ದೇವರ ಮೂರ್ತಿ ಬಿದ್ದರೆ, ಬಿದ್ದು ಭಗ್ನವಾದರೆ ಏನು ಪರಿಹಾರ ಮಾಡಬೇಕು ?

ಹಿಂದೂ ಧರ್ಮವು ಇತರ ಧರ್ಮಗಳಿಗಿಂತ ಹೆಚ್ಚಾಗಿ ಮೂರ್ತಿ ಪೂಜೆಯನ್ನು ಬೆಂಬಲಿಸುತ್ತದೆ. ಇದರಿಂದ ಪೂಜೆಯಲ್ಲಿ ಏಕಾಗ್ರತೆಯು ಅಧಿಕವಾಗುತ್ತದೆ ಎಂದು ಅಧ್ಯಯನಕಾರರು ಸ್ಪಷ್ಟಪಡಿಸಿದ್ದಾರೆ.

ಮನೋವಿಜ್ಞಾನಿಗಳ ಪ್ರಕಾರ ಮನುಷ್ಯನು ತಾನು ನೋಡುವುದರ ಆಧಾರದ ಮೇಲೆ ಆಲೋಚನೆಗಳನ್ನು ಹೊಂದುತ್ತಾನಂತೆ. ಒಂದು ವೇಳೆ ನಿಮ್ಮ ಮುಂದೆ ಮೂರು ವಸ್ತುಗಳು ಇದ್ದಲ್ಲಿ, ಅದರಲ್ಲಿ ಯಾವ ವಸ್ತುವನ್ನು ನೋಡುತ್ತೀರಿ ಎಂಬುದರ ಮೇಲೆ ನಿಮ್ಮ ಭಾವನೆಗಳು ಬದಲಾಗುತ್ತವೆಯಂತೆ. ಈ ಕಾರಣವಾಗಿಯೇ ಪ್ರಾಚೀನ ಕಾಲದಲ್ಲಿ ಮೂರ್ತಿ ಪೂಜೆಯು ಆರಂಭಗೊಂಡಿತು.

ಯಾವಾಗ ಜನರು ದೇವರನ್ನು ಮೂರ್ತಿಯ ರೂಪದಲ್ಲಿ ನೋಡಲು ಆರಂಭಿಸಿದರೋ, ಆಗಲೇ ಅವರ ಮನಸ್ಸನ್ನು ಏಕ ಚಿತ್ತದಿಂದ ದೇವರ ಮೇಲೆ ನೆಲೆಗೊಳಿಸಲು ಸಾಧ್ಯವಾಗುತ್ತ ಹೋಯಿತು. ಇದರಿಂದ ಅವರ ಧ್ಯಾನಕ್ಕೆ ಯಾವುದೇ ಭಂಗ ಬರುತ್ತಿರಲಿಲ್ಲ ಮತ್ತು ಅವರಲ್ಲಿ ಆಧ್ಯಾತ್ಮಿಕ ಶಕ್ತಿಯು ಹೆಚ್ಚಾಗುತ್ತ ಹೋಗುತ್ತಿತ್ತು.

ದೇವರ ಮೂರ್ತಿ ಬಿದ್ದರೆ ಅಥವಾ ಬಿದ್ದು ಭಗ್ನವಾದರೆ ಏನು ಪರಿಹಾರೋಪಾಯ ಮಾಡಬೇಕು ?

ಮನೆಯಲ್ಲಿರುವ ಮೂರ್ತಿ ಭಗ್ನವಾಗಿದ್ದರೆ: ಮೂರ್ತಿಯು ಬಿದ್ದು ಭಗ್ನವಾದರೆ ಅದು ಅಪಶಕುನವೆಂದು ತಿಳಿಯಲಾಗುತ್ತದೆ. ದೇವತೆಯ ಮುಕುಟ ಬಿದ್ದರೆ, ಅದೂ ಒಂದು ಅಪಶಕುನವಾಗುತ್ತದೆ. ಅದು, ಮುಂಬರುವ ಸಂಕಟದ ಮುನ್ಸೂಚನೆ ಇರಬಹುದು. ಇಂತಹ ಸಮಯದಲ್ಲಿ ಆ ಮೂರ್ತಿಯನ್ನು ಹರಿಯುವ ನೀರಿನಲ್ಲಿ ವಿಸರ್ಜನೆ ಮಾಡಿ ಹೊಸದಾದ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಮಾಡಬೇಕು.

ದೇವಸ್ಥಾನದಲ್ಲಿರುವ ಮೂರ್ತಿಗಳಲ್ಲಿ ಸ್ಥಿರ ಮತ್ತು ಚಲ ಹೀಗೆ ಎರಡು ವಿಧಗಳಿವೆ.

ಸ್ಥಿರ ಮೂರ್ತಿ : ಈ ಮೂರ್ತಿಯನ್ನು ದೇವಸ್ಥಾನದಲ್ಲಿ ಶಾಶ್ವತವಾಗಿ ಕುಳ್ಳಿರಿಸಿರುವುದರಿಂದ ಅದು ಎಂದೂ ಅಲಗಾಡಿಸಲು ಬರುವುದಿಲ್ಲ. ಆದ್ದರಿಂದ ಅದು ಬೀಳುವ ಪ್ರಶ್ನೆಯೇ ಬರುವುದಿಲ್ಲ. ಯಾವಾಗ ಮೂರ್ತಿಯು ಬೀಳುತ್ತದೆಯೋ ಆಗ ಅದು ಒಂದೋ ಭಗ್ನವಾಗಿರುವುದರಿಂದ ಅಥವಾ ಅದು ಸವಿದಿರುವುದರಿಂದಲೂ ಬೀಳುತ್ತದೆ. ಅಂತಹ ಸಮಯದಲ್ಲಿ ಆ ಮೂರ್ತಿಯನ್ನು ಹರಿಯುವ ನೀರಿನಲ್ಲಿ ವಿಸರ್ಜನೆ ಮಾಡಿ ಹೊಸ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಮಾಡಬೇಕು.

ಚಲ ಮೂರ್ತಿ: ಇದು ದೇವಸ್ಥಾನದಲ್ಲಿ ಉತ್ಸವಮೂರ್ತಿ ಆಗಿರುವುದರಿಂದ ಅದನ್ನು ಅಲುಗಾಡಿಸಬಹುದು. ಆ ಮೂರ್ತಿಯು ಭಗ್ನವಾಗದೇ ಕೇವಲ ಬಿದ್ದಿದ್ದರೆ ಆಗ ಮೇಲಿನ ಅಂಶ, ಅದರಲ್ಲಿ ಹೇಳಿದಂತೆ ವಿಧಿ ಮಾಡಬೇಕು. ಅನಂತರ ಆ ಮೂರ್ತಿಯನ್ನು ಮೊದಲಿನ ಹಾಗೆ ಪುನಃ ಪೂಜೆಯಲ್ಲಿ ಇಡಬಹುದು; ಆದರೆ ಮೂರ್ತಿಯು ಭಗ್ನವಾದಲ್ಲಿ ಮಾತ್ರ ಅದು ಹರಿಯುವ ನೀರಿನಲ್ಲಿ ವಿಸರ್ಜನೆ ಮಾಡಿ ಹೊಸದಾದ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಮಾಡಬೇಕು.

ಮನೆ ಮತ್ತು ದೇವಸ್ಥಾನದಲ್ಲಿರುವ ಭಗ್ನ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ಸಂದರ್ಭದಲ್ಲಿ ಸಮಾನ ಅಂಶಗಳು – ಮೂರ್ತಿ ಭಗ್ನ ಆಗುವುದು, ಇದು ಮುಂಬರುವ ಸಂಕಟದ ಸೂಚನೆ ಆಗಿರುತ್ತದೆ. ಆದ್ದರಿಂದ ಮನೆ ಮತ್ತು ದೇವಸ್ಥಾನದಲ್ಲಿರುವ ಭಗ್ನ ಮೂರ್ತಿಯ ವಿಸರ್ಜನೆ ಮಾಡಿ ಹೊಸ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಮಾಡುವ ಮೊದಲು ಅಘೋರ ಹೋಮ, ತತ್ತ್ವೋತ್ತಾರಣ ವಿಧಿ (ಭಗ್ನಮೂರ್ತಿಯಲ್ಲಿರುವ ದೇವತೆಯ ತತ್ತ್ವವನ್ನು ತೆಗೆದು ಅದು ಹೊಸದಾದ ಮೂರ್ತಿಯಲ್ಲಿ ಪ್ರತಿಷ್ಠಾಪಿಸುವುದು) ಹೀಗೆ ಮುಂತಾದ ವಿಧಿ ಮಾಡಲು ಶಾಸ್ತ್ರದಲ್ಲಿ ಹೇಳಲಾಗಿದೆ. ಈ ವಿಧಿಗಳಿಂದ ಅನಿಷ್ಟಗಳ ನಿವಾರಣೆಯಾಗಿ ಶಾಂತಿ ಸಿಗುತ್ತದೆ. ಕೇವಲ ವ್ಯತ್ಯಾಸವಿಷ್ಟೇ, ಮನೆಯಲ್ಲಿ ಈ ವಿಧಿಗಳ ಪ್ರಮಾಣ ಅಲ್ಪಸ್ವರೂಪದಲ್ಲಿರುತ್ತದೆ ಮತ್ತು ದೇವಸ್ಥಾನದಲ್ಲಿ ದೊಡ್ಡಪ್ರಮಾಣದಲ್ಲಿ ಶಾಸ್ತ್ರೋಕ್ತ ಪದ್ಧತಿಯಿಂದ ಈ ವಿಧಿ ಮಾಡಬೇಕಾಗುತ್ತದೆ.’

ಬರಹ: ವೇದಮೂರ್ತಿ ಶ್ರೀ. ಕೇತನ ರವಿಕಾಂತ ಶಹಾಣೆ, ಅಧ್ಯಾಪಕರು, ಸನಾತನ ಪುರೋಹಿತ ಪಾಠಶಾಲೆ, ಸನಾತನ ಆಶ್ರಮ, ರಾಮನಾಥಿ, ಗೋವಾ.

ಸಂಗ್ರಹ: ಹೆಚ್.ಎಸ್.ರಂಗರಾಜನ್
ಪ್ರಧಾನ ಅರ್ಚಕರು, ಶ್ರೀ ಚನ್ನರಾಯ ಸ್ವಾಮಿ ದೇಗುಲ, ಹುಸ್ಕೂರು, ಬೆಂಗಳೂರು

Related Articles

ಪ್ರತಿಕ್ರಿಯೆ ನೀಡಿ

Latest Articles