*ಡಾ.ವಿದ್ಯಾಶ್ರೀ ಕುಲಕರ್ಣಿ
ಮಳಖೇಡ ಶ್ರೀ ಜಯತೀರ್ಥರ ಸೇವಾಫಲದ ವರಪ್ರಸಾದವಾಗಿ, ಸವಣೂರು ತಾಲ್ಲೂಕಿನ ಸಿದ್ದಾಪುರ ಗ್ರಾಮದಲ್ಲಿ ಬಾಳಾಚಾರ್ಯರು ಭಾಗೀರಥಿ ಬಾಯಿ ದಂಪತಿಗಳಲ್ಲಿ ಜನಿಸಿತು ಭಾಗವತಪುಷ್ಪ.
ಟೀಕಾಕೃತ್ಪಾದ ಶ್ರೀ ಜಯತೀರ್ಥರ ಅನುಗ್ರಹದಿ ಜನಿಸಿದ ಕೂಸಿಗೆ ಜಯತೀರ್ಥಾಚಾರ್ಯ ಎಂದೇ ಹೆಸರಿಟ್ಟರು. ಭಗವಂತನ ಆಜ್ಞೆಯ ಮೇರೆಗೆ ಮನುಕುಲವನ್ನುದ್ಧರಿಸಲು ಭೂಮಿಗೆ ಬರುವವರು ಇಂತಹ ಮಹಾಮಹಿಮರು. ಗೃಹಸ್ಥಾಶ್ರಮದಲ್ಲಿ ಅತ್ಯಂತ ವೈಭವೋಪೇತ ಜೀವನದಲ್ಲಿದ್ದ ಸಾಧ್ವೀ ಸತೀಮಣಿಯ ಜೊತೆಗೆ ಆನಂದ, ನೆಮ್ಮದಿಯಿಂದ ಸಾಗುತ್ತಿದ್ದ ಸಂಸಾರ ಸಾಗರದಿ, ಒಮ್ಮೆ ದಾಸರು ಹಾಡಿಕೊಂಡು ಬರುತ್ತಿದ್ದ, ಪರಂದರದಾಸರ ಹಾಡಿನ ಪ್ರಭಾವದ ಪ್ರವಾಹ ಹರಿಯಿತು. ಅವರ ಜೀವನದಲ್ಲಿ ಹೊಸ ಬೆಳಕೊಂದು ಮೂಡಿತು. ಸುಖವೈಭೋಗದ ಪೊರೆ ಕಳಚಿತು.
” ಮಂಚ ಬಾರದು, ಮಡದಿ ಬಾರಳು, ಕಂಚು ಕನ್ನಡಿ ಬಾರದು ಸಂಚಿತಾರ್ಥವು ಮತ್ತೆ ಬಾರದು, ಮುಂಚೆ ಮಾಡಿರಿ ಧರ್ಮವ.”
ಪುರಂದರದಾಸರ ಈ ಕೃತಿಯ ಮೂಲಕ ಜಯತೀರ್ಥಾಚಾರ್ಯರ ಕಿವಿಗೆ ಈ ಹಾಡಿನ ಸಾಲು ಕಿವಿಗೆ ಬಿದ್ದವರೇ ಎದ್ದರು. ವೈರಾಗ್ಯ ಭಾವದಿ ಗೆದ್ದರು. ಶಾಶ್ವತವಲ್ಲದ ಎಲ್ಲ ಸಂಸಾರ ಸುಖವನ್ನು ತ್ಯಜಿಸಿದರು. ಮಕ್ಕಳಿಗೆ ಮನೆ ಜವಾಬ್ದಾರಿ ವಹಿಸಿ ವಾನಪ್ರಸ್ಥಾಶ್ರಮ ಸ್ವೀಕರಿಸಿದರು.
ಮಲಾಪಹಾರಿ ನದಿ ತೀರದಲ್ಲಿ ವಾಸಿಸುತ್ತಾ ಮಧುಕರಿ ವೃತ್ತಿಯನ್ನು ಅವಲಂಬಿಸಿದರು. ಅಡವಿ ಸೇರಿದರು. ದೀರ್ಘ ತಪಸ್ಸು ಮಾಡಿದರು, ಅಲ್ಲಿಗೆ ಭಗವತ್ಸಂಕಲ್ಪದಂತೆ ಭೂಮಿಗೆ ಬಂದಿದ್ದ ಅವರ ನಿಜವಾದ ಸಾರ್ಥಕತೆಯ ಕ್ಷಣ ಆರಂಭವಾಯಿತು. ಅಡವಿ ಸೇರಿ ತಪಸ್ಸನ್ನಾಚರಿಸಿ ಅಡವಿಆಚಾರ್ಯರೆನಿಸಿದರು. ಅರಣ್ಯಕಾಚಾರ್ಯರೂ ಎಂದು ಪ್ರಸಿದ್ಧಿಯಾದರು. ಮುಂದೆ ಮಧ್ವರಶಾಸ್ತ್ರವನ್ನು ಬೆಳಗಿದರು. ಗುರುಭಕ್ತಿ. ಪೂರ್ವಾಶ್ರಮದಲ್ಲಿ ಇವರಿನ್ನೂ ಜಯತೀರ್ಥಾಚಾರ್ಯರು. ಐಜಿ ಆಚಾರ್ಯರೆಂದೇ ಪ್ರಸಿದ್ಧರಾದ ವೇಣಿಸೋಮಪುರದ ಶ್ರೀವ್ಯಾಸತತ್ವಜ್ಞರಲ್ಲಿ ಇವರ ವಿದ್ಯೆ ಕಲಿತರು. ಶಾಸ್ತ್ರಾಧ್ಯಯನ ನಡೆಯಿತು.
ಗುರುಗಳಲ್ಲಿ ಅನನ್ಯವಾದ ಭಕ್ತಿಯನ್ನು ತೋರುತ್ತಿದ್ದರು ಜಯತೀರ್ಥರು. ತಮ್ಮ ಶಿಷ್ಯ ಈ ಉರಿಬಿಸಿಲಿನಲ್ಲಿ ಬರಿಕಾಲಿನಲ್ಲಿ ನಡೆಯುವುದನ್ನು ನೋಡಿದ ಗುರುಗಳ ಹೃದಯ ಕರಗಿತು. ಮರುಗಿತು. ಕೂಡಲೇ ಅವರನ್ನು ಕರೆದು ತಮ್ಮ ಪಾದುಕೆಗಳನ್ನು ಕೊಡುತ್ತಾರೆ. ಗುರುಗಳು ಕೊಡುತ್ತಿದ್ದಾರೆಂದರೆ ತೆಗೆದುಕೊಳ್ಳಬೇಕೆಂದು ಭಕ್ತಿಭಾವದಿಂದ ತೆಗೆದುಕೊಂಡರು. ಅಲ್ಲಿದ್ದವರಿಗೆ ಗಾಬರಿ. ಗುರುಗಳು ಕೊಟ್ಟ ಪಾದುಕೆಗಳನ್ನು ಇವರು ಧರಿಸುತ್ತಾರಾ ಎಂದು ಕಾದು ನೋಡುತ್ತಿದ್ದರು. ಕುದುರೆ ಮುಂದೆ ಹೋಯಿತು. ಇವರು ಸ್ವಲ್ಪ ದೂರ ಹೋದ ಬಳಿಕ ಗುರುಗಳು ತಿರುಗಿ ನೋಡಿದರು. ಮುಗುಳ್ನಕ್ಕರು. ಕಾರಣವಿಷ್ಟೆ. ಬಿಸಿಲು ಹತ್ತಬಾರದು ಎಂದು ಪಾದುಕೆಗಳನ್ನು ಹಾಕಿಕೊಳ್ಳಲು ಕೊಟ್ಟರೆ, ಈ ಪ್ರೀತಿಯ ಶಿಷ್ಯೋತ್ತಮ ಪಾದುಕೆಗಳನ್ನು ತಮ್ಮ ಶಿರದಲ್ಲಿ ಭಕ್ತಿಯಿಂದ ಧರಿಸಿದ್ದರು. ಅದನ್ನು ಕಂಡ ಗುರುಗಳು ಯಾಕೆ ಹಾಕಿಕೊಳ್ಳಲಿಲ್ಲ ಎಂದು ಕೇಳಿದಾಗ ಜಯತೀರ್ಥರು ಕೊಟ್ಟ ಉತ್ತ. ಗುರುಗಳೇ ನಿಮ್ಮಪಾದ ಛಾಯೆ ನನ್ನ ತಲೆ ಮೇಲಿರಬೇಕಾದರೆ ನನಗ್ಯಾವ ಬಿಸಿಲಿನ ಬಾಧೆ ತಾಕೀತು. ಎಂದರಂತೆ, ಗುರುಗಳಿಗೆ ತಮ್ಮ ಶಿಷ್ಯನ ಮೇಲಿರುವ ಮಾತೃವಾತ್ಸಲ್ಯ, ಗುರುಗಳಲ್ಲಿ ಇವರಿಟ್ಟ ಭಕ್ತಿ. ಎರಡೂ ವಿಶೇಷವಾದದ್ದು. ಗುರುಸೇವೆಯನ್ನು ಅನನ್ಯವಾಗಿ ಮಾಡಿದ್ದರ ಫಲವೇ ಶ್ರೀವಿಷ್ಣುತೀರ್ಥರು ರಚಿಸಿದ ಇಷ್ಟೆಲ್ಲ ಗ್ರಂಥಗಳು ಇಂದು ಜಗನ್ಮಾನ್ಯವಾಗಿವೆ.
ಒಬ್ಬ ವ್ಯಕ್ತಿ ಯ ವಿದ್ಯೆ ಅತ್ಯಂತ ಫಲಕಾರಿಯಾಗಬೇಕಾದರೆ ಗುರುಶುಶ್ರೂಷೆಯಿಂದ ಕಲಿತ ವಿದ್ಯೆ ಇನ್ನಷ್ಟು ಮಹತ್ತನ್ನು ಪಡೆದುಕೊಳ್ಳುತ್ತದೆ ಎಂಬುದಕ್ಕೆ ಶ್ರೀವಿಷ್ಣುತೀರ್ಥರೇ ಸಾಕ್ಷಿ.
ಮುಂದೆ ಒಂದು ಶುಭ ದಿನ ಶ್ರೀಮದುತ್ತಾರಾದಿ ಮಠದ ಪೀಠಾಧಿಪತಿಗಳಾಗಿದ್ದ ಶ್ರೀ ಶ್ರೀ 1008 ಸತ್ಯವರತೀರ್ಥರಿಂದ ಸಂನ್ಯಾಸಾಶ್ರಮ ಸ್ವೀಕರಿಸಿದರು. ಶ್ರೀ ವಿಷ್ಣು ತೀರ್ಥರೆಂಬ ಆಶ್ರಮ ನಾಮ ಹೊಂದಿ ಕುಶಾವತಿ ನದಿ ತಿರದ ಮಾದನೂರು ಗ್ರಾಮದಲ್ಲಿ ನೆಲೆಸಿದರು.
” ಮಾದನೂರು” ಹೆಸರೇ ಹೇಳುವ ಹಾಗೆ ಅದು ಮಾಧವನ ಕ್ಷೇತ್ರ. ಭಗವಂತನ ಕ್ಷೇತ್ರ.ಮಾದನ ಅಂದರೆ ಆನಂದವನ್ನು ಕೊಡುವವರು. ಮದನನಯ್ಯ ಅಂದರೆ ಮನ್ಮಥನ ಪಿತ ಮಾದನ. ಮಾಧವ. ವಿಷ್ಣು, ಅಂತಹ ವಿಷ್ಣುವಿನ ಕ್ಷೇತ್ರವೇ ಶ್ರೀವಿಷ್ಣುತೀರ್ಥರ ಸಾಧನಕ್ಷೇತ್ರವಾಯಿತು.ಮಧ್ವರ ಶಾಸ್ತ್ರದ ಆನಂದವನ್ನು ಕೊಟ್ಟವರು ಶ್ರೀವಿಷ್ಣುತೀರ್ಥರು.
ಮಹಿಮೆಗಳು
ಲಕ್ಷ್ಮೀಸ್ತುತಿಯನ್ನು ರಚನೆ- , ಬರಗಾಲದ ಸಮಯ, ಕಡುಕಷ್ಟ, ಬಿರುಬಿಸಿಲು, ನೀರಿಲ್ಲ, ಮಳೆ ಬೆಳೆಯಿಲ್ಲದ ಅತ್ಯಂತ ದುರ್ಭಿಕ್ಷದ ಕಾಲ.ತಮ್ಮತಪದ ಮಹಿಮೆಯನ್ನ ತೋರಿಸಿದ ಮಹಾಮಹಿಮರು. ಒಮ್ಮೆ ಪ್ರವಚನ ಹೇಳುವ ಸಂದರ್ಭದಲ್ಲಿ ಒಂದು ತಾಮ್ರದ ನಾಣ್ಯವನ್ನು ಆ ಗ್ರಂಥದ ಕೆಳಗೆ ಇಟ್ಟಿರುತ್ತಿದ್ದರಂತೆ. ಪಾಠ ಮುಗಿದ ಬಳಿಕ ಅದನ್ನು ತೆಗೆದಾಗ ಆ ತಾಮ್ರದ ನಾಣ್ಯ ಬಂಗಾರದ ನಾಣ್ಯವಾಗಿ ಪರಿವರ್ತನೆ ಆಗಿರುತ್ತಿತ್ತಂತೆ. ಅದನ್ನು ತಮಗಾಗಿ ಉಪಯೋಗಿಸಿಕೊಳ್ಳಲು ಅಲ್ಲ. ಅವಶ್ಯಕತೆ ತಕ್ಕಂತೆ, ಜನರೆಲ್ಲ ಬರಗಾಲದಿಂದ ಉಪವಾಸ ವನವಾಸ ಅನುಭವಿಸುತ್ತಿರುವುದನ್ನು ನೋಡಲಾಗದೆ, ಆ ಬಂಗಾರದ ನಾಣ್ಯದಿಂದ ಬರುವ ವಿತ್ತದಿಂದ ಇಡೀ ಊರ ಜನತೆಗೆ ಭೋಜನವನ್ನು ಮಾಡಿಸುತ್ತಿದ್ದರು. ಅವರ ತಪಃಶಕ್ತಿ ಅಷ್ಟಿತ್ತು. ಹೀಗೆ ತಮ್ಮ ವಿಶೇಷವಾದ ತಪಸ್ಸಿನಿಂದ ಅನ್ನದಾನವನ್ನು ಮಾಡಿದ ಮಹಾಮಹಿಮರು ಶ್ರೀವಿಷ್ಣುತೀರ್ಥರು. ಸುಮಧ್ವವಿಜಯದ ಪಾರಾಯಣದ ಮೂಲಕ ಒಂದು ಸಾಮಾನ್ಯ ಪಾತ್ರೆಯನ್ನು ಬಂಗಾರದ ಪಾತ್ರೆಯಾಗಿರಿಸಿದ್ದು. ಕಿನ್ನಾಳ ದೇಸಾಯರ ವಿಚಿತ್ರ ರೋಗವನ್ನು ಪರಿಹರಿಸಿದ್ದು. ತಮ್ಮ ಮಗನಿಗೆ ಬಂದ ಅಪಮೃತ್ಯುವನ್ನು ಮೂರು ದಿನ ಉಪವಾಸವಿದ್ದು ಪರಿಹರಿಸಿದ್ದು. ಇವರ ಪ್ರವಚನ ಕಾಲದಲ್ಲಿ ಶ್ರೀಟೀಕಾಕೃತ್ಪಾದರ ಆಗಮನ ಸೂಚನವಾಗಿ ದಿವ್ಯವಾದ ಪರಿಮಳ ಪಸರಿಸುತ್ತಿತ್ತಂತೆ. ಶ್ರೀವಿಷ್ಣುತೀರ್ಥರ ಕುರಿತಾದ ಗ್ರಂಥಗಳು – ಅವರ ಪೂರ್ವಾಶ್ರಮದ ಪುತ್ರರಾದ ಕೃಷ್ಣಾಚಾರ್ಯರು ಪಂಚರತ್ನ ಅವರ ಶಿಷ್ಯರಾದ ಗೋಕಾವಿ ಭೀಮಾಚಾರ್ಯರು – ಪಂಚರತ್ನ ಕನ್ನಡಾನುವಾದ ಪಂಚರತ್ನಕ್ಕೆ “ಪ್ರಭಾ” ಎಂಬ ಸಂಸ್ಕೃತ ವ್ಯಾಖ್ಯಾನ “ಶ್ರೀ ವಿಷ್ಣುತೀರ್ಥವಿಜಯ” ಇವರ ಬಗ್ಗೆಯೇ ಹಲವಾರು ದೇವರ ನಾಮಗಳು ರಚನೆಯಾಗಿವೆ. ಶ್ಲೋಕದಲ್ಲಿನ ಸಾರವನ್ನು ಹಿಡಿದು ಅವರು ವ್ಯಾಖ್ಯಾನ ಮಾಡುವ ರೀತಿಯೇ ಅತ್ಯಂತ ವಿಶಿಷ್ಟವಾದದ್ದು.
ಶ್ರೀನ್ಯಾಯಸುಧಾಗ್ರಂಥಕ್ಕೆ ವ್ಯಾಖ್ಯಾನವನ್ನೂ ಮಾಡಿದ್ದಾರೆ. ಷೋಡಷಿ, ಚತುರ್ದಶಿ, ಆಧ್ಯಾತ್ಮಾಮೃತರಸರಂಜಿನಿ,ಬಿಂಬಸ್ತುತಿ. ಗೀತಾಸಾರೋದ್ಧಾರ, ಮುಂತಾದ ಗ್ರಂಥಗಳನ್ನು ರಚಿಸಿದ್ದಲ್ಲದೆ, ವಿಶೇಷವಾಗಿ ಭಾಗವತದ ಅಮೃತ ಉಣಿಸುವ “ಭಾಗವತ ಸಾರೋದ್ಧಾರ” ಗ್ರಂಥದಲ್ಲಿ 367 ಶ್ಲೋಕಗಳಿಂದ ವಿವರಿಸಿ, ವ್ಯಾಖ್ಯಾನ ಮಾಡಿದ್ದಾರೆ.ಅನೇಕ ಗ್ರಂಥಗಳನ್ನು ರಚಿಸಿ ಮನುಕುಲದ ಉದ್ಧಾರಕ್ಕೆ ಅಪಾರವಾದ ಕೊಡುಗೆ ಕೊಟ್ಟು ಅನೇಕ ಮಹತ್ಕಾರ್ಯಗಳನ್ನು ಮಾಡಿದ ಮಹಾನುಭಾವರು. ಶಿಷ್ಯಸಂಪತ್ತು- ಮಾದನೂರಿನ ವಿಷ್ಣುತೀರ್ಥರ ಪ್ರಮುಖ ಶಿಷ್ಯರು, ಗೋಕಾವಿಯ ಅನಂತಾದ್ರಿ ಭೀಮಾಚಾರ್ಯರು, ಟೊಣಪಿ ಬಾಳಾಚಾರ್ಯರು, ಶೇಷಾಚಾರ್ಯರು, ಮೊರಬ ರಾಮಾಚಾರ್ಯರು, ಕೌಜಲಗಿ. ವೆಂಕಟಾಚಾರ್ಯರು, ಅಣ್ಣಿಗೇರಿಯ ಅಣ್ಣಾಚಾರ್ಯರು ಸಮಕಾಲೀನರು – ಶ್ರೀಸತ್ಯಬೋಧತೀರ್ಥರು, ಶ್ರೀಸತ್ಯಸಂಧತೀರ್ಥರು, ಶ್ರೀಧೀರೆಂದ್ರತೀರ್ಥರು, ಶ್ರೀ ಜಗನ್ನಾಥದಾಸರು, ಗೋಪಾಲದಾಸರು ಸಮಕಾಲೀನರಲ್ಲದೆ ನಿಕಟವರ್ತಿಗಳಾಗಿದ್ದರು. ಕೇವಲ ಐವತ್ತು ವರ್ಷಗಳ ತಮ್ಮ ಜೀವಿತಾವಧಿಯಲ್ಲಿ ಅವರು ಮಾಡಿದ ಸಾಧನೆ, ತೋರಿದ ಮಹಿಮೆ ಅಪಾರವಾದದ್ದು.
ಭಗವತ್ ತತ್ವಗಳ ಚಿಂತನೆ ಮಾಡುವುದೇ ಜನುಮ ಜನುಮಗಳ ಪುಣ್ಯ. ವಿಷ್ಣುತೀರ್ಥರ ಮಹಿಮೆಗಳು ರುದ್ರಾಂಶಸಂಭೂತರೆಂದು ಹಿರಿಯರು ಹೇಳುತ್ತಾರೆ. ಇಂತಹ ಮಹಾನುಭಾವರ ಸ್ಮರಣೆ ಕುಲಕೋಟಿ ಉದ್ಧರಣೆ. ಮಾಘ ಬಹುಳ ತ್ರಯೋದಶಿಯಂದು ಭೂಮಿಗೆ ಬಂದ ತಮ್ಮ ಕಾರ್ಯ ಮುಗಿಸಿ, ಪಾರ್ಥಿವಶರೀರವನ್ನು ತ್ಯಜಿಸಿ ಮಾದನೂರಿನಲ್ಲಿ ಬೃಂದಾವನಸ್ಥರಾದರು.
ಸ್ವಪ್ನದಲ್ಲಿ ಬದರಿನಾರಾಯಣನ ದರುಶನವಾಗಿತ್ತು. ಸ್ವಪ್ನಸೂಚಿತ ಸ್ಥಳದಲ್ಲಿ ದೊರೆತ ಬದರೀನಾರಾಯಣನ ಶಿಲಾಮಯವಿಗ್ರಹವು ಇಂದಿಗೂ ಇವರ ವೃಂದಾವನದ ಮೇಲಿಟ್ಟು ಪೂಜೆಗೊಳ್ಳುತ್ತದೆ.
ಲೇಖಕಿ ಡಾ.ವಿದ್ಯಾಶ್ರೀ ಕುಲಕರ್ಣಿ ಮಾನವಿ, ಕನ್ನಡ ಅಧ್ಯಾಪಕಿ, ಪೂರ್ಣಪ್ರಮತಿ ಶಾಲೆ ಬೆಂಗಳೂರು.