ಮೇಲುಕೋಟೆ: ಆಷಾಢ ಜಾತ್ರೆ ಎಂದೇ ಪ್ರಸಿದ್ದಿಯಾದ ಮೇಲುಕೋಟೆ ಶ್ರೀ ಚಲುವನಾರಾಯಣ ಸ್ವಾಮಿಯವರ ಐತಿಹಾಸಿಕ ಕೃಷ್ಣ ರಾಜಮುಡಿ ಕಿರೀಟ ಧಾರಣ ಮಹೋತ್ಸವ ಜುಲೈ 19ರ ಮಂಗಳವಾರ ರಾತ್ರಿ 7 ಗಂಟೆಗೆ ನೆರವೇರಲಿದೆ. ಮೈಸೂರಿನ ರಾಜ ಅರಸರಾದ ಮುಮ್ಮಡಿ ಕೃಷ್ಣರಾಜ ಒಡೆಯರ್ ಹೆಸರಿನಲ್ಲಿ ನಡೆಯುವ ಹತ್ತು ದಿನಗಳ ಜಾತ್ರಾ ಮಹೋತ್ಸವದಲ್ಲಿ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್ ರವರು ಭಕ್ತಿ ಪೂರ್ವಕವಾಗಿ ಕೊಡುಗೆಯಾಗಿ ನೀಡಿರುವ ವಜ್ರಖಚಿತ ‘ಕೃಷ್ಣ ರಾಜಮುಡಿ’ ಕಿರೀಟವನ್ನು ಧರಿಸಿ ಗಂಡಭೇರುಂಡ ಪದಕ ಸಹಿತ, ಶ್ರೀ ದೇವಿ ಹಾಗೂ ಭೂದೇವಿ ಸಮೇತ ಗರುಡರೂಢನಾಗಿ ಶ್ರೀ ಶಲ್ವಪಿಳ್ಳೈ , ಸಂಪತ್ಕುಮಾರ, ರಾಮಪ್ರಿಯನೂ ಆದ ಶ್ರೀಚಲುವನಾರಾಯಣ ಸ್ವಾಮಿಯು ಭಕ್ತರಿಗೆ ದರುಶನ ನೀಡುವರು.