ಕೊಲನುಪಾಕ (ತೆಲಂಗಾಣ ರಾಜ್ಯ): ಕಷ್ಟದ ಜೀವನ ಶಿಸ್ತನ್ನು ಕಲಿಸುವ ಪಾಠಶಾಲೆ. ನಿರಂತರ ಪ್ರಯತ್ನ ಮತ್ತು ಸಾಧನೆಯಿಂದ ಉನ್ನತಿ ಪಡೆಯಲು ಸಾಧ್ಯ. ಕ್ರಿಯಾಶೀಲ ಬದುಕು ಉಜ್ವಲ ಬಾಳಿಗೆ ಭದ್ರ
ಬುನಾದಿ. ಸಾಧನೆಯಿಂದ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ನುಡಿದರು.
ಅವರು ಕೊಲನಪಾಕ ಶ್ರೀ ಸ್ವಯಂಭು ಸೋಮೇಶ್ವರ ಕ್ಷೇತ್ರದಲ್ಲಿ ಜನವರಿ 7 ರಂದು ನಡೆದ ತಮ್ಮ 65 ನೇ ಜನ್ಮದಿನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ವ್ಯಕ್ತಿತ್ವದ ಉನ್ನತೀಕರಣ ಮತ್ತು ವೈಯಕ್ತಿಕ ಸಾಧನೆಗಾಗಿ ಶ್ರಮಿಸಿದರ ಲೋಕೋದ್ದಾರ ತಾನಾಗಿಯೇ ಆಗುತ್ತದೆ. ಸಾಗುವ ದಾರಿ ಕಠಿಣವಿದ್ದಷ್ಟೂ ಯಶಸ್ಸಿನ ಎತ್ತರ ಹೆಚ್ಚಾಗಿರುತ್ತದೆ. ಹಣ ಹೆಸರುಗಳಿಗಾಗಿ ಗುದ್ದಾಡುವ ಬದಲು ಮಾಡುವ ಕೆಲಸವನ್ನು ಶ್ರದ್ಧೆ ಪ್ರಾಮಾಣಿಕತೆಗಳಿಂದ ಮಾಡಿದರೆ ಅದು ತಾನಾಗಿಯೇ ಲಭಿಸುತ್ತದೆ. ಅನುಭವ ಜೀವನದ ಅತ್ಯುತ್ತಮ ಗುರು. ಕೆಟ್ಟ ಅನುಭವಗಳು ಜೀವನದಲ್ಲಿ ಶ್ರೇಷ್ಠ ಪಾಠಗಳನ್ನು ಕಲಿಸುತ್ತವೆ. ಮನುಷ್ಯ ಎಷ್ಟೇ ದೊಡ್ಡ ಸ್ಥಾನಕ್ಕೇರಲಿ ಅವನು ತನ್ನ ಹಿಂದಿನ ಸ್ಥಿತಿಯನ್ನು ಸದಾಕಾಲ ನೆನಪಿಟ್ಟುಕೊಂಡಿರಬೇಕು. ಮಾತು ಕೃತಿ ಚಿಂತನೆಗಳು ಬದುಕಿನ ಮೇಲೆ ಅಗಾಧ ಪರಿಣಾಮ ಬೀರುತ್ತವೆ. ಕಲ್ಲು ಹೃದಯದವರನ್ನು ಬದಲಿಸಬಹುದು. ಆದರೆ ಕೊಳಕು ಮನಸ್ಸು ಇರುವವರನ್ನು
ಬದಲಿಸಲು ಸಾಧ್ಯವಿಲ್ಲ. ಜ್ಞಾನ ಶಕ್ತಿಯನ್ನು ನೀಡಿದರೆ ನಡತೆ ಗೌರವವನ್ನು ತಂದುಕೊಡುತ್ತದೆ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ ಎಂದರು.
64 ಸಂವತ್ಸರ ಕಳೆದು ಇಂದು 65ನೇ ಸಂವತ್ಸರದಲ್ಲಿ ಪಾದಾರ್ಪಣೆ ಮಾಡುತ್ತಿದ್ದೇವೆ. ದೇಹದಲ್ಲಿ ಶಕ್ತಿ ಇರುವತನಕ ಶ್ರಮಿಸಬೇಕೆಂಬ ಗುರಿ ನಮ್ಮದಾಗಿದೆ. 29 ವರುಷದ ಅವಧಿಯಲ್ಲಿ ಮಾಡಿದ ಸಾಧನೆಗೆ ನಡೆದ ಕೆಲಸ ಕಾರ್ಯಗಳೇ ಸಾಕ್ಷಿಯಾಗಿವೆ. ಇವುಗಳಿಗೆಲ್ಲ ಪೂರ್ವಾಚಾರ್ಯರ ಆಶೀರ್ವಾದ ಮತ್ತು ಭಕ್ತ ಗಣದ ಸಹಕಾರ ಕಾರಣವಾಗಿವೆ ಎಂದರೆ ತಪ್ಪಾಗದು. ಭವಿಷ್ಯತ್ತಿನ ಬದುಕಿನಲ್ಲಿ ಸತ್ಯ ಸಂಕಲ್ಪಗಳು ಸಾಕಾರಗೊಳ್ಳಬೇಕೆ0ಬ ಮಹತ್ವಾಕಾಂಕ್ಷೆ ನಮ್ಮದಾಗಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ “ರಂಭಾಪುರಿ ಬೆಳಗು” ಜನವರಿ ಸಂಚಿಕೆಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಬಿಡುಗಡೆ ಮಾಡಿದರು.
ಕೊಲ್ಲಿಪಾಕಿ ಕ್ಷೇತ್ರಾಭಿವೃದ್ಧಿ ಟ್ರಸ್ಟಿನ ಕಾರ್ಯಾಧ್ಯಕ್ಷ ಬಿಚಗುಂದ ಸೋಮಲಿ0ಗ ಶಿವಾಚಾರ್ಯರು ಮತ್ತು ಉಪಾಧ್ಯಕ್ಷ ಮೇಹಕರ ಹಿರೇಮಠದ ರಾಜೇಶ್ವರ ಶಿವಾಚಾರ್ಯ ಸ್ವಾಮಿಗಳು ಪಾಲ್ಗೊಂಡು ಉಪದೇಶಾಮೃತವನ್ನಿತ್ತರು. ಹಿರೇನಾಗಾಂವ, ರಾಜೇಶ್ವರ, ದೇವಾಪುರ, ಗಡಿಗೌಡಗಾಂವ, ಅಷ್ಟಗಿ, ಹಳ್ಳಿಖೇಡ, ದೊಡ್ಡಸಗರ, ತೊನಸನಹಳ್ಳಿ, ದೋರನಹಳ್ಳಿ ಶ್ರೀಗಳವರು ಸೇರಿದಂತೆ 25ಕ್ಕೂ
ಹೆಚ್ಚು ಮಠಾಧೀಶರು ಪಾಲ್ಗೊಂಡಿದ್ದರು.
ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯರು ಸಮಾರಂಭದ ನೇತೃತ್ವ ವಹಿಸಿ
ನಿರೂಪಿಸಿದರು.
ಸಿ.ಎಚ್. ಬಾಳನಗೌಡ್ರ, ವಾರ್ತಾಸಂಯೋಜನಾಧಿಕಾರಿ, ಹೈದರಾಬಾದ್ ವೀರಶೈವ ಸಮಾಜದ ಅಧ್ಯಕ್ಷ ಎಂ.ವೀರಮಲ್ಲೇಶ, ಟ್ರಸ್ಟಿನ ಕಾರ್ಯದರ್ಶಿ ಅಣ್ಣಾರಾವ್ ಬಿರಾದಾರ, ಸದಸ್ಯರಾದ ಶಿವಶರಣಪ್ಪ ಸೀರಿ, ಬಾಬುರಾವ್ ಬಿರಾದಾರ ಮೊದಲಾದ ಗಣ್ಯರು ಪಾಲ್ಗೊಂಡಿದ್ದರು.
ನಾಡಿನ ನಾನಾ ಭಾಗಗಳಿಂದ ಆಗಮಿಸಿದ ಸದ್ಭಕ್ತರು ಶ್ರೀ ರಂಭಾಪುರಿ ಜಗದ್ಗುರುಗಳಿಗೆ ಜನ್ಮ ದಿನೋತ್ಸವ ನಿಮಿತ್ಯ ಗೌರವ ಸಮರ್ಪಿಸಿದರು. ಕಲಬುರ್ಗಿಯ ಗಿರಿಯಪ್ಪ ಮುತ್ಯಾ ಅವರು ಅನ್ನ ದಾಸೋಹ ಸೇವೆ ಸಲ್ಲಿಸಿದರು.
ಪ್ರಾತ:ಕಾಲದಲ್ಲಿ ಶ್ರೀ ಸ್ವಯಂಭು ಶ್ರೀ ಸೋಮೇಶ್ವರ ಮಹಾಲಿಂಗ, ಗೋತ್ರ ಪುರುಷ ಶ್ರೀ ವೀರಭದ್ರಸ್ವಾಮಿಗೆ ರುದ್ರಾಭಿಷೇಕ ಅಷ್ಟೋತ್ತರ, ಶಕ್ತಿಮಾತೆ ಚಂಡಿಕಾಂಬಾ ಅಮ್ಮನವರಿಗೆ ಕುಂಕುಮಾರ್ಚನೆ ಜರುಗಿತು.
ವರದಿ: ಸಿ.ಎಚ್. ಬಾಳನಗೌಡ್ರ