಷ್ಟು ನೃತ್ಯ ಹಬ್ಬಗಳನ್ನು ಮಾಡಿ ಯುವ ಪ್ರತಿಭೆಗಳಿಗೆ ವೇದಿಕೆ ನೀಡಬೇಕಾಗಿ ಪ್ರಣವಾಂಜಲಿ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಪವಿತ್ರ ಪ್ರಶಾಂತ್ ರವರಿಗೆ ಶುಭ ಕೋರಿದರು. ಸುಮಾರು 80 ಕಲಾವಿದರು ಪಾಲ್ಗೊಂಡಿದ್ದ ಈ ನೃತ್ಯ ಹಬ್ಬದಲ್ಲಿ ಎಲ್ಲಾ ಕಲಾವಿದರಿಗೂ ಪ್ರಶಸ್ತಿ ಪತ್ರವನ್ನು ಕೊಟ್ಟು ಕಾರ್ಯಕ್ರಮವನ್ನು ಸಂಪೂರ್ಣಗೊಳಿಸಲಾಯಿತು.