ಪುಣ್ಯ ಕ್ಷೇತ್ರ ಪೊಳಲಿಯ ರಾಜರಾಜೇಶ್ವರಿ ದೇವಸ್ಥಾನವು ಪುರಾತನ ದೇವಾಲಯಗಳಲ್ಲಿ ಒಂದು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಪೊಳಲಿ ಗ್ರಾಮದಲ್ಲಿ ದೇವಿ ನೆಲೆಯಾಗಿ ಅಭಯ ನೀಡುತ್ತಿದ್ದಾಳೆ. ದೇಗುಲ ನವೀಕರಣಗೊಂಡು 2019ರಲ್ಲಿ ಬ್ರಹ್ಮಕಲಶೋತ್ಸವ ನೆರವೇರಿದೆ.
ಪ್ರಧಾನ ದೇವತೆ ಶ್ರೀ ರಾಜರಾಜೇಶ್ವರೀ, ಶ್ರೀ ಭದ್ರಕಾಳಿ, ಶ್ರೀ ಮಹಾಗಣಪತಿ, ಶ್ರೀ ಸುಬ್ರಹ್ಮಣ್ಯ.
ಶ್ರೀದೇವಿಗೆ ತೊಡಲು ಹದಿನೆಂಟು ಮೊಳದ ಸೀರೆ ವಿಶೇಷ. ಇಲ್ಲಿ ಸಾನಿಧ್ಯವೃದ್ಧಿಗಾಗಿ ಪ್ರತೀ ಹನ್ನೆರಡು ವರ್ಷಕ್ಕೊಮ್ಮೆ ಲೇಪಾಷ್ಟ ಗಂಧ ಬ್ರಹ್ಮಕಲಶಾಭಿಷೇಕ ನಡೆಯುತ್ತದೆ..
ಸಾವಿರಾರು ವರ್ಷಗಳ ಇತಿಹಾಸವುಳ್ಳ ಈ ದೇವಸ್ಥಾನವನ್ನು ಸುರಥ ಮಹಾರಾಜನು ನಿರ್ಮಿಸಿದ ಎಂಬ ಪುರಾಣ ಕಥೆಯಿದೆ. ಸುರಥ ಮಹಾರಾಜನು ವೈರಿಗಳ ಆಕ್ರಮಣದಿಂದ ನಡೆದ ಯುದ್ಧದಲ್ಲಿ ಸೋತು ಎಲ್ಲವನ್ನು ಕಳೆದುಕೊಂಡು ವೈರಾಗ್ಯದಿಂದ ಬರುವಾಗ ದಾರಿಯಲ್ಲಿ ಸುಮೇದಿ ಎಂಬ ವೈಶ್ಯನನ್ನು ಭೇಟಿ ಮಾಡುತ್ತಾನೆ. ಇಬ್ಬರು ಒಟ್ಟಾಗಿ ಅರಣ್ಯದೊಳಗೆ ನಡೆದು ಹೋಗುವಾಗ ಅರಣ್ಯದೊಳಗೆ ಸುಮೇಧ ಮುನಿಯ ಆಶ್ರಮ ಕಾಣಿಸುತ್ತದೆ. ಮುನಿಯೊಂದಿಗೆ ತನ್ನ ಕಷ್ಟವನ್ನೆಲ್ಲ ಹೇಳಿಕೊಳ್ಳುತ್ತಾನೆ. ಸುಮೇಧ ಮುನಿ ಅರಸನಿಗೆ ಶ್ರೀ ರಾಜರಾಜೇಶ್ವರಿಯ ಮಂತ್ರೋಪದೇಶವನ್ನು ಕೊಟ್ಟು ಧ್ಯಾನಿಸು ಎನ್ನುತ್ತಾರೆ. ಆಸ್ಥಾನರೂಢಳಾಗಿ ಪರಿವಾರ ಸಹಿತ ಕುಳಿತಿದ್ದ ಶ್ರೀದೇವಿ ರೂಪ ಅರಸ ಕನಸಿನಲ್ಲಿ ಕಾಣುತ್ತಾನೆ. ರಾಜ ಈ ವಿಷಯವನ್ನು ಮುನಿಗಳಿಗೆ ತಿಳಿಸುತ್ತಾನೆ. ಆಗ ಸುಮೇಧ ಮುನಿಯು ಅರಸನಿಗೆ ನೀನು ಕನಸಿನಲ್ಲಿ ಕಂಡಂತೆ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸು ಎನ್ನುತ್ತಾರೆ. ಮಣ್ಣಿನಿಂದ ಪರಿವಾರ ಸಹಿತ ಶ್ರೀದೇವಿಯ ಮೂರ್ತಿಯನ್ನು ರಚಿಸಿ ಪೂಜಿಸುತ್ತಾನೆ. ಕಳೆದುಕೊಂಡಿದ್ದ ಎಲ್ಲ ರಾಜ್ಯಗಳನ್ನು ಮರಳಿ ಪಡೆಯುತ್ತಾನೆ.
ಪುಳಿನ, ಪೊಳಲ್ ಎಂದರೆ ಮಣ್ಣು ಎಂಬ ಅರ್ಥದಿಂದ ಶ್ರೀದೇವಿಯ ಕ್ಷೇತ್ರಕ್ಕೆ ಪುಳಿನಾಪುರ `ಪೊಳಲಿ’ ಎಂಬ ಹೆಸರು ಬಂದಿದೆ. ಪ್ರಧಾನ ದೇವತೆ ಶ್ರೀ ರಾಜರಾಜೇಶ್ವರಿ, ಎಡಗಡೆಯಲ್ಲಿ ಭದ್ರಕಾಳಿ, ಬಲಗಡೆಯಲ್ಲಿ ಶ್ರೀ ಸುಬ್ರಹ್ಮಣ್ಯ, ಮಹಾಗಣಪತಿ, ಬ್ರಹ್ಮವಟು, ವಿಷ್ಣುವಟು, ಶೂಲಿನಿ, ದಂಡಿನಿ, ಮುಂಡಿನಿ ಪರಿವಾರ ಗಣಗಳ ಸಾನ್ನಿಧ್ಯಗಳಿವೆ. ಹದಿನಾರು ಮಾಗಣೆ ಒಳಪಟ್ಟಈ ದೇವಸ್ಥಾನವು ಸಾವಿರ ಸೀಮೆಯ ದೇವಸ್ಥಾನವೆಂದೇ ಪ್ರಸಿದ್ಧಿ ಪಡೆದಿದೆ.
ವಿಶೇಷತೆ : ದೇವತಾ ಮೂರ್ತಿಗಳು ಕಲ್ಲಿನದ್ದಾಗಿರುತ್ತದೆ ಆದರೆ ಪೊಳಲಿ ಶ್ರೀ ರಾಜರಾಜೇಶ್ವರಿ ಮಣ್ಣಿನ ವಿಗ್ರಹ ಸಾವಿರಾರು ವರ್ಷಗಳಿಗೂ ಇಲ್ಲಿ ಮಣ್ಣಿನ ಮೂರ್ತಿಯನ್ನೇ ಪೂಜಿಸುತ್ತಾ ಬರಲಾಗಿದೆ.
ಪೊಳಲಿಯ ಶ್ರೀ ರಾಜರಾಜೇಶ್ವರಿಯ ಮೂರ್ತಿಯು ಸುಮಾರು ೯ ಅಡಿ ಎತ್ತರವಿದೆ. ವಿಗ್ರಹವು ಕಲಾತ್ಮಕವಾಗಿಯೂ ಮೂರ್ತಿಯು ಅತ್ಯಾಕರ್ಷಕವಾದ ವಜ್ರದ ಕಿರೀಟವನ್ನು ಹೊಂದಿದೆ. ಈ ಕಿರೀಟವನ್ನು ಸುರಥ ಮಹಾರಾಜರು ದೇವಿಗೆ ನೀಡಿದ್ದಾರೆ ಎಂದು ಹೇಳಲಾಗಿದೆ. ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರ ಸನ್ನಿಧಿಯ ಎದುರು ನಿಂತಾಗ ನಮ್ಮೆಲ್ಲಾ ದು:ಖ ನಾಶವಾಗಿ ಸುಖ ನೆಮ್ಮದಿ ಮನೆ ಮಾಡುತ್ತದೆ.
ಚೆಂಡಿನ ಉತ್ಸವ
ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿಯ ಜಾತ್ರೆಯ ಸಂದರ್ಭ ಚೆಂಡಿನ ಉತ್ಸವ ನಡೆಯುತ್ತದೆ. ರಾಕ್ಷಸರಾದ ಚಂಡ-ಮುಂಡರರನ್ನು ದೇವಿಯು ವಧಿಸಿ ಅವರ ಶಿರದಲ್ಲಿ ಚೆಂಡಾಟವಾಡಿದ ಪ್ರತೀಕವಾಗಿ ಚೆಂಡಿನ ಉತ್ಸವ ನಡೆಯುತ್ತದೆ. ಈ ಚೆಂಡಾಟವು ಪೊಳಲಿಯ ಮಳಲಿ ಹಾಗೂ ಅಮ್ಮುಂಜೆ ಊರುಗಳ ಮಧ್ಯೆ ನಡೆಯುತ್ತದೆ. ಒಟ್ಟು ಐದು ದಿನಗಳ ಕಾಲ ಚೆಂಡಾಟ ನಡೆಯುತ್ತದೆ.
ದಂಡಮಾಲೆ ಉತ್ಸವ
ಜಾತ್ರೆಯ ಅವಧಿಯಲ್ಲಿ ಐದು ದಿನಕ್ಕೊಮ್ಮೆ ಕೇಪುಳ ಹೂವಿನ ದಂಡೆಯನ್ನು ಬಲಿ ಉತ್ಸವ ಮೂರ್ತಿಗೆ ಅಲಂಕರಿಸುವ ದಂಡಮಾಲೆ ಉತ್ಸವ ನಡೆಯುತ್ತದೆ.
ಹೋಗುವುದು ಹೇಗೆ?
ಮಂಗಳೂರಿನಿಂದ ಪೊಳಲಿ ದೇಗುಲಕ್ಕೆ ಅಂದಾಜು 20 ಕಿಮೀ.ಮಂಗಳೂರು ಸ್ಟೇಟ್ ಬ್ಯಾಂಕ್ ಬಸ್ನಿಲ್ದಾಣದಿಂದ ಬಸ್ ಸೌಲಭ್ಯವಿದೆ.
ಬೆಂಗಳೂರಿನಿಂದ ಸಕಲೇಶಪುರ ಶಿರಾಡಿ ಮಾರ್ಗವಾಗಿ ಬಂದರೆ 340 ಕಿಮೀ. ಮೈಸೂರು ಮಾರ್ಗವಾಗಿ ಬಂದರೆ 375 ಕಿಮೀ.
ಉತ್ತಮ ಪ್ರಯತ್ನ… ಶುಭವಾಗಲಿ… ಆಧ್ಯಾತ್ಮ ವಿಚಾರಗಳ ಬಗ್ಗೆ ಒಳ್ಳೆಯ ಮಾಹಿತಿ ಕನ್ನಡಿಗರಿಗೆ ಸಿಗಲಿ
ಧನ್ಯವಾದಗಳು ಸರ್. ನಿಮ್ಮ ಸಲಹೆ, ಪ್ರೋತ್ಸಾಹ ಸದಾ ಇರಲಿ.