ಸಂಧ್ಯಾವಂದನೆ ಎಂಬುದು ಹಿಂದೂಗಳು ಆಚರಿಸುವ ಒಂದು ದೈನಂದಿನ ಕ್ರಿಯೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸೂರ್ಯ ಉದಯಿಸುವಾಗ ಮತ್ತು ಮುಳುಗುವಾಗ ಪ್ರಪಂಚಕ್ಕೆಲ್ಲ ಬೆಳಕನ್ನು ಕೊಡುವ ಸೂರ್ಯನಿಗೆ ಕೃತಜ್ಞತೆ ಹೇಳುವ ಉದ್ದೇಶದಿಂದ ಮಾಡುವ ಕಾರ್ಯವೇ “ಸಂಧ್ಯಾವಂದನೆ”.
ಮಾಡುವ ಕ್ರಮ
ಉತ್ತರ ಅಥವಾ ಪೂರ್ವಾಭಿಮುಖವಾಗಿ ಕುಳಿತುಕೊಳ್ಳಬೇಕು. ಮಣೆ ಅಥವಾ ಚಾಪೆಯ ಮೇಲೆ ಕುಳಿತು ಕೈ ಮುಗಿದುಕೊಂಡು ಪ್ರಾರ್ಥನೆ ಮಾಡಬೇಕು. ಬೆನ್ನು ಕುತ್ತಿಗೆ ನೇರವಾಗಿರುವಂತೆ ಸ್ವಸ್ತಿಕಾಸನ ಅಥವಾ ಸುಖಾಸನದಲ್ಲಿ ಕುಳಿತು ಸಂಧ್ಯಾವಂದನೆ ಮಾಡಬೇಕು, ಕೈ ಕಾಲು ತೊಳೆದು, ದೇಹ ಶುದ್ಧಿ ಮನಸ್ಸು ಶುದ್ಧಿ ಇರಬೇಕು.
ನಿತ್ಯವೂ ಸಂಧ್ಯಾವಂದನೆ ಮಾಡುವುದರಿಂದ ಚಿತ್ತಚಾಂಚಲ್ಯ ದೂರವಾಗಿ ಏಕಾಗ್ರತೆ ಹೆಚ್ಚುತ್ತದೆ. ಭಗವಂತನಲ್ಲಿ ಶ್ರದ್ಧೆ, ನಂಬಿಕೆ, ಪ್ರೀತಿ, ಭಕ್ತಿ ಮುಂತಾದ ಭಾವನೆಗಳು ಅಚಲವಾಗಿ ವ್ಯಕ್ತಿ ಆಧ್ಯಾತ್ಮ ಸಾಧನೆಗೆ ಅರ್ಹನಾಗುತ್ತಾನೆ.
ವ್ಯಕ್ತಿಯ ಅಂತಃಪ್ರೇರಣೆ ಜಾಗೃತವಾಗಿ ಜೀವನದ ಪ್ರತಿಕ್ಷಣದಲ್ಲೂ ಸನ್ಮಾರ್ಗದಲ್ಲಿ ನಡೆಯುವಂತೇ ಪ್ರೇರೇಪಿಸುತ್ತದೆ. ಅಂತಃಕರಣದ ಸಂಸ್ಕಾರದಿಂದ ಜನ್ಮಜನ್ಮಾಂತರದ ಅಜ್ಞಾನ ದೂರವಾಗಿ ವ್ಯಕ್ತಿ ಸಂಸ್ಕಾರವಂತನಾಗುತ್ತಾನೆ.
ಮನುಷ್ಯನ ಕಾಂತಿ ಹಾಗೂ ತೇಜಸ್ಸು ಅಧಿಕವಾಗುತ್ತದೆ. ಮಾತಿನಲ್ಲಿ ಮೃದುತ್ವ , ವಿನಯ ಹಾಗೂ ಸತ್ಯ ನೆಲೆಗೊಳ್ಳುತ್ತದೆ. ಮನಸ್ಸಿನಲ್ಲಿ ಸದ್ಭಾವನೆ, ಶ್ರೇಷ್ಟವಿಚಾರ ಹಾಗೂ ಸಾತ್ವಿಕ ಗುಣಗಳು ಸ್ಥಾನ ಪಡೆಯುತ್ತವೆ. ಮನಸ್ಸಿನಲ್ಲಿ ಸಂಕಲ್ಪ ಶಕ್ತಿಯು ಪ್ರಬಲವಾಗುತ್ತದೆ. ಶಾಂತಿ, ಸಂತೋಷ, ಕ್ಷಮೆ, ದಯೆ, ಪ್ರೀತಿ ಮುಂತಾದ ಸದ್ಭಾವನೆಗಳು ಮನದಲ್ಲಿ ನೆಲೆಗೊಳ್ಳುತ್ತವೆ.
ಮನುಷ್ಯನಲ್ಲಿರುವ ಅಹಂಕಾರದ ಮೂಲರೂಪ ನಾನು. ನಾನು ಎಂಬ ಭಾವನೆ ಬಂದಾಗ ಆಧ್ಯಾತ್ಮ ಸಾಧನೆ ಸಾಧ್ಯವಿಲ್ಲ. ಸಂಧ್ಯಾವಂದನೆ ನಾನು ಎಂಬ ಅಹಂಕಾರವನ್ನು ದೂರಮಾಡಿ, ವ್ಯಕ್ತಿ ಆಧ್ಯಾತ್ಮ ಸಾಧನೆ ಮಾಡಲು ಪ್ರೇರೇಪಿಸುತ್ತದೆ.
ಪ್ರಾತಃಕಾಲದ ಸಂಧ್ಯಾವಂದನೆ ರಾತ್ರಿಯ ಪಾಪಗಳನ್ನು ನಾಶಗೊಳಿಸುತ್ತದೆ. ಮಧ್ಯಾಹ್ನದ ಸಂಧ್ಯಾವಂದನೆ ಪ್ರಾತಃಕಾಲದಿಂದ ಮಧ್ಯಾಹ್ನದವರೆಗೆ ಮಾಡಿದ ಪಾಪಗಳನ್ನು ನಾಶಗೊಳಿಸುತ್ತದೆ ಸಾಯಂಕಾಲದ ಸಂಧ್ಯಾವಂದನೆ ಮಧ್ಯಾಹ್ನದಿಂದ ಸಂಜೆಯವರೆಗೆ ಮಾಡಿದ ಪಾಪಗಳನ್ನು ನಾಶಗೊಳಿಸುತ್ತದೆ. ಹಾಗಾಗಿ ನಿತ್ಯಸಂಧ್ಯಾವಂದನೆಯನ್ನು ಮಾಡುವವನು ಪಾಪಗಳಿಂದ ವಿಮುಕ್ತನಾಗಿರುತ್ತಾನೆ.
ಸಂಧ್ಯಾವಂದನೆಯಿಂದ ದೈಹಿಕ ಆರೋಗ್ಯ ಸ್ಥಿರವಾಗಿರುತ್ತದೆ. ಸಂಧ್ಯಾವಂದನೆಯಲ್ಲಿ ಮಾಡುವ ಪ್ರಾಣಾಯಾಮ ಹಲವು ರೋಗಗಳನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ವಿಷ್ಣುಪುರಾಣದಲ್ಲಿ ಔರ್ವ ಎಂಬ ಋಷಿ ಸಗರರಾಜನಿಗೆ ತಿಳಿಸುತ್ತಾನೆ “ಹೇ ಸಗರರಾಜ, ಬುದ್ಧಿವಂತನಾದ ಮನುಷ್ಯ ಪ್ರಾತಃ ಸಂಧ್ಯೋಪಾಸನೆ ಹಾಗೂ ಸಾಯಂಸಂಧ್ಯೋಪಾಸನೆಯನ್ನು ಪ್ರತಿನಿತ್ಯ ತಪ್ಪದೇ ಮಾಡಿ ಪಾಪಗಳಿಂದ ವಿಮುಕ್ತನಾಗುತ್ತಾನೆ. ಸಂಧ್ಯಾಕಾಲದಲ್ಲಿ ಯಾರು ಸಂಧ್ಯಾವಂದನೆಯನ್ನು ಮಾಡದೇ ಮಲಗಿರುತ್ತಾರೋ ಅಥವಾ ಅನ್ಯಕಾರ್ಯಗಳಲ್ಲಿ ಮಗ್ನರಾಗಿರುತ್ತಾರೋ ಅಂತವರು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾಗುತ್ತದೆ. ಆದ್ದರಿಂದ ಹೇ ರಾಜ.. ಪ್ರಾತಃಕಾಲೀನ ಹಾಗೂ ಸಾಯಂಕಾಲದ ಸಂಧ್ಯಾವಂದನೆಯನ್ನು ತಪ್ಪದೇ ಮಾಡಬೇಕು. ಇದರಿಂದ ಮನುಷ್ಯ ಉತ್ತರೋತ್ತರ ಶ್ರೇಯಸ್ಸನ್ನು ಪಡೆಯುತ್ತಾನೆ.” (ವಿಷ್ಣುಪುರಾಣ,ತೃತೀಯ ಅಂಶ – ೧೧-೧೦೨,೧೦೩).
ಹಾಗಾಗಿ ಸಂಧ್ಯಾವಂದನೆ ನಿತ್ಯ ನೈಮಿತ್ತಿಕ ಕರ್ಮಗಳಲ್ಲೊಂದಾಗಿದೆ. ಅದನ್ನು ತಪ್ಪದೇ ಆಚರಿಸುವುದು ನಮ್ಮ ಕರ್ತವ್ಯ.
(ಸಂಗ್ರಹ): ಎಚ್.ಎಸ್.ರಂಗರಾಜನ್
ಪ್ರಧಾನ ಅರ್ಚಕರು, ಶ್ರೀ ಚನ್ನರಾಯಸ್ವಾಮಿ ದೇಗುಲ, ಹುಸ್ಕೂರು, ಬೆಂಗಳೂರು