*ಗಿರೀಶ್ ಪಿಎಂ
ಹೆತ್ತ ತಾಯಿಯ ಋಣವ, ಪೊರೆದ ತಂದೆಯ ಋಣವ ಹತ್ತು ಜನುಮ ಬಂದರೂ ತೀರಿಸಲಾಗದು. ನವ ಮಾಸದ ವೇದನೆಯ ಸಹಿಸಿ ಜಗದ ಬೆಳಕ ತೋರಿಸುವ ಕರುಣಾಮಯಿಯೇ ತಾಯಿ. ನೋವಲ್ಲಿದ್ದರೂ ಆ ಜೀವ ಸದಾಕಾಲ ಮಗುವಿನ ನಲಿವನ್ನೇ ಬಯಸುತ್ತದೆ. ಅತ್ತರೆ ಸೆರಗ ಆಸರೆ ನೀಡುವಳು, ನಕ್ಕರೆ ತನ್ನ ನಗುವೆಂದು ತಾನು ನಗುವಳಾಕೆ... ಜಗತ್ತಿನಲ್ಲಿ ನಿಜಕ್ಕೂ ಜೀವಕ್ಕೆ ಜೀವ ನೀಡುವವಳು ಯಾರಾದರೂ ಇದ್ದಾರೆ ಕೇಳಿದರೆ ಅದು ತಾಯಿ. ಹುಟ್ಟಿದ ಕೂಸಿನ ಲಾಲನೆ-ಪಾಲನೆ ಮಾಡುವುದರಿಂದ ಹಿಡಿದು ತಾನು ಬದುಕಿರುವ ಕೊನೆಯತನಕ ಕಣ್ರೆಪ್ಪೆಯಂತೆ, ಕನ್ನಡಿಯಂತೆ ಜೋಪಾನ ಮಾಡುವಳು ಅಮ್ಮ. ಬಿದ್ದಾಗ ಅವಳ ಮಾತೇ ಔಷಧ, ಸೋತಾಗ ಆಕೆಯ ಭರವಸೆಯೇ ಪ್ರೋತ್ಸಾಹ. ಗೆದ್ದಾಗ ನನಗಿಂತ ನನ್ನ ತಾಯಿಯ ಮುಖದಲ್ಲೇ ನಗುವಿನ ಸಂಭ್ರಮ ಮನೆಮಾಡಿರುತಿತ್ತು. ನನಗೆ ಹುಷಾರಿಲ್ಲದಾದಾಗ ಶಾಲೆಯಲ್ಲಿ ಕೊಡುತ್ತಿದ್ದ ನೋಟ್ಸನ್ನು ಆಕೆಯೇ ಅದೆಷ್ಟು ಸಲ ಬರೆದುಕೊಟ್ಟಿದ್ದಾಳೋ ಏನೋ...ಆ ದಿನಗಳಲ್ಲಿ ಅಮ್ಮನೇ ಟ್ಯೂಷನ್ ಟೀಚರ್. ಆಕೆ ಎಂದಿಗೂ ಪ್ರತಿಫಲ ಬಯಸಿದವಳೇ ಅಲ್ಲ. ತನ್ನ ಉಸಿರಿಗಿಂತ ಹೆಚ್ಚು ಪ್ರೀತಿಸುವ ತಾಯಿಯ ಪ್ರೀತಿ ಕೊನೆಯಿಲ್ಲದ ಆಗಸದಂತೆ ವಿಶಾಲ. ಆಕೆಯನ್ನೂ ಮಾತಿನಲ್ಲೇ ತಿವಿದು ಅನಾಥಾಶ್ರಮಕ್ಕೆ ತಳ್ಳುವವರಿದ್ದಾರೆ. ಇದುವೇ ಈಗಿನ ನವ ಜಗದ ಮಾಯೆ, ದೌರ್ಭಾಗ್ಯ. ತಾನಾಯ್ತು, ತನ್ನ ಹೆಂಡತಿ ಮಕ್ಕಳಾಯಿತು ಎಂದು ಯೋಚಿಸುವ ಮನಸ್ಸಲ್ಲಿ ತಂದೆ-ತಾಯಿಗೆ ಸ್ಥಾನವೇ ಇಲ್ಲದಂತಾಗಿದೆ. ಹಡೆದು ಪೊರೆದ ತಾಯಿಯನ್ನು ಮರೆತು ತಮ್ಮ ಸಾಧನೆಯನ್ನು ಬಣ್ಣಿಸಿ ಬೀಗುವವರೇ ತುಸು ಜಾಸ್ತಿ. ಕಾಲ ಬದಲಾದರೂ ತಾಯಿಯ ತ್ಯಾಗ, ಆಕೆಯ ಸ್ಥಾನ ಬದಲಾಗದು. ಎಷ್ಟೇ ಕಷ್ಟವಾದರೂ ತಾಯಿ ಮಕ್ಕಳನ್ನು ಬೇರೆ ಕಡೆ ಬಿಡುವ ಯೋಚನೆ ಮಾಡಳು. ಮಕ್ಕಳ ಬೇಕು- ಬೇಡಗಳಿಗೆ ಕಿವಿಯಾಗುವವಳು ಆಕೆ. ಅವರ ಊಟ, ಉಡುಗೆ ತೊಡುಗೆ, ಶಿಕ್ಷಣಕ್ಕೆ ಆಕೆಯೇ ಆಸರೆ. ಆದರೆ ಅದೆಷ್ಟೋ ಮಕ್ಕಳು ಇಂತಹ ತಾಯಂದಿರಿಗೆ ಕೊಡುವ ಉಡುಗೊರೆ ಮಾತ್ರ ಅನಾಥಾಶ್ರಮ ವಾಸ! ತಾಯಿಯನ್ನು ನೋಯಿಸುವುದು ಕ್ಷಮಿಸಲಾರದ ಅಪರಾಧ. ಆಕೆ ನಮ್ಮೆರಡು ಕಣ್ಣಿನಂತೆ. ನಾವು ಯಾವ ಸ್ಥಿತಿಯಲ್ಲಿದ್ದರೂ ಪ್ರೀತಿಸುವ ತಾಯಿಯನ್ನು ಎಂದಿಗೂ ಕೈಬಿಡಬಾರದು. ಒಂದು ವೇಳೆ ದೇವರೇ ನಮ್ಮ ಕೈಹಿಡಿಯದಿದ್ದರೂ ತಂದೆ-ತಾಯಿ ನೆರಳಿನಂತೆ ಸದಾ ನಮ್ಮ ಜೊತೆಗಿರುತ್ತಾರೆ ಎಂಬುದನ್ನು ಮರೆಯಬಾರದು. ಒಂದರ್ಥದಲ್ಲಿ ಹೆತ್ತವರು ದೇವರಿಗಿಂತಲೂ ಮಿಗಿಲಾದವರು. ಐ ಲವ್ ಯು ಅಪ್ಪ- ಅಮ್ಮ. ನೀವೆಂದೂ ನಗುತಿರಿ. ಗಿರೀಶ್ ಪಿಎಂ ಅಂತಿಮ ಬಿಎ, ತೃತೀಯ ಬಿಎ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು