*ವಿದ್ಯಾಶ್ರೀ ಕಟ್ಟಿ ಮಾನವಿ
ದೇವಭಾಷೆಯಾದ ಸಂಸ್ಕೃತದಲ್ಲಿರುವ ವೇದ, ಉಪನಿಷತ್ತುಗಳು, ಆಗಮ ನಿಗಮಗಳು, ಭಾಗವತ, ಭಾರತ ಹಾಗೂ ರಾಮಾಯಣ ಪುರಾಣಗಳಲ್ಲಿರುವ ಕಥೆಗಳಲ್ಲಿನ ಸಾರವನ್ನು, ತತ್ವ ಸತ್ವ ಮಹತ್ವಗಳನ್ನು ಅರ್ಥವಾಗುವ ರೀತಿಯಲ್ಲಿ ಸರಳೀಕರಣ ಮಾಡಿ ಕನ್ನಡದಲ್ಲಿ ತಿಳಿಸಿಕೊಟ್ಟ, ದಾಸಸಾಹಿತ್ಯವು ಸಾಮಾನ್ಯ ಜನರಿಗೆ ತಲುಪಿ ಜೀವನಕ್ಕೆ ಮಾರ್ಗದರ್ಶಕವಾಗುವಲ್ಲಿ ಯಶಸ್ವಿಯಾಯಿತು.
ದಾಸಸಾಹಿತ್ಯ ಜನಪ್ರಿಯ ಸಾಹಿತ್ಯ, ಜನಹಿತದ ಸಾಹಿತ್ಯ. ಹರಿದಾಸರಿಗೆ ಎಂದೂ ಸ್ವಾರ್ಥವಿರಲಿಲ್ಲ. ಆತ್ಮೋದ್ಧಾರದ ಬಗ್ಗೆ ಮಾತ್ರ ಚಿಂತನೆಯಿರಲಿಲ್ಲ. ತಮ್ಮ ಉದ್ಧಾರಕ್ಕಾಗಿ ಮಾತ್ರವೇ ತಾವು ಇರುವುದೆಂದು ಅವರು ಎಂದೂ ಮೂಗು ಮುಚ್ಚಿ ಕೂಡಲಿಲ್ಲ. ಬದಲಾಗಿ ತಾವಿರುವ ಸಮಾಜದ ಬಗ್ಗೆ ಪ್ರಾಮಣಿಕ ಕಳಕಳಿ ಇತ್ತು. ಜೀವನ ದರ್ಶನ, ಸಮಾಜ ವಿಮರ್ಶೆ, ಲೋಕಾನುಭವಗಳು ದಾಸರ ಪದಪದ್ಯಗಳಲ್ಲಿ ತುಂಬಿ ತುಳುಕುತ್ತಿವೆ. ಗೃಹಸ್ಥಧರ್ಮ ಸಾಧನೆಗೆ ಅಡ್ಡಿಯಲ್ಲ ಎನ್ನುವುದನ್ನೂ ತೋರಿಸಿಕೊಟ್ಟವರು ಹರಿದಾಸರು. ಧ್ಯಾನವು ಕೃತಯುಗದಿ, ಯಜನ ಯಜ್ಞವು ತ್ರೇತಾಯುಗದಿ, ದಾನವಾಂತಕನ ದೇವತಾರ್ಚನೆ ದ್ವಾಪರದಿ, ಕಲಿಯುಗದ ಗಾಯನದಿ ಕೇಶವ ಎಂದೊಡನೆ ಬಂದು ಕೈಗೂಡುವುದು ರಂಗವಿಠಲ ಎಂಬ ಶ್ರೀಪಾದರಾಜರು ಸರಳ ಕನ್ನಡದಲ್ಲಿ ದಾಸಸಾಹಿತ್ಯವನ್ನು ಜನಮಾನಸದ ಹೃದಯದಲ್ಲಿ ಶ್ರೀಕಾರ ಹಾಕಿದರು.
ಹರಿದಾಸರು ಎಂದಾಕ್ಷಣ ನಮಗೆ ಪುರಂದರದಾಸರು, ವಿಜಯದಾಸರು, ಗೋಪಾಲದಾಸರು, ಜಗನ್ನಾಥದಾಸರು ಮುಂತಾದವರು ಕೃತಿಗಳು ತಲೆಯಲ್ಲಿ ಸುಳಿದಾಡುತ್ತವೆ. ಅದರಂತೆ ಭಗವಂತನ ಪ್ರೇರಣೆಯಿಂದ ಮಹಿಳಾ ಹರಿದಾಸರಾಗಿ ಎಲ್ಲರ ಮನದಲ್ಲಿ ನೆಲೆನಿಂತ ಗಲಗಲಿ ಅವ್ವ, ಹರಪನಹಳ್ಳಿ ಭೀಮವ್ವ, ಹೆಳವನ ಕಟ್ಟೆ ಗಿರಿಯಮ್ಮ, ಮುಂತಾದ ಕೆಲವು ಮಹಿಳಾ ಹರಿದಾಸರು ಅಕ್ಷರಗಳನ್ನು ಕಲಿತು ಕೃತಿಗಳನ್ನು ರಚಿಸಿದವರಲ್ಲ. ಎಲ್ಲವೂ ಭಗವಂತನ ಪ್ರೇರಣೆಯಿಂದಲೇ ಸ್ಫುರಣೆಯಾದ ಅಕ್ಷರಗಳು. ಮಹಿಳೆಯರು ಕಾಲಿಗೆ ಗೆಜ್ಜೆಕಟ್ಟಿ, ಕೇರಿಕೇರಿಗಳಲಿ ಹಾಡಿಕೊಂಡು, ಎಲ್ಲವನ್ನು ಪರಿತ್ಯಾಗ ಮಾಡಲಿಲ್ಲ ಸಮಾಜದ ಕಟ್ಟುಪಾಡುಗಳನ್ನು ಮೀರದೆ, ಕೌಟುಂಬಿಕ ಚೌಕಟ್ಟಿನಲ್ಲೇ ಸಾಧನೆಯನ್ನು ಮಾಡಿಕೊಂಡು, ಎಲ್ಲವನ್ನು ಸರಿದೂಗಿಸಿಕೊಂಡು ಹೋದವರು.
ಹರಪನಹಳ್ಳಿಯ ಭೀಮವ್ವ
ಶ್ರೇಷ್ಠ ಮಹಿಳಾ ಹರಿದಾಸರಲ್ಲಿ ಒಬ್ಬರಾದ ಹರಪನಹಳ್ಳಿ ಭೀಮವ್ವನವರು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ನಾರಾಯಣ ದೇವರಕೆರೆಯಲ್ಲಿ ರಘುನಾಥಚಾರ್ಯ ರಾಘಮ್ಮ ದಂಪತಿಗಳಿಗೆ (ಕಾಲ ಕ್ರಿ.ಶ.೧೮೨೩-೧೯೦೩) ಜನಿಸಿದ ಅನರ್ಘ್ಯ ರತ್ನದಂತಹ ಹೆಣ್ಣುಮಗು. ಕಮಲದಂತಹ ಕಣ್ಣುಗಳನ್ನು ಹೊಂದಿದ್ದ ಈ ಮಗು ಕಮಲಾಕ್ಷಿಯೇ ಆಗಿತ್ತು. ಸಾರ್ಥಕ ನಾಮದ ಮಗುವಿನ ಪಾದಪದ್ಮಗಳಲ್ಲಿ ಶಂಖಚಕ್ರದ ಗುರುತುಗಳಿದ್ದವು. ಹಾಗಾಗಿ ಈ ಕೂಸು ದೈವಾಂಶ ಮಗುವಾಗಿತ್ತು. ಹನ್ನೊಂದು ವರ್ಷಗಳ ಬಾಲಕಿಯಾಗಿದ್ದ ಭೀಮವ್ವನವರು, ನಲವತ್ತೈದು ವರ್ಷಗಳ ಮುನಿಯಪ್ಪನಿಗೆ ಮೂರನೆಯ ಹೆಂಡತಿಯಾಗಿ ಇಬ್ಬರು ಮಕ್ಕಳನ್ನು ಪಡೆದರು. ಅವರದು ಆಚಾರ ಶೀಲ ವೈಷ್ಣವ ಕುಟುಂಬವಾಗಿದ್ದು ಅವರ ಹಿರಿಯರು ಬೊಕ್ಕಸದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು. ಗಂಡ ಹೆಂಡತಿಯರಿಬ್ಬರೂ ದಾನಧರ್ಮಗಳನ್ನು ಮಾಡುತ್ತಾ ಶ್ರದ್ಧೆ ಭಕ್ತಿಯಿಂದ ದೇವ ಬ್ರಾಹ್ಮಣರನ್ನು ಮಾಡುತ್ತಿದ್ದರು. ಮುಂದೆ ಪತಿ ವಿಯೋಗವಾದಾಗ ಜೀವನದಲ್ಲಿ ಅತ್ಯಂತ ಜಿಗುಪ್ಸೆ ಹೊಂದಿ, ಪ್ರಾಪಂಚಿಕ ವಿಷಯಗಳಲ್ಲಿ ವೈರಾಗ್ಯ ಹುಟ್ಟಿಸಿತು. ಮೂವತ್ತೇಳನೇ ವಯಸ್ಸಿಗೇ ಪತಿತೀರಿಕೊಂಡಾಗ ಉಳಿದ ಬದುಕನ್ನು ದೈವಭಕ್ತಿ ಉಳ್ಳವರಾಗಿದ್ದ ಅವರು ಮುಂದಿನ ಬಾಳನ್ನು ತಪಸ್ಸಿನಂತೆ ಆಚರಿಸಿದರು.
ಹಾಡು ಹಸೆ ದೈವಗಳಲ್ಲಿ ತನ್ನ ಬದುಕನ್ನು ಸಮರ್ಪಿಸಿದ ಭೀಮವ್ವನಿಗೆ ‘ಬದುಕೇ ಹಾಡಾಯಿತು. ಹಾಡೇ ಬದುಕಾಯಿತು’. ಹಳ್ಳಿಗಳಲ್ಲಿ ಆಗಿನ ಕಾಲದಲ್ಲಿ ವಿದ್ಯಾಭ್ಯಾಸದ ವ್ಯವಸ್ಥೆ ಅಷ್ಟೊಂದು ಸಮರ್ಪಕವಾಗಿರಲಿಲ್ಲ. ಮೇಲಾಗಿ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವ ಪದ್ಧತಿಯೂ ಇರಲಿಲ್ಲ. ಗಂಭೀರ ಸ್ವಭಾವದವಳಾಗಿದ್ದ ಭೀಮವ್ವ ಸ್ನೇಹಿತರ ಜೊತೆಯಲ್ಲಿ ಆಟ ಪಾಠಗಳಲ್ಲಿ ಹರಟೆಯಲ್ಲಿ ನಿರುತ್ಸಾಹಿಯಾಗಿ ಯಾವುದೋ ಚಿಂತನೆಯಲ್ಲಿ ಮುಳುಗಿರುತ್ತಿದ್ದರು. ಸಂಜೆಯ ಹೊತ್ತಿನಲ್ಲಿ ಭಜನೆ ಹರಿಕಥೆಗಳಿಗೆ ಹೋಗುತ್ತಿದ್ದಳು. ತಾತನ ಜೊತೆ ಪುರಾಣ ಪುಣ್ಯಕಥೆಗಳ ಬಗ್ಗೆ ಚರ್ಚೆ ಮಾಡುತ್ತಿದ್ದಳು. ಒಮ್ಮೆ ಕನಸಿನಲ್ಲಿ ನಾರದ ಮಹರ್ಷಿಗಳ ಆದೇಶದಂತೆ ಕೃಷ್ಣ ಸರ್ಪವೊಂದು ತನ್ನ ನಾಲಿಗೆಯಿಂದ ಆಕೆಯ ನಾಲಿಗೆಯ ಮೇಲೆ ಮೂರು ಅಕ್ಷರಗಳನ್ನು ಬರೆದಂತೆ ಅವರು ಸ್ವಪ್ನದಲ್ಲಿ ಕಂಡರು.
ಅವರ ಹಾಡುಗಳ ಅಂಕಿತ ಭೀಮೇಶಕೃಷ್ಣ
ತವರು ಮನೆಯ ಭೀಮವ್ವ, ಅತ್ತೆ ಮನೆಯ ಕೃಷ್ಣಬಾಯಿ ಈ ಎರಡನ್ನು ಸೇರಿಸಿ “ಭೀಮೇಶಕೃಷ್ಣ” ಅಂಕಿತದ ಅನೇಕ ಹಾಡುಗಳನ್ನು ರಚಿಸಿದರು. ಭೀಮವ್ವನವರ ಸಾಹಿತ್ಯವು ವರ್ಣನಾ ಪ್ರಧಾನವಾದ ಶೈಲಿ. ಆಯ್ದ ಪ್ರತಿ ವಸ್ತುವಿನ ವಿವರವನ್ನೂ ಅತಿ ಉತ್ಸಾಹದಿಂದ ಬಣ್ಣಿಸುತ್ತಾರೆ. ಇದು ದಾಸ ಸಾಹಿತ್ಯದ ಒಂದು ಮುಖ್ಯ ಲಕ್ಷಣ.
ಶ್ರೀಮದ್ಭಾಗವತದ ಶ್ರೀ ಕೃಷ್ಣ ಹರಿದಾಸರ ಆರಾಧ್ಯ ದೈವ. ಅವನ ಬಾಲಲೀಲೆಗಳನ್ನು ವರ್ಣಿಸುವುದರಲ್ಲಿ ಹರಿದಾಸರ ಮನಸ್ಸು ತಲ್ಲೀನವಾಗಿತ್ತು. ಭೀಮವ್ವನವರ ಪದಗಳು ಇದರಿಂದ ಹೊರತಲ್ಲ. ಶೇಷದಾಸರು, ಇಭರಾಮಪುರ ಕೃಷ್ಣಾಚಾರ್ಯರು, ಸುರಪುರದ ಆನಂದದಾಸರು, ಕೃಷ್ಣಾವಧೂತರು, ಗುರುಜಗನ್ನಾಥದಾಸರು, ಇವರ ಸಮಕಾಲೀನರಾಗಿದ್ದರು ಎಂದು ತಿಳಿದು ಬರುತ್ತದೆ.
ಹರಪನಹಳ್ಳಿ ಭೀಮವ್ವ ಆಧುನಿಕ ಹರಿದಾಸರಲ್ಲಿ ಅತ್ಯಂತ ಮಹತ್ವದ ಸ್ಥಾನ ಹೊಂದಿದವರು. ಮಧ್ವಮತದ ತತ್ತ÷್ವಗಳ ನಿರೂಪಣೆಯನ್ನು ಮಾಡಿದ ಅನೇಕ ಕೀರ್ತನೆಗಳನ್ನು ರಚಿಸಿದ ಇವರು ದೀರ್ಘ ಕೃತಿಗಳ ರಚನೆಯಿಂದ ಭೀಮವ್ವನವರ ಮನಸ್ಸು ಒಲಿಯಿತು. ಜನ ಹೇಳುವಂತೆ ಭೀಮವ್ವನವರು ಸ್ವಪ್ನದಲ್ಲಿ ಕಂಡ ದೃಶ್ಯಗಳನ್ನು ಹಾಡುತ್ತಿದ್ದರಂತೆ. ನಿರಕ್ಷರರಾಗಿದ್ದ ಭೀಮವ್ವನವರಿಗೆ ಪುರಾಣ ಪ್ರವಚನ, ಹರಿಕಥೆಗಳ ಶ್ರವಣ ಮಾತ್ರದಿಂದಲೇ ಬಹಳಷ್ಟು ಕೃತಿಗಳ ರಚನೆ ಮಾಡಿರುವ ಅವರು ಮನೆಮನಗಳಲ್ಲಿ ಕೃತಿಗಳಿಂದ ಚಿರಸ್ಥಾಯಿಯಾಗಿ ನೆಲೆಸಿದ್ದಾರೆ. ಭೀಮವ್ವನವರ ಧೀರ್ಘ ಕೃತಿಗಳಾದ ಸುಭದ್ರಾ ಕಲ್ಯಾಣ, ರತಿ ಕಲ್ಯಾಣ, ನಳ ಚರಿತ್ರೆ, ಪತಿ ದಾನ ಕೊಟ್ಟ ಹಾಡು, ಇಂದಿಗೂ ಶ್ರಾವಣಮಾಸದಲ್ಲಿ ಮನೆಮನೆಯಲ್ಲಿ ಹಾಡುವ ಶ್ರಾವಣ ಶುಕ್ರವಾರ ಮತ್ತು ಶನಿವಾರದ ಹಾಡು, ಶ್ರೀ ಶ್ರೀನಿವಾಸ ಕಲ್ಯಾಣ, ಸುಧಾಮನ ಹಾಡು, ಮುಯ್ಯದ ಹಾಡು, ಮುಂತಾದವು. ಅವರು ಬರೆದ “ಮುಯ್ಯದಹಾಡು” ಸುಪ್ರಸಿದ್ಧ ಕೀರ್ತನೆ, ಸುಳಾದಿ ಉಗಾಭೋಗಗಳೇ ಅಲ್ಲದೆ ಅನೇಕ ದೀರ್ಘಕೃತಿಗಳನ್ನು ಭೀಮವ್ವ ರಚಿಸಿದ್ದಾರೆ.
ರಾಮಾಯಣ, ಭಾರತ, ಭಾಗವತ, ದ್ವೆöÊತಸಿದ್ಧಾಂತ, ಪುರಾಣ ಪ್ರಸಂಗಗಳು ಇವರ ಹಾಡುಗಳು ವಿಷಯವಾಗಿರುತ್ತದೆ. ಶ್ರಾವಣ ಶುಕ್ರವಾರದ ಹಾಡು, ಶನಿವಾರದ ಹಾಡು, ನಳಚರಿತ್ರೆ, ಸುಧಾಮನ ಹಾಡು, ಗೋಪಿಗೀತ, ಭ್ರಮರಗೀತೆ, ಮುಂತಾದ ಅವರ ಹಾಡುಗಳು ಇಂದಿಗೂ ಜನಪ್ರಿಯ. ಭೀಮವ್ವನ ಕಥನ ಕೌಶಲ್ಯ, ಅದ್ಭುತ, ಸುಭದ್ರಾಕಲ್ಯಾಣ, ಸುತ್ತಿಮಣಿಮಾಲಿಕೆ, ರತಿಕಲ್ಯಾಣ, ಮುಂತಾದ ಕಾವ್ಯಗಳಲ್ಲಿ ಅವರ ಕವಿ ಪ್ರತಿಭೆ ಅಚ್ಚರಿ ಮೂಡಿಸುತ್ತದೆ. ಇಂದಿಗೂ ಶ್ರಾವಣಮಾಸ ಬಂತೆಂದರೆ ಸಾಕು, ಸಹಸ್ರಾರು ಭಕ್ತರ ಮನೆಗಳಲ್ಲಿ ಭೀಮವ್ವನವರ ಹಾಡುಗಳು ಸುರಿಮಳೆಯಾಗುತ್ತದೆ.
ಭೀಮವ್ವನವರಿಗೆ ಭಕ್ತಿಯೇ ಬದುಕು
ಭಕ್ತಿಯೇ ಬದುಕಾಗಿದ್ದ ಭೀಮವ್ವನವರಿಗೆ ಜೀವಪರ ಹಾಗೂ ಜೀವನಪರ ಧೋರಣೆಯಿತ್ತು. ಬದುಕನ್ನು ಭಗವಂತನಿಗಾಗಿ ಮೀಸಲಿಟ್ಟು ಸಂಭ್ರಮಿಸಿದ ಆ ಹೆಣ್ಣು ಮಗಳು ತಾನಿದ್ದ ಪರಿಸರದಲ್ಲೆಲ್ಲಾ ಜ್ಞಾನಭಕ್ತಿಯ ಜ್ಯೋತಿಯನ್ನು ಬೆಳಗಿ, ಸಂಭ್ರಮವನ್ನು ಹಂಚಿದ ಪುಣ್ಯವಂತ ಮಹಿಳೆ. ತಮ್ಮ ನಿರ್ಯಾಣಕ್ಕೆ ಕೇವಲ ಮೂರೇ ದಿನದ ಮುಂಚೆ ಊರಿನ ಹುಡುಗರನ್ನೆಲ್ಲಾ ಕೂಡಿಸಿಕೊಂಡು ಶಕುಂತಲಾ ನಾಟಕದ ಆರತಿ ಹಾಡು ಹೇಳಿ ಕೊಟ್ಟ ಸುಸಂಸ್ಕೃತ ಜೀವ ಹರಪನಹಳ್ಳಿ ಭೀಮವ್ವ.
ಹಾಡುಗಳು ತುಂಬಾ ಚೆನ್ನಾಗಿದೆ.ವಿವರಣೆ ತುಂಬಾ ಚೆನ್ನಾಗಿದೆ.ಲೇಖಕರಿಗೆ ಧನ್ಯವಾದಗಳು.🙏🙏🙏
thank you sir