ಕಲಾವಿದನ ಕಲ್ಪನೆಯಲ್ಲಿ ಅರಳಿದ ಕಲಾಗ್ರಾಮವಿದು…

ಅದೊಂದು ಸುಂದರ ಗ್ರಾಮ ಅಲ್ಲಿ ಮನುಷ್ಯರಿದ್ದಾರೆ, ಪ್ರಾಣಿ ಪಕ್ಷಿಗಳಿವೆ. ಎಲ್ಲರೂ ತಮ್ಮತಮ್ಮ ಕೆಲಸದಲ್ಲಿ ಬಿಝಿಯಾಗಿದ್ದಾರೆ. ಆದರೆ ಅವುಗಳು ಮಾತನಾಡುವುದಿಲ್ಲ. ನಡೆದಾಡುವುದಿಲ್ಲ.ಯಾಕಂದರೆ ಅದು ಕಲಾವಿದನ ಕಲ್ಪನೆಯ ಪ್ರಪಂಚ.

* ಪದ್ಮ ಶರ್ಮ ಹಾಸನ

ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲ್ಲೂಕಿನಲ್ಲಿ ದಾಸನೂರು ಸಮೂಹ ಸಂಸ್ಥೆಯವರು ಏಳು ಎಕರೆ ಪ್ರದೇಶದಲ್ಲಿ ಕಲಾಕೃತಿಗಳು ನಿರ್ಮಾಣಗೊಳಿಸಿ ಉತ್ಸವ ರಾಕ್ ಗಾರ್ಡನ್ ಎಂದು ಹೆಸರಿಟ್ಟಿಸದ್ದಾರೆ. ಇಲ್ಲಿ ಕಲಾವಿದನ ಕಲ್ಪನೆಯ ಸುಂದರ ಕಲಾಕೃತಿಗಳಿವೆ. ಉತ್ತರ ಕರ್ನಾಟಕದ ಶೈಲಿಯ ಜಾನಪದ ಕಲೆಗಳು ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.
ನವ್ಯ ಮತ್ತು ನೈಜ ಶಿಲ್ಪ ಚಿತ್ರ ಕಲಾಕೃತಿಗಳನ್ನೊಳಗೊಂಡ ಅಪೂರ್ವ ಶಿಲ್ಪವನ. ಸುಂದರ ಕೆರೆ ಕಿರುಗುಡ್ಡಗಳಿಂದ ಶೃಂಗರಿಸಲ್ಪಟ್ಟ ರಮ್ಯ ತಾಣದಲ್ಲಿ ಉತ್ಸವ್ ರಾಕ್ ಗಾರ್ಡನ್ ಮೈದಳೆದಿದೆ. ಭಾರತದ ಹಲವು ರಾಜ್ಯಗಳಲ್ಲಿ ಕಲಾತ್ಮಕ ಉದ್ಯಾನ ರಚಿಸಿ, ಉದ್ಯಾನಕ್ಕೊಂದು ಹೊಸ ಪರಿಕಲ್ಪನೆಕೊಟ್ಟ ಹೆಸರಾಂತ ಅಂತಾರಾಷ್ಟ್ರೀಯ ಕಲಾವಿದರಾದ ಪ್ರೊ. ಸೊಲಬಕ್ಕೆನವರ ಮತ್ತು ಅವರ ತಂಡದಿದ ಈ ಉದ್ಯಾನವನ ನಿರ್ಮಿಸಲ್ಪಟ್ಟಿದೆ.

ಇಲ್ಲೇನಿದೆ…
ರಾಜ್ ಕುಮಾರ್ ಸರ್ಕಲ್
ಜಾನಪದ ಶೈಲಿಯ ಉದ್ಯಾನವನ್ನು ಪ್ರವೇಶಿಸಿದ ತಕ್ಷಣ ಮೊದಲು ಕಾಣುವುದು ದಿಬ್ಬದ ಮೇಲೆ ಶಿಲ್ಪಗಳಲ್ಲಿ ರೂಪುಗೊಂಡ ರಾಜ್‌ಕುಮಾರ್ ಅಭಿನಯದ ಚಿತ್ರಗಳ ವೈವಿಧ್ಯಮಯ ದೃಶ್ಯಗಳು.

ಜಾನಪದ ಶೈಲಿಯ ದೃಶ್ಯಗಳು
ಉತ್ತರ ಕರ್ನಾಟಕದ ಶೈಲಿಯ ಹಳ್ಳಿಯ ಚಿತ್ರಣವನ್ನು ಇಲ್ಲಿ ನೋಡಬಹುದು. ಜೋತಿಷ್ಯ ಕೇಳುತ್ತಿರುವ ದೃಶ್ಯ, ಅಕ್ಕಸಾಲಿಗರು, ಕಿರಾಣಿ ಅಂಗಡಿ, ಕಲಾಕುಟೀರಗಳು, ಗ್ರಾಮ ದೃಶ್ಯಗಳು ಶ್ರಮ ಸಂಸ್ಕೃತಿಯನ್ನು ಬಿಂಬಿಸುವ ಜಾನಪದ ಶೈಲಿಯ ಅನೇಕ ಶಿಲ್ಪಗಳು ನಿರ್ಮಾಣಗೊಂಡಿವೆ. ಕುಟ್ಟುವುದು, ಬೀಸುವುದು, ಶ್ಯಾವಿಗೆ ಹೊಸೆಯುವುದು, ಕಮ್ಮಾರಿಕೆ, ಬಡಿಗ, ಕುಂಬಾರಿಕೆ, ಚಮ್ಮಾರಿಕೆ, ನೇಕಾರಿಕೆ, ಅಂಗಡಿ ಹೀಗೆ ಇನ್ನೂ ಹಲವಾರು ದೃಶ್ಯಗಳನ್ನೊಳಗೊಂಡ ಗ್ರಾಮ ನಿರ್ಮಾಣಗೊಂಡಿದೆ. ಸಾಂಪ್ರದಾಯಿಕ ಬೇಸಾಯ ಹಾಗೂ ಎತ್ತುಗಳ ಶಿಲ್ಪಕಲಾಕೃತಿಗಳು ವಿಭಿನ್ನ ಶೈಲಿಯ ಗಾಜಿನ ಬೊಂಬೆಗಳು ನವ್ಯ ಶಿಲ್ಪಗಳು ನೋಡುಗರನ್ನು ಸೃಜನಾತ್ಮಕ ಲೋಕಕ್ಕೆ ಕರೆದೊಯ್ಯುತ್ತವೆ. ಗೌಡರ ಮನೆಯ ಹೊರಾಂಗಣ- ಒಳಾಂಗಣ ದೃಶ್ಯಗಳು ಕಣ್ಣಿಗೆ ಕಟ್ಟಿದಂತಿವೆ. ಗ್ರಾಮೀಣ ವಾತಾವರಣದ ಸೊಗಡು ಮಂತ್ರಮುಗ್ಧರನ್ನಾಗಿಸುತ್ತದೆ.

ವನ್ಯಮೃಗಗಳು
ವನ್ಯಮೃಗಗಳ ಲೋಕವೇ ಇಲ್ಲಿ ಸೃಷ್ಟಿಯಾಗಿದೆ. ಆನೆ, ಹುಲಿ, ಚಿರತೆ, ಕರಡಿ, ಸಿಂಹ, ಜಿರಾಫೆ, ನೀರಾನೆ, ಘೇಂಡಾಮೃಗ, ಕಾಂಗರೂ, ಮೊಸಳೆ, ಚಿಗರೆಗಳ ಪ್ರತಿರೂಪ ಎದ್ದು ಬರುತ್ತವೆಯೋ ಏನೋ ಎಂಬ0ತೆ ಭಾಸವಾಗುತ್ತದೆ.
ಸ್ವಾವಲಂಬಿ ಗ್ರಾಮದ ಸುಂದರ ನಿರೂಪಣೆಯು ಎಮ್ಮೆ, ಆಕಳು, ಕುರಿ, ಆಡು, ಕೋಳಿ ಸಾಕಾಣಿಕೆಯ ಶಿಲ್ಪಕಲಾಕೃತಿಗಳ ಮೂಲಕ ಬಿಂಬಿಸಲಾಗಿದೆ. ಸುಂದರ ನೈಸರ್ಗಿಕ ತಾಣದಲ್ಲಿ ಶಿಲ್ಪ ಕಲಾಕೃತಿಗಳ ಆಗರವಿದೆ. ಈ ಕಲೆಯ ಬಲೆಯಲ್ಲಿ ಹೊತ್ತು ಹೋಗುವುದೇ ಗೊತ್ತಾಗುವುದಿಲ್ಲ.

ಹೋಗೋದು ಹೇಗೆ ?
ಬೆಂಗಳೂರಿನಿಂದ ಹಾವೇರಿಗೆ 395ಕಿಮೀ ದೂರ. ಬೆಂಗಳೂರಿನಿಂದ ಬಸ್, ರೈಲು ಸಂಪರ್ಕವಿದೆ. ಶಿಗ್ಗಾಂವಿನಿಂದ 6-8ಕಿಮೀ ಹಾಗೂ ಹುಬ್ಬಳ್ಳಿಯಿಂದ 37 ಕಿಮೀ ದೂರದಲ್ಲಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles