ಉಡುಪಿ: ಉಡುಪಿಯಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಪರ್ಯಾಯೋತ್ಸವಕ್ಕೆ ಇಡೀ ನಗರ ಅಲಂಕೃತಗೊ0ಡಿದೆ. ಈ ಬಾರಿ ಕೃಷ್ಣಾಪುರ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಚತುರ್ಥ ಪರ್ಯಾಯೋತ್ಸವ ನಡೆಸಲಿದ್ದಾರೆ.
ಕೋವಿಡ್ ಕಾರಣದಿಂದ ಸರಳವಾಗಿ ಪರ್ಯಾಯೋತ್ಸವ ನಡೆಯಲಿದೆ.
ಜ. 17 ರಂದು ಮಧ್ಯಾಹ್ನದಿಂದಲೇ ಶ್ರೀಕೃಷ್ಣಾಪುರ ಮಠದ ಪರ್ಯಾಯೋತ್ಸವಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ರಾತ್ರಿ ೯ ಗಂಟೆಯ ನಂತರ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ.
ರಾತ್ರಿ ಪರ್ಯಾಯ ಮೆರವಣಿಗೆ, ಜ.18 ರ ಬೆಳಗ್ಗೆ ಪಯಾಯ ದರ್ಬಾರ್, ವಿವಿಧ ಸಾಂಪ್ರದಾಯಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಕೊರೊನಾ ಮುನ್ನೆಚ್ಚರಿಕೆ
ಶ್ರೀಕೃಷ್ಣ ಮಠದಲ್ಲಿ ಜನವರಿ 17 ರ ರಾತ್ರಿ ಹಾಗೂ 18 ರಂದು ಬೆಳಗ್ಗೆ ನಡೆಯುವ ಪೀಠಾರೋಹಣ ಕಾರ್ಯಕ್ರಮವನ್ನು ಕೊರೊನಾ ಸೋಂಕು ಕಾರಣದಿಂದ ಸರಳ ರೀತಿಯಲ್ಲಿ ಆಚರಿಸಲು ಭಾವೀ ಪರ್ಯಾಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ಶ್ರೀಪಾದರು ಮನವಿ ಮಾಡಿದ್ದಾರೆ.
ಶ್ರೀಕೃಷ್ಣಾಪುರ ಮಠದ ಪರ್ಯಾಯೋತ್ಸವ ಸಮಿತಿ ಹಾಗೂ ಜಿಲ್ಲಾಡಳಿತ ನಡುವೆ ಸಭೆ ನಡೆದು ಹಲವು ಕ್ರಮಗಳನ್ನು ತೆಗೆದುಕೊಳ್ಳುವ ನಿರ್ಧಾರ ಮಾಡಲಾಗಿದೆ. ಇದರ ಆಧಾರದಲ್ಲಿ ಸಮಿತಿಯಿಂದ ರಥಬೀದಿ, ರಾಜಂಗಣ, ಶ್ರೀಕೃಷ್ಣ ಮಠದ ಒಳಗೆ ಕೊರೊನಾ ಮುನ್ನೆಚ್ಚರಿಕೆ ಸಂಬ0ಧಿಸಿದ ಸೂಚನೆ ಫಲಕಗಳನ್ನು ಅಳವಡಿಸಲಾಗಿದೆ. 2 ಡೋಸ್ ಲಸಿಕೆ ತೆಗೆದುಕೊಂಡವರು ಮಾತ್ರ ಪರ್ಯಾಯ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು ಎಂದು ಸಮಿತಿ ವಿನಂತಿ ಮಾಡಿದೆ.
ಸಾಂಪ್ರದಾಯಿಕ, ಧಾರ್ಮಿಕ ಕಾರ್ಯಕ್ರಮ
ಪರ್ಯಾಯ ಪೀಠಾರೋಹಣ ಮಾಡಲಿರುವ ಶ್ರೀಕೃಷ್ಣ ಮಠದ ಕೃಷ್ಣಾಪುರ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಕಾಪು ದಂಡತೀರ್ಥ ಮಠಕ್ಕೆ ಬಂದು ಆಚಾರ್ಯ ಮಧ್ವರು ದಂಡದಿ0ದ ಸೃಷ್ಟಿಸಿದ ದಂಡತೀರ್ಥ ಕೆರೆಯಲ್ಲಿ ಸ್ನಾನ ಮಾಡಿ ಪೂಜೆ ಸಲ್ಲಿಸಿ ಬಳಿಕ ಜೋಡುಕಟ್ಟೆಗೆ ತೆರಳಿ ಪರ್ಯಾಯ ಮೆರವಣಿಗೆ ನಡೆಸುವುದು ಸಂಪ್ರದಾಯ.
ದಂಡತೀರ್ಥ ಮಠವು ಶ್ರೀಕೃಷ್ಣಾಪುರ ಮಠದ ಆಡಳಿತವಿರುವುದರಿಂದ ಈ ಬಾರಿಯ ಪರ್ಯಾಯಕ್ಕೆ ವಿಶೇಷ ಮಹತ್ವ ಲಭಿಸಿದೆ.
ಸಂಪ್ರದಾಯದ0ತೆ ಜ.17 ರಂದು ಮಧ್ಯರಾತ್ರಿ ಕಳೆದು ಮುಂಜಾನೆಯ ವೇಳೆಗೆ ಉಳಿಯಾರಗೋಳಿ ದಂಡತೀರ್ಥ ಮಠಕ್ಕೆ ಆಗಮಿಸಿ ತೀರ್ಥಸ್ನಾನ ಮಾಡಲಿದ್ದಾರೆ. ಶ್ರೀಗಳನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲು ದಂಡತೀರ್ಥ ಮಠದಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ.
ಧಾರ್ಮಿಕ ಕಾರ್ಯಕ್ರಮಗಳು: ಶ್ರೀಗಳು ಆಪ್ತ ಶಿಷ್ಯರೊಡಗೂಡಿ ತೀರ್ಥಸ್ನಾನ ಪೂರೈಸಿದ ಬಳಿಕ ಕೆರೆಯ ತೀರ್ಥಕುಂಡದಿ0ದ ತೀರ್ಥವನ್ನು ತುಂಬಿಸಿಕೊ0ಡು ತಮ್ಮ ಪಟ್ಟದ ದೇವರ ಸಹಿತವಾಗಿ ದಂಡತೀರ್ಥ ಮಠದ ಕುಂಜಿ ಗೋಪಾಲಕೃಷ್ಣ ದೇವರು, ಪರಿವಾರ ಸಹಿತ ರಾಮಕೃಷ್ಣ ದೇವರಿಗೆ ಅರ್ಚನೆ, ಪೂಜೆ ನೆರವೇರಿಸುವರು. ಬಳಿಕ ದ್ವೈವಾರ್ಷಿಕ ಪರ್ಯಾಯದ ಶೋಭಾಯಾತ್ರೆಗೆ ಉಡುಪಿ ಜೋಡುಕಟ್ಟೆಗೆ ತೆರಳಲಿದ್ದಾರೆ. ತೀರ್ಥಸ್ನಾನದ ಬಳಿಕ ಉಡುಪಿಗೆ ತೆರಳಿ ಜೋಡುರಸ್ತೆಯಲ್ಲಿ ಪೂಜೆ ನೆರವೇರಿಸಿ, ಮೆರವಣಿಗೆಯಲ್ಲಿ ಸಾಗಿ ಬಂದು ರಥಬೀದಿಗೆ ತೆರಳಿ ಕನಕ ಕಿಂಡಿಯ ಮೂಲಕ ಶ್ರೀಕೃಷ್ಣ ದೇವರನ್ನು ದರ್ಶನ ಮಾಡಲಿದ್ದಾರೆ, ನಂತರ ಅನಂತೇಶ್ವರ, ಚಂದ್ರಮೌಳೀಶ್ವರ ದೇವರ ದರ್ಶನ ಮಾಡಿ ಬಳಿಕ ಸರ್ವಜ್ಞ ಪೀಠಾರೋಹಣಗೈದು ಶ್ರೀಕೃಷ್ಣ ದೇವರ ಪೂಜಾ ಕೈಂಕರ್ಯದ ದೀಕ್ಷೆ ಸ್ವೀಕರಿಸಲಿದ್ದಾರೆ.