ಪರಿಸರವನ್ನು ದೇವತೆಯೆಂದು ಪರಿಭ್ರಮಿಸುವ ವಿಶಿಷ್ಟ ಸಂಪ್ರದಾಯ ನಮ್ಮದು. ನಮ್ಮ ಹಿಂದೂ ಧರ್ಮದಲ್ಲಿ ದೇವಾನುದೇವತೆಗಳಿಗೆ ಉಪವಾಸ ವ್ರತ ಪೂಜೆಗಳು ಸಲ್ಲಿಕೆಯಾಗುವಂತೆ ಸಸ್ಯ, ವೃಕ್ಷಗಳಿಗೂ ಪೂಜೆ ಪುನಸ್ಕಾರ ವ್ರತ ಉಪವಾಸಗಳು ಸಲ್ಲುತ್ತವೆ. ಆದರೆ, ಎಲ್ಲಾ ಸಸ್ಯಗಳು ಪೂಜೆಗೆ ಅರ್ಹವಾಗುವುದಿಲ್ಲ. ಅವುಗಳಲ್ಲಿ ಕೆಲವೇ ಕೆಲವು ಅಂದರೆ ಅರಳಿ ಮರ, ಅತ್ತಿ ಮರ, ಎಕ್ಕದ ಗಿಡ, ತುಳಸಿ ಗಿಡಗಳು ಹೀಗೆ ಇವುಗಳ ಪಟ್ಟಿ ದೊಡ್ಡದಾಗಿ ಬೆಳೆಯುತ್ತಲೇ ಹೋಗುತ್ತದೆ.
ಪ್ರತಿಯೊಂದು ಸಸ್ಯ, ಮರಗಳು, ಅದರದೇ ಆದ ಮೇರು ಸ್ಥಾನದಲ್ಲಿ ಇರುತ್ತವೆ. ಅಲ್ಲದೇ ಭಗವಂತನಿಗೂ ಪ್ರಿಯನಾಗಿ ಜನರ ಜೀವನಾಡಿಯಾಗಿಯೂ, ಶುಭದ ಸಂಕೇತವಾಗಿಯೂ ಸಮಸ್ಯೆಗಳ ನಿವಾರಕವಾಗಿಯೂ, ಮಾನವರ ಅಗತ್ಯತೆಗಳ ಪೂರೈಕೆಗಾಗಿ ಹೀಗೆ ಮನೋಭಾವಕ್ಕೆ ಸಸ್ಯಗಳು ತಮ್ಮ ಬದುಕನ್ನು ಸವೆಸುತ್ತಿರುತ್ತದೆ. ಆದರೆ ಒಂದು ಮಾತ್ರ ಸತ್ಯ ಎಲ್ಲಾ ಸಸ್ಯಗಳು ಪೂಜಿತಗೊಳ್ಳುವುದಿಲ್ಲ.
ಸಸ್ಯ ಸಿರಿಯಲ್ಲಿ ಮಾನವರಿಗೆ ಜೀವನಾಡಿಯಾಗಿ ಔಷಧೀಯ ಲೋಕವನ್ನೇ ತನ್ನಲ್ಲಿ ಮೈಗೂಡಿಸಿಕೊಂಡಿರುವ ಮಹಿಳಾ ಪ್ರಿಯವಾಗಿ ಎಲ್ಲರ ಮನೆಯ ಅಂಗಳದಲ್ಲಿ ರಾರಾಜಿಸುವ ಏಕೈಕ ಸಸ್ಯವೇ ತುಳಸಿ. ತುಳಸಿ ಮುತ್ತೈದೆಯರ ಸಂಕೇತವಾಗಿದ್ದು ಕಾರ್ತೀಕ ಮಾಸದಲ್ಲಿ ವಿಶೇಷ ಹಬ್ಬವಾಗಿ, ನಾನಾ ದೀಪ, ಹಲವಾರು ನೆಲ್ಲಿಕಾಯಿ ಹಾರ, ನಡುವಲ್ಲಿ ಸುಂದರವಾಗಿ ರಾರಾಜಿಸುತ್ತಾಳೆ.
ತುಳಸಿ ಗಿಡದ ವಿಶೇಷತೆ:
ತುಳಸಿಗೆ ವೈಷ್ಣವರ ಮನೆಗಳಲ್ಲಿ ವಿಶೇಷ ಸ್ಥಾನವಿದೆ. ವಿಷ್ಣುವಿನ ಅರ್ಚನೆಗೆ ಪ್ರಧಾನವಾದ ಸಾಧನವಾಗಿದೆ. ಈ ತುಳಸಿ ಗೋಪಿ ಚಂದನವಿಲ್ಲದಿರುವಾಗ ಆ ಸ್ಥಾನದಲ್ಲಿ ತುಳಸಿ ಲಕ್ಷ್ಮೀಯ ಸ್ಥಾನವನ್ನು ಕೊಂಚ ಮಟ್ಟಿಗೆ ತುಂಬುವ ಈಕೆ ಮಹಿಳೆಯರ ಪಾಲಿಗೆ ಕಲ್ಪವೃಕ್ಷ, ಮುತ್ತೈದೆತನದ ಸಿರಿತನವೂ ಹೌದು.
ತುಳಸಿಯ ಸಸಿ ಹುಟ್ಟಿದ್ದು ಹೇಗೆ ?
ಅಮೃತ ಪ್ರಾಪ್ತಿಗಾಗಿ ದೇವತೆಗಳು, ಅಸುರರು ಕ್ಷೀರಸಾಗರವನ್ನು ಮಥಿಸುವ ಸಂದರ್ಭದಲ್ಲಿ ಸಾಕ್ಷಾತ್ ನಾರಾಯಣ ಧನ್ವಂತರಿಯ ರೂಪದಿಂದ ಸುಧಾ ಮಂಡಲವನ್ನು ಧರಿಸಿ ಬರುತ್ತಾನೆ. ದೇವತೆಗಳಿಗೆ ಅಮೃತವನ್ನು ಬಡಿಸುವಾಗ ಆನಂದಭಾಷ್ಪ ಧನ್ವಂತರಿಯ ಕಣ್ಣುಗಳಲ್ಲಿ ಉದುರುತ್ತದೆ. ಆಗಲೇ ತುಳಸಿ ಸಸ್ಯ ಹುಟ್ಟಿದ್ದು, ಎಂದು ಪುರಾಣದ ಹಿನ್ನೆಲೆ ಇದೆ.
ತುಳಸಿಯ ಪದದ ಅರ್ಥ
ತುಳಸಿ ಎಂಬ ಪದದಲ್ಲಿ “ತ್ ಉ ಲಸೀ” ಎಂಬ ಮೂರು ಅಕ್ಷರಗಳಿವೆ ‘ ತ್ ‘ ಎಂದರೆ ಮರಣವೆಂದರ್ಥ ‘ಉ’ ಎಂದರೆ ಸಂಬಂಧ ಉಳ್ಳವರು ಒಟ್ಟಾರೆಯಾಗಿ, ‘ತು’ ಎಂದರೆ ಮೃತರಾದವರು ಎಂದರ್ಥ. ಮೃತರಾದವರು ಲಸತಿ ಶೋಭಿಸುತ್ತಾರೆ. ಅರ್ಥಾತ್ ಯಾವ ವ್ಯಕ್ತಿ ತುಳಸಿಯ ಸ್ಮರಣಾದಿಗಳನ್ನು ಮಾಡಿ ಮೃತರಾಗಿರುತ್ತಾರೋ ಅವರು ಸ್ವರ್ಗಾಧಿ ಲೋಕದಲ್ಲಿ ಶೋಭಾಯಮಾನವಾಗಿ ಇರುತ್ತಾರೆ, ಎಂಬ ಅರ್ಥವಿದೆ.
ತುಳಸಿಗಿರುವ ವಿವಿಧ ಹೆಸರುಗಳು
ವೈಷ್ಣವಿ, ವಿಷ್ಣುವಲ್ಲಭ, ಹರಿಪ್ರಿಯೆ, ವಿಷ್ಣುಪ್ರಿಯೆ. ವಿಷ್ಣು ತುಳಸಿ, ರಾಮ ತುಳಸಿ, ಶ್ಯಾಮ ತುಳಸಿ, ಕೃಷ್ಣ ತುಳಸಿ – ಹೀಗೆ ನಾನಾ ಹೆಸರುಗಳು ತುಳಸಿ ಸಸ್ಯಕ್ಕಿದೆ.
ತುಳಸಿ ಗಿಡದಲ್ಲಿ ನೆಲೆಸಿರುವ ದೇವತೆಗಳು
ಯಾವ ಪ್ರದೇಶದಲ್ಲಿ ಒಂದು ತುಳಸಿ ಸಸ್ಯ ಇರುತ್ತದೆಯೋ ಅಲ್ಲಿ ತ್ರಿಮೂರ್ತಿಗಳಾದ ಬ್ರಹ್ಮ , ವಿಷ್ಣು ರುದ್ರಾದಿ ದೇವತೆಗಳು, ಲಕ್ಷ್ಮೀ, ಸರಸ್ವತಿ, ಗಾಯಿತ್ರಿ, ಉಮಾದೇವಿ , ಶಚೀದೇವಿ, ಇಂದ್ರ, ಅಗ್ನಿ, ಯಮ, ವರುಣ, ವಾಯು, ಕುಬೇರ, ಆದಿತ್ಯಾದಿ ಗ್ರಹ ದೇವತೆಗಳು, ವಿಶ್ವೇ ದೇವತೆಗಳು, ಅಷ್ಟವಸ್ತುಗಳು, ಚತುರ್ದಶಮನಗಳು, ದೇವರ್ಷಿಗಳು, ವಿದ್ಯಾಧರರು ಗಂಧರ್ವರು, ಸಿದ್ದರು, ಅಪ್ಸರೆಯರು, ಸೇರಿದಂತೆ ಇನ್ನಿತರ ದೇವತೆಗಳ ಪತ್ನಿಯರು, ತುಳಸಿ ಪುಷ್ಪದಲ್ಲಿ ಸನ್ನಿಹಿತರಾಗಿರುತ್ತಾರೆ, ಎಂದು ಅದನ್ನು ಸಾಮಾನ್ಯವಾಗಿ ಮನೆಯ ಮುಂಬದಿಯಲ್ಲೇ ನೆಟ್ಟಿರುತ್ತಾರೆ.
ತುಳಸಿಯು ಯಾವುದರ ಅಭ್ಯಂಜನ ಗೊಳ್ಳುತ್ತಾಳೆ ?
ತುಳಸಿಯು ಮೂರು ಕಾಲದಲ್ಲಿಯೂ ಪೂಜಿತಗೊಳ್ಳುತ್ತಾಳೆ. ದೀಪಾವಳಿ ಹಬ್ಬದ ನಂತರ ಕಾರ್ತೀಕ ಮಾಸದಲ್ಲಿ ವಿಶೇಷ ಪೂಜೆ ತುಳಸಿ ಮಾತೆಗೆ ಸಲ್ಲುತ್ತದೆ. ಅಂತಹ ಸಂದರ್ಭದಲ್ಲಿ ಸಾಮಾನ್ಯವಾಗಿ ನೀರು, ಹಾಲು, ಎಳನೀರು, ಜೇನುತುಪ್ಪ, ಕಬ್ಬಿನ ರಸದಿಂದ ಅಭ್ಯಂಜನಗೊಳ್ಳುತ್ತಾಳೆ.
ತುಳಸಿಯ ಪೂಜಿಸುವುದರಿಂದ ಏನು ಲಾಭ?
ತುಳಸಿಯನ್ನು ಪ್ರಾತ:ಕಾಲದಲ್ಲಿ ಪೂಜಿಸುವುದರಿಂದ ದುಸ್ವಪ್ನಗಳು ನಾಶವಾಗುತ್ತದೆ. ಪಾಪಗಳು ನಾಶವಾಗಿ ಪುಣ್ಯ ಪ್ರಾಪ್ತವಾಗುತ್ತದೆ. ಕೋಟಿ ಆಕಳು ದಾನ ಮಾಡಿದ ಫಲ ಲಭ್ಯವಾಗುತ್ತದೆ. ತನುವೆಲ್ಲಾ ಪುನೀತವಾಗುತ್ತದೆ. ತುಳಸಿಗೆ ಅಭಿಮುಖವಾಗಿ ನಿಂತು ನಮಸ್ಕರಿಸುವುದರಿಂದ ರೋಗ ರುಜಿನ ನಾಶವಾಗುತ್ತದೆ.
ರೋಗ ನಿರೋಧಕ ತುಳಸಿ ದೇವತೆ
ಆಯುರ್ವೇದದಲ್ಲಿಯೂ ಪ್ರಧಾನವಾದ ಸ್ಥಾನ ತುಳಸಿಗೆ ಇದೆ. ಅಜೀರ್ಣ, ಅತಿಸಾರ, ಹೃದಯ ರೋಗ, ಅಪಸ್ಮಾರ, ಜ್ವರ , ಕೆಮ್ಮು , ಶೀತ, ತಲೆನೋವು, ಕಿಡ್ನಿಸ್ಟೋನ್,ಗೆ ತುಳಸಿ ರಾಮಬಾಣ.
ಸಂಗ್ರಹ: ಹೆಚ್.ಎಸ್.ರಂಗರಾಜನ್
ಪ್ರಧಾನ ಅರ್ಚಕರು, ಶ್ರೀ ಚನ್ನರಾಯ ಸ್ವಾಮಿ ದೇಗುಲ, ಹುಸ್ಕೂರು, ಬೆಂಗಳೂರು