ಸತ್ಯ ಮಾರ್ಗದಲ್ಲಿ ನಡೆಯುವುದೇ ನಿಜವಾದ ಧರ್ಮ: ಶ್ರೀ ರಂಭಾಪುರಿ ಜಗದ್ಗುರುಗಳು

ನ್ಯಾಮತಿ: ಭಾರತೀಯ ಸಂಸ್ಕೃತಿಯಲ್ಲಿ ಸತ್ಯ ಮತ್ತು ಧರ್ಮಕ್ಕೆ ಬಹಳಷ್ಟು ಬೆಲೆಯಿದೆ. ಸತ್ಯ ಮಾರ್ಗದಲ್ಲಿ ನಡೆಯುವುದು ಕಷ್ಟವಾದರೂ ಅದನ್ನು ಬಿಡದೇ ನಡೆ- ನುಡಿ ಒಂದಾಗಿ ಬಾಳುವುದು ಮುಖ್ಯವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಜನವರಿ 12 ರಂದು ಪಟ್ಟಣದ ಬನಶಂಕರಿ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಕಳಸಾರೋಹಣ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮಾನವ ಜನ್ಮ ಬಹಳ ಅಮೂಲ್ಯವಾದುದು. ಜೀವನ ಸಾರ್ಥಕಗೊಳ್ಳಲು ಚತುರ್ವಿಧ ಪುರುಷಾರ್ಥಗಳು ಎಲ್ಲರಿಗೂ ಬೇಕಾಗಿವೆ. ಧರ್ಮ ಅರ್ಥ ಕಾಮ ಮತ್ತು ಮೋಕ್ಷಗಳೆಂಬ ಪುರುಷಾರ್ಥ ಪ್ರಾಪ್ತಿಗಾಗಿ ಶ್ರಮಿಸಬೇಕಾಗಿದೆ. ಸತ್ಯ ಧರ್ಮ ಪರಿಪಾಲನೆಯಿಂದ ಜೀವನದಲ್ಲಿ ಶಾಂತಿ ಸುಖ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ಬೋಧಿಸಿದ್ದಾರೆ. ವೀರಶೈವ ಧರ್ಮದಲ್ಲಿ ಶಿವಶಕ್ತಿ ಜ್ಞಾನ ಸಮುಚ್ಛಯದಿಂದ ಕೂಡಿದೆ. ಶಿವಶಕ್ತಿಯಿಂದ ಈ ಜಗತ್ತು ನಿರ್ಮಾಣಗೊಂಡಿದೆ. ನ್ಯಾಮತಿ ಬನಶಂಕರಿ ದೇವಸ್ಥಾನ ಶಿಥಿಲವಾಗಿದ್ದನ್ನು ಇಂದು ಸುಂದರವಾಗಿ ನಿರ್ಮಿಸಿ ಪುನರ್ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ನೆರವೇರಿಸಿರುವುದು ತಮಗೆ ಅತ್ಯಂತ ಸಂತೋಷ ತಂದಿದೆ ಎಂದ ಅವರು ಜೀರ್ಣೋದ್ಧಾರಕ್ಕಾಗಿ ಸಹಕರಿಸಿದ ಎಲ್ಲ ದಾನಿಗಳಿಗೆ ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜಿ. ಗಂಗಪ್ಪ, ನ್ಯಾಯವಾದಿ ಕರುಣಾಕರ, ಗುರುಶಾಂತಪ್ಪ, ವಾಗೀಶ ನುಚ್ಚಿನ, ಎಸ್. ಡಿ. ಪಂಚಾಕ್ಷರಪ್ಪ ಮಾತನಾಡಿದರು. ಗಂಗಾಧರ ನಿರೂಪಿಸಿದರು.

ಪುನರ್ ಪ್ರತಿಷ್ಠಾಪನೆ ಅಂಗವಾಗಿ ಪುಣ್ಯಾಹ ನಾಂದಿ ಪಂಚಕಲಸ ಸ್ಥಾಪನೆ, ಏಕಾದಶ ರುದ್ರ ಕಲಶ, ನವಗ್ರಹ ಮತ್ತು ರುದ್ರಾಭಿಷೇಕ ಗಣಹೋಮ ಪೂಜಾ ಕಾರ್ಯಗಳು ಜರುಗಿದವು. ವೇ. ಕೋಹಳ್ಳಿ ಹಿರೇಮಠದ ವಿಶ್ವಾರಾಧ್ಯ ಶಾಸ್ತ್ರಿಗಳು, ಶಿವಮೊಗ್ಗ ಮಲ್ಲಿಕಾರ್ಜುನ ಸ್ವಾಮಿಗಳು ಮತ್ತು ನ್ಯಾಮತಿ ಜಯಲಿಂಗ ಶಾಸ್ತ್ರಿಗಳು ಪೌರೋಹಿತ್ಯ ವಹಿಸಿದ್ದರು.


ವರದಿ: ಸಿ.ಎಚ್.ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಜಗದ್ಗುರು ರಂಭಾಪುರೀ ವೀರಸಿಂಹಾಸನ ಮಹಾಸಂಸ್ಥಾನ ಪೀಠ, ಬಾಳೆಹೊನ್ನೂರು.

Related Articles

ಪ್ರತಿಕ್ರಿಯೆ ನೀಡಿ

Latest Articles