ಗಂಡು ಮಕ್ಕಳ ಪೋಷಕರಿದ್ದರೆ ನೆನಪಿಟ್ಟುಕೊಳ್ಳಿ ಯಾವ ಕಾರಣಕ್ಕೂ ಮೂಲಾ ನಕ್ಷತ್ರದ ಹೆಣ್ಣು ಮಕ್ಕಳನ್ನು ಕಡೆಗಣಿಸಬೇಡಿ, ದೂಷಣೆ ಮಾಡಬೇಡಿ. ಕೇವಲ ಜನನ ಕಾಲದ ನಕ್ಷತ್ರದ ಆಧಾರದಲ್ಲಿ ಇಡೀ ಜೀವನವನ್ನು ಹಾಗೂ ಅದೃಷ್ಟವನ್ನು ನಿರ್ಧರಿಸಲು ಸಾಧ್ಯವಿಲ್ಲ. ಆ ನಕ್ಷತ್ರದ ಕಾರಣಕ್ಕೆ ಸ್ವಲ್ಪ ಮಟ್ಟಿಗೆ ದೋಷ ಬರಬಹುದೇ ಹೊರತು ಇಡೀ ಜೀವನ ನಿರ್ಧರಿಸುವಂಥ ಪ್ರಭಾವ ಬೀರುವುದಿಲ್ಲ. ವಿದ್ಯೆಗೆ ಅಭಿಮಾನಿ ದೇವತೆಯಾದ ಸರಸ್ವತಿಯ ನಕ್ಷತ್ರವೇ ಮೂಲನಕ್ಷತ್ರ ವಾಗಿದೆ. ಈ ನಕ್ಷತ್ರದವರಿಗೆ ಅತ್ಯಂತ ಪ್ರಬಲವಾಗಿ ಗುರುವಿನ ಅನುಗ್ರಹ ಇರುತ್ತದೆ. ವಿಶೇಷವಾದ ಜ್ಞಾನ ಸಂಪತ್ತು ಇವರಲ್ಲಿ ಇರುತ್ತದೆ. ಗ್ರಹ ಮೈತ್ರಿ,ಮತ್ತು ಮೂಲಾ ನಕ್ಷತ್ರ ದೋಷಕ್ಕೆ ಇರುವ ಅಪವಾದ; ಶಾಸ್ತ್ರೋಕ್ತವಾದ ಪರಿಹಾರಗಳು ಇವುಗಳಿಂದಲೇ ಎಲ್ಲಾ ರೀತಿಯ ಸಮಸ್ಯೆಗಳು ಕೂಡ ನಿವಾರಣೆ ಸುಲಭಸಾಧ್ಯ ಮೂಲಾ ನಕ್ಷತ್ರದ ಫಲ ಹೇಗಿರುತ್ತದೆ ಅಂದರೆ, ಆಷಾಢ, ಭಾದ್ರಪದ ಹಾಗೂ ಆಶ್ವೀಜ ಮಾಸದಲ್ಲಿ, ವೃಷಭ, ಸಿಂಹ, ವೃಶ್ಚಿಕ ಅಥವಾ ಕುಂಭ ಲಗ್ನದಲ್ಲಿ ಜನಿಸಿದ ಮೂಲಾ ನಕ್ಷತ್ರದವರಿಗೆ ಯಾವ ದೋಷವೂ ಇರುವುದಿಲ್ಲ. ಇಂಥ ಹೆಣ್ಣುಮಕ್ಕಳನ್ನು ಮದುವೆ ಆದರೆ ಯಾವುದೇ ತೊಂದರೆಗಳಿಲ್ಲ.
ವೈಶಾಖ, ಜ್ಯೇಷ್ಠಾ, ಮಾರ್ಗಶಿರ, ಫಾಲ್ಗುಣ ಮಾಸಗಳಲ್ಲಿ, ಮಿಥುನ, ಕನ್ಯಾ, ತುಲಾ ಅಥವಾ ಮೀನ ಲಗ್ನದಲ್ಲಿ ಜನಿಸಿದ ಮೂಲಾ ನಕ್ಷತ್ರದವರಿಗೆ ವಿಶೇಷವಾದ ಅನುಕೂಲಗಳು ಆಗುತ್ತವೆ. ಸದಾ ಕಾಲ ಧನ ಪ್ರಾಪ್ತಿ ಆಗುತ್ತದೆ. ಸಂಪೂರ್ಣ ವಿದ್ಯಾವಂತರಾಗುತ್ತಾರೆ. ಇಂಥವರಿಗೆ ಯಾವುದೇ ದೋಷವಿಲ್ಲ. ಮೂಲ ನಕ್ಷತ್ರ ಮೂಲಾ ನಕ್ಷತ್ರದ ವ್ಯಾಪ್ತಿ ಧನಸ್ಸು ರಾಶಿಯಲ್ಲಿ ಸಮಾವೇಶಗೊಳ್ಳುತ್ತದೆ.
ಧನಸ್ಸು ಯುದ್ಧಗಳಿಂದ ಅಭಯವನ್ನು, ಆಯುಧವಾಗಿ ರಕ್ಷೆಯನ್ನೂ, ಯುದ್ಧ ಅಥವಾ ರಕ್ಷಣೆಯ ವಿಷಯದಲ್ಲಿ ಒಳಿತು ಉಂಟು ಮಾಡುವುದರಿಂದ ಇದು ಅಗ್ನಿ ರಾಶಿ. ಈ ರಾಶಿಯ ಗ್ರಹ, ಜ್ಞಾನಕ್ಕೆ ಕಾರಣನಾಗಿರುವ ಸಂತಾನಕ್ಕೆ ಕೊಂಡಿ ಕೂಡಿಸುವ, ಧನಾಗಮನಕ್ಕೆ ಸಿದ್ಧಿ ಕೊಡುವ, ವಿಕೃತಿಗಳನ್ನು ಆಕೃತಿಗೆ ತಂದು ನಿಲ್ಲಿಸುವ ಗುರುಗ್ರಹ.
ಮೊದಲಾಗಿ ಮೂಲಾ ನಕ್ಷತ್ರದ ಸೊಸೆಯಂದಿರು ತಾವು ಮದುವೆಯಾಗಿ ಬಂದ ಮನೆಯ ಆರ್ಥಿಕ ಬಲಾಡ್ಯತೆಯನ್ನು, ಸಂಸಾರದೊಳಗಿನ ಸಂತೋಷವನ್ನು ಜಾಸ್ತಿ ಮಾಡಿದ ಉದಾಹರಣಗಳೇ ಹೇರಳವಾಗಿವೆ. ಕಾರಣ ಇಷ್ಟೇ, ಮೂಲಾ ನಕ್ಷತ್ರವನ್ನು ಒಳಗೊಳ್ಳುವ ಮನೆಯಾದ ಧನಸ್ಸು ರಾಶಿಯ ಅಧಿಪತಿ ಗುರುವು ದುರುಂತಗಳನ್ನು ತಪ್ಪಿಸುವುದು ಮಾತ್ರವಲ್ಲ; ತನ್ನ ಶಕ್ತಿ ಪ್ರಭಾವಗಳಿಂದ ಮೂಲಾ ನಕ್ಷತ್ರದ ದೋಷಗಳನ್ನು ನಿಯಂತ್ರಿಸುತ್ತಾನೆ. ತನ್ನದೃಷ್ಟಿಯ ಫಲದ ಸಕಾರಾತ್ಮಕ ಪರಿಣಾಮಗಳನ್ನೂ ಒದಗಿಸುತ್ತಾನೆ. ನಿರಂತರವಾಗಿ ಸಂಸ್ಕಾರಯುತವಾಗಿ ಜೀವನ ಮಾಡಿದ ಹೆಣ್ಣುಮಕ್ಕಳಿಗೆ ಧರ್ಮದ ನೆಲೆಯಲ್ಲಿ ಯಾವುದೇ ರೀತಿಯ ಈ ನಕ್ಷತ್ರದ ದೋಷಗಳು ಕಾಣಿಸುವುದಿಲ್ಲ.
ನಿರಂತರ ದೇವತಾ ಆರಾಧನೆಯಿಂದ ವಿಷ್ಣುಸಹಸ್ರನಾಮ ರಾಮರಕ್ಷಾಸ್ತೋತ್ರ ಮುಂತಾದ ಸ್ತೋತ್ರಗಳ ಪಟ್ಟಣದಿಂದ ಸರ್ವ ದೋಷಗಳಿಗೂ ಕೂಡ ಪರಿಹಾರವು ಸಿಗುತ್ತದೆ. ಮೂಲಾ ನಕ್ಷತ್ರಕ್ಕೆ ಸಂಬಂಧಿಸಿದ ಸ್ತೋತ್ರ ಪಠಣಗಳ ಮೂಲಕ ಮೂಲಾ ನಕ್ಷತ್ರ ದೋಷ ಪರಿಹಾರವಾಗುತ್ತದೆ. ಜಾತಕದಲ್ಲಿ ಗುರುವೂ, ಕೇತುವೂ ಬಲಯುತರಾಗಿ ಇದ್ದಾಗ ಸರ್ವ ದೋಷಗಳೂ ಕರಗಿ, ಹೊಸ ಬದಲಾವಣೆಗೆ ತೆರೆದುಕೊಳ್ಳಲು ಸಹಾಯವಾಗುತ್ತದೆ. ಯಾವುದೇ ದೋಷವಿದ್ದ ಪಕ್ಷದಲ್ಲಿ ನವಗ್ರಹ, ನಕ್ಷತ್ರ ಶಾಂತಿ ಮಾಡಿಸಿಕೊಳ್ಳುವುದರಿಂದ ಸರ್ವರೀತಿಯ ದೋಷಕ್ಕೆ ಶಾಸ್ತ್ರದಲ್ಲಿ ಪರಿಹಾರಗಳಿವೆ.