ಮಾನವನ ಎಲ್ಲ ರೀತಿಯ ದುಃಖಗಳಿಗೆ ಅಜ್ಞಾನವೇ ಕಾರಣ

ಅಜ್ಞಾನವೆಂದರೆ ಜ್ಞಾನದ ಅಭಾವ ಎಂದು ಸಾಮಾನ್ಯವಾಗಿ ಹೇಳುತ್ತಾರೆ. ಆದರೆ ವೇದಾಂತಿಗಳ ಪ್ರಕಾರ ‘ಅಜ್ಞಾನ’ ಅಂದರೆ ಏನು ಗೊತ್ತಾ?

* ಸ್ವಾಮಿ ಶಾಂತಿವ್ರತಾನಂದ, ಶ್ರೀ ರಾಮಕೃಷ್ಣ ಆಶ್ರಮ ಮೈಸೂರು

ನಮ್ಮ ದೇಶದ ಹೆಸರು ಭಾರತ. ಇಂಡಿಯಾ ಅಲ್ಲ. ಭಾರತ ಎಂಬ ಪದವನ್ನು ಕೇಳಿದರೆ ಸಾಕು ನಮಗೆ ರೋಮಾಂಚನದ ಅನುಭವ ಆಗದಿರದು. ಭಾರತ ಎಂಬ ಹೆಸರು ನಮ್ಮ ದೇಶಕ್ಕೆ ಏಕೆ ಬಂದಿದೆ? ಮಹಾನ್ ಸಾಮ್ರಾಟ್ ಭರತ ಚಕ್ರವರ್ತಿ ಆಳಿದ ದೇಶ, ಆದುದರಿಂದಲೇ ನಮ್ಮ ದೇಶಕ್ಕೆ ಭಾರತ ಎಂಬ ಹೆಸರು ಬಂದಿದೆ ಎಂದು ಸಾಮಾನ್ಯವಾಗಿ ನಾವು ಹೇಳುತ್ತೇವೆ. ಅದು ಒಂದು ಸಾಮಾನ್ಯವಾದ ಅರ್ಥವಷ್ಟೇ. ಆದರೆ ಭಾರತ ಎಂಬ ಹೆಸರಿಗೆ ಇನ್ನು ಹೆಚ್ಚಿನ ವಿಶಾಲವಾದ ಅರ್ಥಗಳಿವೆ.
‘ಭಾ’ ಎಂದರೆ ‘ಬ್ರಹ್ಮವಿದ್ಯೆ, ಆತ್ಮವಿದ್ಯೆ’. ‘ರತ’ ಎಂದರೆ ‘ರಮಿಸುವವನು, ಇಚ್ಛಿಸುವವನು’ ಎಂದು.
ಯಾರು ಅತ್ಯಂತ ಉನ್ನತವಾದ ಬ್ರಹ್ಮವಿದ್ಯೆ, ಸ್ವಸ್ವರೂಪವನ್ನು ಹೇಳುವ ವಿದ್ಯೆಯನ್ನು ತಿಳಿಯಲು ಇಚ್ಛಿಸುವ ವ್ಯಕ್ತಿಗಳು ಹೇರಳವಾಗಿ ಎಲ್ಲಿ ನೆಲೆಸಿದ್ದಾರೋ, ಅಂತಹ ಪ್ರದೇಶವನ್ನು, ದೇಶವನ್ನು ಭಾರತ ಎಂದು ಕರೆಯುತ್ತಾರೆ.

‘ನಮ್ಮ ದೇಶದ ಬೆನ್ನೆಲುಬು, ಕೇಂದ್ರಬಿಂದು ಆಧ್ಯಾತ್ಮ’ ಎಂದು ಸ್ವಾಮಿ ವಿವೇಕಾನಂದರು ಹೇಳಿರುವುದನ್ನು ನಾವು ಇಲ್ಲಿ ಸ್ಮರಿಸಿಕೊಳ್ಳಬಹುದು. ‘ಭಾ’ ಎಂದರೆ ‘ಜ್ಞಾನ’, ‘ರತ’ ಎಂದರೆ ‘ಅನ್ವೇಷಣೆ ಮಾಡುತ್ತಿರುವವನು’. ಯಾರು ನಿರಂತರವಾಗಿ ಜ್ಞಾನದ ಅನ್ವೇಷಣೆಯಲ್ಲಿ ನಿರತರಾಗಿರುವರೋ, ಅಂತಹ ಜ್ಞಾನಪಿಪಾಸುಗಳು ನೆಲೆಸಿರುವ ನಾಡಿಗೆ ಭಾರತ ಎಂದು ಕರೆಯುತ್ತಾರೆ. ಆದ್ದರಿಂದಲೇ ನಮ್ಮ ಋಷಿಮುನಿಗಳು ‘ಅಸತೋ ಮಾ ಸದ್ಗಮಯ, ತಮಸೋ ಮಾ ಜ್ಯೋತಿರ್ಗಮಯ, ಮೃತ್ಯೋರ್ಮಾ
ಅಮೃತಂಗಮಯ’. ‘ಓ ದೇವರೇ, ನಾವು ಅಸತ್ತಿನಿಂದ ಸತ್ಯದೆಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ, ಮೃತ್ಯುವಿನಿಂದ ಅಮೃತತ್ವದೆಡೆಗೆ’ ಹೋಗುವಂತಾಗಲಿ ಎಂದು ಸಾವಿರಾರು ವರ್ಷಗಳ ಹಿಂದೆಯೇ ಭಗವಂತನಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು.
ಎಂತಹ ದಿವ್ಯವಾದ, ಭವ್ಯವಾದ ಹೆಸರು ಭಾರತ! ಅಂತಹ ಪುಣ್ಯಭೂಮಿಯಲ್ಲಿ ಜನಿಸುವ ಪ್ರತಿಯೊಬ್ಬ ಜೀವಿಯು ಪುಣ್ಯವನ್ನು ಮಾಡಿರಬೇಕು. ಇಲ್ಲದಿದ್ದರೆ ಸಾಧ್ಯವಾಗದು ಎಂದರೆ ಅತಿಶಯೋಕ್ತಿಯಾಗಲಾರದು.

ಅಜ್ಞಾನದ ಸ್ವರೂಪ
ಮಾನವನ ಎಲ್ಲ ರೀತಿಯ ದುಃಖಗಳಿಗೆ ಅಜ್ಞಾನವೇ ಕಾರಣ ಎಂದು ಜ್ಞಾನಿಗಳು ಹೇಳುತ್ತಾರೆ. ನಮ್ಮ ನೈಜ ಸ್ವರೂಪದ ಅಜ್ಞಾನವೇ ಇದಕ್ಕೆ ಕಾರಣ. ನಾನು ಆತ್ಮ, ದಿವ್ಯಾತ್ಮ ಎಂದು ತಿಳಿದುಕೊಂಡಾಗ, ಅಜ್ಞಾನವು ನಾಶವಾಗುತ್ತವೆ. ಅಜ್ಞಾನವೆಂದರೆ ಜ್ಞಾನದ ಅಭಾವ ಎಂದು ಸಾಮಾನ್ಯವಾಗಿ ಹೇಳುತ್ತಾರೆ. ಆದರೆ ವೇದಾಂತಿಗಳು ಅಜ್ಞಾನವೆಂದರೆ ಜ್ಞಾನದ ಅಭಾವವಲ್ಲ, ಜ್ಞಾನವಿಲ್ಲದ ಅವಸ್ಥೆ ಯಾರಿಗೂ ಸಾಧ್ಯವಿಲ್ಲ. ಅಜ್ಞಾನವೆಂದರೆ ಮಿಥ್ಯಾಜ್ಞಾನ ಅಥವಾ ಭ್ರಾಂತಿ ಜ್ಞಾನ ಎಂದು ಅವರ ಅಭಿಪ್ರಾಯ. ‘ಇರುವುದೊಂದು, ತಿಳಿದುಕೊಳ್ಳುವುದು ಮತ್ತೊಂದು’. ನಾನು ದೇಹ, ಮನಸ್ಸು ಎಂದು ತಪ್ಪಾಗಿ ತಿಳಿದುಕೊಂಡಿರುವುದೇ ಅಜ್ಞಾನ. ನಾನು ಆತ್ಮ ಎಂದು ಅರಿಯುವುದೇ ಜ್ಞಾನ.
ಪತಂಜಲಿ ಮಹರ್ಷಿಗಳು ಅಜ್ಞಾನವನ್ನು ನಾಲ್ಕು ವಿಧವಾಗಿ ವರ್ಣಿಸಿದ್ದಾರೆ.
1. ಅನಾತ್ಮದಲ್ಲಿ ಆತ್ಮಬುದ್ಧಿ
– ಅನಾತ್ಮವಾದ ದೇಹ, ಮನಸ್ಸು, ವಸ್ತುಗಳಲ್ಲಿ ನಾನು ಎಂಬ ಆತ್ಮಬುದ್ಧಿಯನ್ನು ಹೊಂದುವುದು.
2. ಅನಿತ್ಯದಲ್ಲಿ ನಿತ್ಯಬುದ್ಧಿ – ದೇಹ, ಜಗತ್ತು, ಅನಿತ್ಯ. ಇಂದು ಇರುತ್ತದೆ, ನಾಳೆ ಹೋಗುತ್ತದೆ. ಇವು ಸದಾಕಾಲ ಇರುವುದಿಲ್ಲ, ಸ್ಥಿರವಾಗಿ ಯಾವುದೇ ಬದಲಾವಣೆಗಳು ಇಲ್ಲದೆ ಇರುವುದಿಲ್ಲ.
3. ದುಃಖದಲ್ಲಿ ಸುಖಬುದ್ಧಿ – ಇಂದ್ರಿಯಗಳು ವಿಷಯವಸ್ತುಗಳ ಸಂಪರ್ಕಕ್ಕೆ ಬಂದಾಗ, ಶೀತ-ಉಷ್ಣ, ಸುಖ-ದುಃಖ, ಲಾಭ-ನಷ್ಟ, ಇತ್ಯಾದಿ ದ್ವಂದಗಳು ನಮಗೆ ಉಂಟಾಗುತ್ತದೆ. ವಿಷಯ ಸುಖಗಳಲ್ಲಿ ಸ್ವಲ್ಪ ಸುಖ, ಅಪಾರವಾದ ದುಃಖವಿರುತ್ತದೆ. ಅದು ತಿಳಿದಿದ್ದರೂ ನಾವು ಅದನ್ನೇ ಬೇಕು ಎಂದು ಅದನ್ನು ಅರಸಿಕೊಂಡು ಹೋಗುತ್ತೇವೆ.
4. ಅಶುಚಿಯಲ್ಲಿ ಶುಚಿಬುದ್ಧಿ – ದೇಹವು ಮೂಳೆ, ಮಾಂಸ, ಮಚ್ಚೆಗಳಿಂದ ತು0ಬಿದೆ. ಒಂದೆರಡು ದಿನ ಸ್ನಾನ ಮಾಡದಿದ್ದರೆ, ಎಂತಹ ದುರ್ವಾಸನೆ. ಆದರೂ ನಮಗೆ ದೇಹದ ಮೇಲೆ ಎಂತಹ ಮಮತೆ. ಇವು ಅಜ್ಞಾನದ ಬಗೆಗಳು. ಇದನ್ನು ಅರಿತು ಜ್ಞಾನವನ್ನು ಪಡೆದರೆ ನಮ್ಮ ಎಲ್ಲ ರೀತಿಯ ದುಃಖಗಳನ್ನು ದೂರಮಾಡಬಹುದು ಎಂದು ಜ್ಞಾನಿಗಳು ತಿಳಿಸುತ್ತಾರೆ.

ಜಿತೇಂದ್ರಿಯ ಅರ್ಜುನ
ದ್ರೋಣಾಚಾರ್ಯರು, ಅರ್ಜುನನಿಗೆ, ‘ನೀನು ಧನುರ್ವಿದ್ಯೆಯಲ್ಲಿ ನಿಪುಣನಾಗಿರುವೆ. ನನಗೆ ಗೊತ್ತಿರುವ ಎಲ್ಲಾ ವಿದ್ಯೆಗಳನ್ನು ನಿನಗೆ ಬೋಧಿಸಿದ್ದೇನೆ. ಹೆಚ್ಚಿನ ಧನುರ್ವಿದ್ಯೆಗೆ ದೇವಲೋಕಕ್ಕೆ ಹೋಗಿ ಇಂದ್ರನಿ0ದ
ಕಲಿತು ಬಾ,’ ಎಂದು ಆದೇಶವಿತ್ತರು. ಗುರುಗಳ ಅಣತಿಯಂತೆ ಅರ್ಜುನನು ದೇವಲೋಕಕ್ಕೆ ತೆರಳಿದನು. ದೇವೇಂದ್ರನನ್ನು ಕಂಡ ತಾನು ಬಂದ ಕಾರಣವನ್ನು ತಿಳಿಸಿದನು. ದೇವೇಂದ್ರನು, ‘ಪಾರ್ಥ ನಿನ್ನ
ಯೋಗ್ಯತೆಯನ್ನು ಪರೀಕ್ಷೆ ಮಾಡಿ, ಹೆಚ್ಚಿನ ವಿದ್ಯೆಯನ್ನು ಹೇಳಿಕೊಡುತ್ತೇನೆ’ ಎಂದನು. ಅರ್ಜುನನ್ನು ರಾತ್ರಿ ಏಕಾಂತದಲ್ಲಿರಲು ಸು0ದರಿಯಾದ ಊರ್ವಶಿಯನ್ನು ದೇವತೆಗಳು ಅರ್ಜುನನ ಬಳಿ
ಕಳುಹಿಸಿದರು. ಅರ್ಜುನನು ಊರ್ವಶಿಯನ್ನು ಕಂಡನು. ಆದರೆ ಅವಳ ರೂಪಲಾವಣ್ಯಗಳಿಗೆ ಅವನ ಮನಸ್ಸು ವಿಚಲಿತವಾಗಲಿಲ್ಲ. ಆಶ್ಚರ್ಯಗೊಂಡ ಊರ್ವಶಿಯು ಅರ್ಜುನನ ಬಳಿ ಸಾರಿ, ‘ನೀನು ನನ್ನ ಸೌಂದರ್ಯವನ್ನು ಅನುಭವಿಸಬಹುದು,’ ಎಂದಳು.
ಅರ್ಜುನನು ಕೈಮುಗಿದು, ‘ದೇವೇಂದ್ರನನ್ನು ನಾನು ಗುರುವಾಗಿ ಸ್ವೀಕರಿಸಿದ್ದೇನೆ. ಗುರುವು ತಂದೆಗೆ ಸಮ. ನೀನು ದೇವೇಂದ್ರನಿಗೆ ಸಂಬಂಧಪಟ್ಟವಳಾದ್ದರಿ0ದ ತಾಯಿಗೆ ಸಮಾನಳಾಗುತ್ತೀಯೆ,’ ಎಂದು ಊರ್ವಶಿಯನ್ನು ನಿರಾಕರಿಸಿದನು.

ಊರ್ವಶಿಯು, ‘ನನಗೆ ನಿನ್ನಂತಹ ಶೂರ- ವೀರನಾದ ಮಗನನ್ನು ಪಡೆಯಬೇಕು ಎಂದು ಬಹಳ ದಿನದಿಂದ ನನ್ನ ಮನಸ್ಸು ಹಾತೊರೆಯುತ್ತಿದೆ. ಅದನ್ನು ನಡೆಸಿಕೊಡು’ ಎಂದಳು.

‘ಅಮ್ಮ, ನನ್ನಂತಹ ಮಗನೇಕೆ, ನಾನೇ ನಿನ್ನ ಮಗ ಎಂದು ಭಾವಿಸು, ಪಾಲಿಸು’ ಎಂದುಬಿಟ್ಟ ಅರ್ಜುನ. ಊರ್ವಶಿ ನಾಚಿ ಹೊರಟು ಹೋದಳು.

ದೇವೇಂದ್ರನು ಬಂದು, ‘ಅರ್ಜುನ ನೀನು ನಿನ್ನ ಮನಸ್ಸು ಇಂದ್ರಿಯಗಳ ಮೇಲೆ ಹತೋಟಿಯನ್ನು ಇಟ್ಟುಕೊಂಡಿರುವೆ. ನೀನು ಜಿತೇಂದ್ರಿಯನೇ ಸರಿ. ನಿನಗೆ ನಾನು ವಿದ್ಯೆಯನ್ನು ಹೇಳಿಕೊಡುತ್ತೇನೆ’ ಎಂದು ಇಂದ್ರನು ವಿದ್ಯೆಯನ್ನು ಕಲಿಸಿದನು. ಅರ್ಜುನನು ಜಿತೇಂದ್ರಿಯನಾಗಿದ್ದನು, ಅವನು ಇಂದ್ರಿಯಗಳ ದಾಸನಾಗಿರಲಿಲ್ಲ, ಬದಲಾಗಿ ಇಂದ್ರಿಯಗಳ ಪ್ರಭುವಾಗಿದ್ದನು.

ಚಿತ್ರ: ಕಿರಣ್ ಮಾಡಾಳು

Related Articles

ಪ್ರತಿಕ್ರಿಯೆ ನೀಡಿ

Latest Articles