ದೇಹದ ಆರೋಗ್ಯಕ್ಕೆ ಆರು ರಸಗಳಿಂದಾದ ಐದು ಬಗೆಯ ಆಹಾರವನ್ನು ಸೇವಿಸುತ್ತೇವೆ. ಮನಸ್ಸು-ಆತ್ಮದ ಉನ್ನತಿ, ಆರೋಗ್ಯಕ್ಕೆ ಧರ್ಮಗ್ರಂಥಗಳ ಸಾರವನ್ನು ಶ್ರವಣ ಮಾಡಬೇಕು.
*ದೇವಿಪ್ರಸಾದ ಗೌಡ
ಪುರಾಣಗಳು ಜ್ಞಾನದ ಭಂಡಾರ. ಎಲ್ಲ ಬಗೆಯ ಪ್ರಾಕೃತ ಮತ್ತು ಅಪ್ರಾಕೃತ ವಿಷಯಗಳ ಬಗ್ಗೆಯೂ ನಿಖರವಾಗಿ ಪುರಾಣಗಳಲ್ಲಿ ತಿಳಿಸಿದ್ದಾರೆ.
ಎಲ್ಲಾ ಪ್ರಾಣಿಗಳಿಗೆ ಒಂದು ಬಗೆಯ ಆಹಾರವಾದರೆ ಮನುಷ್ಯನಿಗೆ ಎರಡು ಬಗೆಯ ಆಹಾರ ಬೇಕಂತೆ! ಯಾವುದು ಆ ಆಹಾರಗಳು?
ಸ್ಕಾಂದ ಪುರಾಣದಲ್ಲಿ ನಾರದರು ಅರ್ಜುನನಿಗೆ ಜ್ಞಾನೋಪದೇಶ ಮಾಡುತ್ತಾ ಇಬ್ಬರು ಋಷಿಗಳ ನಡುವಿನ ಸಂಭಾಷಣೆಯನ್ನು ವಿವರಿಸುತ್ತಾರೆ. ಅವರು ಅಂತಾರೆ “ಷಡ್ರಸಂ ಭೋಜನಂ ತತ್ವು ಪಂಚ ಭೇದಂ ವದಂತಿಃ ಏನ ಭುಕ್ತೇನ ತೃಪ್ತಂತ್ಸ್ಯಾತ್ ಕ್ಷೇತ್ರ್ಯಂಜ್ಞ್ದೇಹ ಲಕ್ಷಣಂ ತತಾ ನಾನಾ ಪ್ರಕಾರಸ್ಯ ಧರ್ಮಸ್ಯ ಶ್ರವಣಂಭೀಯತ್ ತತಂದನ್ನಮ್ಮುಛತೆ ಭೋಕ್ತಾ ಕ್ಷೇತ್ರಜ್ಞಃ ಶ್ರವಣಂ ಮುಖಂ” ಕ್ಷೇತ್ರ ಎನ್ನುವುದು ದೇಹ, ಕ್ಷೇತ್ರಜ್ಞ ಎನ್ನುವುದು ನಮ್ಮ ಆತ್ಮ, ನಮ್ಮ ಮನಸ್ಸು.
ದೇಹಕ್ಕೆ ಆರು ರಸಗಳಿಂದ ಆದ ಐದು ಬಗೆಯ ಆಹಾರವನ್ನು ಬಾಯಿಯ ಮೂಲಕ ತಿಂದರೆ, ಮನಸ್ಸು- ಆತ್ಮಕ್ಕೆ ನಾನಾ ಶಾಸ್ತ್ರ, ಧರ್ಮ ಗ್ರಂಥಗಳ ಸಾರವನ್ನು ಕಿವಿಯ ಮೂಲಕ ಉಣ್ಣಬೇಕು. ಅಂದರೆ ಶ್ರವಣ ಮಾಡ ಬೇಕು. ಆಗ ದೇಹ ಮತ್ತು ಮನಸ್ಸಿಗೆ ಎರಡಕ್ಕೂ ಆಹಾರ ದೊರೆತು ಆರೋಗ್ಯವಂತರಾಗಿ ದೀರ್ಘ ಕಾಲ ಬದುಕುಬಹುದು. ಎಂತಹ ಉನ್ನತವಾದ, ನಿಖರವಾದ ಚಿಂತನೆ!! ಇದನ್ನು ಇನ್ನೂ ಬಿಡಿಸಿ ಹೇಳುತ್ತಾರೆ. ಆರು ರಸಗಳು (ರುಚಿ) ಯಾವುದು? ಸಿಹಿ, ಖಾರ, ಉಪ್ಪು, ಹುಳಿ, ಕಹಿ ಮತ್ತು ಒಗರು. ಇವುಗಳಲ್ಲಿ ಸಿಹಿ ಎನ್ನುವುದು ಸ್ವತಂತ್ರ ರಸವಾದರೆ ಉಳಿದ ಐದು ಒಂದಕ್ಕೊಂದು ಪೂರಕ ರಸಗಳು. ಯಾಕೆಂದರೆ ಸಿಹಿಯನ್ನು ಯಾವುದೇ ರಸದ ಮಿಶ್ರಣ ಇಲ್ಲದೆ ಸವಿಯಬಹುದಾದರೆ ಉಳಿದವುಗಳನ್ನು ಪ್ರತ್ಯೇಕವಾಗಿ ಸವಿಯಲಾಗುವುದಿಲ್ಲ. ಹಾಗೆಯೇ ಉಪ್ಪಿನ ಮೂಲ ಧಾತು ನೀರು ಆದರೆ ಉಳಿದ ಎಲ್ಲಾ ರಸಗಳು ಸಸ್ಯಗಳಿಂದ ದೊರೆಯುತ್ತದೆ. ಈ ಆರು ರಸಗಳಿಂದ ಐದು ಬಗೆಯ ಆಹಾರ ತಯಾರಿಸಬಹುದು.
ಅದೇ ೧. ಭಕ್ಷ್ಯ – ಅಂದರೆ ತಿನ್ನುವುದು, ಉದಾ -ತಿಂಡಿ, ಚಕ್ಕುಲಿ, ವಡೆ ೨. ಭೋಜ್ಯ– ಉನ್ನುವುದು. ಉದಾ- ಅನ್ನ ೩. ಚೂಷ್ಯ- ಚೀಪುವುದು. ಉದಾ-ಮಾವಿನ ಹಣ್ಣಿನ ಓಟೆ ೪. ಲೇಹ್ಯ- ನೆಕ್ಕುವುದು. ಉದಾ-ಚಟ್ನಿ, ಉಪ್ಪಿನಕಾಯಿ ೫. ಪೇಯ– ಕುಡಿಯುವುದು. ಉದಾ- ಪಾಯಸ ಈ ಐದು ಬಗೆಯ ಆಹಾರ ಬಿಟ್ಟು ಬೇರೆ ತರ ಇಲ್ಲ.
ಹೀಗೆ ದೇಹ ಮತ್ತು ಮನಸ್ಸಿಗೆ ಸರಿಯಾದ ಆಹಾರವನ್ನು ಅಂದಿನ ಕಾಲದಲ್ಲಿ ಬಳಸುತ್ತಿದ್ದರು. ಇಂತಹ ಸಾಮಾನ್ಯ ವಿಚಾರಗಳಿಗೂ ಅಷ್ಟೇ ಪ್ರಾಮುಖ್ಯತೆ ನೀಡುತ್ತಿದ್ದರು. ನಾವೆಲ್ಲರೂ ಇದನ್ನು ಅನುಸರಿಸಿದರೆ ನಮಗೆ ಯಾವ ವೈದ್ಯರ ಅಗತ್ಯವೂ ಇಲ್ಲ. ಏನಂತೀರಿ?.