ಸ್ವಾಮಿ ವಿವೇಕಾನಂದರ ತತ್ತ್ವದರ್ಶಗಳನ್ನು ಎತ್ತಿ ಹಿಡಿದ ಮಹಾನ್ ಸಂತ ಸ್ವಾಮಿ ಹರ್ಷಾನಂದ ಮಹಾರಾಜ್

ಬೆಂಗಳೂರು ಬಸವನಗುಡಿಯ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾಗಿದ್ದ ಸ್ವಾಮಿ ಹರ್ಷಾನಂದ ಮಹಾರಾಜ್ ಅವರು ಮೂಲತಃ ಬೆಂಗಳೂರಿನವರು. ಅವರು1931ರಲ್ಲಿ ಮಲ್ಲೇಶ್ವರಂನಲ್ಲಿ ಜನಿಸಿದರು.

ಮಠದ 6ನೇ ಅಧ್ಯಕ್ಷರಾಗಿದ್ದ ಸ್ವಾಮಿ ವಿರಾಜನಂದರಿಂದ ಮಂತ್ರದೀಕ್ಷೆ ಪಡೆದಿದ್ದರು. 1962ರಲ್ಲಿ ಆಗಿನ ಮಠಾಧ್ಯಕ್ಷರಾಗಿದ್ದ ಸ್ವಾಮಿ ವಿಶುದ್ಧಾಶನಂದ ಅವರಿಂದ ಸನ್ಯಾಸ ದೀಕ್ಷೆ ಪಡೆದಿದ್ದರು. ಮಂಗಳೂರು, ಮೈಸೂರು, ಬೇಲೂರು ಹೀಗೆ ಬೇರೆ ಬೇರೆ ಕಡೆ ಶ್ರೀ ರಾಮಕೃಷ್ಣ ಆಶ್ರಮಗಳಲ್ಲಿ ಸೇವೆ ಸಲ್ಲಿಸಿದ ಅವರು ನಂತರ 1989ರಲ್ಲಿ ಬೆಂಗಳೂರಿನ ರಾಮಕೃಷ್ಣ ಮಠಕ್ಕೆ ಅಧ್ಯಕ್ಷರಾದರು.

ಸ್ವಾಮಿ ಹರ್ಷಾನಂದ ಮಹಾರಾಜ್


ಕನ್ನಡ, ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಯಲ್ಲಿಅಪಾರ ಪಾಂಡಿತ್ಯ ಹೊಂದಿದ್ದ ಅವರು ಹಲವು ಆಧ್ಯಾತ್ಮಿಕ ಕೃತಿಗಳನ್ನು ಬರೆದಿದ್ದಾರೆ. ಕೆಲವು ಕೃತಿಗಳು ಫ್ರೆಂಚ್, ಕೊರಿಯನ್ ಭಾಷೆಗೂ ಅನುವಾದಗೊಂಡಿವೆ. ವಿಶೇಷವಾಗಿ ಬೃಹತ್ ಗ್ರಂಥ ಎನಿಸಿರುವ ಹಿಂದೂಧರ್ಮದ ಬಗ್ಗೆ ವಿವರಾಣಾತ್ಮಕ ವಿಶ್ವಕೋಶವನ್ನು 3 ಸಂಪುಟಗಳಲ್ಲಿ ಬರೆದಿದ್ದಾರೆ. ಆ ಗ್ರಂಥವನ್ನು 2008ರಲ್ಲಿ ಎಪಿಜೆ ಅಬ್ದುಲ್ ಕಲಾಂ ಅವರು ಲೋಕಾರ್ಪಣೆಗೊಳಿಸಿದ್ದರು.

2017ರಿಂದ ಬೆಂಗಳೂರು ರಾಮಕೃಷ್ಣ ಆಶ್ರಮದಲ್ಲಿ ಪ್ರತಿದಿನ ಸಂಜೆ 5.45- 6.45ರವರೆಗೆ ಗೀತಾ ಪ್ರವಚನ ಹಮ್ಮಿಕೊಳ್ಳುತ್ತಿದ್ದರು. ಅಲ್ಲಿಂದ ಇಲ್ಲಿಯವರೆಗೆ 16 ಅಧ್ಯಾಯಗಳನ್ನು ಮುಗಿಸಿದ್ದರು. 2 ಅಧ್ಯಾಯ ಅಷ್ಟೇ ಬಾಕಿ ಇತ್ತು. ತನ್ನ ಜೀವಿತ ಅವಧಿಯಲ್ಲಿ ಭಗವದ್ಗೀತೆಯ 18 ಅಧ್ಯಾಯಗಳನ್ನು ಪ್ರವಚನ ಮೂಲಕ ಜನರಿಗೆ ತಲುಪಿಸಬೇಕು ಎನ್ನುವ ಇರಾದೆ ಹೊಂದಿದ್ದರು. ಆದರೆ ಅದು ಕೈಗೂಡಲಿಲ್ಲ. ಅದು ಬೇಸರದ ಸಂಗತಿ.
ಅವರ ಪ್ರವಚನ ಮತ್ತು ಭಜನೆಯಲ್ಲಿ ಪಾಲ್ಗೊಳ್ಳಲು ಅನೇಕ ಭಕ್ತಾದಿಗಳು ಬಂದು ಸೇರುತ್ತಿದ್ದರು. ಅವರ ಭಕ್ತಾಭಿಮಾನಿಗಳ ಸಾಲಿನಲ್ಲಿ ನಾನೂ ಒಬ್ಬ. ಅವರಲ್ಲಿನ ಮತ್ತೊಂದು ವಿಶೇಷತೆ ಅಂದರೆ ಯಾರೇ ಆಗಲಿ ಯಾವುದೇ ಸಮಸ್ಯೆ ಹೇಳಿಕೊಂಡರೂ ಸರಿಯಾದ ಪರಿಹಾರ ಸೂಚಿಸುತ್ತಿದ್ದರು.
ಶ್ರೀ ರಾಮಕೃಷ್ಣ ಪರಮಹಂಸರು, ಶಾರದಾ ದೇವಿ ಹಾಗೂ ಸ್ವಾಮಿ ವಿವೇಕಾನಂದ ಅವರ ಅನನ್ಯ ಭಕ್ತರಾಗಿದ್ದರು. ಅವರ ಬೋಧನೆಗಳನ್ನು ದೇಶ- ವಿದೇಶಗಳಲ್ಲೂ ಪ್ರವಚನದ ಮೂಲಕ ಪ್ರಚಾರ ಮಾಡಿ ಹಿಂದೂ ಧರ್ಮದ ಸೇವೆಯನ್ನು ಮಾಡುತ್ತಾ ಜೀವನ ಕಳೆದ ಸಂತ ಹರ್ಷಾನಂದಜೀ ಮಹಾರಾಜ್ ಅವರು.

ಸ್ವಾಮಿ ವಿವೇಕಾನಂದರ ಜನ್ಮದಿನದಂದೇ ಸ್ವಾಮಿಗಳ ದೇಹತ್ಯಾಗ ಆಗಿರುವುದು ಅವರ “ಸಾರ್ಥಕ ಜೀವನ’ದ ಸಂದೇಶ ಎಂದೇ ಭಾವಿಸಬಹುದು.

* ಮಂಡಗದ್ದೆ ಪ್ರಕಾಶ್ ಬಾಬು
ಶ್ರೀ ರಾಮಕೃಷ್ಣರ ಭಕ್ತ, ಆಧ್ಯಾತ್ಮ ಚಿಂತಕ

Related Articles

ಪ್ರತಿಕ್ರಿಯೆ ನೀಡಿ

Latest Articles