ನಾಳೆ ಸಂಕ್ರಾಂತಿ, ಗವಿಗಂಗಾಧರೇಶ್ವರ ಸ್ವಾಮಿಗೆ ಸೂರ್ಯಾಭಿಷೇಕದ ಸಂಭ್ರಮ

ಜ. 14 ಮಕರ ಸಂಕ್ರಾಂತಿ. ಈ ದಿನ ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯದಲ್ಲಿ ಶಿವಲಿಂಗಕ್ಕೆ ಸೂರ್ಯಾಭಿಷೇಕವಾಗುವುದು ವಿಶೇಷ. ಗುರುವಾರ ಸಂಜೆ 5.16 ರಿಂದ 5.20ರ ಸಮಯದಲ್ಲಿ ಗವಿಗಂಗಾಧರೇಶ್ವರ ಸ್ವಾಮಿಯ ಮೇಲೆ ಸೂರ್ಯ ರಶ್ಮಿ ಬೀಳಲಿದೆ. ಶಿವನ ವಿಗ್ರಹಕ್ಕೆ ಸೂರ್ಯಾಭಿಷೇಕ ಆಗುವ ವೇಳೆಗೆ ಎಳನೀರು ಮತ್ತು ಹಾಲಿನಿಂದ ಸ್ವಾಮಿಗೆ ಅಭಿಷೇಕ ಮಾಡಲಾಗುತ್ತದೆ.

* ಶ್ರೀನಿವಾಸ ಮೂರ್ತಿ ಎನ್ ಎಸ್

ನಾಡಿನ ದೇವಾಲಯಗಳ ಇತಿಹಾಸ ವಾಸ್ತುಪುಟದಲ್ಲಿ ಬೆಂಗಳೂರು ತನ್ನದೇ ಆದ ಸ್ಥಾನವನ್ನು ಗುರುತಿಸಿಕೊಂಡಿದೆ.  ಇಲ್ಲಿ ಹಲವು ಪುರಾತನ ದೇವಾಲಯಗಳು ಇದ್ದು ಗಂಗರ ಕಾಲದಿಂದ ಆಧುನಿಕ ಕಾಲದವರೆಗೂ ವಿಸ್ತಾರಗೊಂಡಿದೆ.  ಅಂತಹ ದೇವಾಲಯಗಳಲ್ಲಿ ತನ್ನದೇ ಭೌಗೋಳಿಕ ವಿಭಿನ್ನತೆ ಹಾಗು ಖಗೋಳಗತಿವಿಜ್ಞಾನದ ಕೊಂಡಿಯಂತಿರುವ ದೇವಾಲಯವೊಂದು ಹೃದಯ ಭಾಗದ ಗವಿಪುರಂನಲ್ಲಿದೆ.  ಗವಿ ಗಂಗಾಧರೇಶ್ವರ ದೇವಾಲಯ ಇಂತಹ ವಿಶಿಷ್ಟತೆಗೆ ಸಾಕ್ಷಿಯಾದ ದೇವಾಲಯ.

ದೇವಾಲಯದ ಮೂಲ ನಿರ್ಮಾಣದ ಇತಿಹಾಸದ ಬಗ್ಗೆ ಸಾಕಷ್ಟು ಖಚಿತ ಪುರಾವೆ ಸಿಗುವುದಿಲ್ಲ. ಗಂಗರ ಕಾಲದಲ್ಲಿ ಈ ದೇವಾಲಯ ಅಸಿತ್ವದಲ್ಲಿ ಇತ್ತು ಎಂಬ ಅಭಿಪ್ರಾಯ ಇದ್ದರೂ ಯಲಹಂಕ ನಾಡಪ್ರಭುಗಳ ಕಾಲದಲ್ಲಿ ಸಾಕಷ್ಟು ಅಭಿವೃದ್ದಿಗೊಂಡ ಬಗ್ಗೆ ಉಲ್ಲೇಖ ಸಿಗುತ್ತದೆ. ಚೋಳರ ಕಾಲದಲ್ಲಿ ಕೆಲ ನಿರ್ಮಾಣಗಳ ಕುರುಹು ಇರುವ ಕಾರಣ ಆ ಸಮಯದಲ್ಲಿ ದೇವಾಲಯದ ಅಸ್ತಿತ್ವದಲ್ಲಿದ್ದು ನಂತರ ಕಾಲದಲ್ಲಿ ಸಾಕಷ್ಟು ನವೀಕರಣಗೊಂಡಿದೆ.  ಇಲ್ಲಿನ ಐತಿಹ್ಯದ ಪ್ರಕಾರ ಗೌತಮ ಮುನಿಗಳು ಇಲ್ಲಿ ತಪಸ್ಸನ್ನ ಆಚರಿಸಿ ಶಿವಲಿಂಗವನ್ನ ಪೂಜಿಸಿದರು ಎಂಬ ನಂಬಿಕೆ ಇದೆ.  ವಿಶಾಲವಾದ ಕೆಂಪಾಭುದಿ ಕೆರೆಯ ಸನಿಹದಲ್ಲಿದ್ದ ಈ ದೇವಾಲಯ ಕ್ರಮೇಣ ತನ್ನ ವೈಭವದಿಂದ ದೂರವಾಗಿ ನಗರದ ಮಧ್ಯದಲ್ಲಿ ಸೇರಿ ಹೋಗಿದೆ.

ದೇಗುಲ ವಿಶೇಷತೆ

ದೇವಾಲಯ ಗವಿಪುರಂನಲ್ಲಿರುವ ಹರಿಹರ ಬೆಟ್ಟದ ಕೆಳಭಾಗದಲ್ಲಿರುವ ನೈಸರ್ಗಿಕ ಬಂಡೆಯ ನಡುವಿನಲ್ಲಿ ನಿರ್ಮಾಣವಾಗಿದ್ದು ಗರ್ಭಗುಡಿ, ಎರಡು ಪ್ರದಕ್ಷಿಣಾ ಪಥಾ, ಮಂಟಪ ಹಾಗು ಮುಖಮಂಟಪವನ್ನು ಹೊಂದಿದೆ. ಮುಖ್ಯ ಗರ್ಭಗುಡಿಯಲ್ಲಿ ಗವಿ ಗಂಗಾಧರೇಶ್ವರ ಎಂದು ಕರೆಯಲಾಗುವ ಶಿವಲಿಂಗವಿದ್ದು ಸುತ್ತಲೂ ಮೊದಲ ಹಂತದ ಪ್ರದಕ್ಷಿಣಾ ಪಥವಿದೆ. ಇಲ್ಲಿ ಭಾರದ್ವಾಜ, ದಕ್ಷೀಣಾಮೂರ್ತಿ, ಚಂಡಿಕೇಶ್ವರ ಹಾಗು ಸುಬ್ರಹಣ್ಯರ ಶಿಲ್ಪದ ಕೆತ್ತೆನೆ ನೋಡಬಹುದು.  ನಂತರ ಕಾಲದಲ್ಲಿ ಕೆಂಪೇಗೌಡರ ಕಾಲದಲ್ಲಿ ನಿರ್ಮಾಣವಾದ  ಅಮ್ಮನವರ ಹಾಗು ಗಣಪತಿಯ ಮಂದಿರಗಳಿದ್ದು ಮತ್ತೊಂದು ಹಂತದ  ಪ್ರದಕ್ಷಿಣಾ ಪಥ ನೋಡಬಹುದು. ಇಲ್ಲಿ ಸಪ್ತಮಾತೃಕೆಗಳು, ಕಾಲ ಭೈರವ, ಯಜ್ಞೆಶ್ವರ ಹಾಗು ವೀರಭದ್ರ ಶಿಲ್ಪಗಳಿವೆ.  ಶಿವಲಿಂಗದ ಎದುರು ಮಂಟಪದಲ್ಲಿ ನಂದಿ ಇದ್ದು ಸರಳವಾದ ಬಾಗಿಲುವಾಡ ಹೊಂದಿದೆ.

ಇನ್ನು ಹೊರ ಬಂದಲ್ಲಿ ವಿಶಾಲವಾದ ಮುಖಮಂಟಪ ಸಿಗಲಿದ್ದು ಇಲ್ಲಿ ಸುಮಾರು 18 ಕಂಭಗಳಿವೆ. ಇಲ್ಲಿನ ಕಂಭಗಳಲ್ಲಿ ನಂದಿ, ಶಿವಲಿಂಗ, ಯತಿ ಹಾಗು ಆತ್ಮಲಿಂಗ ಮುಂತಾದ ಉಬ್ಬು ಕೆತ್ತೆನೆ ನೋಡಬಹುದು. ಇಲ್ಲಿನ ಮಂಟಪಗಳಲ್ಲಿ ಸೂರ್ಯನ ಕಿರಣಗಳು ತನ್ನ ಪಥವನ್ನ ಬದಲಿಸುವ ಉತ್ತರಾಯಣ ಪುಣ್ಯಕಾಲದ ಸಮಯದಲ್ಲಿ ಶಿವಲಿಂಗದ ಮೇಲೆ ಬೀಳುವಂತೆ ನಿರ್ಮಾಣವಾಗಿದೆ. ಸಂಕ್ರಾತಿಯಂದು ಸೂರ್ಯಾಸ್ತಂಗತ ಪೂರ್ವದಲ್ಲಿ ತನ್ನ ಕಿರಣಗಳನ್ನು ಶಿವಲಿಂಗದ ಮೇಲೆ ಬೀಳುವುದು ಅಂದಿನ ಖಗೋಳ ಜ್ಞಾನದ ಸಂಕೇತ.  ಇನ್ನು ಅಂದಿನ ಕಾಲದಲ್ಲಿ ತನ್ನ ಪಥ ಬದಲಿಸುವ ದಕ್ಷಿಣಾಯಣದ ಸಮಯವಾದ ಜುಲೈ 16 ರಂದು ಸಹ ಸೂರ್ಯನ ಕಿರಣಗಳು ಶಿವಲಿಂಗದ ಪಾದ ಸ್ಪರ್ಶಮಾಡುತ್ತಿದ್ದು ಕಾಲ ಕ್ರಮೇಣ ಊರು ಬದಲಾದಂತೆ ಬದಲಾದ ವಿನ್ಯಾಸದಲ್ಲಿ ಇದು ನಿಂತು ಹೋಗಿದೆ.

ಇನ್ನು ಇಲ್ಲಿನ ಅಂಗಳದಲ್ಲಿ ಏಕಶಿಲೆಯಲ್ಲಿ ಕೆತ್ತಲಾದ ಸುಮಾರು 23 ಅಡಿ ಎತ್ತರದ ತ್ರಿಶೂಲ ಹಾಗು ಡಮರುಗದ ಬೃಹತ್ ಕೆತ್ತೆನೆ ನೋಡಬಹುದು. ಈ ಏರಡು ಕೆತ್ತನೆಗಳು ಪೀಠದ ಮೇಲಿದ್ದು ಶಿವ ದೇವಾಲಯಗಳಲ್ಲಿ ಕಾಣ ಬರುವ ಅಪುರೂಪದ ಕೆತ್ತನೆ. ಇದರ ಪಕ್ಕದಲ್ಲಿ ಸೂರ್ಯಪಾನ ಹಾಗು ಚಂದ್ರಪಾನ ಎಂದು ಕರೆಯುವ ದರ್ಪಣದಂಥ ಕೆತ್ತನೆ ಇದ್ದು ಇವು ಸುಮಾರು 23 ಅಡಿ ಎತ್ತರದ ಶಿಲಾ ಕೆತ್ತನೆಗಳು. ಗ್ರಾನೈಟ್ನಲ್ಲಿ ಕೆತ್ತಲಾದ ಇವು ಸುಂದರವಾದ ಕೆತ್ತನೆಗಳು. ಇಲ್ಲಿ ಬಲಿಪೀಠವನ್ನು ನೋಡಬಹುದು. ಇನ್ನು ದೇವಾಲಯಕ್ಕೆ ಡ್ರಾವಿಡ ಶೈಲಿಯ ಗೋಪುರವಿದ್ದು ಅಷ್ಟಕೋನದಲ್ಲಿರುವ ತ್ರಿತಲ ಮಾದರಿಯದ್ದು.

ಇನ್ನು ಪಕ್ಕದಲ್ಲಿರುವ ಹರಿಹರದ ಬೆಟ್ಟದ ಮೇಲೆ ನವೀಕರಣಗೊಂಡ ಹರಿಹರೇಶ್ವರ ದೇವಾಲಯವಿದ್ದು ಇಲ್ಲಿನ ಸಮೀಪದ ಸುಮಾರು 4 ಅಡಿ ಎತ್ತರದ ಕಲ್ಲಿನ ಛತ್ರಿ ಗಮನ ಸೆಳೆಯುತ್ತದೆ. ಇದೇ ಮಾದರಿಯ ಛತ್ರಿಯನ್ನು ನಂದಿಗ್ರಾಮದಲ್ಲಿರುವ ಭೋಗ ನಂದೀಶ್ವರ ದೇವಾಲಯದಲ್ಲೂ ನೋಡಬಹುದು.

ದೇವಾಲಯ ಬೆಂಗಳೂರಿನ ಗವಿಪುರಂ ಬಡಾವಣೆಯಲ್ಲಿದ್ದು ಹತ್ತಿರದ ಕೆಂಪಾಂಬುದಿ ಕೆರೆ, ಕೆಂಪೆಗೌಡರ ಕಾಲದ ನಾಲ್ಕು ಕಾವಲು ಗೋಪರುಗಳಲ್ಲಿನ ಒಂದು ಗೋಪುರ, ಬಂಡಿ ಮಹಾಕಾಳಿ ದೇವಾಲಯ ಹಾಗು ಪ್ರಳಯಕಾಲ ವೀರಭದ್ರ ದೇವಾಲಯ ಸಹ ನೋಡಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles