ತೋಷಾ ಎಂಬುದು ಉತ್ತರ ಭಾರತದ ಸಿಹಿ ತಿನಿಸು. ಹಬ್ಬಕ್ಕೆ ಹೇಳಿ ಮಾಡಿಸಿದ ಸಿಹಿ ಖಾದ್ಯ.
ಕೇವಲ ಮೈದಾವನ್ನಷ್ಟೇ ಬಳಸಿ ಮಾಡಬಹುದು. ಆದರೆ ಮೈದಾ ಆರೋಗ್ಯಕ್ಕೆ ಅಷ್ಟಾಗಿ ಒಳ್ಳೆಯದಲ್ಲ. ಆ ಕಾರಣದಿಂದ ಮೈದಾವನ್ನು ಕಡಿಮೆ ಪ್ರಮಾಣದಲ್ಲಿ ಬಳಸಿಕೊಂಡು, ಅದರ ಬದಲು ಗೋಧಿ ಹಿಟ್ಟನ್ನು ಬಳಸಬಹುದು.
ಬೇಕಾಗುವ ಸಾಮಗ್ರಿ: ಗೋಧಿ ಹಿಟ್ಟು-1ಕಪ್, ಮೈದಾ ಹಿಟ್ಟು- 1/2 ಕಪ್, ತುಪ್ಪ -3 ಚಮಚ, ಬೇಕಿಂಗ್ ಸೋಡಾ-1ಚಿಟಿಕೆ, ಸಕ್ಕರೆ-2 ಕಪ್, ಕೇಸರಿ – 1/2ಚಮಚ, ರಿಫೈನ್ಡ್ ಎಣ್ಣೆ – 1/2 ಲೀಟರ್.
ಮಾಡುವ ವಿಧಾನ: ಮೊದಲು ತುಪ್ಪವನ್ನು ಕರಗಿಸಿಕೊಳ್ಳಿ. ಆನಂತರ ಮೈದಾ ಹಿಟ್ಟಿಗೆ ತುಪ್ಪವನ್ನು ಹಾಕಿ ನಾದಿಕೊಳ್ಳಿ. ಜೊತೆಗೆ ಗೋಧಿ ಹಿಟ್ಟು ಮತ್ತು ಸೋಡಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಚಪಾತಿ ಹಿಟ್ಟಿನ ಹದಕ್ಕೆ ನಾದಿಕೊಳ್ಳಬೇಕು. ಹಿಟ್ಟನ್ನು ಚಿಕ್ಕಚಿಕ್ಕ ನಿಂಬೆಹಣ್ಣಿನ ಗಾತ್ರದಲ್ಲಿ ಉಂಡೆ ಮಾಡಿಕೊಳ್ಳಿ. ಇದನ್ನು ಕೋಡುಬಳೆ ಆಕಾರದಲ್ಲಿಯೂ ಸುತ್ತಿಕೊಳ್ಳಬಹುದು. ಕಾಯ್ದ ಎಣ್ಣೆಯಲ್ಲಿ ಒಂದೊ0ದೆ ಬಿಡುತ್ತಾ ಹೋಗಿ, ಹೊಂಬಣ್ಣಕ್ಕೆ ತಿರುಗಿದ ಬಳಿಕ ಹೊರಕ್ಕೆ ತೆಗೆಯಿರಿ.
ಸಕ್ಕರೆ ಪಾಕ: ಒಂದು ಪಾತ್ರೆಗೆ 2ಕಪ್ ಸಕ್ಕರೆ ಹಾಕಿ ಅದು ಮುಳುಗುವಷ್ಟುನೀರು ಸೇರಿಸಿ ಕುದಿಸಿ. ಸಕ್ಕರೆ ಪಾಕ ಎಳೆಎಳೆಯಾಗಿ ಬಂದ ನಂತರ ಕೆಳಗಿಳಿಸಿಕೊಳ್ಳಿ. ಆನಂತರ ಅದಕ್ಕೆ ಕೇಸರಿ ಬಣ್ಣ ಸೇರಿಸಿ. ಮೊದಲೇ ಕರಿದಿಟ್ಟ ತೋಷಾಗಳನ್ನು ಬಿಸಿ ಸಕ್ಕರೆ ಪಾಕದಲ್ಲಿ ಹಾಕಿ 5 ನಿಮಿಷ ಬಿಡಬೇಕು.