ಕೊರೊನಾ ಅಲ್ಲದಿದ್ದರೆ ಇಷ್ಟೊತ್ತಿಗಾಗಲೇ ಬೆಂಗಳೂರಿನ ಬಸವನಗುಡಿಯಲ್ಲಿ ಕಡಲೇಕಾಯಿ ಪರಿಷೆ ಕಳೆಗಟ್ಟುತ್ತಿತ್ತು. ಆದರೆ ಈ ಬಾರಿ ಸಾಂಪ್ರದಾಯಿಕ ಪೂಜೆಗಷ್ಟೆ ಸೀಮಿತಗೊಂಡಿದೆ. ಅದೇನೇ ಇರಲಿ ಕಡಲೆಕಾಯಿಗಂತೂ ಬರ ಬಂದಿಲ್ಲ. ಶೇಂಗಾ ಬೆಳೆಯ ಸೀಸನ್ ಇದಾಗಿದ್ದು ಇದೇ ಸಂದರ್ಭ ಕಡಲೆಕಾಯಿಯಿಂದ ಹಲವಾರು ಖಾದ್ಯಗಳನ್ನು ತಯಾರಿಸಬಹುದು. ಕೆಲವು ರೆಸಿಪಿ ಇಲ್ಲಿದೆ.
ಶೇಂಗಾ ಹಲ್ವಾ
ಬೇಕಾಗುವ ಸಾಮಗ್ರಿ: ನೆಲಕಡಲೆ- ಒಂದೂವರೆ ಕಪ್, ಕಪ್ ತೆಂಗಿನ ತುರಿ 1/2, ಕಪ್ ಸಕ್ಕರೆ-ಎರಡೂವರೆ ಕಪ್, ಹಾಲು- 1ಕಪ್.
ಮಾಡುವ ವಿಧಾನ: ನೆಲಗಡಲೆಯನ್ನು ಒಂದು ಗಂಟೆ ಕಾಲ ನೀರಿನಲ್ಲಿ ನೆನೆ ಹಾಕಿ. ನಂತರ ತುರಿದ ತೆಂಗಿನ ಕಾಯಿ ಮತ್ತು ನೆಲಗಡಲೆಯನ್ನು ರುಬ್ಬಿ (ಪೇಸ್ಟ್ ಗಟ್ಟಿಯಾಗಿರಲಿ). ಪಾತ್ರೆಯಲ್ಲಿ ಸಕ್ಕರೆ ಮತ್ತು ಹಾಲು ಹಾಕಿ ಹಾಲು ಮಂದವಾಗುವವರೆಗೆ ಕುದಿಸಿ. ಪ್ಯಾನ್‌ನಲ್ಲಿ ತುಪ್ಪ ಹಾಕಿ, ತುಪ್ಪ ಬಿಸಿಯಾದ ಮೇಲೆ ರುಬ್ಬಿದ ಪೇಸ್ಟ್ ಹಾಕಿ ಕಡಿಮೆ ಉರಿಯಲ್ಲಿ ಬಿಡದೆ ಕೈಯಾಡಿಸುತ್ತಿರಿ. ನಂತರ ಹಾಲು ಹಾಕಿ ಕಡಿಮೆ ಉರಿಯಲ್ಲಿ ಕುದಿಸಿ. ಬಟ್ಟಲಿಗೆ ತುಪ್ಪ ಸವರಿ ಅದರಲ್ಲಿ ಮಿಶ್ರಣವನ್ನು ಸುರಿದು ತಣ್ಣಗಾದ ಮೇಲೆ ಕತ್ತರಿಸಿ.
ಶೇಂಗಾ ಉಂಡೆ
ಬೇಕಾಗುವ ಪದಾರ್ಥಗಳು: ಶೇಂಗಾ-1 ಕಪ್, ಕಪ್ ಬೆಲ್ಲ-3/4, ಕೊಬ್ಬರಿ-1/4 ಕಪ್, ಎಳ್ಳು-1/4 ಕಪ್, ಒಂದು ದೊಡ್ಡ ಚಿಟಿಕೆ ಏಲಕ್ಕಿ ಪುಡಿ,
ಮಾಡುವ ವಿಧಾನ: ಒಂದು ದಪ್ಪ ತಳದ ಬಾಣಲೆಯಲ್ಲಿ ನೆಲಗಡಲೆಯನ್ನು ಮಧ್ಯಮ ಉರಿಯಲ್ಲಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಎಳ್ಳು ಹಾಕಿ ಮಧ್ಯಮ ಉರಿಯಲ್ಲಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಅಥವಾ ಚೆನ್ನಾಗಿ ಉಬ್ಬುವವರೆಗೆ ಹುರಿಯಿರಿ. ನಂತರ ತುರಿದ ಕೊಬ್ಬರಿ ಹಾಕಿ ಸ್ವಲ್ಪ ಹೊತ್ತು ಹುರಿಯಿರಿ. ಬಿಸಿ ಆರಿದ ಮೇಲೆ ಮಿಕ್ಸಿಗೆ ಹಾಕಿ ತರಿತರಿಯಾಗಿ ಪುಡಿ ಮಾಡಿ. ಪಲ್ಸ್ ಬಟನ್ ಉಪಯೋಗಿಸಿ ಮಿಕ್ಸಿ ಮಾಡಿದರೆ ಸಾಕು. ನಂತರ ಪುಡಿ ಮಾಡಿದ ಬೆಲ್ಲ ಹಾಕಿ ಪುನಃ ಪಲ್ಸ್ ಬಟನ್ ಉಪಯೋಗಿಸಿ ಮಿಕ್ಸಿ ಮಾಡಿ. ಒಂದು ಬಟ್ಟಲಿಗೆ ಪುಡಿ ಮಾಡಿದ ಶೇಂಗಾ-ಎಳ್ಳು-ಕೊಬ್ಬರಿ-ಬೆಲ್ಲದ ಮಿಶ್ರಣ ಮತ್ತು ಏಲಕ್ಕಿ ಪುಡಿ ಹಾಕಿ ಕಲಸಿ. ಮಿಶ್ರಣವನ್ನು ತೆಗೆದುಕೊಂಡು ಮುಷ್ಟಿಯಲ್ಲಿ ಉಂಡೆ ಮಾಡಿ, ಸವಿಯಿರಿ.
ಶೇಂಗಾ ಹೋಳಿಗೆ
ಕಡಲೆಬೇಳೆಯಿಂದ ತಯಾರಿಸಿದ ಹೂರಣದ ಹೋಳಿಗೆ, ಕಾಯಿ ಹೋಳಿಗೆ, ಸಕ್ಕರೆ ಹೋಳಿಗೆ ಮುಂತಾದ ತರಹೇವಾರಿ ಹೋಳಿಗೆಗಳನ್ನು ಹಬ್ಬಹರಿದಿನಗಳಲ್ಲಿ ಸವಿದಿರುತ್ತೀರಿ. ಇವೆಲ್ಲಕ್ಕೆ ಹೊರತಾಗಿ ಹೊಸಬಗೆಯ ಶೇಂಗಾ ಹೋಳಿಗೆಯನ್ನು ಮಾಡಿ ದೇವರಿಗೆ ನೈವೇದ್ಯ ಮಾಡಬಹುದು, ಹಬ್ಬಹರಿದಿನಗಳಲ್ಲಿ ಸವಿಯಬಹುದು.
ಬೇಕಾಗುವ ಸಾಮಗ್ರಿ: ಶೇಂಗಾ 1ಬಟ್ಟಲು, ಬೆಲ್ಲ 1ಬಟ್ಟಲು, ಗೋಧಿಹಿಟ್ಟು – 1 ಬಟ್ಟಲು, ಏಲಕ್ಕಿ ಪುಡಿ- 1ಚಮಚ, ಎಣ್ಣೆ.
ಮಾಡುವ ವಿಧಾನ: ಶೇಂಗಾ ಅಥವಾ ಕಡಲೆಕಾಯಿ ಬೀಜಗಳನ್ನು ಹುರಿದುಕೊಂಡು ಸಿಪ್ಪೆಯನ್ನು ತೆಗೆದು ಒಂದು ಬೋಗುಣಿಯಲ್ಲಿ ಹಾಕಿಟ್ಟುಕೊಳ್ಳಿ. ಅದನ್ನು ಮಿಕ್ಸಿಯಲ್ಲಿ ಹಾಕಿ ಪುಡಿಮಾಡಿಟ್ಟುಕೊಳ್ಳಬೇಕು. ನಂತರ ಉಂಡೆ ಬೆಲ್ಲವನ್ನು ಹೆರೆದಿಟ್ಟುಕೊಂಡು ಅದಕ್ಕೆ ಪುಡಿ ಮಾಡಿ ಶೇಂಗಾವನ್ನು ಸೇರಿಸಿ ಮತ್ತೆ ಮಿಕ್ಸಿಯಲ್ಲಿ ತಿರುವಿ ಹೂರಣ ತಯಾರಿಸಿಕೊಳ್ಳಬೇಕು. ಗೋಧಿಹಿಟ್ಟಿನ ಕಣಕವನ್ನು ತಯಾರಿಸಬೇಕು. ಹಿಟ್ಟಿಗೆ ನೀರನ್ನು ಬೆರೆಸಿ ಚಪಾತಿ ಮಾಡುವ ಕಣಕದಂತೆ ತಯಾರಿಸಿಟ್ಟುಕೊಳ್ಳಿ. ಮೊದಲೇ ತಯಾರಿಸಿದ ಹೂರಣವನ್ನು ಸಣ್ಣಸಣ್ಣ ಉಂಡೆ ಮಾಡಿಕೊಂಡು ಅದನ್ನು ಗೋಧಿಹಿಟ್ಟಿನ ಕಣದಿಂದ ಪೂರ್ತಿ ಮುಚ್ಚಿ ಲಟ್ಟಿಸಿರಿ. ಲಟ್ಟಿಸಿದ ಶೇಂಗಾ ಹೋಳಿಗೆಯ ಎರಡೂ ಬದಿಗೆ ಎಣ್ಣೆಯನ್ನು ಸವರಿ ಕಂದುಬಣ್ಣ ಬರುವವರೆಗೆ ಬೇಯಿಸಿ. ಈ ಶೇಂಗಾ ಹೋಳಿಗೆಯನ್ನು ಬಿಸಿಬಿಸಿಯಾಗಿರುವಾಗಲೇ ತುಪ್ಪ ಸವರಿ ಸವಿಯಿರಿ.
ಶೇಂಗಾ ಉಸ್ಲಿ
ಬೇಕಾಗುವ ಸಾಮಗ್ರಿ: ಹಸಿ ಶೇಂಗಾ- 1ಕಪ್, ತುರಿದ ತೆಂಗಿನಕಾಯಿ- 1ಕಪ್, ಹೆಚ್ಚಿದ ಕೊತ್ತಂಬರಿ ಸೊಪ್ಪ-2ಚಮಚ, ಉಪ್ಪು ರುಚಿಗೆ ತಕ್ಕಷ್ಟು. ಒಗ್ಗರಣೆಗೆ: ಕೆಂಪು ಮೆಣಸು-2, ಕರಿಬೇವು, ಸಾಸಿವೆ, ಎಣ್ಣೆ.
ಮಾಡುವ ವಿಧಾನ: ಶೇಂಗಾವನ್ನು ಆರು ಗಂಟೆಗಳ ಕಾಲ ನೆನೆಹಾಕಿ. ನಂತರ ಆ ನೀರನ್ನು ಸೋಸಿ. ನಂತರ ಕುಕ್ಕರ್‌ನಲ್ಲಿ ಶೇಂಗಾವನ್ನು ಹಾಕಿ ಅದಕ್ಕೆ 2 ಕಪ್ ನೀರು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ೩ ವಿಷಲ್ ಬರುವವರೆಗೆ ಬೇಯಿಸಿ. ಹಬೆ ಆರಿದ ನಂತರ ಒಂದು ಬಾಣಲೆಯಲ್ಲಿ ಒಗ್ಗರಣೆಯನ್ನ ಸಿದ್ದಪಡಿಸಿ ಅದಕ್ಕೆ ಬೇಯಿಸಿದ ಶೇಂಗಾವನ್ನು ಸೇರಿಸಿ. ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸವಿಯಿರಿ.