ಸ್ವಾರ್ಥ ರಹಿತ ಬದುಕಿಗೆ ಬೆಲೆ, ಬಲವಿದೆ: ರಂಭಾಪುರಿ ಶ್ರೀ


ಕೊಲನಪಾಕ (ತೆಲಂಗಾಣ): ಮನುಷ್ಯನ ಉಸಿರಾಟಕ್ಕೆ ಗಾಳಿ ಎಷ್ಟು ಮುಖ್ಯವೋ ಅಷ್ಟೇ ಉಜ್ವಲ ಭವಿಷ್ಯಕ್ಕೆ ಸಂಸ್ಕಾರ ಸಂಸ್ಕೃತಿಯ ಅವಶ್ಯಕತೆಯಿದೆ. ನಾಗರೀಕತೆಯ ಹೆಸರಿನಲ್ಲಿ ಧರ್ಮ ಸಂಸ್ಕೃತಿ ನಾಶವಾಗಬಾರದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ತೆಲಂಗಾಣ ರಾಜ್ಯದ ಕೊಲನಪಾಕ ಸ್ವಯಂಭು ಶ್ರೀ ಸೋಮೇಶ್ವರ ಕ್ಷೇತ್ರದಲ್ಲಿ ಜನವರಿ 7ರಂದು ತಮ್ಮ 66 ನೇ ಜನ್ಮ ದಿನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಬೆಟ್ಟಕ್ಕೆ ಬೆಟ್ಟದ ಅವಶ್ಯಕತೆ ಇಲ್ಲದಿರಬಹುದು. ಆದರೆ ಮನುಷ್ಯನಿಗೆ ಮನುಷ್ಯನ ಅವಶ್ಯಕತೆ ಇದ್ದೇ ಇದೆ. ಸಜ್ಜನರಿಗೆ ಬರುವ ಆಪತ್ತು ದುರ್ಜನರಿಗೆ ಬರುವ ಸಂಪತ್ತು ಬಹಳ ಕಾಲ ಉಳಿಯುವುದಿಲ್ಲ. ಸ್ವಾರ್ಥ ರಹಿತ ಬದುಕಿಗೆ ಬೆಲೆ ಮತ್ತು ಬಲವಿದೆ. ಧರ್ಮದ ದಿಕ್ಸೂಚಿ ಇಲ್ಲದೇ ಹೋದರೆ ಬದುಕಿಗೆ ಅರ್ಥವೇ ಇಲ್ಲ. ಜೀವನದಲ್ಲಿ ಏನೇ ಸವಾಲುಗಳು ಬಂದರೂ ಅದನ್ನು ಸಮರ್ಥವಾಗಿ ಎದುರಿಸುವ ಆತ್ಮ ಬಲ ಬೇಕು. ಸುಂದರವಾದ ಮನೆ ಕಟ್ಟಿದ ಮನುಷ್ಯ ಆ ಮನೆಯಲ್ಲಿ ಹೇಗೆ ಬಾಳಬೇಕೆಂಬುದನ್ನು ಮರೆಯುತ್ತಾನೆ. ಮರೆವು ದೂರಾಗಿ ಅರಿವು ಕೊಡುವ ಶಕ್ತಿ ಗುರುವಿಗೆ ಇದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ಮೌಲ್ಯಾಧಾರಿತ ಚಿಂತನೆಗಳು ಬದುಕಿ ಬಾಳುವ ಜನಾಂಗಕ್ಕೆ ದಾರಿದೀಪ. ಸ್ವಯಂಭು ಶ್ರೀ ಸೋಮೇಶ್ವರ ಕ್ಷೇತ್ರ ಪ್ರಾಚೀನ ಇತಿಹಾಸವನ್ನು ಹೊಂದಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ಆವಿರ್ಭಾವದಿಂದ ಮಾನವ ಧರ್ಮ ಸಂವರ್ಧಿಸಿದೆ. ಇಂಥ ಕ್ಷೇತ್ರದಲ್ಲಿ ಜನ್ಮ ದಿನೋತ್ಸವ ನಿಮಿತ್ಯ ವಿಶೇಷ ಪೂಜಾ-ಧರ್ಮ ಚಿಂತನ ಸಮಾರಂಭ ಸಂತೃಪ್ತಿಯ ಮನೋಭಾವ ತಂದಿದೆ ಎಂದ ಅವರು ಬಿಚಗುಂದ, ಮೇಹಕರ, ಸಿದ್ಧರಬೆಟ್ಟ, ಮಳಲಿ ಶ್ರೀಗಳವರು ನೇತೃತ್ವ ವಹಿಸಿ ಮಾರ್ಗದರ್ಶನ ನೀಡಿದ್ದನ್ನು ಸ್ಮರಿಸಿದರು.
ಶ್ರೀ ರಂಭಾಪುರಿ ಜಗದ್ಗುರುಗಳ ಜನ್ಮ ದಿನದ ನಿಮಿತ್ಯ ಶಿವಮೊಗ್ಗ ಜಿಲ್ಲೆಯ ಕಡೆನಂದಿಹಳ್ಳಿ ಮಳೆಮಲ್ಲೇಶ್ವರ ಕ್ಷೇತ್ರದಿಂದ 617 ಕಿ.ಮೀ. ಅಂತರವನ್ನು ಪಾದಯಾತ್ರೆ ಮೂಲಕ 12 ದಿನಗಳಲ್ಲಿ ಕ್ರಮಿಸಿ ಕೊನಲುಪಾಕ ಕ್ಷೇತ್ರಕ್ಕೆ ಆಗಮಿಸಿದ ದುಗ್ಲಿ-ಕಡೆನಂದಿಹಳ್ಳಿ ಕ್ಷೇತ್ರದ ರೇವಣಸಿದ್ಧೇಶ್ವರ ಶ್ರೀಗಳು, ಹಾರನಹಳ್ಳಿಯ ಶಿವಯೋಗಿ ಶ್ರೀಗಳು ಮತ್ತು ೩೪ಕ್ಕೂ ಹೆಚ್ಚು ಭಕ್ತರು ಶ್ರೀ ಸೋಮೇಶ್ವರ-ಚಂಡಿಕಾ0ಬಾ ದರ್ಶನ ಮಾಡಿದರು. ಎಲ್ಲ ಪಾದಯಾತ್ರಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಶಾಲು ಹೊದಿಸಿ ಆಶೀರ್ವದಿಸಿದರು.


ಸುಮಾರು 45ಕ್ಕೂ ಹೆಚ್ಚು ಮಠಾಧೀಶರು ಸಮಾರಂಭದಲ್ಲಿ ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳಿಗೆ ಗೌರವ ಸಮರ್ಪಣೆ ಮಾಡಿದರು.

ಕ್ಷೇತ್ರಾಭಿವೃದ್ಧಿ ಟ್ರಸ್ಟಿನ ಎಲ್ಲಾ ಸದಸ್ಯರು ಹಾಗೂ ಅಭಿಮಾನಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಕಲಬುರ್ಗಿಯ ಗಿರಿಯಪ್ಪ ಮುತ್ಯಾ ಅವರು ಬಂದ ಎಲ್ಲ ಭಕ್ತರಿಗೆ ಅನ್ನ ದಾಸೋಹ ನೆರವೇರಿಸಿದರು.

ವರದಿ: ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ,

Related Articles

ಪ್ರತಿಕ್ರಿಯೆ ನೀಡಿ

Latest Articles