ಶಕ್ತಿಮಾತೆಯನ್ನು ಧ್ಯಾನಿಸುವ ಸ್ತುತಿಯಿದು

*ಕೃಷ್ಣಪ್ರಕಾಶ್ ಉಳಿತ್ತಾಯ

ಕಾಮೇಶಜ್ಞಾತ ಸೌಭಾಗ್ಯ ಮಾರ್ದವೋರು ದ್ವಯಾನ್ವಿತಾ|
ಮಾಣಿಕ್ಯ ಮಕುಟಾಕಾರ ಜಾನುದ್ವಯ ವಿರಾಜಿತಾ||

ಋಷಿಯ ಕಲ್ಪನೆಯೋ ಕಲ್ಪನೆ. ಈ ಹಾಡಲ್ಲಿ ದೇವಿಯನ್ನು ಸ್ತುತಿಸುವುದು ಅವಳ ಊರುದ್ವಯಗಳನ್ನು. “ಕಾಮೇಶಜ್ಞಾತ ಸೌಭಾಗ್ಯ ಮಾರ್ದವೋರು ದ್ವಯಾನ್ವಿತಾ”. ಇಲ್ಲಿ ಋಷಿಯ ಭಾಗ್ಯ ಕಾಮೇಶ್ವರಿಯ ಪತಿಯಾದ ಶಿವನ ಮೂಲಕವೇ ತಾಯಿಯ ಸೌಭಾಗ್ಯಪೂರ್ಣವಾದ ಊರು ಪ್ರದೇಶವನ್ನು ನೆನೆಯಬೇಕೆಂಬ ವಿವೇಕ. ಪರಮೇಶ್ವರ ಮಾತ್ರವೇ ಆಕೆಯ ಊರುದ್ವಯಗಳ (ತೊಡೆಗಳ) ಮಾರ್ದವತೆಯನ್ನು ತಿಳಿದವನು. ಹಾಗಾಗಿ ಔಚಿತ್ಯದ ಎಲ್ಲೆ ಮೀರಿ ತಾಯಿಯ ಊರುದ್ವಯಗಳ ಬಗೆಗೆ ಪರಮೇಶ್ವರ ಮಾತ್ರನೇ ಬಲ್ಲವನು ಎಂಬ ವಿವಕ್ಷೆಯಿಂದಾಗಿ ಈ ಹಾಡು ನಿಜವಾದ ಸ್ತೋತ್ರಕಾವ್ಯವಾಗಿ ಈ ಹಾಡು ಪಡಿಮೂಡಿನಿಂತಿದೆ. ಋಷಿಯ ಪ್ರತಿಭೆಯಿಂದಾಗಿ ಶಿವನ ಮೂಲಕ ಶಕ್ತಿಯ ದೇಹವನ್ನು ಧ್ಯಾನಿಸುವ ಈ ಸ್ತುತಿ ಅಮೋಘವಾದದ್ದು.

ಮಗುವಾಗಿ ತಾಯಿಯನ್ನು ಕಂಡಾಗ ನಮಗೆ ಆಕೆಯಲ್ಲಿ ಎಲ್ಲೆಲ್ಲಿಯೂ ಮುಗ್ಧ ಪ್ರೀತಿಯೇ ಬೆಳೆಯುತ್ತದೆ. ಅಲ್ಲ! ಹಾಗೆ ಕಂಡಾಗ ಆಕೆ ನಮ್ಮ ಮನದಲ್ಲಿ ಮಗುವಿನ ಭಾವವನ್ನು ಬೆಳೆಸುತ್ತಾಳೆ.  ಇಂಥ ಊರುದ್ವಯವನ್ನು ಮಗುವಿನಂತೆ ಧ್ಯಾನಿಸಲು ತೊಡಗಿದಾಗ ನಮ್ಮನ್ನು ತಾಯಿ ತನ್ನ ಶಿಶುವನ್ನು ತನ್ನ ತೊಡೆಯಲ್ಲಿಟ್ಟು ಆಡಿಸುವಂತೆ-ಕಾಪಾಡುವಂತೆ ಪಾಲಿಸುತ್ತಾಳೆ ಹಾಗು ಲಾಲಿಸುತ್ತಾಳೆ. ಇದೇ ಈ ಮಂತ್ರವನ್ನು ಧ್ಯಾನಿಸುವುದರ ಫಲವಾಗಿರಬಹುದು.

“ಮಾಣಿಕ್ಯ ಮಕುಟಾಕಾರ ಜಾನುದ್ವಯ ವಿರಾಜಿತಾ” ದೇವಿಯ ಮೊಣಕಾಲುಗಳು (ಜಾನುದ್ವಯ) ಮಾಣಿಕ್ಯದ ಮಕುಟದಂತೆ ಋಷಿಗೆ ಕಾಣುತ್ತದೆ. ಇಂಥ ಅಪೂರ್ವ ವರ್ಣನೆಯನ್ನು ತಾಯಿ ಲಲಿತೆಯ ಕುರಿತಾಗಿ ಹಯಗ್ರೀವ ಋಷಿ ಮಾಡಿದ್ದಾರೆ.

(ಲೇಖಕರು ಕರ್ಣಾಟಕ ಬ್ಯಾಂಕ್ ಉದ್ಯೋಗಿ ಯಕ್ಷಗಾನ ಕಲಾವಿದ, ಬರಹಗಾರ, ಖ್ಯಾತ ಲಯವಾದ್ಯಕಾರರು, ಮಂಗಳೂರು)

Related Articles

ಪ್ರತಿಕ್ರಿಯೆ ನೀಡಿ

Latest Articles