ಹಿಂದೂಗಳಿಗೆ ಶ್ರಾವಣ ಮಾಸ ಅತ್ಯಂತ ಪವಿತ್ರವಾದದ್ದು. ವರ್ಷಪೂರ್ತಿ ಇರುವ ಹಲವು ಹಬ್ಬಗಳಲ್ಲಿ ಹೆಚ್ಚಿನ ಹಬ್ಬಗಳು ಈ ತಿಂಗಳಲ್ಲೇ ಬರುತ್ತವೆ. ಈ ತಿಂಗಳಿನಲ್ಲಿ ಅಧ್ಯಾತ್ಮಕ್ಕೆ ಹೆಚ್ಚಿನ ಒತ್ತು ನೀಡಲಾಗಿತ್ತೆ. ಅಲ್ಲದೇ ಶ್ರಾವಣದಲ್ಲಿ ಏನೇ ಮಾಡಿದರೂ ಅದಕ್ಕೆ ಒಳ್ಳೆಯ ಫಲ ಸಿಗುತ್ತದೆ ಎನ್ನಲಾಗಿದೆ. ಹಿಂದೂ ಪಂಚಾಂಗದ 5ನೇ ಮಾಸವಾದ ಶ್ರಾವಣ ಮಾಸವು ಈ ಸಂವತ್ಸರದಲ್ಲಿ ಅಧಿಕ ಶ್ರಾವಣ ಮತ್ತು ನಿಜ ಶ್ರಾವಣ ಮಾಸಗಳೆಂದು ಎರಡು ಮಾಸಗಳ ಕಾಲ ಬಂದಿದೆ. ಈಗ ಅಧಿಕ ಶ್ರಾವಣ ಮುಗಿಯಲಿದ್ದು, ನಿಜ ಶ್ರಾವಣ ಮಾಸವು ಇದೇ ಆಗಸ್ಟ್ 17 ರಿಂದ ಸೆಪ್ಟೆಂಬರ್ 14 ರವರೆಗೆ ನಡೆಯುತ್ತದೆ ಮತ್ತು ಈ ಮಾಸವನ್ನು ಶಿವನಿಗೆ ಸಮರ್ಪಿಸಲಾಗಿದೆ. ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ. ಹಾಗೂ ಶಿವ ಒಲಿದು ಬೇಡಿದನ್ನು ನೀಡುತ್ತಾನೆ ಎಂಬ ನಂಬಿಕೆ ಇದೆ. ಈ ತಿಂಗಳಲ್ಲಿ ಬರುವ ಹಬ್ಬ ಹಾಗೂ ವ್ರತಗಳು ಬಹುತೇಕವಾಗಿ ಶಿವ-ಪಾರ್ವತಿಗೆ ಮೀಸಲು.
*ಶ್ರಾವಣ ಎಂದರೇನು?
ಈ ತಿಂಗಳಲ್ಲೇ ಹೆಚ್ಚಾಗಿ ಸಾಲು ಸಾಲು ಧಾರ್ಮಿಕ ಪೂಜೆ, ಹಬ್ಬ-ಹರಿ ದಿನಗಳು ಬರುತ್ತವೆ. ಜೊತೆಗೆ ಒಳ್ಳೆಯ ಕಾರ್ಯಗಳನ್ನು ಆರಂಭಿಸಲು ಈ ತಿಂಗಳು ಹೆಚ್ಚು ಪ್ರಶಸ್ತವಾಗಿದೆ. ಆಷಾಡ ಮಾಸದ ಬಳಿಕ ಬರುವ ಹುಣ್ಣಿಮೆಯ ನಂತರ ಶ್ರವಣ ಎನ್ನವ ನಕ್ಷತ್ರ ಆಕಾಶವನ್ನು ಆಳುತ್ತದೆ. ಈ ಮಾಸದ ಹುಣ್ಣಿಮೆಯು ಶ್ರವಣ ನಕ್ಷತ್ರದಲ್ಲಿ ಸಂಭವಿಸುತ್ತದೆ. ಆದ್ದರಿಂದ ಈ ಮಾಸಕ್ಕೆ ಶ್ರಾವಣ ಮಾಸ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಹಿಂದೂ ಧರ್ಮದಲ್ಲಿ ಶ್ರಾವಣ ಎಂದರೆ ಆಲಿಸುವುದು ಎಂದರ್ಥ. ಹೀಗಾಗಿ ಈ ಶ್ರಾವಣ ಮಾಸದಲ್ಲಿ ಹೆಚ್ಚಾಗಿ ಪುರಾಣ ಪ್ರವಚನಗಳನ್ನು ಆಲಿಸಬೇಕು. ಶಿವನ ಕುರಿತಾದ ಸ್ತೋತ್ರ ಪಠನೆ, ಧ್ಯಾನ ಮಾಡಬೇಕು.
ಶ್ರಾವಣ ತಿಂಗಳಲ್ಲಿ ಪ್ರಕೃತಿಯಲ್ಲೂ ಕೆಲ ಬದಲಾವಣೆಗಳು ಆಗುತ್ತವೆ. ಈ ತಿಂಗಳಲ್ಲಿ ಹೂವುಗಳು ಜಾಸ್ತಿ ಬೆಳೆಯುವುದರಿಂದ ಈ ಮಾಸದಲ್ಲಿಯೇ ಚೂಡಿಪೂಜೆ (ಹೂವಿನ ಪೂಜೆ) ನಡೆಯುತ್ತದೆ. ಈ ಪೂಜೆಗೆ 11 ಬಗೆಯ ಹೂಗಳನ್ನು ಬಳಸುತ್ತಾರೆ. ಶ್ರಾವಣ ಮಾಸದಲ್ಲಿ ಈ ಚೂಡಿಯ ತುಳಸಿಗೆ ಪೂಜೆ ಮಾಡುವುದರಿಂದ ಸರ್ವ ಕಷ್ಟವೂ ದೂರವಾಗುತ್ತದೆ, ಸರ್ವರೋಗ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಇದೆ.
*ಶ್ರಾವಣ ಮಾಸದಲ್ಲಿ ಶಿವನಿಗೇಕೆ ಆದ್ಯತೆ ?
ಸಮುದ್ರ ಮಂಥನದ ಸಂದರ್ಭದಲ್ಲಿ ಅಮೃತಕ್ಕಾಗಿ ದೇವತೆಗಳು ಮತ್ತು ದಾನವರು ಕಾದಾಡುವಾಗ 14 ಬೇರೆ ಬೇರೆ ರತ್ನಗಳು ಬರುತ್ತವೆ. ಈ ಪೈಕಿ 13 ರತ್ನಗಳನ್ನು ದೇವತೆಗಳು, ದಾನವರು ಹಂಚಿಕೊಳ್ಳುತ್ತಾರೆ. ಉಳಿದ ಒಂದು ರತ್ನವೇ ಹಾಲಾಹಲ. ಜಗತ್ತನ್ನೇ ನಾಶ ಮಾಡುವ ಶಕ್ತಿ ಇದ್ದ ಹಾಲಾಹಲವನ್ನು ಲೋಕದ ಕಲ್ಯಾಣಕ್ಕಾಗಿ ಭಗವಾನ್ ಶಿವನು ಹಾಲಾಹಲ ವಿಷವನ್ನು ಕುಡಿಯುತ್ತಾನೆ. ಪಾರ್ವತಿ ದೇವಿ ಗಂಟಲನ್ನು ಒತ್ತಿ ಹಿಡಿದ ಕಾರಣ ಹಾಲಾಹಲವು ಗಂಟಲಲ್ಲೇ ಉಳಿದುಕೊಳ್ಳುತ್ತದೆ. ಹೀಗಾಗಿ ಶಿವ ನೀಲಕಂಠನಾಗುತ್ತಾನೆ. ಜಗತ್ತಿನ ಉಳಿವಿಗಾಗಿ ಶಿವ ಹಾಲಾಹಲವನ್ನು ಕುಡಿದದ್ದು ಇದೇ ಶ್ರಾವಣ ಮಾಸದಲ್ಲಿ. ಹೀಗಾಗಿ ಈ ಮಾಸಕ್ಕೆ ಹೆಚ್ಚಿನ ಶಕ್ತಿ ಇದೆ.
ಶಿವನ ಮುಡಿ ಏರಿದ ಚಂದ್ರ
ಪ್ರಜಾಪತಿ ದಕ್ಷನ ಶಾಪದಂತೆ ಚಂದ್ರ ದೇವನ ದೇಹ ವಿಷವಾಗುತ್ತದೆ, ಆರೋಗ್ಯ ಹದಗೆಡುತ್ತದೆ. ಈ ವೇಳೆ ವಿಷದ ಬಲವಾದ ಪರಿಣಾಮ ಕಡಿಮೆ ಮಾಡಲು ಶಿವನು ಅರ್ಧ ಚಂದ್ರವನ್ನು ತನ್ನ ತಲೆಯ ಮೇಲೆ ಧರಿಸುತ್ತಾನೆ. ನಂತರ ಎಲ್ಲಾ ದೇವರುಗಳು ಶಿವನಿಗೆ ಗಂಗಾ ನೀರನ್ನು ಅರ್ಪಿಸುತ್ತಾರೆ. ಅಂದಿನಿಂದಲೇ ಶ್ರಾವಣ ಮಾಸ ಸಂಭವಿಸಿತ್ತು. ಹೀಗಾಗಿ ಭಕ್ತರು ಶಿವನಿಗೆ ಈ ತಿಂಗಳಲ್ಲಿ ಗಂಗಾ ನೀರನ್ನು ಎರೆದು ಭಕ್ತಿಯನ್ನು ತೋರಿಸುತ್ತಾರೆ. ಅಲ್ಲದೇ ವಾಲ್ಮೀಕಿಯ ಅವತಾರವೆನ್ನುವ ಹನುಮಾನ್ ಚಾಲೀಸಾ ರಚಿಸಿದ ತುಲಸೀದಾಸರು ಕೂಡ ಹುಟ್ಟಿದ ತಿಂಗಳು ಇದುವೇ.
ರುದ್ರಾಕ್ಷಿ ಧರಿಸಿದರೆ ಶುಭವಾಗುತ್ತದೆ ಇನ್ನು ಶ್ರಾವಣದಲ್ಲಿ ರುದ್ರಾಕ್ಷಿಯ ಹಾರ, ಓಲೆ ಧರಿಸುವುದು ಅತ್ಯಂತ ಶುಭ ಎನ್ನಲಾಗಿದೆ. ಶ್ರಾವಣ ಸೋಮವಾರದ ವ್ರತ ಮಾಡುವುದು. ರುದ್ರಾಕ್ಷಿಯ ಹಾರ ಧರಿಸುವುದು ಅತ್ಯಂತ ಶ್ರೇಷ್ಠ.
ಶ್ರಾವಣದಲ್ಲಿ ಆಚರಿಸುವ ವಿಶೇಷ ದಿನಗಳು
1) ಏಕ ಭುಕ್ತವ್ರತ 2) ಮಂಗಳ ಗೌರಿ ವ್ರತ 3) ಅಂಗಾರಕ ಜಯಂತಿ 4) ಜೀವಂತಿಕಾ ವ್ರತ 5) ರಾಘವೇಂದ್ರ ಸ್ವಾಮಿಗಳ ಆರಾಧನೆ 6) ರೋಟಿಕಾ ವ್ರತ 7) ದೂರ್ವಾಗಣಪತಿ ವ್ರತ 8) ದಧಿ ವ್ರತ 9) ನಾಗಚತುರ್ಥಿ 10) ನಾಗ ಪಂಚಮಿ 11) ಗರುಡ ಪಂಚಮಿ 12) ಸಿರಿಯಾಳ ಷಷ್ಠಿ 13) ಅವ್ಯಂಗ ವೃತ 14) ಶೀತಲಾಸಪ್ತಮಿ ವ್ರತ. 15) ಪುತ್ರದಾ ಏಕಾದಶಿ ವ್ರತ 16) ಪವಿತ್ರಾರೋಪಣವೃತ 17) ಉಪಾಕರ್ಮ 18) ಶ್ರೀ ಕೃಷ್ಣ ಜನ್ಮಾಷ್ಟಮಿ 19) ವರಾಹ ಜಯಂತಿ. 20) ಅಗಸ್ತ್ಯಾರ್ಘ್ಯ 21) ವರ ಮಹಾಲಕ್ಷ್ಮೀವ್ರತ.
ಸಂಗ್ರಹ: ಹೆಚ್ ಎಸ್ ರಂಗರಾಜನ್ ಅರ್ಚಕರು ಹುಸ್ಕೂರು ಶ್ರೀ ಚನ್ನರಾಯ ಸ್ವಾಮಿ ದೇಗುಲ ಬೆಂಗಳೂರು